ವಿಶ್ವ ಮಾತೃಭಾಷೆ ದಿನ
ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು.
ಪ್ರಪಂಚದಲ್ಲಿ ಅವಲೋಕಿಸಿದರೆ ಅಂದಾಜು ೭೧೦೦ಕ್ಕಿಂತಲೂ ಹೆಚ್ಚು ಭಾಷೆಗಳಿವೆ. ಭಾಷೆ ಮತ್ತು ಮಾನವನ ಭಾವನೆ, ವ್ಯವಹಾರ, ನಡವಳಿಕೆಗೂ ಭಾಷೆಗೂ ನೇರ ಸಂಬಂಧವಿದೆ ಎನ್ನಬಹುದು. ಮೊದಲು ಮಾತೃಭಾಷೆಯನ್ನು ಕಲಿತರೆ, ಅನಂತರ ಎಲ್ಲಾ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು.
ಬಹುಭಾಷೆ, ಬಹು ಸಂಸ್ಕೃತಿಯನ್ನು ಬಿಂಬಿಸಲು, ಪ್ರೋತ್ಸಾಹಿಸಲು ೧೯೯೯ರಲ್ಲಿ ಮೊದಲ ಬಾರಿಗೆ ಯುನೆಸ್ಕೋ ಮಾತೃಭಾಷಾದಿನವನ್ನು ಘೋಷಿಸಿತು. ೧೯೪೭ರ ದೇಶ ವಿಭಜನೆ ಸಂದರ್ಭ ಭಾಷಾ ಸಮಸ್ಯೆಯನ್ನು ಹುಟ್ಟು ಹಾಕಿದ ಪರಿಣಾಮ ೧೯೫೨ರಲ್ಲಿ ಬಾಂಗ್ಲಾದೇಶದಲ್ಲಿ ಭಾಷಾ ಚಳವಳಿ ನಡೆದು, ವಿದ್ಯಾರ್ಥಿಗಳು ಬೀದಿಗಿಳಿದರು. ಜೀವಹಾನಿಯೂ ನಡೆಯಿತು. ಈ ನೆನಪಿಗಾಗಿ ಫೆಬ್ರವರಿ ೨೧ ರಂದು ವಿಶ್ವ ಮಾತೃಭಾಷೆ ದಿವಸವಾಗಿ ಆಚರಿಸಲಾಯಿತು.
ಜಾಗತೀಕರಣದ ಪ್ರಭಾವ ಸ್ಥಳೀಯ ಭಾಷೆಗಳ ಮೇಲೆ ಬಹಳಷ್ಟು ಪ್ರಭಾವ ಬೀರುವುದು ಸಹಜ.ಮಾತೃಭಾಷೆ ವ್ಯಕ್ತಿಯ ಗುರುತು ಎನ್ನಬಹುದು. ತಾಯಿಭಾಷೆಗೆ ಸಿಗಬೇಕಾದ ಗೌರವ, ಮರ್ಯದೆ ಸಿಗಲೇ ಬೇಕಲ್ಲವೇ? ಮಾತೃಭಾಷೆ ಕಲಿಕೆ ಎಂಬುದು ಒಂದು ಸರಳ, ಸುಲಲಿತ, ಸುಲಭ ವಿಧಾನ.
ಆಂಗ್ಲ ವ್ಯಾಮೋಹದ ಶರಧಿಯಲ್ಲ ಬಿದ್ದಾಗಿದೆ. ಏಳಲು ಮನಸ್ಸಿಲ್ಲ. ಅಭಿವ್ಯಕ್ತಿಗೆ ಮಾತೃಭಾಷೆ ಬೇಕೇ ಬೇಕು. ಅಂತಸ್ತು ಮರೆತು ಬಾಳಿದರಾಗಬಹುದು. ಬರಿಯ ಭಾಷೆಯಲ್ಲ, ವ್ಯಕ್ತಿತ್ವ ನಿರ್ಮಾಣವಾಗಬೇಕು. ಪರಿಸರ, ವೃತ್ತಿ, ಬದುಕಿಗೆ ನೇರ ಸಂಬಂಧವಿರಬೇಕು. ನಮ್ಮ ಮನಸ್ಥಿತಿ ಬದಲಾದರೆ ಎಲ್ಲ ಬದಲಾಗಬಹುದು.
ಔದ್ಯೋಗಿಕವಾಗಿ, ವೈಜ್ಞಾನಿಕವಾಗಿ, ಕೆಲಸ ಸಿಗುವುದಿಲ್ಲವೆಂಬ ಕಾರಣಕ್ಕಾಗಿ ಆಂಗ್ಲ ಭಾಷೆಯೇ ಬೇಕೆಂಬ ನಂಬಿಕೆ, ಆಸೆ ಮನಸ್ಸಿಗೆ ಹೊಕ್ಕು ಹೋಗಿದೆ. ಈ ಪರಿಧಿಯಿಂದ ಹೊರಬಂದು, ಬಾಲ್ಯ ಕಾಲದಲ್ಲಿಯಾದರೂ ಮಾತೃಭಾಷೆಯನ್ನು ಕಲಿಸೋಣ, ಮುಂದಿನ ಪೀಳಿಗೆಗೂ ದಾಟಿಸೋಣ. “ಜೈ ಮಾತೃಭಾಷೆ”
-ರತ್ನಾ ಕೆ ಭಟ್,ತಲಂಜೇರಿ
(ವಿವಿಧ ಆಕರಗಳಿಂದ) ಚಿತ್ರ ಕೃಪೆ: ಇಂಟರ್ನೆಟ್ ತಾಣ