ವಿಶ್ವ ಕೈ ನೈರ್ಮಲ್ಯ ದಿನ

ನೈರ್ಮಲ್ಯ ಮತ್ತು ಸ್ವಚ್ಛ ಕೈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 5 ರಂದು ವಿಶ್ವ ಕೈ ನೈರ್ಮಲ್ಯ ದಿನ (World Hand Hygiene Day)ವನ್ನು ಆಚರಿಸಲಾಗುತ್ತದೆ. ಆಸ್ತಿಕತೆ ಮತ್ತು ವಿಜ್ಞಾನ.... ನಂಬಿಕೆ ಮತ್ತು ವಿಚಾರ.... ಎರಡೂ ಒಂದಕ್ಕೊಂದು ಪೂರಕವಾಗಿದ್ದರೆ ಏನು ಬೇಕಾದರೂ ಮಾಡಬಹುದು. ಯಾರನ್ನು ಬೇಕಾದರೂ ಕನ್ವಿನ್ಸ್ ಮಾಡಬಹುದು.
ಮೃತ್ಯುಂಜಯ ಮಂತ್ರ ಮೃತ್ಯುಭಯ ನಿವಾರಿಸುವ, ಆಯಸ್ಸು ಹೆಚ್ಚಿಸುವ ಮಂತ್ರ ಅನ್ನುವುದು ಶ್ರದ್ಧಾವಂತರ ನಂಬಿಕೆ. ಹಾಗೆಯೇ ಸೋಪು ಹಚ್ಚಿ ನೀಟಾಗಿ ಕೈತೊಳೆದರೆ ಮಾರಣಾಂತಿಕ ವೈರಸ್ ನಿವಾರಣೆಯಾಗುತ್ತದೆ ಅನ್ನೋದು ವಿಜ್ಞಾನದ ತಿಳಿವಳಿಕೆ. ಆದರೆ, ಬಹಳ ಬಾರಿ ನಮಗೆ ನಂಬಿಕೆ ಇಲ್ಲದೆ ಹೋದಾಗ, ನಮ್ಮ ಮನಸ್ಥಿತಿ ಅನುಮಾನ ಅಥವಾ ನಿರಾಕರಣೆಯ ಹಂತದಲ್ಲಿರುವಾಗ ಸಿದ್ಧಸೂತ್ರಗಳೂ ವಿಫಲವಾಗಿಬಿಡುತ್ತವೆ. ಹಾಗೂ ನಮ್ಮ ಮನಸ್ಸಿನಲ್ಲಿ ಛಲ ಮತ್ತು ಕ್ರಿಯೆಯಲ್ಲಿ ಪ್ರಯತ್ನವಿದ್ದಾಗ ಅಸಂಗತ ಅಂದುಕೊಂಡಿದ್ದೂ ಸಾಧ್ಯವಾಗಿಬಿಡುತ್ತದೆ.
ಜಗತ್ತು ಬಗೆಬಗೆಯ ಆಲೋಚನೆಯ ಜನರಿಂದ ತುಂಬಿರುವ ವೈವಿಧ್ಯಮಯ ಸೃಷ್ಟಿ. ಎಲ್ಲರೂ ಒಂದೇ ಬಗೆಯಲ್ಲಿ ಆಲೋಚನೆ ಮಾಡಬೇಕೆಂದು ತಾಕೀತು ಮಾಡೋದು ಮೂರ್ಖತನ. ಆದರೆ ಯಾವುದೋ ಒಂದು ಆಲೋಚನೆ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಪರಿಣಾಮಕಾರಿಯಲ್ಲ ಎಂದಾಗ ಮತ್ತೊಂದರ ಜೊತೆ ಅದನ್ನು ಬೆರೆಸಬೇಕಾಗುತ್ತದೆ. ಹೊಸತೊಂದು ಸೂತ್ರ ಸಿದ್ಧಪಡಿಸಿ ಅನ್ವಯಗೊಳಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಈ ಕೆಳಗಿನ ಮಂತ್ರ - ಚಿತ್ರ ಬಹಳ ಇಷ್ಟವಾಯಿತು. ದೇವರ ಮೇಲೆ ನಂಬಿಕೆ ಇಡಿ, ದೇವರನ್ನು ನೆನೆಯುತ್ತಲೇ ನಿಮ್ಮ ಕರ್ತವ್ಯವಾಗಿ ಕೈತೊಳೆದುಕೊಳ್ಳಿ....!! ಆಸ್ತಿಕತೆಗೂ ಧಕ್ಕೆಯಿಲ್ಲ, ಎಲ್ಲಕ್ಕೂ ಮನುಷ್ಯಪ್ರಯತ್ನ ಮುಖ್ಯ ಅನ್ನುವ ಸನಾತನ ವಾಕ್ಯದ ಅನುಷ್ಠಾನವೂ ಆಯಿತು! ಅಂದಹಾಗೆ, ಕರೋನಾ ಎದುರಿಸಲು ಮಾತ್ರವಲ್ಲ, ಪ್ರತಿದಿನವೂ ಈ ಅಭ್ಯಾಸ ಬಹಳ ಒಳ್ಳೆಯದು. ಆಸಕ್ತರು ಕೂಡಲೇ ಮಂತ್ರ ಬಾಯಿಪಾಠ ಮಾಡಿಕೊಳ್ಳಿ!!
ತ್ರಯಂಬಕಂ ಯಜಾಮಹೇ ಸುಗಂಧೀಂ ಪುಷ್ಟಿವರ್ಧನಂ|
ಊರ್ವಾರುಕಮಿವ ಬಂಧನಾತ್ ಮೃತ್ಯೋರ್ ಮುಕ್ಷೀಯಮಾಮೃತಾತ್ ||
ಭಾವಾರ್ಥ : ಪೂಜನೀಯನಾದ ತ್ರಿನೇತ್ರನೇ, ನನ್ನ ಜೀವನವು ಸುಪುಷ್ಟವಾಗಿ ಸುಗಂಧ ಬೀರುವಂತೆ ಕರುಣಿಸು. ಸೌತೆ ಕಾಯಿಯು ಹೇಗೆ ತನ್ನ ಬಳ್ಳಿಗೆ ತೊಟ್ಟಿನಿಂದ ಸೂಕ್ಷ್ಮವಾಗಿ ಅಂಟಿಕೊಂಡಿದೆಯೋ (ಮತ್ತು ಹೇಗೆ ಪಕ್ವವಾದಾಗ ಸಹಜವಾಗಿ ಕಳಚಿಬೀಳುವುದೋ) ಹಾಗೆ ಸಾವಿನೊಂದಿಗೆ ಅಂಟಿಕೊಂಡಿರುವ ಬದುಕನ್ನು ಸಹಜವಾಗಿ ಕೊನೆಗೊಳಿಸು. (ಅಲ್ಲಿಯವರೆಗೆ ಪೂರ್ಣಾಯುಷ್ಯ ಕೊಡು. ಅಕಾಲಿಕ ಮರಣ ತರಬೇಡ)
(ಸಂಗ್ರಹ) ಅರುಣ್ ಡಿ'ಸೋಜ, ಮಂಗಳೂರು