ವಿಶ್ವ ಮೆದುಳು ಗಡ್ಡೆ ದಿನ
ವಿಜ್ಞಾನ, ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಬ್ರೈನ್ ಟ್ಯೂಮರ್ಗೆ (ಮೆದುಳಿನಲ್ಲಿ ಗಡ್ಡೆ) ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಬ್ರೈನ್ ಟ್ಯೂಮರ್ ಕಾಯಿಲೆಗೆ ಕಾರಣ ಗೊತ್ತಿಲ್ಲವಾದರೂ ಮೆದುಳಿನ ಕ್ರಿಯೆಗಳಲ್ಲಿ ತೊಂದರೆಯುಂಟಾದರೆ ರೋಗದ ಲಕ್ಷಣಗಳು ಗೊತ್ತಾಗುತ್ತವೆ. ಇಂತಿಷ್ಟೇ ವಯಸ್ಸಿಗೆ ಈ ಕಾಯಿಲೆ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಒಂದು ಲಕ್ಷ ಮಂದಿಯಲ್ಲಿ 20 ಮಂದಿಗೆ ಈ ಕಾಯಿಲೆ ಕಾಣಿಸುತ್ತದೆ ಎನ್ನುವುದು ನರವಿಜ್ಞಾನ ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ಜೂನ್ ೮ ವಿಶ್ವ ಬ್ರೈನ್ ಟ್ಯೂಮರ್ ದಿನ. ಆ ಪ್ರಯುಕ್ತ ತಜ್ಞ ವೈದ್ಯರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ತಲೆನೋವು, ವಾಂತಿ ಮತ್ತು ಕಣ್ಣು ಮಬ್ಬು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸುವುದು ಸೂಕ್ತ. ಬ್ರೈನ್ ಟ್ಯೂಮರ್ನ ಲಕ್ಷಣ ಇದಾಗಿರುವ ಕಾರಣ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಚಿಕಿತ್ಸೆ ನೀಡಿ ವಾಸಿ ಮಾಡಲು ಸಹಕಾರಿಯಾಗಲಿದೆ .
ಮಾತನಾಡುವುದರಲ್ಲಿ ಬದಲಾವಣೆ, ದೃಷ್ಟಿ ಸಮಸ್ಯೆ ಹಾಗೂ ಕಿವಿ ಕೇಳದಿರುವುದು, ಸರಿಯಾಗಿ ನಡೆಯಲು ಕಷ್ಟವಾಗುವುದು ಕೂಡ ಬ್ರೈನ್ ಟ್ಯೂಮರ್ನ ಲಕ್ಷಣಗಳಿವೆ. ತಕ್ಷಣವೇ ಈ ಕಾಯಿಲೆ ಅರಿವಿಗೆ ಬರುವುದಿಲ್ಲ. ನಿಧಾನವಾಗಿ ಅರಿವಿಗೆ ಬರಲಿದ್ದು, ಯಾವ ವಯಸ್ಸಿನಲ್ಲಿ ಬೇಕಾದರೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ಪೂರ್ವಜರ ಪೈಕಿ ಯಾರಿಗಾದರೂ ಈ ಕಾಯಿಲೆ ಇದ್ದಲ್ಲಿ ಹೆಚ್ಚಾಗಿ ಅಂತಹವರಲ್ಲಿ ಕಾಣಿಸಿಕೊಳ್ಳುತ್ತದೆ. ಪೂರ್ಣ ಪ್ರಮಾಣದಲ್ಲಿ ಗುಣಮುಖ ಮಾಡಲು ಕಷ್ಟವಾಗಿದ್ದು, ನಿಯಂತ್ರಣಕ್ಕೆ ತರಬಹುದು ಎಂದು ತಿಳಿಸಿದ್ದಾರೆ.
ಮೆದುಳಿಗೆ ಅಧಿಕ ಒತ್ತಡ ನೀಡುವುದನ್ನು ತಡೆಯಬೇಕು. ಮೆದುಳಿನಲ್ಲಿ ಗಡ್ಡೆ ಹಾಗೂ ಕ್ಯಾನ್ಸರ್ ಹೀಗೆ ಎರಡು ರೀತಿಯಲ್ಲಿ ಕಾಯಿಲೆ ಇರುತ್ತದೆ. ಗಡ್ಡೆಗಳಿದ್ದರೆ ಅವುಗಳನ್ನು ತೆಗೆದು ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್ಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಸೂಕ್ತ ಸಮಯಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಜೀವಕ್ಕೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ. ಮೆದುಳು ಗಡ್ಡೆಯ ಶೀಘ್ರ ಪತ್ತೆ ಹಾಗೂ ಚಿಕಿತ್ಸೆ ಕುರಿತು ಜನಜಾಗೃತಿ ಮೂಡಿಸಲು ಜೂನ್ ೮ನ್ನು ವಿಶ್ವ ಬ್ರೈನ್ ಟ್ಯೂಮರ್ ದಿನ ಆಚರಿಸಲಾಗುತ್ತದೆ.
(ಆಧಾರ) - ಅರುಣ್ ಡಿ'ಸೋಜ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ