ವಿಶ್ವ ಆಹಾರ ಸಂರಕ್ಷಣಾ ದಿನ

ವಿಶ್ವ ಆಹಾರ ಸಂರಕ್ಷಣಾ ದಿನ

ಆರೋಗ್ಯವೇ ಭಾಗ್ಯ, ಆರೋಗ್ಯ ಪರಿಪೂರ್ಣವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು? ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ" ನಾವು ಆರೋಗ್ಯವಾಗಿರಬಹುದು. ನಮ್ಮ ಎಲ್ಲಾ ಅನಾರೋಗ್ಯ ಶುರುವಾಗುವುದು ಹೊಟ್ಟೆಯ ಮೂಲಕವೇ, ಇದರ ಅರ್ಥ ನೀವು ತಿನ್ನುವ ಆಹಾರ. ನಾವು ನಮ್ಮ ದೇಹ ಪ್ರಕೃತಿಗೆ ಯಾವ ಆಹಾರ ಒಗ್ಗುವುದು ಎಂದು ತಿಳಿದು ತಿಂದರೆ ಆರೋಗ್ಯವೂ ಚೆನ್ನಾಗಿರುತ್ತದೆ.

ನಾವು ಸದೃಢರಾಗಿರಬೇಕು, ದೈಹಿಕವಾಗಿ, ಮಾನಸಿಕವಾಗಿ, ಭೌತಿಕವಾಗಿ, ಸಾಮಾಜಿಕವಾಗಿ ಸಹ. ಮನಸ್ಸಿನಲ್ಲಿ ಸದಾ ಯೋಚನೆ ತುಂಬಿಕೊಂಡರೆ, ಹೇಗೆ ಆರೋಗ್ಯವಾಗಿರಲು ಸಾಧ್ಯ? ನಮ್ಮಲ್ಲಿ ಇರುವುದರಲ್ಲಿ ಆದಷ್ಟೂ ಒಳ್ಳೆಯ ಆಹಾರವಸ್ತುಗಳನ್ನು ತಯಾರಿಸಿ ಸೇವಿಸುವುದೇ ಆರೋಗ್ಯದ ಗುಟ್ಟು. ಹಳ್ಳಿ ಪರಿಸರದಲ್ಲಿ ಮನೆಯ ಸುತ್ತಲೂ ಒಮ್ಮೆ ಕಣ್ಣಾಡಿಸಿದರೆ ಆ ದಿನಕ್ಕೆ ಬೇಕಾದ ಪದಾರ್ಥಗಳನ್ನು ತಯಾರಿಸಲು ಸಾಧ್ಯ. ಪಟ್ಟಣಗಳಲ್ಲಿ ಈಗೀಗ ತಾರಸಿ ತೋಟ, ಗ್ರೋ ಬ್ಯಾಗ್ ಗಳಲ್ಲಿ, ಚಟ್ಟಿ,ಕುಂಡಗಳಲ್ಲಿ ಸೊಪ್ಪು ತರಕಾರಿ ಮಾಡುವುದನ್ನು ರೂಢಿ ಮಾಡಿಕೊಳ್ಳುತ್ತಾ ಇದ್ದಾರೆ.

ವಿಶ್ವದಲ್ಲಿ ಆಹಾರ ತಿನ್ನುವುದು, ಉಣ್ಣುವುದು ಪ್ರತಿಯೊಬ್ಬನ ಹಕ್ಕು. ಆದರೆ ಎಷ್ಟು ಜನ ಹೊಟ್ಟೆ ತುಂಬಾ ಉಣ್ಣುತ್ತಿದ್ದಾರೆ? ಒಂದು ಹೊತ್ತಿನ ಊಟಕ್ಕಿಲ್ಲದೆ ಪರದಾಡುವ ಕುಟುಂಬಗಳು ಎಷ್ಟೋ ಇವೆ. ಇರುವುದನ್ನು ಹಂಚಿ ತಿನ್ನುವುದು ಸರಿ. ಆದರೆ ಎಷ್ಟು ದಿನ ತಿನ್ನಬಹುದು? ಮಕ್ಕಳಲ್ಲಿ ತೂಕ ಕಡಿಮೆ ಇರುವುದು, ಗರ್ಭಿಣಿಯರಿಗೆ ಪೋಷಕಾಂಶ ಕೊರತೆ ಇವುಗಳಿಗೆ ಪರಿಹಾರವಾಗಿ ಅಂಗನವಾಡಿಗಳ ಮೂಲಕ ಗರ್ಭಿಣಿ, ಬಾಣಂತಿಯರಿಗೆ, ೬ ವರುಷದೊಳಗಿನ ಮಕ್ಕಳಿಗೆ  ಪೋಷಕಾಂಶಭರಿತ ಆಹಾರ ವಿತರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿದೆ. ನಮ್ಮ ದೇಹದ ಆರೋಗ್ಯಕ್ಕೆ ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳು, ನಾರಿನಪದಾರ್ಥಗಳು, ಹಾಲು, ಹಾಲಿನ ಉತ್ಪನ್ನಗಳು ಹಾಗೆಯೇ ಕೆಲವು ಮಾಂಸಾಹಾರಿ ಪದಾರ್ಥಗಳು ಬೇಕು. ಪುಟ್ಟ ಮಕ್ಕಳಿರುವಾಗಲೇ ಒಳ್ಳೆಯ ಆಹಾರದ ಬಗ್ಗೆ ತಿಳುವಳಿಕೆ, ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯಾವಾಗಲೂ ಜಂಕ್ ಫುಡ್, ಫಾಸ್ಟ್ ಫುಡ್ ಖರೀದಿಸಿ ಸೇವಿಸುವುದು ಅಷ್ಟು ಹಿತವಲ್ಲ. ಎಲ್ಲದಕ್ಕೂ ಹಿತಮಿತವಿರಬೇಕು.

ಸಾಮಾನ್ಯವಾಗಿ ಬಾಳೆಹಣ್ಣು, ಪಪ್ಪಾಯಿ ಮುಂತಾದ ಕೆಲವು ಹಣ್ಣುಗಳು ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಆಯಾಯ ಋತುಮಾನದಲ್ಲಿ ದೊರಕುವುದನ್ನು ಸಂಗ್ರಹಿಸಿ ಸೇವಿಸುವುದು ಜಾಣತನ. ಕೆಲವಾರು ಸೊಪ್ಪು, ಹಸಿರು ತರಕಾರಿಗ ಸಿಪ್ಪೆಯಿಂದ ತಂಬುಳಿ, ಚಟ್ನಿ ಮಾಡಬಹುದು. ನಾವು ಇದನ್ನೆಲ್ಲಾ ಬಿಸಾಡುತ್ತೇವೆ. ಆರೋಗ್ಯ ದೃಷ್ಟಿಯಿಂದ ಅದನ್ನೆಲ್ಲಾ ಉಪಯೋಗಿಸಿದರೆ ಉತ್ತಮ.

ಆಹಾರದ  ವಸ್ತುಗಳನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುದನ್ನು ಸರಿಯಾಗಿ ಮಾಹಿತಿ ಸಂಘ ಸಂಸ್ಥೆಗಳು ನೀಡಬಹುದು. ಶಾಲೆಗಳಲ್ಲಿ, ಅಂಗನವಾಡಿಯ ಪೋಷಕರ ಸಭೆಯಲ್ಲಿ ನೀಡಿದರೆ ಹೆಚ್ಚು ಪ್ರಯೋಜನವಾಗಬಹುದು.

ನಿಗದಿತ ತಾರೀಕು ಮೀರಿದ ಆಹಾರ ವಸ್ತುಗಳನ್ನು ಖರೀದಿಸಬಾರದು. ಫ್ರಿಡ್ಜ್ ನಲ್ಲಿಟ್ಟ ಆಹಾರವನ್ನು ತೆಗೆದು ಸ್ವಲ್ಪ ಹೊತ್ತು ಹೊರಗಿಟ್ಟು ಬಳಸಬೇಕು. ಬಿಸಿಯಾದ ಆಹಾರವನ್ನು ಫ್ರಿಡ್ಜ್ ಒಳಗೆ ಇಡಬಾರದು. ಕೈಗಳನ್ನು ಚೆನ್ನಾಗಿ ತೊಳೆದು ಪ್ರತಿಯೊಂದನ್ನು ಮುಟ್ಟುವುದು ಒಳ್ಳೆಯದು. ಅಕ್ಕಿ, ಬೇಳೆ, ದವಸಧಾನ್ಯಗಳನ್ನು ಹುಳಹುಪ್ಪಡಿಗಳು ಆಗದಂತೆ ಜಾಗೃತೆ ವಹಿಸಬೇಕು.

ಕಳಪೆ ಆಹಾರದ ಬಗ್ಗೆ ಜಾಗೃತರಾಗಿರಬೇಕು.ಆಹಾರದ ಸುರಕ್ಷತೆ, ಗುಣಮಟ್ಟದ ಬಗ್ಗೆ ವಿಶೇಷ ಕಾಳಜಿ ವಹಿಸುವ ಸಲುವಾಗಿಯೇ *ಗುಣಮಟ್ಟ ನೋಡುವ*  ತಂಡಗಳು ತಪಾಸಣೆ ಮಾಡುತ್ತವೆ. ಕಾಫಿ, ಟೀ, ಮಸಾಲೆ ವಸ್ತುಗಳು, ಹುಡಿಗಳು, ಎಣ್ಣೆ, ಮನೆಯಲ್ಲಿ ತಯಾರಿಸಿ ಮಾರಾಟ ಮಾಡುವ ತಿಂಡಿಗಳು, ಸಂಸ್ಕರಿಸಿದ ಆಹಾರ ವಸ್ತುಗಳು, ಪಾನೀಯ, ಬೆಲ್ಲ, ಸಕ್ಕರೆ, ಮಾಂಸಾಹಾರಿ ವಸ್ತುಗಳು ಎಲ್ಲದರಲ್ಲೂ ಕಲಬೆರಕೆ ಸರ್ವೇಸಾಮಾನ್ಯ. ಇದರ ಅರಿವು ಮೂಡಿಸುವ ಚಟುವಟಿಕೆಗಳು ಇಂಥ ಸಂದರ್ಭದಲ್ಲಿ ಅತಿ ಅಗತ್ಯ

ಹೋಟೆಲ್ ನಲ್ಲಿ ಗುಣಮಟ್ಟ, ತಯಾರಿಸುವಲ್ಲಿ ಸ್ವಚ್ಛತೆ, ಎಲ್ಲಾ ಆಹಾರ ವಸ್ತುಗಳಿಗೂ ನಿಗದಿತ ಮಾನದಂಡ ಇವೆಲ್ಲವೂ ಅಗತ್ಯ. ತಯಾರಿ, ಸಂಗ್ರಹ, ವಿತರಣೆ, ಮಾರಾಟ, ಎಲ್ಲವೂ ಕ್ರಮ ಮತ್ತು ನಿಯಮದಡಿಯೇ ಇರಬೇಕು. ಆದಷ್ಟೂ ನೈಸರ್ಗಿಕ ಒಳ್ಳೆಯದು. ಕಲಬೆರಕೆಯಿಂದ ಮಾರಕ ರೋಗಗಳು ಇತ್ತೀಚೆಗೆ ಹೆಚ್ಚಾಗಿದೆ. ಮಧುಮೇಹ, ಕ್ಯಾನ್ಸರ್, ಅಸ್ತಮಾ, ಅಲರ್ಜಿ, ಚರ್ಮದ ರೋಗಗಳು, ನರಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ, ಇತ್ಯಾದಿ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಪ್ರತೀ ವರ್ಷ ಜೂನ್ ೭ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸಬೇಕೆಂದು ಕರೆಕೊಟ್ಟಿದೆ. ಇದರ ಮುಖ್ಯ ಉದ್ದೇಶವೆಂದರೆ ಸುರಕ್ಷಿಕ ಆಹಾರದ ಬಳಕೆ, ಆಹಾರದಿಂದ ತಗುಲುವ ರೋಗದ ಬಗ್ಗೆ ಎಚ್ಚರಿಕೆ, ಆಹಾರ ಸುರಕ್ಷತೆಯ ಮೂಲಕ ಆರೋಗ್ಯ ಕಾಪಾಡುವಿಕೆ ಮತ್ತು ಉತ್ತಮ ಆಹಾರದ ಮಾರುಕಟ್ಟೆಯನ್ನು ಉತ್ತೇಜಿಸುವುದು. ಉತ್ತಮವಾದ ಪೌಷ್ಟಿಕ ಆಹಾರವನ್ನು ಉತ್ತೇಜಿಸಿ, ಒಳ್ಳೆಯ ಮಾರುಕಟ್ಟೆ ಒದಗಿಸಿದರೆ ಜನರೂ ಆರೋಗ್ಯವಂತರಾಗುತ್ತಾರೆ. ಕೇವಲ ಬಾಯಿಗಷ್ಟೇ ರುಚಿಸುವ ಆಹಾರ ತಿಂದರೆ ಉದರವು ಕೆಡುತ್ತದೆ. ರೋಗ ಬರುತ್ತದೆ. ಅದಕ್ಕಾಗಿ ನಾವು ಯಾವತ್ತೂ ನಮಗೆ ಒಗ್ಗುವ ಉತ್ತಮ ಪೌಷ್ಟಿಕಾಂಶ ಭರಿತ ಆಹಾರವನ್ನೇ ಸೇವಿಸಬೇಕು. 

ಒಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಲಿ, ಉತ್ತಮ ಆಹಾರವನ್ನು ಸೇವಿಸಿ ಸದೃಢರಾಗೋಣ. ಸ್ವಚ್ಛ ಆಹಾರವನ್ನೇ ಸೇವಿಸೋಣ. ಆದಷ್ಟೂ ರಸ್ತೆ ಬದಿಯ ಆಹಾರ ಸೇವಿಸುವುದು ಕಡಿಮೆ ಮಾಡಿದರೆ ಉತ್ತಮ. ಹಸಿದು ಬಂದವರಿಗೆ ಒಂದು ತುತ್ತು ಅನ್ನ ನೀಡಿ ಧನ್ಯರಾಗೋಣ.

ಮಾಹಿತಿ ಸಹಕಾರ: ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ : ಅಂತರ್ಜಾಲ ತಾಣ