ವಿಶ್ವ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆ

ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು *ಮಹಿಳೆ* ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲಿರಲಿ, * ಅಡುಗೆ * ದೈವೀದತ್ತ ಕಲೆ ಅವಳ ಪಾಲಿಗೆ.

ಓರ್ವ ಹೆಣ್ಣು ಮಗಳ ಸ್ಥಿತಿ ಗತಿ, ಅವಳ ಸ್ಥಾನಮಾನ, ಅವಳ ಮೇಲಾಗುವ ಲೈಂಗಿಕ ಶೋಷಣೆ, ಅತ್ಯಾಚಾರ, ಅನಾಚಾರ, ಅಮಾನವೀಯತೆ, ತಾರತಮ್ಯ, ಲಿಂಗಾನುಪಾತ ಈ ಎಲ್ಲವನ್ನೂ ಮನಗಂಡು ಮೂಡಿದ ಪದವೇ *ಮಹಿಳಾ ದಿನ*. ಮಹಿಳೆಗೆ ಸ್ಥಾನ ಸಮಾಜದಲ್ಲಿ ಕಲ್ಪಿಸುವುದು, ಅವಳಿಗೂ ನಾಯಕತ್ವದ ಅವಕಾಶ ನೀಡುವುದು ಈ ಹಿನ್ನೆಲೆಯಲ್ಲಿ ಈ *ಮಹಿಳಾ ಮೀಸಲಾತಿ* ಜಾರಿಗೆ ಬಂತು. ೧೯೭೫ರಲ್ಲಿ *ವಿಶ್ವಮಹಿಳಾ ದಿನ *ವನ್ನಾಗಿ ಮೊದಲ ಬಾರಿಗೆ ಆಚರಿಸಲಾಯಿತು.

ಒಂದು ಮನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಮಹಿಳೆ ಮತ್ತು ಪುರುಷ ಗಾಲಿಯ ಎರಡು ಚಕ್ರಗಳಿದ್ದಂತೆ. ಒಂದು ಚಕ್ರ ಸ್ವಲ್ಪ ಬಾಗಿದರೂ ಅನಾಹುತ ತಪ್ಪಿದ್ದಲ್ಲ. ಮಗಳು, ತಾಯಿ, ಪತ್ನಿ, ಅಜ್ಜಿಯಾಗಿ, ಮನೆಯಲ್ಲಿ ಆಕೆ ನಿಭಾಯಿಸುವ ಪಾತ್ರ ಸಾಮಾನ್ಯವಲ್ಲ. *ಕ್ಷಮಯಾಧರಿತ್ರಿ* ಆಕೆ. ಆಕೆಯ ದಿನನಿತ್ಯದ ದುಡಿಮೆಗೆ ಬೆಲೆಕಟ್ಟಲಾಗದು. ಮಹಿಳೆಯಿಲ್ಲದ ಮನೆ *ಸ್ಮಶಾನ* ಕ್ಕೆ ಸಮ. ಮನೆಯಲ್ಲಿ ಮಾತು, ನಗು, ಗೆಜ್ಜೆ ನಿನಾದ, ಕಲರವ ಇದೆಲ್ಲ ಓರ್ವ ಮಹಿಳೆ ಇದ್ದಾಗ ಮಾತ್ರ ಸಾಧ್ಯ.

ಇತ್ತೀಚೆಗೆ ನಾವು ಕಂಡಂತೆ, ಸಣ್ಣ ಹೆಣ್ಣು ಮಗುವನ್ನು ಸಹ ಲೈಂಗಿಕ ಶೋಷಣೆಗೆ ಒಳಗಾಗಿಸಿ, ಸಾಯಿಸುವುದು  ಸರ್ವೇಸಾಮಾನ್ಯವಾಗಿದೆ. ಹಾಗಾದರೆ ಇದು ಯಾರ ತಪ್ಪು? ಆ ಮಗುವಿನದ್ದೇ, ಕಾಮುಕರದೇ, ತಿಳುವಳಿಕೆಯ ಕೊರತೆಯೇ? ಆಕೆಗೆ ಬದುಕುವ ಹಕ್ಕಿಲ್ಲವೇ?

ಹೆಣ್ಣು ಮಗುವಿನ ಭ್ರೂಣಹತ್ಯೆ ಸಾರಸಗಟಾಗಿ ನಡೆಸುವುದು ಕಂಡು, ಲಿಂಗಾನುಪಾತ ತಲೆದೋರಿದಾಗ, ಆಡಳಿತ ಪಕ್ಷಗಳು ಎಚ್ಚೆತ್ತವು. ಆದರೂ ಅಲ್ಲೊಂದು ಇಲ್ಲೊಂದು ಪ್ರಕರಣ ಆಗ್ತಾ ಇದೆ. ತಾಯ ಗರ್ಭದಲ್ಲೇ ಅವಳನ್ನು ಸಾಯಿಸುವುದರಿಂದ ಶೋಷಣೆ ಆರಂಭ. *ಹೆಣ್ಣಿಗೆ ಹೆಣ್ಣೇ ಶತ್ರು* ತಾಯಿ ಮನಸ್ಸು ಮಾಡಿದರೆ ಭ್ರೂಣಹತ್ಯೆ ತಡೆಗಟ್ಟಬಹುದು. ಆಕೆಗೆ ಸ್ಥಿರ ಮನಸ್ಥಿತಿ ಇಲ್ಲದಾಗ ಇಂಥ ಪ್ರಕರಣ ತಲೆದೋರುವುದು ಸಹಜ.ಪುರುಷಪ್ರಧಾನ ಸಮಾಜದ ದಬ್ಬಾಳಿಕೆ ಒಮ್ಮೊಮ್ಮೆ ಕಾಣಿಸಿಕೊಳ್ಳಲೂ ಬಹುದು.

ಸಮಾಜ ಎಷ್ಟೇ ಮುಂದುವರಿದರೂ ಆಕೆ ಭೋಗದವಸ್ತು, ಪುರುಷನ ಕಾಮನೆಗಳ ಬಲಿಪಶು, ಅಡುಗೆ ಮನೆಗೆ ಸೀಮಿತ, ಮಕ್ಕಳನ್ನು ಹೆರುವ ಯಂತ್ರ, ಮನೆಯ ಸದಸ್ಯರ ಬೇಕು ಬೇಡಗಳನ್ನು ಪೂರೈಸುವವಳು ಈ ರೀತಿಯ ಮನೋಭಾವ ಇನ್ನೂ ಇದೆ. ಒಳ್ಳೆಯ ವಿದ್ಯಾಭ್ಯಾಸ ನೀಡಿ ಮೊದಲು ಸಮಾಜದಲ್ಲಿ ನಿಲ್ಲುವ, ನಡೆಯುವ, ನಾಲ್ಕು ಜನರೊಂದಿಗೆ ವ್ಯವಹರಿಸುವ ಕೌಶಲವನ್ನು ಆಕೆಗೆ ಕಲಿಸೋಣ. ಇತ್ತೀಚೆಗೆ ಸಮಾಜದ ಎಲ್ಲಾ ಸ್ತರಗಳಲ್ಲೂ ಆಕೆ ತನ್ನದೇ ಛಾಪನ್ನು ಮೂಡಿಸಿ *ಸೈ* ಅನಿಸಿಕೊಂಡಿದ್ದಾಳೆ. ಆದರೆ ಶೋಷಣೆ, ಅತ್ಯಾಚಾರಗಳು ಕಡಿಮೆಯಾಗಿಲ್ಲ.

ಮಕ್ಕಳ ಕಳ್ಳಸಾಗಣೆಯಂತಹ ಕೆಟ್ಟ ಚಾಳಿ ದಿನವೂ ನಡೆಯುತ್ತಿದೆ. ಅಲ್ಲೂ ತಾರತಮ್ಯ, ಗಂಡುಮಗುವಿನ ಮಾರಾಟಕ್ಕೆ ಬೆಲೆ ಹೆಚ್ಚು, ಹೆಣ್ಣು ಮಗುವಿಗೆ ಕಡಿಮೆ. ಪತ್ರಿಕೆಯಲ್ಲಿ (೬/೩/೨೧) ನೋಡಿದೆ. ಛೇ, ಎಂಥ ಅಮಾನವೀಯತೆ ಇದು. ಇದಕ್ಕೆ ಕುಮ್ಮಕ್ಕು ಕೊಡುವವರು ನಾವೇ ಅಲ್ಲವೇ?

ನಮ್ಮ ಮನೆಯ ಹೆಣ್ಣು ಮಗಳನ್ನು ಪ್ರೀತಿಸೋಣ, ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸೋಣ, ಹೆಣ್ಣು- ಗಂಡು ತಾರತಮ್ಯ ಬೇಡ, ಗಂಡು ಮಗುವಿಗೂ ಕೆಲಸ ಬೊಗಸೆ ಕಲಿಸೋಣ, ಜೊತೆಜೊತೆಯಾಗಿ ಬೆಳೆಸೋಣ ಆಗದೇ?.

ಬರಿಯ ಆಚರಣೆ, ಭಾಷಣಗಳಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ.

ಸರಕಾರದ ಮಹಿಳಾ ಮೀಸಲಾತಿ, ವಿದ್ಯಾಭ್ಯಾಸ ದಲ್ಲಿ ಉಚಿತ ಸೌಲಭ್ಯಗಳು, ಮುಂದೆ ಕೆಲಸಕ್ಕೆ ದಾಖಲಾಗುವಾಗ ಅಲ್ಲೂ ಮೀಸಲಾತಿ, ಈರೀತಿ ಅವಳ ಸೌಲಭ್ಯಗಳನ್ನು ಕಸಿಯದೆ ಅವಳಿಗೆ ನೀಡಿದಾಗ ಸ್ವಲ್ಪ ಉನ್ನತಿ ಸಾಧ್ಯ. ಯಾರಿಗೆ ಆಗಲಿ ಸ್ವಾತಂತ್ರ್ಯ ನೀಡೋಣ, ಸ್ವೇಚ್ಛಾಚಾರಿತನ ಬೇಡ, ಸಿಕ್ಕ ಸ್ವಾತಂತ್ರ್ಯ ದುರುಪಯೋಗವಾಗದಂತೆ ನೋಡಿಕೊಳ್ಳೋಣ.

ಆಕೆ ಮನೆಯ ಅವಿಭಾಜ್ಯ ಅಂಗವಾಗಿರುವಂತೆ ಬೆಳೆಸೋಣ. ಹೆಣ್ಣು ಗಂಡು ಭೇದವೆಣಿಸದೆ. ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಹೆತ್ತವರ ಕರ್ತವ್ಯ. ಎಲ್ಲರಿಗೂ 'ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು'.

ಅಂತರಾಷ್ಟ್ರೀಯ ಮಹಿಳಾ ದಿನದಂದು ‘ಹೆಣ್ಣಿನ' ಬಗ್ಗೆ ನನ್ನ ಮನದಲ್ಲಿ ಮೂಡಿದ ಭಾವವೊಂದು  ಕವನವಾಗಿದೆ.  

ಹೊಸಕದಿರಿ

ಹುಟ್ಟುತ್ತಲೇ ಹೆಣ್ಣೇ

ಎಂದು ಮೂಗು ಮುರಿಯುವಿರಿ 

ವ್ಯಂಗ್ಯ ನಗುವಿನ ಸುಳಿಮಿಂಚು

ಹಾಯ್ದು ಹೋಯಿತು

ಮೊಗದ ಮೇಲೆ

 

ಬೆಳೆಯುತ್ತಲೇ

ನೀನು ಹುಡುಗಿ

ಹಾರಾಡದಿರು

ಬುದ್ಧಿಮಾತುಗಳ ಕೇಳಿ

ಕಿವಿ ಜಡ್ಡುಗಟ್ಟಿತು

ಕುಹಕಕ್ಕೆ ಕೊನೆಯಿಲ್ಲದಾಯಿತು

 

ಅರಳುವ ಮುನ್ನವೇ

ಹೊಸಕಿ ಹಾಕದಿರಿ

ಪಾದದಡಿಯಲಿ ತುಳಿಯದಿರಿ

ನಾನೇನು ಅಪರಾಧ ಮಾಡಿದ್ದೆ

ನನಗೂ ಬದುಕುವ ಹಕ್ಕಿಲ್ಲವೇ 

 

ನಾನು ನೆಮ್ಮದಿಯ

ಉಸಿರಾಟ ನಡೆಸಲು

ಯಾಕೆ ತಡೆಯೊಡ್ಡುವಿರಿ

ಎರಡೂ ಕಣ್ಣುಗಳು

ನಮಗೆ ಬೇಕಲ್ಲವೇ

ನಾನು ಒಂದು ಕಣ್ಣಲ್ಲವೇ

 

ಕ್ಷಮಯಾಧರಿತ್ರಿ ಎನ್ನುವಿರಿ

ಅಮ್ಮಾ ಎಂದು ಕೂಗುವಿರಿ

ಹೆಣ್ಣು ಸಂಸಾರದ ಕಣ್ಣು

ಅರಿತು ಬಾಳಿರಿ ಬಾಳಿಸಿರಿ

ಆಗ ಧರೆಗೆ ಸ್ವರ್ಗ ಇಳಿವುದು

 

-ರತ್ನಾ ಕೃಷ್ಣ ಭಟ್, ತಲಂಜೇರಿ, ಬಂಟ್ವಾಳ.

ಚಿತ್ರ ಕೃಪೆ: ಇಂಟರ್ನೆಟ್ ತಾಣ