ವಿಶ್ವ ಕವಿಗಳ ದಿನ

ವಿಶ್ವ ಕವಿಗಳ ದಿನ

ಪ್ರತಿ ವರ್ಷ ಅಗಸ್ಟ್ ೨೧ ರಂದು 'ವಿಶ್ವ ಕವಿಗಳ' (World Poets Day) ದಿನವೆಂದು ಆಚರಿಸಲಾಗುತ್ತದೆ. ನಾವು ಬಾಲ್ಯದಲ್ಲಿ ಅಮ್ಮ ಗುನುಗುತ್ತಿದ್ದ ‘ಆನೆ ಆನೆ ಆನೆ ಯಾವೂರ ಆನೆ, ತಾತಾ ಗುಬ್ಬಿ ತಾ ಹೊನ್ನಗುಬ್ಬಿ, ಮುಚ್ಚಲು ತೆಗೆದರೆ ಮುನ್ನೂರು ಗುಬ್ಬಿ, ಜೋ ಜೋ ಕಂದನಿಗೆ, ಜೋ ಜೋ ಕೃಷ್ಣನಿಗೆ, ಜೋ ಜೋ ಶ್ರೀರಾಮಚಂದ್ರನಿಗೆ’ ಹಾಡುಗಳನ್ನು ಕೇಳಿದ್ದುಂಟು. ಅನಂತರ ಬಾಲವಾಡಿ, ಪ್ರಾಥಮಿಕ ಶಾಲೆ ಹೀಗೆ ಮುಂದುವರಿಯುತ್ತದೆ. ‘ಒಂದು ಎರಡು ಶಾಲೆಗೆ ಹೊರಡು, ಒಂದು ಎರಡು ಬಾಳೆಲೆ ಹರಡು, ಸೌದೆ ತಾರೋ ಮಲ್ಲ, ರಂಗನೊಂದು ದಿವಸ ಚೆಂಡು ಆಡುತ್ತಿದ್ದನು, ತೆಂಗಿನ ಮರದ ಮೇಲೊಂದು ಮಂಗ, ನಾಯಿಮರಿ ನಾಯಿಮರಿ, ಗುಬ್ಬಿ ಗುಬ್ಬಿ’ ಎಷ್ಟೊಂದು ಬಾಲಪದ್ಯಗಳನ್ನು ಹಾಡಿದ್ದೇವೆ. ಅಧ್ಯಾಪಕರ ಮಾರ್ಗದರ್ಶನದಲ್ಲಿ.ಮುಂದೆ ಬೆಳೆಯುತ್ತ, ಕಲಿಯುತ್ತ ಹೋದಂತೆ ಶಿಕ್ಷಕರೋ, ಮನೆಯ ಹಿರಿಯರೋ ತೋಚಿದ್ದನ್ನು ಗೀಚಲು, ಪುಟ್ಟ ಪುಟ್ಟ ಕವನ, ಕವಿತೆಗಳನ್ನು ಬರೆಯುವಂತೆ ಪ್ರೋತ್ಸಾಹಿಸುವ ಮೂಲಕ, ಸಾಹಿತ್ಯ ಪ್ರಕಾರಗಳ ಬರೆಹಕ್ಕೆ ನಾಂದಿ ಹಾಡಿದರಲ್ಲವೇ?

ದೊಡ್ಡವರಾದ ಮೇಲೆ ಬಹಳಷ್ಟು ಕವಿತೆಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಓದಿರುತ್ತೇವೆ. ಕಾವ್ಯ ಮತ್ತು ಕವಿತೆಗಳೆರಡೂ ಯಾವುದೇ ಸಂದರ್ಭದಲ್ಲಿ ಹೇಳುವ, ಬರೆಯುವ ವಿಷಯವಾಗಿದೆ. ಕಲ್ಪನೆಗೆ, ಕನಸಿಗೆ, ಪ್ರಕೃತಿಗೆ ಕವನ ಬರೆಯುವ ಹವ್ಯಾಸ ಕೆಲವು ಕವಿಗಳಿಗಿದೆ. ‘ರವಿ ಕಾಣದ್ದನ್ನು ಕವಿ ಕಾಣುತ್ತಾನಂತೆ’ ಎಲ್ಲವೂ ಅನುಭವಜನ್ಯವಾದುದೇ ಆಗಬೇಕೆಂದಿಲ್ಲ. ಕಂಡದ್ದು, ಕಾಣದ್ದು, ಕೇಳಿದ್ದು, ಸಮಾಜದ ಓರೆಕೋರೆಗಳು, ಸಮಸ್ಯೆಗಳು, ಚಿತ್ರಗಳು, ಮನೋಕಾಮನೆಗಳು, ಬಣ್ಣಬಣ್ಣದ ಚಿತ್ತಾರಗಳು, ಕವನಕ್ಕೆ ಪ್ರೇರಣೆಯಾಗಬಹುದು. 'ಸೌಂದರ್ಯ ಎಲ್ಲಿಹುದೋ ಅಲ್ಲೊಂದು ಕವಿತೆ' ಹುಟ್ಟಬಹುದು. ಕವಿಗಳಿಗೂ ಒಂದು ದಿನ ಬೇಕಲ್ಲ?

ಏನೇ ಇರಲಿ, ಕವಿಗಳು ಮತ್ತು ಕವಿತೆಗಳನ್ನು ಪ್ರೋತ್ಸಾಹಿಸಲು ಕವಿಗಳ ದಿನವನ್ನು ಆಚರಿಸಲಾಗುತ್ತದೆಯಂತೆ. ದಿನದ ಆಚರಣೆಯು ಕಾವ್ಯದ ಇತಿಹಾಸಕ್ಕೆ ಸಮರ್ಪಣೆಯ ರೂಪವಾಗಿ ಪ್ರಾರಂಭವಾಯಿತು ಮತ್ತು ಅವರ ಗುಣಮಟ್ಟದ ಕವಿತೆಗಳನ್ನು ಜಗತ್ತಿಗೆ ತೋರಿಸಲು, ಪ್ರಚಾರಮಾಡಲು, ವೇದಿಕೆ ನಿರ್ಮಾಣ ಮಾಡಿ ಗೌರವಿಸಲು ‘ಈ ಕವಿದಿನ’ ಆರಂಭವಾಯಿತು. 'ಎಲೆಯಮರೆಯಕಾಯಿ'ಗಳನ್ನು ಗುರುತಿಸುವ ಕಾರ್ಯವಾಗಬೇಕು. ಕೆಲವು ಜನ ಹೆಸರಿಗಾಗಿ, ಪ್ರತಿಷ್ಠೆಗಾಗಿ, ಕೀರ್ತಿಗಾಗಿ ಮುಂದೆ ಮುಂದೆ ಹೋಗುವುದೂ ಇದೆ. ‘ನೈಜ ಪ್ರತಿಭೆ’ ಬೆಳಕಿಗೆ ಬರುವಂತೆ ಓದುಗರು, ಸಹೃದಯರು ಪ್ರಯತ್ನಿಸಬೇಕು. ನಮ್ಮ ಹಿರಿಯ ಕವಿಪುಂಗವರ ಶ್ರಮ ಸಾಮಾನ್ಯವಾದುದಲ್ಲ. ಅವರ ನೆರಳಿನಡಿ ಹೋಗಬಹುದು, ಅನುಸರಿಸಬಹುದು, ಆದರೆ ಅದನ್ನೇ ಬರೆದು ಕವಿ ಅನಿಸಬಾರದು. ಅವರ ರಚನೆಗಳ ಮೌಲ್ಯ, ತೂಕ, ಭಾವನೆಗಳ ಓಘ ಮಾದರಿಯಾಗಿಟ್ಟು, ಕವಿಯೆನಿಸಿದವರು ತನ್ನ ಭಾವನೆ, ಶೈಲಿ, ಪದಪುಂಜಗಳಿಂದ ಬರೆದಲ್ಲಿ 'ಶ್ರಮ ಸಾರ್ಥಕ', ಬರವಣಿಗೆ 'ರತ್ನ'ವೆನಿಸಬಹುದು. 

ಈ ದಿನವನ್ನು ಹೆಚ್ಚು ಕವನಗಳನ್ನು,ಸಾಹಿತ್ಯ ಪ್ರಕಾರಗಳನ್ನು ಬರೆಯುವ ಮೂಲಕ ‘ಕವಿಗಳ ದಿನವನ್ನು’ ಆಚರಿಸಿ ಗೌರವ ಸಲ್ಲಿಸೋಣ. ಕವಿಗಳ ಕವನ ದಿನವನ್ನು 'ವಿಲಿಯಂ ಸೀಗಾರ್ಟ್' ಅವರು ಸ್ಥಾಪಿಸಿದರು. ಅವರು ಬ್ರಿಟಿಷ್ ಲೋಕೋಪಕಾರಿ, ಉದ್ಯಮಿ ಮತ್ತು ಪ್ರಕಾಶಕರಾಗಿದ್ದಾರೆ. ಅವರು ಕವಿತೆಗಾಗಿ ಫಾರ್ವರ್ಡ್ ಪ್ರಶಸ್ತಿಗಳನ್ನು ಸಹ ಸ್ಥಾಪಿಸಿದರು. ವರ್ಷಕ್ಕೊಮ್ಮೆ ನೀಡಲಾಗುವ ಕಾವ್ಯಕ್ಕೆ ಇದು ಪ್ರಮುಖ ಪ್ರಶಸ್ತಿ ಸಮಾರಂಭವಾಗಿದೆ. ಈಗಂತೂ ನಮ್ಮನ್ನಗಲಿದ ಹಿರಿಯ ಕವಿಶಿರೋಮಣಿಗಳ ಹೆಸರಿನಲ್ಲಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಏನೇ ಇರಲಿ ಕಾಗುಣಿತ ದೋಷವಿಲ್ಲದೆ ಬರೆಯಲು ಅಭ್ಯಾಸ ಮಾಡೋಣ, ಕವಿಗಳಿಗೆ ನಮನ ಸಲ್ಲಿಸೋಣ.

(ಆಧಾರ) ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ