ವಿಶ್ವ ಸಾಕ್ಷರತಾ ದಿನದ ಕವನಗಳು
ಸಾಕ್ಷರ ದೀವಿಗೆ
ಕಲಿಯೋಣ ನಾವು ಕಲಿಯೋಣ
ಅಆಇಈ ಓದೋಣ
ಬರೆಯೋಣ ನಾವು ಬರೆಯೋಣ
ಅಕ್ಷರ ತಿದ್ದಿ ಬರೆಯೋಣ
ವಯಸ್ಸಿನ ಮಿತಿಯು ಇದಕಿಲ್ಲ
ಯಾರದೇ ಹಂಗು ಬೇಕಿಲ್ಲ
ಎಲ್ಲರು ಒಂದೆಡೆ ಸೇರುತಲಿ
ಮಾತುಕತೆಯನು ಮಾಡುತಲಿ
ಮನೆಯಲೆ ಕುಳಿತು ಕಲಿಯುತಲಿ
ಮಕ್ಕಳೊಂದಿಗೆ ಸೇರಿ ತಿಳಿಯುತಲಿ
ಅಜ್ಞಾನ ಕತ್ತಲೆ ಕಳೆಯೋಣ
ಜ್ಞಾನದ ಬೆಳಕ ಮೂಡಿಸೋಣ
ಹೆಬ್ಬೆಟ್ಟು ಮುದ್ರೆಯ ಅಳಿಸೋಣ
ರುಜುವನು ಹಾಕುತ ನಲಿಯೋಣ
ಪುಸ್ತಕವೆಂದರೆ ಗೆಳೆಯನ ಹಾಗೆ
ಮಸ್ತಕದಲ್ಲಿ ತುಂಬುತ ಬಾಗೆ
ಕಲಿಕೆಯ ಮಹತ್ವ ಸಾರೋಣ
ಸಂಕಲ್ಪ ಸಾಧನೆ ಮಾಡೋಣ
ಪ್ರಗತಿಯಿಂದ ಜೀವನ ಚಂದ
ಜನರಿಗೆಲ್ಲ ಪರಮಾನಂದ
ಅಭಿವೃದ್ಧಿ ಪಥದಲಿ ಸಾಗೋಣ
ಮೋಸ ಹೋಗುವುದ ತಡೆಯೋಣ
ಸಾಕ್ಷರ ದೀವಿಗೆ ಹಚ್ಚೋಣ
ಮನೆ ಮನ ಬೆಳಗುತ ಮೆರೆಸೋಣ
-ರತ್ನಾ ಕೆ ಭಟ್, ತಲಂಜೇರಿ
***
ಸಾಕ್ಷರತೆ
ಅ - ಅ, ಆ, ಇ, ಈ
ಆ - ಆರಂಭದಿಂದ
ಇ - ಇಷ್ಟಪಟ್ಟು ಕಲಿತು
ಈ - ಈಶನ ಕೃಪೆಯಿಂದ
ಉ - ಉತ್ತಮವಾಗಿ ಅಭ್ಯಾಸ ಮಾಡಿ
ಊ - ಊರ್ಜಿತಗೊಂಡು
ಋ - ಋಣ ತೀರಿಸಲು ನಮ್ಮ ತಾಯ್ನಾಡಿಗಾಗಿ
ಎ - ಎರಡು ಮಾತಿಲ್ಲದೆ
ಏ - ಏಕಾಗ್ರತೆಯಿಂದ
ಐ - ಐಕಮತ್ಯದಿಂದ
ಒ - ಒಲವಿನಿಂದ
ಓ - ಓದನ್ನು ಮುಂದುವರಿಸಿ
ಔ - ಔಚಿತ್ಯಪೂರ್ಣವಾಗಿ ವಿದ್ಯೆಯನ್ನು ಕಲಿತು
ಅಂ - ಅಂಜದೆ ಅಳುಕದೆ
ಆ: - ಆಹಾ ಎಂಬಂತೆ ಏನಾದರೂ ಸಾಧಿಸಿ ನಮ್ಮ ಬದುಕನ್ನು ಸಾರ್ಥಕಪಡಿಸಿ ಕೊಳ್ಳೋಣ
-ರಂಜನಾ, ನಂಜನಗೂಡು
ಚಿತ್ರ ಕೃಪೆ: ಇಂಟರ್ನೆಟ್ ತಾಣ
