ವಿಶ್ವದ ಮಹಾನ್ ದಾರ್ಶನಿಕ ಜೀಸಸ್

ವಿಶ್ವದ ಮಹಾನ್ ದಾರ್ಶನಿಕ ಜೀಸಸ್

ಪ್ರೀತಿ ಮತ್ತು ಸೇವೆಯ ಹರಿಕಾರ ಜೀಸಸ್ ಅನುಯಾಯಿಗಳ ಶುಭ ಶುಕ್ರವಾರ ಇಂದು. ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು ಹೊಂದಿರುವ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ಯೇಸು ಕ್ರಿಸ್ತ ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತರಾಗುತ್ತಾರೆ. ಸೇವೆಯ ಮುಖಾಂತರ ಬದುಕಿನ ಸಾರ್ಥಕತೆಯನ್ನು ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

" ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು "

ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ  ಜನರಿಗಾಗಿ  ಯೇಸು ಕ್ರಿಸ್ತ  ಪ್ರಾರ್ಥಿಸಿದರೆಂದರೆ ಅವರ ಕ್ಷಮಾಗುಣ ಎಷ್ಟಿರಬಹುದು ಊಹಿಸಿ. ಇಂದು ಅದೇ ವ್ಯಕ್ತಿ ವಿಶ್ವದ ಅತ್ಯಂತ ಹೆಚ್ಚು ಜನ ಆರಾಧಿಸುವ ದೇವರಾಗಿದ್ದಾರೆ‌. ಈಗ ಒಳಿತಿಗಾಗಿ ಜನ ಅವರನ್ನು ಪ್ರಾರ್ಥಿಸುತ್ತಿದ್ದಾರೆ.

ಇಡೀ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಎಲ್ಲಾ ದೇವರುಗಳು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಗಳೆಂದು ಸೃಷ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಮಾತ್ರ ನಾವೇ ಉತ್ತರ ಹುಡುಕಿಕೊಳ್ಳಬೇಕು! ವಿಶ್ವದಾದ್ಯಂತ ಈಗ ಬಹುತೇಕ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಹಿಂದೆ ಇದ್ದ ಯುದ್ಧಗಳ ಜಾಗವನ್ನು ಈಗ ಭಯೋತ್ಪಾದನೆ ಎಂಬ ಭೂತ ಆಕ್ರಮಿಸಿಕೊಂಡಿದೆ. ಮರೆಯಲ್ಲಿ ನಿಂತು ಮಾಯಾವಿಯಂತೆ ಜನರನ್ನು ಕೊಲ್ಲುತ್ತಾ ಸಾಗುತ್ತಿದೆ. ಅಮಾಯಕರ ನೆತ್ತರು ಹರಿಯುತ್ತಿದೆ. ಜೊತೆಗೆ ರಷ್ಯಾ ಉಕ್ರೇನ್ ಯುದ್ದವೂ ತೀವ್ರ ಹಿಂಸಾತ್ಮಕ ರೂಪ ಪಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಜೀಸಸ್ ನೆನಪಾಗುತ್ತಾರೆ. ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ ಎಂಬ ಅಮೋಘ ಸಂದೇಶ ನೀಡಿದವರು ಯೇಸು. ಆದರೆ ಈಗ ಪ್ರೀತಿಸುವುದು ಇರಲಿ, ಗೆಳೆಯರನ್ನು, ನೆರೆಹೊರೆಯವರನ್ನು ನಂಬಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ. ಧರ್ಮ ಬೆಳೆದಂತೆಲ್ಲಾ ಅದರ ಆಚರಣೆಯಲ್ಲಿ ಮೂಡನಂಬಿಕೆಗಳು, ಮತಾಂತರಗಳು, ವಿಭಾಗಗಳು ಕ್ರಿಶ್ಚಿಯನ್ ಧರ್ಮದಲ್ಲೂ ಬೆಳೆದು ಬಂದವು.‌ ಮತಾಂಧ ಜನರಿಂದ ಧಾರ್ಮಿಕ ಕಾರಣಗಳಿಗಾಗಿ ಅಪಾರ ಹಿಂಸೆ ಸಹ ನಡೆದಿದೆ. 

ಆದರೆ ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮ ಸೇವಾ ಮನೋಭಾವವನ್ನು, ಸರಳತೆಯನ್ನು, ನಾಗರಿಕ ಪ್ರಜ್ಞೆಯನ್ನು, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತು. ಮುಖ್ಯವಾಗಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಆಡಳಿತದಲ್ಲಿ ಧಮನಕಾರಿ ಧೋರಣೆ, ಯುದ್ಧ, ಆಕ್ರಮಣ ಇದ್ದರೂ ವ್ಯಕ್ತಿ ಸ್ವಾತಂತ್ರ್ಯ, ವಿಶಾಲ ಮನೋಭಾವ, ಮಹತ್ವಾಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಹೆಚ್ಚು ಜನಪ್ರಿಯವೂ ಸಹನೀಯವೂ ಆಗಿದೆ. ಅದಕ್ಕೆ ಕಾರಣ ಜೀಸಸ್ ಅವರ ಸರಳ ಭೋದನೆಗಳು ಮತ್ತು ಮಾನವೀಯ ಕಳಕಳಿಯ ವಿಚಾರ ಸರಣಿಗಳು.

ವಿಶ್ವದ ಎರಡು ಮಹಾಯುದ್ಧಗಳಲ್ಲಿ ಕ್ರಿಶ್ಚಿಯನ್ ಧರ್ಮದ ದೇಶಗಳದೇ ಪ್ರಮುಖ ಪಾತ್ರ, ಹಾಗೆಯೇ ಧರ್ಮ ಒಂದು ಅಫೀಮು ಎಂದು ಆಕ್ರೋಶ ಭುಗಿಲೆದ್ದು ಕ್ರಾಂತಿಕಾರಕ ಚಿಂತನೆ ರೂಪ ಪಡೆದದ್ದು ಕ್ರಿಶ್ಚಿಯನ್ ಧರ್ಮದಲ್ಲೇ. ಹೀಗೆ ತನ್ನ ‌ಚಿಂತನೆಗಳಿಂದಲೇ ಇಂದು ವಿಶ್ವದ ಜನಸಂಖ್ಯೆಯಲ್ಲಿ ಅತಿಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸು ಕ್ರಿಸ್ತನನ್ನು ಈ ಶುಭ ಶುಕ್ರವಾರದಂದು ನೆನೆಯುತ್ತಾ... ವಿಶ್ವ ಶಾಂತಿಗಾಗಿ ಜನರಲ್ಲಿ ಪ್ರಾರ್ಥಿಸುತ್ತಾ....

-ವಿವೇಕಾನಂದ. ಹೆಚ್.ಕೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ