ವಿಶೇಷ ಸಂಪದ ಸಮ್ಮಿಲನ

ವಿಶೇಷ ಸಂಪದ ಸಮ್ಮಿಲನ

ಬರಹ

ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ ಅಟೊತ್ತಿಗೆ ಗೌಡಪ್ಪ ದಪ್ ಅಂತಾ ಬಿದ್ದ. ಮಗಾ ನಿಂಗ ಪಾತ್ರೆ ಉಜ್ಜಿದ್ದ ಹುಣಸೆಹಣ್ಣು ಅಲ್ಲಿ ಒಗೆದಿದ್ದ. ಸರಿ ಬಂದು ಪಕ್ಕದಾಗೆ ಕುಂತ. ನೋಡಲಾ ಹಳ್ಯಾಗೆ ಕಾರ್ಯಕ್ರಮ ಮಾಡದೇ ಸಾನೇ ದಿನಾ ಆಯ್ತು. ಒಂದು ಕೆಲಸ ಮಾಡುವ "ಸಂಪದ ಸಮ್ಮಿಲನ" ಮಾಡಿದ್ರೆ ಹೆಂಗಲಾ ಅಂದ. ಅದಕ್ಕೇನಂತೆ ಇವತ್ತು ರಾತ್ರಿನೇ ಮಾಡುವಾ. ಲೇ ಅದು ಬೆಳದಿಂಗಳು ಊಟ ಅಲ್ಲಾ ಕಲಾ. ಕಂಪೂಟರ್ನಾಗೆ ಕೋಮಲಾ ಬರೀತಾನಲ್ಲಾ ಅದ್ರಾಗೆ ಇರೋರುನ್ನೆಲ್ಲಾ ಕರೆಸಿ ಒಂದು ಕಾರ್ಯಕ್ರಮ ಮಾಡುವಾ ಅಂದೋನೆ, ಏನಲಾ ಕೋಮಲ್ ಅಂದ. ಸರಿ ಮಾಡುವಾ ಅಂತಾ ಎಲ್ಲಾರಿಗೂ ಪತ್ರ ಬರೆದಿವಿ. ವ್ಯಾನ್, ಮಧ್ಯಾದಾಗೆ ಇಳಿದ್ರೆ ನಿಮ್ದೆ ತಿಂಡಿ ಖರ್ಚು. ನಮ್ದು ಬರೀ ಮೈಕ್ ಸೆಟ್ ಹಂಗೇ ಸ್ಟೇಜು ಅಂತಾ.


ಸರಿ ಮೈಕ್ ಸೆಟ್ ರಂಗಾ ಕೆರೆತಾವ ಹೊಂಟಿದ್ದ, ಬಾರಲಾ ಇಲ್ಲಿ. ಮುಂದಿನ ಭಾನುವಾರ ನಮ್ಮ ಸಿದ್ದೇಸನ ಗುಡಿತಾವ ಮೈಕ್ ಅಂಗೇ ಸೀರಿಯಲ್ ಸೆಟ್ ಎಲ್ಲಾ ಹಾಕು. ಹಳೇ ಬಾಕಿ ಸೇರಿ ಇದನ್ನು ಮುಂದಿನ ಕಿತ ಇಸ್ಕಳುವಂತೆ ಅಂದ ಗೌಡಪ್ಪ. ರಂಗ ಸಾನೇ ಸಿಟ್ಟಾಗಿ ನನ್ನ ಹೆಂಡರು ಮಕ್ಕಳಿಗೆ ಏನು ಮಣ್ಣಾ ತಿನ್ನಿಸಲಿ ಅಂತಾ ಚೊಂಬು ಹಿಡಕೊಂಡು ಮನೆಕಡೆ ಹೊಂಟ. ಲೇ ಅವನು ಕೆರೆತಾವ ಅಲ್ಲೇನಲಾ ಹೊಂಟಿದ್ದು ಅಂದಾ ಗೌಡಪ್ಪ ಬಿದ್ದು ಬಿದ್ದು ನಗಕ್ಕೆ ಸುರುಹಚ್ಕಂಡ. ನಗೋಬೇಕಾದ್ರೆ ಪಕ್ಕದಾಗೆ ಇದ್ದ ಸುಬ್ಬನ ಕೆನ್ನೆಗೆ ಒಂದು ನಾಕು, ಹಂಗೇ ಕಟ್ಟಿಗೆ ಕಿಸ್ನನ ತೊಡೆಗೆ ಒಂದು ನಾಕು ಬಿಟ್ಟಿದ್ದ.
ಬೆಂಗಳೂರಿಂದ ಎಲ್ಲಾರನ್ನೂ ಕರ್ಕಂಡು ಬರುವಾ ಅಂತಾ ನಾನು ಬೆಳಗ್ಗೆನೇ ಗೋಪಿನಾಥರಾವ್ ಅವರ ಮನೆಗೆ ಹೋದ್ರೆ. ಅವರ ಹೆಂಡತಿ ಯಾವನೋ ಕಾರ್ಪೋರೇಸನ್ನವರು ಕಸ ತಗೊಂಡು ಹೋಗಕ್ಕೆ ಬಂದಿದಾರೆ ಅಂತಾ ಒಂದು ಬಕ್ಕಿಟ್ಟನಾಗೆ ಹಿಂದಿನ ದಿನದ ತರಕಾರಿ ಸಿಪ್ಪೆ, ಅನ್ನ ಹಿಡಕಂಡು ಬಂದರು. ಅಮ್ಮಾ ನಾನು ಕೋಮಲ್ ಸಂಪದ ಅಂದೆ. ಓಹ್ ನೀವಾ ಅಂತಾ ನಾಕು ತಲೆ ಮೇಲೆ ಬಿಟ್ಟು ಸಾನೇ ನಕ್ಕರು. ಅಂಗೇ ಕಮ್ಮಿ ಡಿಕಾಕ್ಸನ್ ಕಾಫಿ ಕೊಟ್ಟರು. ರಾಯರು ಇಲ್ಲವಾ,  ರೀ ಕೋಮಲ್ ಬಂದಿದಾರೆ. ಸರ್ ಇನ್ನು ಹೊರಟಿಲ್ವಾ.ಎಲ್ಲಾರಿಗೂ ಇಲ್ಲೇ ಬರಕ್ಕೆ ಹೇಳಿದೀನಿ. ಇನ್ನೇನು ನಾವಡರು ಬರಬೇಕು ಅಂದ್ರು. ನಾವಡರು ಹೊಂಟು ಎರಡು ದಿನಾ ಆಗಿತ್ತಂತೆ ರಸ್ತೆ ಮೇಲೆ ನೀರು ನಿಂತಿದ್ದಕ್ಕೆ ಬಸ್ ಎರಡು ದಿನಾ ರಸ್ತ್ಯಾಗೆ ಇತ್ತಂತೆ. ಅಂದ್ರೂ ನಾವಡರು ಬಂದ್ರು. ಹೊರಡೋ ಬೇಕಾದ್ರೆ ಸೇವ್ ಮಾಡ್ಕಂಡಿದ್ರಂತೆ. ಬರುವ ಅಷ್ಟೊತ್ತಿಗೆ ಸಾನೇ ಗಡ್ಡ ಬಂದಿತ್ತು. ಅಂತೂ ಬಂದ್ರಲ್ಲಾ ಅಂತಾ ಗೊಪಿನಾಥರು ಹೊರಡಿರಿ ಅಂದರು. ಅಂದರೆ ಬರಬಾರದಿತ್ತಾ. ಹಾಗಲ್ಲ ಮಾರಾಯರೆ ಅಂತಾ ಎಲ್ಲಾರನ್ನೂ ಹೊರಡಿಸಿದರು. 

ಎಲ್ಲಿದೆ ವ್ಯಾನು ಅಂತಾ ಶಿವಮೊಗ್ಗದ ಮಾಲತಿ ಕೇಳಿದ್ರೆ. ಏ ನಂದೆ ಮಾರುತಿ ವ್ಯಾನ್ ಇದೆ ಇದರಲ್ಲೇ ಎಲ್ಲಾರೂ ಹೋಗೋಣ ಅಂತಾ ಗೋಪಿನಾಥರಾವ್ ಅಂದ್ರು. 7ಸೀಟಿನ ಕೆಪಾಸಿಟಿ ವ್ಯಾನ್ನಾಗೆ 15ಜನನ್ನ ಹಾಕ್ಕಂಡ್ ಬಂದವ್ರೆ. ಸುರೇಶ್ ಹೆಗಡೆಯೋರೆ ನೀವು ಬನ್ನಿ. ಏನೂ ಬೇಡ ನಾವು ಬಸ್ಸಿಗೆ ಬರ್ತೀವಿ ಅಂತಾ ಇನ್ನೊಂದು ಟೀಮ್ ಬಸ್ಸಿಗೆ ಹೊರಟರು. 

ವ್ಯಾನ್ನಾಗೆ ಬಾಡಿ ಒಳಗೆ ತಲೆ ಕಿಟಕಿಯಿಂದ ಹೊರಗೇನೇ. ಸಾನೇ ಗಾಳಿ, ತುಟಿ ಮುಖ ಒಡೆದು ಹೋಗಿತ್ತು. ವ್ಯಾಸಲೀನ್ ಹಚ್ಚಿದ್ವಿ. ವಾಣಿ ನನ್ನ ಬ್ಯೂಟಿನಾ ಹಾಳು ಮಾಡಿದ್ರಿ ಅಂತಿದ್ರು. ಬಿಡದಿ ಕ್ರಾಸ್ ಹತ್ತಿರ ಓವರ್ ಲೋಡ್ ಅಂತಾ ವ್ಯಾನ್ ಹಿಡಿದ್ರು. ಇಳಿಯಲಾ ಅಂದ್ರು. ಏ ಐ ಆಮ್ ಫ್ರಮ್ ಮಿಲ್ಟ್ರಿ. ಸಾರಿ ಸರ್. ಸುರೇಶ್ ನಾಡಿಗರು ಪ್ರೆಸ್ ಕಾರ್ಡ್ ತೋರಿಸಿದ ಮೇಲೆ 500ರೂಪಾಯಿಗೆ ಇದ್ದೋರು 100ರೂಪಾಯಿ ಇಸ್ಕಂಡು ಬಿಟ್ರು. ಏಥೂ
ಅಂತೂ ಹಳ್ಳಿಗೆ ಎಂಟ್ರಿ ಕೊಟ್ವಿ. ಜನಾ ನೋಡಲಾ ವ್ಯಾನ್ ಬಾಡಿಗೆ ಉಳಿಸಕ್ಕೆ ಹೆಂಗೆ ಬಂದ್ಯಾವೆ ಅನ್ನೋವು. ಇಳಿದ್ರೆ ಎಲ್ಲರೂ ತಲೆಕೂದಲು 90ಡಿಗ್ರಿಗೆ ಇತ್ತು. ಒಂದು ತರಾ ಆಫ್ರಿಕಾದೋರು ತರಾ ಇದ್ವಿ. ಸರಿ ಆಕಡೆಯಿಂದ ಸುರೇಶ್ ಹೆಗಡೆಯೋರ ಟೀಮ್ ಬಂತು. ಗೌಡಪ್ಪನ ಮನೇಲ್ಲಿ ಸಾನೇ ಉಪಚಾರ. ಗೌಡಪ್ಪನ ಹೆಂಡರು ನಾಡಿಗರು ಬಂದಿಲ್ವಾ ಅಂತು. ಬಂದಿದಾರಲ್ಲಾ ಸುರೇಶ್ ನಾಡಿಗರು. ಇವರಲ್ಲಾ ಹರಿ ಅಂತು. ಹೋಗಮ್ಮಿ ಕ್ಯಾಮೇ ನೋಡು ಹೋಗು.
ಸರಿ ಸಂಜೆತಾವ ಸಿದ್ದೇಸನ ಗುಡಿಯಲ್ಲಿ ಕಾರ್ಯಕ್ರಮ ಸುರುವಾತು. ಜನ ಯಾವುದೋ ಧಾರವಾಹಿಯವರು ಬಂದಿದಾರೆ ಅಂತಾ ಸಾನೇ ಸೇರಿದ್ರು. ಸಂಪದದವರು ಅಂತಾ ಗೊತ್ತಾದ್ ಮ್ಯಾಕೆ ಹೌದಾ ಅಂದ್ವು. ಆದ್ರೆ ಸಾಕ್ಸರತಾ ಮೇಸ್ಟ್ರು ಮಾತ್ರ ರಜಾ ಹಾಕಿದ್ದ. ಯಾಕಲಾ ಅಂದ ಸುಬ್ಬ. ಇನ್ನೆಲ್ಲಿ ಹಳ್ಳಿ ಮುಂಡೇವು ಕಂಪ್ಯೂಟರ್ ಹಾಳ್ ಮಾಡ್ತಾವೆ ಅಂತಾ ಕಲಾ ಅಂದೆ. ಸರಿ ಸುರೇಶ್ ಹೆಗಡೆ ಭಾಸಣ ಸುರು ಮಾಡಿದ್ರು. ಸಂಪದ ಉಳಿಸಬೇಕು. ನೀವೆಲ್ಲಾ ಬರೀಬೇಕು ಅಂದ್ರು. ಅದಕ್ಕೆ ತಂಬಿಟ್ಟು ರಾಮ, ಹೆಗಡೆಯವರೆ ನಾನು ಕೆರೆತಾವ ಹೋಗೋದ್ರು ಬಗ್ಗೆ ನಾಕು ಲೇಖನ ಬರೆದಿದ್ದೆ ಬ್ಲಾಕ್ ಮಾಡಿದಾರೆ ಅಂದ. ಸುಮ್ಕಿರಲಾ ಅಂದಾ ಗೌಡಪ್ಪ. ನೀವು ನಮ್ಮ ಮನೆಗೆ ಬನ್ನಿ ಅಂದ್ರು ಹೆಗಡೆಯವರು. ಸಾರ್ ಪ್ರತೀ ವಾರ ಚಾ ತರಕ್ಕೆ ಅಂತಾ ಬೆಂಗಳೂರಿಗೆ ಬತ್ತೀನಿ ಇನ್ ಮ್ಯಾಕೆ ನಿಮ್ಮನ್ಯಾಗೆ ಉಳಿದುಕೊಳ್ಳೋದು ಅಂದಾ ನಿಂಗ. ಲಾಡ್ಜ್ ಬಾಡಿಗೆ ಉಳಿತದೆ ಅಂತಾ. ಏ ಥೂ. ಮಗಾ ಚಾ ಚಲ್ಟದ ಬುದ್ದಿ ಎಲ್ಲಿ ಬಿಡ್ತಾನೆ ಅಂದಾ ಗೌಡಪ್ಪ.

ಅಟ್ಟೊತ್ತಿಗೆ ನಮ್ಮ ಶರ್ಮಾರವರು ಜೇನು ಸಾಕಾಣಿಕೆ ಬಗ್ಗೆ ಹೇಳ್ತಾ ಸ್ಯಾಂಪಲ್್ಗೆ ಅಂತಾ ಒಂದು ನಾಕು ಹುಳ ಅಂಗೇ ಹೊರಗೆ ಬಿಟ್ಟರು. ಮಗಂದು ಗೌಡಪ್ಪಂಗೆ ಯಾವ ಮಟ್ಟಕ್ಕೆ ಕಚ್ಚಿತ್ತು ಅಂದ್ರೆ. ಯಕ್ಸಗಾನದಾಗೆ ರಾಕ್ಸಸನ ಪಾಲ್ಟು ಮಾಡೋರು ತರಾ ಆಗಿದ್ದ. ಅರಿಸಿನ ಹಚ್ಚಿದ್ರೆ ಐಕ್ಳು ಹೆದರೋವು. ಅಲ್ಲೇ ಪಾಲಚಂದ್ರ ಮಕ್ಕೊಂಡು, ನಿಂತ್ಕಂಡು ಪೋಟೋ ಹೊಡಿತಾ ಇದ್ರು. ಸಾರ್ ತಳಸಕ್ಕೆ ನಾವು ಕಾಸು ಕೊಡಕ್ಕೆ ಇಲ್ಲಾ ಅಂದ ಗೌಡಪ್ಪ, ಏ ಥೂ, ನೀವು ಹೊಡೀರಿ ಸಾರ್. ಇನ್ನು ಗಣೇಶ್ ಬಂದು ಎರಡು ಜೋಬಿಂದ ಒಂದಿಷ್ಟು ಹುಳ ಅಂಗೇ ಒಂದಿಷ್ಟು ಗಿಡ ತೆಗೆದು ಬಯಾಲಜಿ ಪಾಠ ಮಾಡಿದ್ರು. ಅಟ್ಟೊತ್ತಿಗೆ ಹರೀಶ್ ಆತ್ರೇಯ ಬಂದು ಪ್ರೇಮ ಕತೆ ಹೇಳಿದ್ರು. ನಾನು ಪಿಜ್ಜಾ ಕಾರ್ನರಗೆ ಹೋಗಿದ್ದೆ. ಅಲ್ಲೊಬ್ಬಳು ಯುವತಿ ಇದ್ದಳು, ನನ್ನನ್ನು ನೋಡಿ ಪ್ರೇಮ ಪತ್ರವನ್ನು ಬಿಲ್ಲಿನಲ್ಲೇ ಬರೆದು ಕೊಟ್ಟು ಹೋದಳು. ನಾನು ಆ ಬಿಲ್ಲನ್ನೂ ಕೊಟ್ಟೆ. ಕಾಸಿಲ್ಲದ ಕಾರಣ ವಾಚು ಉಂಗುರ ಕೊಟ್ಟೆ. ಆದರೆ ಅವಳ ನೋಟ ಮರೆಯಲಾಗುತ್ತಿಲ್ಲ ಎಂದರು. ಅದಕ್ಕೆ ತಕ್ಷಣವೇ ಪ್ರಶ್ನಸಿದ ರಘುರವರು ಇದು ಹೇಗೆ ಸಾಧ್ಯ ಎಂದು ಪ್ರಶ್ಬೆ ಮಾಡಿದ ಮ್ಯಾಕೆ ಹರೀಶ್ ಇದೊಂದು ಕಥೆ ಕಣ್ರೀ ಅಂದರು. ಗೌಡಪ್ಪ ಏನಲಾ ಇದು ಅಂದಾ, ಇದು ದಿನಾ ಕಂಪೂಟರ್ನಾಗೆ ನಡೀತಾ ಇರ್ತದೆ ಅಂದೆ. 

ಅಟ್ಟೊತ್ತಿಗೆ ನಾವಡರು ಕೈ ಸನ್ನೆ ಮಾಡ್ತಾ ಇದ್ರು. ಏನಲಾ ಅದು. ಕಾಲದ ಕನ್ನಡಿ - ಗಬ್ಬುನಾಥ ಗೌಡಪ್ಪ ಸತ್ತಾ ಅಂತಾ ಬರ್ದೀದಾರೆ ಅಂತೆ. ಅದಲ್ಲ ಕಲಾ ಮತ್ತಿನ್ನೇನೋ ಹೇಳಿದ್ರು ಕಲಾ ಅಂದ. ಹೊರನಾಡಿಗೆ ಸಾನ ಮಾಡದೇ ಬಂದರೆ ನಾಯಿ ಹೊಡೆದಂಗೆ ಹೊಡಿತೀವಿ ಅಂದ್ರು ಅಂದ ಸುಬ್ಬ. ಹೌದು ನಿಂಗೆ ಹೆಂಗಲಾ ಈ ಬಾಸೆ ಬತ್ತದೆ. ಏ ನ್ಯಾಸನಲ್ ಚಾನಲ್ ನಾಗೆ ಭಾನುವಾರ ಮಧ್ಯಾಹ್ನ ಬತ್ತದಲ್ಲಾ ಅದ್ರಾಗೆ ಕಲ್ತೆ. ಸರೀ ಈಗ ದುಬಾಯಿ ಮಂಜಣ್ಣನ ಭಾಸಣ ಅತ್ರಾಸ ಯೂಲಫ್ ಇಕಾಲಾ ಯಾ ಥೂ ಅಂದ್ರು.  ಇಕಾಸಾ ಗೌತಮಿ ಸಕಲಾ ಇಸ್ರಾ ಹೀ ಥೂ ಏನಲಾ ಅವರು ಅಂದಿದ್ದು. ನಿಮ್ಮ ಕಾರ್ಯಕ್ರಮ ಸಾನೇ ಚೆನ್ನಾಗೈತೆ , ನನ್ನ ಮಗಳು ಗೌತಮಿ ಧಾರವಾಹಿ ನೋಡ್ರಿ ಅಂದ್ರು. ಇದೆಂಗಲಾ ನಿಂಗೆ ಗೊತ್ತಾತು. ಏ Q-tv ಅಂತಾ ಬತ್ತದೆ ಅದ್ರಾಗೆ ಇದೇ ಭಾಸೆ. ಅದ್ರಿಂದ ಕಲ್ತೆ. ಏನಲಾ ನಿಂಗೆ ಎಲ್ಲಾ ಭಾಸೆ ಬತ್ತದೆ ಅಂದಾ ಗೌಡಪ್ಪ ಸುಬ್ಬಂಗೆ. ನಾನು ಡಿಸ್ ಹಾಕಿಸ್ತೀನಿ ಅಂದ. ಗೋಪಿನಾಥರಾವ್ ಅವರು ಎಲ್ಡು ಮಾತಾಡಬೇಕು. ಜೈ ಭಾರತ್ ಮಾತಾ ಕೀ ಜೈ. ಸಾರೇ ಜಹಾಸೇ ಅಚ್ಚಾ ಅಂದು ಬೈಟಂಗೇ ಬೈಟ್ ಜಾವ್ ಅಂದ್ರು. ಏನಲಾ ಇದು. ಅವರು ಮಾಜಿ ಸೈನಿಕರು ಸುದ್ದಿಗೆ ಹೋಗಬೇಡ್ರೀ ಅಂದೆ. ಕವಿ ನಾಗರಾಜರು ಸ್ಟೇಜಿಗೆ ಬರುತ್ತಿದ್ದಾಗೆನೇ ಎಲೋ ಮೂಢ ಅಂದ್ರು. ಗೌಡಪ್ಪ ಏನಲಾ ಎಂಟ್ರೀನೇ ಹಿಂಗೈತೆ ಅಂದಾ. ನೀನು ದೇಹ ಶುದ್ದಿ ಗೊಳಿಸಿ ಆಮ್ಯಾಕೆ ಮನಸ್ಸು ಶುದ್ದಿ ಗೊಳಿಸೋ ಮೂಢ ಅಂದ್ರು. ಸುರೇಶ್ ನಾಡಿಗರು ಬಂದು ಜೈ ಎಂದ ಬಾಲಕ ಅಂತಿದ್ದಾಗೆನೇ ಹೈಕ್ಳು ಸಾನೇ ಸೀಟಿ ಹೊಡೆದ್ವು. ಗೌಡಪ್ಪ ಏನಲಾ ಇವರು ಹೇಳಿದ್ದು ಅಂತಾ ತಲೆ ಕೆರ್ಕಂತಾ ಇದ್ದ. ಭಾಸ್ಕರ್ ಹಾಗೂ ಸುಪ್ರೀತ್ ಒಂದು ನಾಕು ಲಿಂಕ್ ಕೊಟ್ಟು ಸರ್ಕಾರದ ಬಗ್ಗೆ ಹೇಳಿದ್ರು. ಅದನ್ನ ಮಹೇಶ್ ತಿಳಿಸಿ ಹೇಳಿದ್ರು,. ಅಟ್ಟೊತ್ತಿಗೆ ಶಿವಮೊಗ್ಗ ಮಾಲತಿ, ವಾಣಿ,
 ವಾಸುಕಿ ಆನಂದ್,ರಂಜನಾ ನಾವೆಲ್ಲಾ ಏನ್ಮಾಡಬೇಕು ಅಂದ್ರು. ನೀವೆಲ್ಲಾ ಲಲಿತಾ ಸಹಸ್ರನಾಮ ಹೇಳಿ ಅಂತಾ ಹೇಳಿಸಿ, ಚುನಾವಣೆಗೆ ಅಂತಾ ತಂದ ಬಳೆ,ಸೀರೆ ಕೊಟ್ವಿ ಸಾನೇ ಖುಸಿಯಾದ್ರು,. ಇದರ ಅರ್ಥ ಹಂಸಾನಂದಿ ಹಾಗೂ ಸವಿತೃ ವಿವರಿಸಿ  ಗ ಮತ್ತು ಸು ಧಾತು ಬಗ್ಗೆ ಹೇಳಿದ್ರು. ಪ್ರಸನ್ನ ಶಂಕರಪುರ ಎಲ್ಲಿ ಅಂತಾ ನೋಡಿದ್ರೆ. ಮೈಕ್ ಸೆಟ್ ರಂಗನ ಜೊತೆ ಸೆಟ್ಲಾಗಿದ್ರು. ಹೇಗೆ ಸವಂಡ್ ಕೊಡಬೇಕು ಅಂತಾ ಹೇಳಿ ಕೊಡ್ತಾ ಇದ್ರು. ಅಂಗೇ ಕಂಪೂಟರ್ ತಗೋ ಅಂತಾ ಇದ್ರು, ಇನ್ನು ಉದಯವಾಣಿ ಅಶೋಕ್ "ಸ್ಪೆಸಲ್ ಪ್ರೋಗ್ರಾಮ್" ಅಂತಾ ಬರ್ಕಂತಾ ಇದ್ರು, ಸರಿ ಈಗ ಗೌಡಪ್ಪನ ಭಾಸಣ ಅನ್ನುವ ಅಷ್ಟೊತ್ತಿಗೆ ರಾತ್ರಿ ಹತ್ತು ಗಂಟೆ ಆಗಿತ್ತು. ಗೌಡಪ್ಪ ಬಡಕೊಂತಾ ಇದ್ದ. ರಂಗ ಮೈಕ್ ಸೆಟ್ ಆಫ್ ಮಾಡಿದ್ದ.  ಹಿಂದೆ ಎಲ್ಲಾರೂ ನಾಳೆ ಡ್ಯೂಟಿಗೆ ಹೋಗಬೇಕು ಅಂತಾ ಪ್ಲೇಟ್ ಮಿಲ್ಸ್ ಮಾಡ್ತಾ ಇದ್ರು. ಸರಿ ಮತ್ತೆ ನಾವು ತಲೆ ಹೊರಹಾಕ್ಕೊಂಡು ಗೋಪಿನಾಥರಾವ್ ವ್ಯಾನಲ್ಲಿ ಹೋದ್ವಿ. ತಂಡೀ ಗಾಳಿಗೆ ಎಲ್ರಿಗೂ ಸೀತ. ಕ್ರೋಸಿನ್ ಹೋಲ್ ಸೇಲ್ನಾಗೆ ರಾಮನಗರದಲ್ಲಿ ತಗೊಂಡಿದ್ದಾತು. ಸುರೇಶ್ ಹೆಗಡೆ ಟೀಮ್ ಬಸ್ಸು ಯಾವುದು ಐತೆ ಅಂತಾ ಕೇಳ್ತಾ ಇದ್ರು. ಎಲ್ರೂ ಗೌಡಪ್ಪನ ಕಾರ್ಯಕ್ರಕ್ಕೆ ಒಂದಿಷ್ಟು ಹಾಕ ಅಂತಿದ್ರು,. ಬೆಳಗ್ಗೆ ಎದ್ದು ನೋಡಿ ಸಂಪದ ನೋಡಿದ್ರೆ ನಮ್ಮೂರು ಸಂಪದ ಮಿಲನ ಲೇಖನ ನಾಡಿಗರು ಬ್ಲಾಕ್ ಮಾಡಿದ್ರು. ಯಾಕ್ ಸಾ. ಇದರ ಬಗ್ಗೆ ಕೇಳಿದ್ರೆ ಹುಸಾರ್ ಅಂದ್ರು ನಾಡಿಗರು. ಗೌಡಪ್ಪ ಸಾನೇ ಬೈತಾ ಇದ್ದ. ಮಗನೇ ಕಾಸು ಖರ್ಚಾತು. ಏನು ಉಪಯೋಗ ಇಲ್ಲಾ ಅಂತಾ ಇದ್ದ.