ವಿಶ್ವ ರಕ್ತದಾನಿಗಳ ದಿನ

ಮೊದಲ ಸಲ 2004ರಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಿದರಂತೆ. ಸುರಕ್ಷಿತ ರಕ್ತ, ರಕ್ತದ ಉತ್ಪನ್ನಗಳ ಬಗ್ಗೆ ಮಾಹಿತಿ, ಜಾಗೃತಿ ಮೂಡಿಸುವ ಕೆಲಸಗಳನ್ನು ಹಮ್ಮಿಕೊಳ್ಳಲಾಯಿತು. ಸಾಮಾನ್ಯವಾಗಿ 18---65 ವರುಷದೊಳಗಿನ ಆರೋಗ್ಯವಂತ ಮನುಜರು ಮಾತ್ರ ನೆತ್ತರನ್ನು ನೀಡಬಹುದು. ರಕ್ತ ಕೊಡುವ ಮುನ್ನ ತಮ್ಮ ಹಿಮೋಗ್ಲೋಬಿನ್ ಮಟ್ಟ ಮತ್ತು ಇತರ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಈಗ ಜಾಗೃತೆ ಹೆಚ್ಚು ಬೇಕು. ಊರಿನಲ್ಲಿ ಇಲ್ಲದ, ಕಂಡು ಕೇಳರಿಯದ ರೋಗಗಳೆಲ್ಲ ತಲೆಯೆತ್ತುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತೇವೆ. ಸರಿಯಾಗಿ ಪರೀಕ್ಷಿಸಿಯೇ ರಕ್ತ ಕೊಡಬೇಕಷ್ಟೆ.
ರಕ್ತದಾನದಿಂದ ನಮಗೆ ಏನೂ ತೊಂದರೆಯಾಗುವುದಿಲ್ಲ. ನಾವು ನೀಡಿದ ರಕ್ತ ಬೇರೆಯವರ ಉಸಿರು ನಿಲ್ಲುವುದನ್ನು ಉಸಿರಾಡುವಂತೆ ಮಾಡಬಹುದು, ಅದಕ್ಕಿಂತ ದೊಡ್ಡ ಪುಣ್ಯ ಬೇರೊಂದಿಲ್ಲ. ಇದು ಸೃಷ್ಟಿಯ ಕೊಡುಗೆ, ನಮ್ಮದೇ ನೆತ್ತರು, ನಾವೇ ನೀಡುವವರು, ಬೇರೆಯವರ ಅಪ್ಪಣೆ ಬೇಕಿಲ್ಲ.
ರಕ್ತ ನೀಡಿದ ಮೇಲೆ ಕಬ್ಬಿಣಾಂಶವಿರುವ ಆಹಾರ ಸೇವನೆ ಮಾಡಬೇಕು. ಸ್ವಲ್ಪ ಹೊತ್ತು ಮಾತ್ರ ಸುಸ್ತು ಇರುತ್ತದೆ. (ನಾನು 15 ಸಲ ರಕ್ತವನ್ನು ಸ್ವಯಂಪ್ರೇರಣೆಯಿಂದ ನೀಡಿರುವೆ) ಹಾಗೆ ಪ್ಲಾಸ್ಮಾವನ್ನು ಸಹ ದಾನ ಮಾಡಬಹುದು. ಒಂದು ಯೂನಿಟ್ ನೆತ್ತರು ನಾಲ್ಕು ಜನರ ಜೀವ ಉಳಿಸಬಹುದಂತೆ. ಅಲ್ಲಲ್ಲಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ರಕ್ತದಾನದ ಮಹತ್ವ ಮತ್ತು ರಕ್ತ ನೀಡುವ ಶಿಬಿರಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತರಾಗುತ್ತಾರೆ. ಅತಿಹೆಚ್ಚು ಸಲ ರಕ್ತ ದಾನ ಮಾಡಿದವರಿಗೆ ಜೇಸಿ, ರೋಟರಿಗಳು, ಸಂಸ್ಥೆಗಳು ಅಭಿನಂದನೆ ಮಾಡಿ ಪ್ರೋತ್ಸಾಹಿಸುತ್ತಾರೆ.
ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವವಾಗುವ ತಾಯಂದಿರಿಗೆ ರಕ್ತದ ಅವಶ್ಯಕತೆ, ಅಪಘಾತ ಸಂದರ್ಭದಲ್ಲಿ ಗಾಯವಾಗಿ ರಕ್ತ ಸೋರಿಕೆಯಾದವರಿಗೆ, ಕೆಲವು ರೋಗಗಳ ಸರ್ಜರಿ ಸಮಯದಲ್ಲಿ ನಿಶ್ಯಕ್ತಿ ಇರುವವರಿಗೆ, ರಕ್ತದ ಉತ್ಪತ್ತಿ ಕಡಿಮೆಯಿರುವವರಿಗೆ, ವಯಸ್ಸಾದವರಿಗೆ ರಕ್ತದ ಅವಶ್ಯಕತೆ ಬಹಳವಿದೆ. ಸ್ನೇಹಿತರೇ, ಮಾನವೀಯ ದೃಷ್ಟಿಯಿಂದ ‘ರಕ್ತ ದಾನ ಮಾಡಿ ಹೃದಯ ಶ್ರೀಮಂತಿಕೆ’ ಮೆರೆಸೋಣ. ಇನ್ನೊಬ್ಬರ ಹೃದಯದ ‘ಲಬ್-ಡಬ್’ ಗೆ ನಾವು ಕಾರಣರಾಗೋಣ. (ಜೂನ್ ೧೪ ರಕ್ತದಾನಿಗಳ ದಿನ)
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ