ವಿಶ್ವವ್ಯಾಪ್ತಿ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ
ದೀಪಾವಳಿಯೆಂದರೆ ಮನದ ಗಾಢಾಂಧಕಾರವನ್ನು ಕಳೆದು ಮನದ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ. ಮನೆ, ಮನ ಬೆಳಗಿ ಹರುಷದ ಹೊನಲು ಉಕ್ಕಿದರೆ ಜಗವೂ ಬೆಳಗಿದಂತೆ. ಈ ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ ವಿಶಿಷ್ಟಮಯವಾಗಿ ಆಚರಿಸಲಾಗುತ್ತದೆ.
ಎಲ್ಲರ ಮನೆ, ಮನದಲ್ಲೂ ಬೆಳಕು ಚೆಲ್ಲುವ. ಜಯ, ಸಮೃದ್ಧಿ, ಅಭಿವೃದ್ಧಿಗಳ ಬೆಳಕಿನ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಆಚರಿಸುವ ಪರಿ ಹೀಗಿದೆ. ಮನೆ ಮನೆಗೂ ದೀಪದ ಬೆಳಕು ಹಂಚುವ ಮಲೆನಾಡಿನ 'ಅಂಟಿಗೆ-ಪಿಂಟಿಗೆ' ಅಥವಾ ದೀಪ ದೀಪೋಳ್ಗೆ, ಧಾರವಾಡ, ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ದೀಪದ ಹಬ್ಬದ ದಿನ ಸುತ್ತಮುತ್ತ ಸಗಣಿಯಿಂದ ಪಾಂಡವರ ಬೊಂಬೆಗಳನ್ನು ಮಾಡಿ ಪೂಜಿಸುವ ಸಂಪ್ರದಾಯವಿದೆ. ತುಳುನಾಡಿನಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಬಲಿ ಚಕ್ರವರ್ತಿಗೆ ಪೂಜೆ.
ಹಲವು ಭಾಗಗಳಲ್ಲಿ ವಿವಿಧ ರೀತಿ ದೀಪಾವಳಿ ಆಚರಣೆ : ದೀಪಾವಳಿ ಎಂದರೆ ಎಲ್ಲರಿಗೂ ಹರುಷ. ಹಲವು ಭಾಗಗಳಲ್ಲಿ ವಿವಿಧ ರೀತಿ ದೀಪಾವಳಿ ಆಚರಿಸಲಾಗುತ್ತದೆ. ಉತ್ತರ ಕನ್ನಡದ ಕೆಲವು ಹಳ್ಳಿಗಳಲ್ಲಿ ದೀಪಾವಳಿ ಸ್ಪೆಷಲ್ ಬೂರೆಕಳವು ಅಥವಾ ಬೂರ್ಗಳವು ಪದ್ಧತಿ ಇದೆ. ಬೇಕಾದ್ದನ್ನು ಕದಿ ಎಂಬುದು ಯಾರಿಗೆ ಪ್ರಿಯವಲ್ಲ ಹೇಳಿ.. ಚಿತ್ರದುರ್ಗ, ದಾವಣಗೆರೆ ಜಿಗಳಿನ ಬುಡಕಟ್ಟು ಜನಾಂಗದಲ್ಲಿ ತಿಂಗಳಿಡೀ ದೀಪಾವಳಿ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ. ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ದೀಪಾವಳಿ ಸಂಭ್ರಮವು ವೈವಿಧ್ಯವಾಗಿ ಆಚರಿಸಲ್ಪಡುತ್ತದೆ. ಭಾರತೀಯರು ಹೆಚ್ಚಾಗಿ ನೆಲೆಸಿರುವ ಸಿಂಗಾಪುರ, ಟ್ರಿಡಾಡ್, ಟೊಬಾಗೋ, ಮಲೇಶಿಯಾಗಳಲ್ಲಿ ಕೂಡ ದೀಪಾವಳಿ ದೊಡ್ಡ ಹಬ್ಬ. ಸಿಂಗಾಪುರದಲ್ಲಿ ದೀಪಾವಳಿ ರಜಾದಿನ. ಇಲ್ಲಿ ನೆಲೆಸಿರುವ ಭಾರತೀಯರು ಹೆಚ್ಚಾಗಿ ತಮಿಳುನಾಡಿನಿಂದ ವಲಸೆ ಬಂದವರು. ಸಿಂಗಾಪುರ ಹಾಗೂ ಮಲೇಷಿಯಾದಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಹರಿ ಹಬ್ಬ- ಹರಿ(ಶುಭ) ದೀಪಾವಳಿ. ತರಾವರಿಯ ಬೆಣ್ಣೆ ಬಿಸ್ಕತ್ತು ಹಾಗೂ ಚಕ್ಕುಲಿ ದೀಪಾವಳಿಯ ವಿಶೇಷ. ಸ್ನಾನದ ನಂತರ ಮನೆಯ ಹಿರಿಯರಿಗೆ, ಮಕ್ಕಳಿಗೆ ಸಿಹಿ ಉಣಿಸಿ, ದೇಗುಲಕ್ಕೆ ಭೇಟಿ ನೀಡುವುದು ಸಂಪ್ರದಾಯ. ಟ್ರಿನಿಡಾಡ್ನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ. ಇಲ್ಲಿಯೂ ಕೂಡ ದೀಪಾವಳಿಯಂದು ಸಾರ್ವಜಕ ರಜೆ. ವಿವಿಧ ಸಾಂಪ್ರದಾಯಿಕ ರೀತಿಯಲಿ ದೀಪಾವಳಿ ಆಚರಿಸಲ್ಪಡುತ್ತದೆ.
ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ದೀಪಾವಳಿ ಆಚರಣೆ: ಪ್ರಪಂಚದ ವಿವಿಧ ಮೂಲೆಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ ಎಂಬುವುದನ್ನು ತಿಳಿಯೋಣ. ನೇಪಾಳದಲ್ಲಿ ತಿಹರ್ ಅಥವಾ ಸ್ವಂತಿ ಎಂದು ಕರೆಸಿಕೊಳ್ಳುವ ಬೆಳಕಿನ ಹಬ್ಬ ಐದು ದಿನಗಳ ಮಟ್ಟಿಗೆ ಆಚರಿಸಲ್ಪಡುತ್ತದೆ. ಮೊದಲ ದಿನ ಕಾಗ್ತಿಹರ್(ಕಾಗೆ ಪೂಜೆ). ಎರಡನೆಯ ದಿನ ಕುಕರ್ತಿಹರ್(ನಾಯಿ ಪೂಜೆ). ಮೂರನೆಯ ದಿನ ಲಕುಮಿ, ನಾಲ್ಕನೆಯ ದಿನ ಹಸು ಹಾಗು ಐದನೆಯ ದಿನ ಭಾಯ್ಟಿಕ್(ಅಣ್ಣ-ತಂಗಿಯರ ಹಬ್ಬ).
ಇರಾನ್ ಜಶ್ನ್ ಏ ಸದೇಹ್ ಎಂಬುದು ಇರಾನಿನಲ್ಲಿ ಆಚರಿಸಲ್ಪಡುವ ಬೆಳಕಿನ ಹಬ್ಬ. ಹಬ್ಬದ ಹಿಂದಿನ ದಿನ ದೊಡ್ಡದಾಗಿ ಬೆಂಕಿ ಹಾಕಿ ಮರುದಿನ ಪ್ರಾತಃಕಾಲ ಪ್ರತಿಯೊಂದು ಮನೆಯಿಂದ ಮಹಿಳೆಯೊಬ್ಬಳು ಬಂದು ಕೆಂಡವನ್ನು ಒಯ್ದು ಪೂಜಿಸಿ ಸಂಭ್ರಮಿಸುತ್ತಾರೆ. ಪಾರ್ಸಿಗಳು ಅಗ್ನಿಯ ಆರಾಧಕರು.
ಹನುಕ್ಕಾಹ್ ಇದು ಯಹೂದಿಯರ ಹಬ್ಬ. ಮೆಕ್ಕಾಬೀಸ್ ಹಾಗೂ ಸೈರಿಯನ್ನರ ನಡುವೆ ನಡೆದ ಯುದ್ದದಲಿ ಯಹೂದಿಗಳಿಗೆ ಜಯ ದೊರಕಿತು. ಯಹೂದಿಗಳು ತಮ್ಮ ಪವಿತ್ರ ದೇಗುಲಕ್ಕೆ ತೆರಳಿದಾಗ ಅಲ್ಲಿಯ ಪವಿತ್ರ ದೀಪ ನಂದಿ ಹೋಗುವ ಸ್ಥಿತಿಯಲ್ಲಿತ್ತು. ಯಹೂದಿಯೊಬ್ಬ ಹೊರಗೆ ಹೋಗಿ ಎಣ್ಣೆ ತರುವವರೆಗೂ ಸುಮಾರು ೮ ದಿನಗಳ ಕಾಲ ಆ ದೀಪ ನಂದದಂತೆ ದೇವಸ್ಥಾನದಲ್ಲಿದ್ದು ಯಹೂದಿಗಳು ನೋಡಿಕೊಂಡರು. ಇದನ್ನು ಯಹೂದಿಗಳು ಬೆಳಕಿನ ಹಬ್ಬವಾಗಿ ಆಚರಿಸುತ್ತಾರೆ.
ಸ್ವೀಡನ್ ಸಂತ ಲೂಸಿಯಾ ದಿನ. ಡಿಸೆಂಬರ್ 13ನೇ ತಾರೀಕು ಅತೀ ಉದ್ದನೆಯ ರಾತ್ರಿ ಸ್ವೀಡನಲ್ಲಿ. ಅಂದು ಸೂರ್ಯನ ಕಿರಣ ಬರೀ ಕೆಲವು ಗಂಟೆಗಳು ಮಾತ್ರ. ಅಂದಿನ ರಾತ್ರಿ ಮನೆಯ ಹಿರಿಮಗಳು ಬಿಳಿಯ ನಿಲುವಂಗಿ ಧರಿಸಿ, ತಲೆಗೆ ಕೆಂಪು ಬಟ್ಟೆಯಿಂದ ಮಾಡಿದ ಸಿಂಬಿಯನ್ನು ತಲೆಯ ಮೇಲೆ ಇಟ್ಟುಕೊಂಡು ತಟ್ಟೆಯಲಿ ಮೋಂಬತ್ತಿಯನ್ನು ಹಚ್ಚಿಟ್ಟುಕೊಂಡು ಅದನ್ನು ತಲೆಯ ಮೇಲೆ ಹೊತ್ತು ಮನೆಯ ಅಂಗಳದಲ್ಲಿ ಕೆಲವು ಮೋಂಬತ್ತಿಯ ದೀಪಗಳನ್ನು ಹಚ್ಚುತ್ತಾಳೆ.
ಥೈಲಾಂಡಿನಲ್ಲಿ ಲೊಯಿ ಕ್ರಥೊನ್ ದೀಪಗಳ ಹಬ್ಬ. ಲೊಯ ಎಂದರೆ ತೇಲುವುದು, ಕ್ರಥೊಂಗ್ ಕಮಲದ ಹೂವಿನ ತರಹ ಬಾಳೆ ಎಲೆಯಲ್ಲಿ ಮಾಡಿದ್ದು. ನಮ್ಮಲ್ಲಿ ನೀರಿನಲ್ಲಿ ದೀಪ ಬಿಡುವ ಹಾಗೆ ಅವರು ಆ ಬಾಳೆ ಎಲೆಯಲ್ಲಿ ಮಾಡಿದ ಒಳಗೆ ಕ್ಯಾಂಡಲ್ ಇಟ್ಟು ನದಿ, ಕೆರೆಗಳಲ್ಲಿ ತೇಲಿ ಬಿಡುತ್ತಾರೆ. ರಿನ ದೇವತೆಗೆ ಕೃತಜ್ಞತೆ ಸಲ್ಲಿಪ ವಿಧಾನವಿದು. ನೀರಿನಲ್ಲಿ ದೀಪಗಳು ತೇಲಿ ಹೋದಂತೆ ಕಷ್ಟಗಳು ಕೂಡ ತೇಲಿ ಹೋಗುವುದೆಂದು ಅಲ್ಲಿನವರ ನಂಬಿಕೆ.
ಈಜಿಪ್ಟ್ನಲ್ಲಿ ಕ್ರಿಸ್ಮಸ್ ಜನವರಿ ೬ ಹಾಗು ೭ರಂದು. ಇಲ್ಲಿ ಮನೆ ಮನೆಗೂ ಮೋಂಬತ್ತಿ ಹಂಚುವ ಪರಿಪಾಠ. ಕ್ರಿಸ್ತ ಹುಟ್ಟುವ ಸಮಯದಲ್ಲಿ ದೀಪವಿಲ್ಲದ ಕಾರಣ ಜೋಸೆಪ್ ಮೇರಿಗೆ ಮೋಂಬತ್ತಿ ಹಿಡಿದು ನಿಂತಿದ್ದನಂತೆ. ಅದಕ್ಕಾಗಿ ಕ್ರಿಸ್ಮಸ್ ಹಬ್ಬದ ರಾತ್ರಿ ಮೋಂಬತ್ತಿ ಹಚ್ಚುವ ಪರಿಪಾಠವಿದೆ. ಫಿಲಿಪೈನ್ಸ್ ಕ್ರಿಸ್ಮಸ್ಗೆ ಒಂಬತ್ತು ದಿನಗಳ ಮೊದಲು ಕ್ರಿಸ್ತನ ಜನ್ಮದ ನಾಟಕಗಳು ನಡೆಯುತ್ತದೆ. ಜನ ಕ್ಯಾಂಡಲ್ ಹಿಡಿದು ಚರ್ಚ್ಗಳಿಗೆ ತೆರಳುತ್ತಾರೆ.
ಚೀನಾದಲ್ಲಿ ಕ್ರಿಸ್ಮಸ್ ಮರವನ್ನು ಬೆಳಕಿನ ಮರ ಎನ್ನುತ್ತಾರೆ. ಮೆಕ್ಸಿಕನ್ನರು ಮನೆಯಿಂದ ಮನೆಗೆ ಕ್ಯಾಂಡಲ್ ಹಿಡಿದು ಜೋಸೆಪ್ ಹಾಗೂ ಮೇರಿಯನ್ನು ಹುಡುಕುತ್ತಾರೆ. ಬ್ರೆಜಿಲ್ನಲ್ಲಿ ಹೊಸವರುಷದ ಹಿಂದಿನ ದಿನ ಲೆಮಾಂಜ (ಅಪ್ಪ್ರಿಕನ್ ದೇವತೆ) ನೀರಿನ ದೇವತೆಯನ್ನು ಪೂಜಿಸುವುದು ವಾಡಿಕೆ. ನದಿ, ಸಮುದ್ರದ ತೀರಗಳಲ್ಲಿ ಮರಳಿನ ಮೇಲೆ ಮೋಂಬತ್ತಿ ಹಚ್ಚಿ ಬೆಳಕು ಇಡು ಎಂದು ಬೇಡುವ ರೀತಿ. ನೀರಿನ ದೇವತೆಗೆ ಬಾಚಣಿಗೆ ಹಾಗೂ ಸುಗಂಧ ದ್ರವ್ಯ ಇಷ್ಟವೆಂದು ಅದನ್ನು ನೀರಿನೊಳಗೆ ಎಸೆಯುವ ವಾಡಿಕೆಯೂ ಉಂಟಂತೆ.
ಹಬ್ಬದ ಸಂಭ್ರಮ ಆಚರಿಸುವುದಕ್ಕೆ ಯಾವುದೇ ನೆಪಗಳು ಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಕಲ್ಮಶಗಳನ್ನು, ಗಾಢಾಂಧಕಾರಮಯ ಆಲೋಚನೆಗಳನ್ನು ತೊಲಗಿಸಲು ಮನದ ಬೆಳಕು ಇಡುವ ಹಣತೆ ಹಚ್ಚ ಬಯಸುತ್ತೇವೆ. ಅದಕ್ಕೆ ಹಬ್ಬಗಳ ಮೊರೆ ಹೋಗುತ್ತೇವೆ. ಯಾಂತ್ರಿಕ ಜೀವನದಲ್ಲಿ ಯಂತ್ರವಾಗಿರುವ ನಮಗೆ ಹಬ್ಬದ ಸಡಗರ ನವೋಲ್ಲಾಸ ತರುತ್ತದೆ. ಒಂದು ದಿನದ ಮಟ್ಟಿಗಾದರೂ ಎಲ್ಲರೊಂದಿಗೆ ಬೆರೆವ ಅವಕಾಶವನ್ನು ಇಡುತ್ತದೆ. ಈ ಮೂಲಕ ನೆಮ್ಮದಿಯನ್ನು ಕಾಣಬಯಸುತ್ತೇವೆ. ಏಕತಾನತೆ ಕಳೆಯಲು ಪ್ರಯತ್ನಿಸುತ್ತೇವೆ.
-ಶ್ರುತಿ ಅಮೀನ್ ನಾಳ,
ಉಪನ್ಯಾಸಕರು, ಸಂಶೋಧನಾರ್ಥಿ- ಮಂಗಳೂರು ವಿಶ್ವವಿದ್ಯಾಲಯ