ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
ಸುಮಾರು ಎರಡು ತಿಂಗಳು ಏನನ್ನೂ ಬರೆಯದೇ ಈಗ ಬರೆಯಬೇಕೆಂದುಕೊಂಡರೂ ವಿಷಯವೇ ಸಿಗದಿರುವುದು ನನ್ನ ಅಚ್ಚರಿಗಳಲ್ಲೊಂದು. ವಿಷಯವಿದ್ದರೂ ಸದ್ಯದ ’ಹಡಪ್ಸರ್ ಟು ಹಿಂಜೆವಾಡಿ’ ಎಂಬ ಪ್ರತಿದಿನದ ೬೮ ಕಿ.ಮೀ ಅಪ್ ಅನ್ಡ್ ಡೌನಿನ ಪ್ರಯಾಣದ ಬಿಸಿಯಲ್ಲಿ ಅದು ಕಾವೇರಿ ಆವಿಯಾಗುತ್ತದೆ. ಮನೆಗೆ ಬಂದ ನಂತರ ಬರೆಯುತ್ತೇನೆ ಎನ್ನುವುದು ಕನಸಿನ ಮಾತೇ. ಆದ್ದರಿಂದ ವಿಷಯ ಎಂಬುದರ ಬಗ್ಗೆಯೇ ಬರೆಯುತ್ತೇನೆ ಎಂದುಕೊಂಡು ಕಳೆದೆರಡು ದಿನಗಳಿಂದ ಬಸ್ಸಿನಲ್ಲಿ ಆರಾಮವಾಗಿ ನಿದ್ದೆ ಹೋಗುತ್ತೇನೆ, ವಿಷಯಗಳ ಗೋಜಿಗೆ ಹೋಗದೇನೇ! ಹಾಗೆ ನೋಡುವುದಾದರೆ ವಿಷಯಗಳ ಅಗತ್ಯ ಎಲ್ಲಾ ಸಂದರ್ಭಗಳಲ್ಲಿ ಇರುವುದಿಲ್ಲವಲ್ಲ.
ನೀವು ಪುಣೆ ರೈಲ್ವೇ ಸ್ಟೇಶನ್ ಬಳಿ ಅಡ್ಡಾಡಿದರೆ ನಿಮಗೆ ಸಾಮಾನ್ಯವಾಗಿ ಜನರ ಗುಂಪೊಂದು ಕಂಡು ಬರುತ್ತದೆ. ಅಲ್ಲೊಬ್ಬ ಜಾದು ಮಾಡುವವನ ಹಾಗೆ ನಿಂತಿರುತ್ತಾನೆ ಆತನ ಸುತ್ತ ಜನ ನೆರೆದು ಚಪ್ಪಾಳೆ ಹಾಕುತ್ತಿರುತ್ತಾರೆ. ಅಂದ ಹಾಗೆ ಅವನೇನೂ ಜಾದುಗಾರನಲ್ಲ. ಹಗ್ಗದಲ್ಲಿ ಹಾವು ಬರುವಂತೆ ಮಾಡುತ್ತೇನೆ ಎಂದು ಕೊನೆಗೆ ನಿಮ್ಮ ಶ್ರದ್ಧೆಯಿಲ್ಲದಿದ್ದುದರಿಂದ ಬರಲಿಲ್ಲ ಎಂದು ಜನರಿಗೆ ಬೈಯ್ಯುತ್ತಾನೆ. ಅದಕ್ಕೆ ತಾಳ ಹಾಕುವವನಂತೆ ಜನರಿಂದ ಒಬ್ಬ ಉತ್ತರಿಸುತ್ತಾನೆ. ಅವರಿಬ್ಬರ ಮಾತುಕತೆ ಬಹಳ ಮೋಜಿನದ್ದಾಗಿರುತ್ತೆ. ಆ ವ್ಯಕ್ತಿ ಈ ಜಾದುಗಾರನ ಕಡೆಯವನೇ ಆಗಿರುತ್ತಾನೆ. ಆ ಮೋಜಿಗೆ, ಮ್ಯಾಜಿಕ್ ಎನೂ ಮಾಡದಿದ್ದರೂ, ತಾವು ಮ್ಯಾಜಿಕ್ ನೋಡಲು ನಿಂತವರೆಂದು ಮರೆತು ಜನ ಹಣ ಕೊಟ್ಟು ಹೋಗುತ್ತಾರೆ. ಇದು ಹೇಗೆ ವಿಷಯವಿಲ್ಲದೆಯೇ ಅದರ ಸುತ್ತ ಸುತ್ತಿಸುತ್ತಾ ಮನರಂಜನೆ ಮಾಡುವ ಬಗೆ. ಹೀಗೆಯೇ ಪ್ರೇಮಿಗಳು ಮಾತಾಡಿಕೊಳ್ಳಲು ಏನೂ ವಿಷಯವಿರದಿದ್ದರೂ ಗಂಟೆಗಟ್ಟಲೆ ಮಾತಾಡುತ್ತಾರೆ. ಅವರನ್ನು ಬಿಡಿ, ನಾವೇ ದಿನವಿಡೀ ಮಾತನಾಡುವ ಎಷ್ಟೋ ಮಾತುಗಳಲ್ಲಿ ಎಷ್ಟು ವಿಶೇಷ ವಿಷಯಗಳಿಂದ ಕೂಡಿರತ್ತೆ? ’ಊಟ ಆಯ್ತಾ?’ ’ಮತ್ತೆ ಏನು ವಿಶೇಷ’ ಎನ್ನುತ್ತಲೇ ಸುಮಾರು ಹೊತ್ತು ಮಾತುಕತೆ ನಡೆದಿರುತ್ತದೆ. ಆದ್ದರಿಂದ ವಿಷಯವಿರುವುದು ಎಷ್ಟೋ ಸಲ ಅಗತ್ಯವಿರುವುದಿಲ್ಲ.
ಕೆಲವೊಮ್ಮೆ ಏನೂ ಇಲ್ಲದಿದ್ದರೂ ವಿಷಯಗಳಿಗೆ ತೂಕ ಬರುತ್ತದೆ. ಇದಕ್ಕೆ ಉದಾಹರಣೆ ಎಂದರೆ ನಿರ್ವಾತ. ನಿರ್ವಾತದಲ್ಲಿ ಏನೂ ಇರದಿದ್ದರೂ ಸುತ್ತಣ ಗಾಳಿಯ ಆಧಾರದ ಮೇಲೆ ಅದಕ್ಕೆ ತೂಕ. ನಿರ್ವಾತ ಅಂದ್ರೆ ಏನೂ ಇಲ್ಲ ಅಂತೀವಿ ಆದರೆ ನಿರ್ವಾತದಲ್ಲಿ ಬದುಕಲೂ ಆಗುವುದಿಲ್ಲ. ಆಗ ಗಾಳಿ ಬೇಕೇ ಬೇಕು. ನಿರ್ವಾತವಿಲ್ಲದಿದ್ದರೆ ಗಾಳಿಗೂ ಬೆಲೆಯಿಲ್ಲ ತಾನೇ. ಇದು ಹೇಗೆ ಅಧರ್ಮವಿಲ್ಲದಿದ್ದರೆ ಧರ್ಮಕ್ಕೆ ಬೆಲೆಯಿಲ್ಲವೋ ಹಾಗೆಯೇ. ಹೀಗೆ ವಿಷಯವು ಇನ್ನೊಂದರೊಂದಿಗೆ ಥಳುಕು ಹಾಕಿಕೊಂಡು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ವಿಷಯಗಳಿಗೆ ತನ್ನಂತಾನೇ ಬೆಲೆ ಬಂದು ಬಿಡುತ್ತದೆ.
ಬೆಲೆ ಅಂದ ತಕ್ಷಣ ಎಂ.ಎಫ್. ಹುಸೇನರ ನೆನಪಾಗುತ್ತದೆ. ಒಂದು ಸಮಾರಂಭಕ್ಕೆ ಹೋಗಿದ್ದರಂತೆ. ಉದ್ಘಾಟನೆಗೆಂದು ಒಂದು ಖಾಲಿ ಕ್ಯಾನ್ವಾಸನ್ನು ಸಮಾರಂಭದವರು ಸಭೆಯ ಮೇಲೆ ತಂದಿಟ್ಟಿದ್ದರಂತೆ. ಹುಸೇನರು ಹೋಗಿ ತಮ್ಮ ಸಹಿ ಹಾಕಿ ಬರುತ್ತಾರೆ. ಆ ಚಿತ್ರ ಎಷ್ಟೋ ಲಕ್ಷಗಳಲ್ಲಿ ಮಾರಾಟವಾಯಿತಂತೆ. ಕೆಲವೊಮ್ಮೆ ಏನೂ ಇಲ್ಲದಿದ್ದರೂ ಯಾರಿಂದ ಅದು ಸೃಷ್ಟಿಯಾಯಿತು ಎನ್ನುವುದೂ ವಿಷಯದ ಗಂಭೀರತೆಗೆ ಅಥವಾ ಮಹತ್ವಕ್ಕೆ ಕಾರಣವಾಗುತ್ತದೆ. ಈಗ ನಾನು ಬರೆದ ಈ ಬರಹಕ್ಕೆ ಇಲ್ಲದ ಪ್ರಾಧಾನ್ಯತೆ ಯಾರೋ ಹೆಸರಾಂತ ಸಾಹಿತಿಗಳು ಬರೆದರೆ ಸೃಷ್ಟಿಯಾಗುತ್ತದೆ. ಆಗ ಓದಿದವರು ಮೆಚ್ಚಲಿ ಮೆಚ್ಚದಿರಲಿ, ಇಂಥವರಿಂದ ಬರೆಯಲ್ಪಟ್ಟಿದೆ ಎಂದರೆ ಖಂಡಿತಾ ಓದುತ್ತಾರೆ ಮತ್ತು ಅದರಲ್ಲಿರುವ ವಾಕ್ಯಗಳಿಗೆ ಅಥವಾ ಸಾಲುಗಳಿಗೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸಲಾಗುತ್ತದೆ.
ವಿಷಯಗಳನ್ನು ಆರಿಸುವಾಗ ಮುಖ್ಯವಾಗಿ ಎದುರಾಗುವ ಸವಾಲೆಂದರೆ ಅದರ ವೈಶಾಲ್ಯ, ಸರಿಯಾದ ಪದ ಗೊತ್ತಾಗುತ್ತಿಲ್ಲ. ಕಂಪ್ಯೂಟರ್ ಲೋಕದಲ್ಲಿ ನಾವಿದನ್ನು ’ಸ್ಕೋಪ್’ ಅಂತ ಕರೆಯುತ್ತೇವೆ. ಸಾಮಾಜಿಕ ಅಥವಾ ರಾಜಕೀಯದ ವಿಷಯಗಳಿಗೆ ಇರುವಷ್ಟು ಸ್ಕೋಪ್ ಬೇರೆ ಯಾವುದೇ ವಿಷಯಗಳಿಗೂ ಇಲ್ಲವೇನೋ. ನಮ್ಮೊಳಗೆ ಅಡಗಿರುವ ರಾಜಕೀಯದ ಗುಣಕ್ಕೆ ಇದು ಉದಾಹರಣೆಯಾದರೂ ಅಂತಹ ವಿಷಯಗಳನ್ನು ಮೆಚ್ಚುವವರೂ ಓದುವವರೂ ಹೆಚ್ಚು. ಹಾಗೆಯೇ ಕ್ರೀಡಾ ಲೋಕದ ವಿಷಯಗಳು ಕೂಡ. ಈಗಲೂ ವಾರ್ತಾ ಪತ್ರಿಕೆಗಳಲ್ಲಿ ಸ್ಪೋರ್ಟ್ಸ್ ನ್ಯೂಸ್ ಮೊದಲು ಓದಿಯೇ ಮತ್ತೆ ಉಳಿದ ವಿಭಾಗಗಳತ್ತ ಕಣ್ಣು ಹಾಯಿಸುತ್ತೇನೆ. ಆದ್ದರಿಂದ ರಾಜಕೀಯ ಮತ್ತು ಕ್ರೀಡೆಯಿಂದ ಹೊರತಾಗಿ ಬರೆಯುವುದೆಂದರೆ ಆತ ಬಹು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಾನೆಂದು ಅರ್ಥ. ಆದರೂ ಜನರ ಮೂಡಿಗೆ ಅನುಗುಣವಾಗಿ ಬರೆಯಲ್ಪಡುವ ಭಾವನಾತ್ಮಕ ಬರಹಗಳೂ ಒಮ್ಮೊಮ್ಮೆ ಮೇಲುಗೈ ಸಾಧಿಸುತ್ತವೆ. ಎಲ್ಲರಿಗಿಂತ ಸುಖಿಗಳೆಂದರೆ ನನ್ನ ಹಾಗೆ ಮನಸ್ಸಿಗೆ ಬಂದದ್ದನ್ನು ಗೀಚುವವರು. ಆದರೂ ನಮ್ಮ ಮನದಲ್ಲೂ ಬರೆಯುತ್ತಿರುವ ವಿಷಯದ ಕುರಿತಾಗಿ ಕಳಕಳಿ ಮತ್ತು ಅದನ್ನು ಓದಿದವರ ಮೆಚ್ಚುಗೆಯ ಬಗ್ಗೆ ಕಾಳಜಿ ಮೂಡದೇ ಇರುವುದಿಲ್ಲ.
ಎಷ್ಟೋ ಸಂದಭಗಳಲ್ಲಿ ವಿಷಯಕ್ಕಿಂತಲೂ ಮುಖ್ಯ ನಾವು ಯಾವುದನ್ನು ಹೇಗೆ ಹೇಳುತ್ತೇವೆ ಎಂದು. ಅತ್ಯಂತ ಬೋರ್ ಮಾಡುವ ವಿಷಯಗಳನ್ನು ಆಸಕ್ತಿಯಿಂದ ಕೇಳುವಂತೆ ಮಾಡುವ ಅಧ್ಯಾಪಕರಂತೆ. ಹಾಗೆಯೇ ನಮ್ಮನ್ನು ಅದು ಯಾವ ರೀತಿ ಸ್ಪರ್ಶಿಸುತ್ತದೆ ಎಂಬುದೂ ಮುಖ್ಯವಾಗುತ್ತದೆ. ವಿಜ್ಞಾನ ನನಗೆ ನನ್ನ ಏಳನೆಯ ತರಗತಿವರೆಗೆ ಅತ್ಯಂತ ಬೋರಿಂಗ್ ವಿಷಯವಾಗಿತ್ತು. ಏಕೆಂದರೆ ವಿಜ್ಞಾನಕ್ಕೆ ಕಲಿಸುತ್ತಿದ್ದ ಅಧ್ಯಾಪಕರು ನನ್ನ ಒಂದೂ ಅನುಮಾನವನ್ನು ಪರಿಹರಿಸುತ್ತಿರಲಿಲ್ಲ. ಜೀವಕೋಶ ಎಲ್ಲಿ ಇರುವುದು ಎಂಬ ಕುತೂಹಲದ ಪ್ರಶ್ನೆಗೆ ಇಡೀ ಕ್ಲಾಸಿನೆದುರು ಅವಮಾನಿಸಿದ್ದರು. ಆಗೆಲ್ಲ ಇತಿಹಾಸ ಇಷ್ಟವಾಗುತ್ತಿತ್ತು. ಏಕೆಂದರೆ ಅದು ನಾನು ಫ್ಯಾಂಟಸಿ ಮಾಡಿ ಯೋಚಿಸುತ್ತಿದ್ದ ವಿಷಯವಾಗಿತ್ತು. ಇದೇ ಹುಚ್ಚಿನಿಂದ ಅಕ್ಕನವರ ಇತಿಹಾಸದ ಪುಸ್ತಕಗಳನ್ನೆಲ್ಲಾ ಓದಿ ಮುಗಿಸಿಬಿಡುತ್ತಿದ್ದೆ. ಇತಿಹಾಸದ ಬಗ್ಗೆ ನನಗಿರುವ ಇಂದಿನ ಜ್ಞಾನ ಆಗ್ಗೆ ಇದ್ದ ನನ್ನ ಕುತೂಹಲದಿಂದಲೇ ಆಗಿದೆ. ವಿಜ್ಞಾನ ನನ್ನ ಫ್ಯಾಂಟಸಿ ಲೋಕದ ವಿಷಯವಾಗಿದ್ದು ಹೈಸ್ಕೂಲಿನಲ್ಲಿ ಮಾತ್ರ ಮತ್ತು ಪದವಿಗೆ ಬಂದ ನಂತರ, ಸದ್ಯಕ್ಕೆ ಕೇವಲ ಅದು ಮಾತ್ರ ನನ್ನ ಕಲ್ಪನಾ ಲೋಕದ ವಿಷಯ ಸಂಗಾತಿ. ಇತಿಹಾಸದ ಬಗ್ಗೆ ಯಾಕೋ ಅಸಡ್ಡೆ. ಅದಕ್ಕಿಂತಲೂ ಗೊತ್ತಿರುವುದೆಲ್ಲಾ ಸತ್ಯವೋ ಎಂಬುದರ ಬಗ್ಗೆಯೇ ಅನುಮಾನ.
ವಿಷಯ ತನ್ನಷ್ಟಕ್ಕೆ ಒಂದು ವಿಶ್ವರೂಪವಿದ್ದಂತೆ. ಎಷ್ಟು ಅದರ ಬಗ್ಗೆ ಹೇಳಿದರೂ ಕಡಿಮೆಯೇ, ನಾವೆಲ್ಲಾ ಆ ವಿಶ್ವರೂಪದ ಒಂದೊಂದು ರೂಪವನ್ನು ಪ್ರಕಟಿಸುವುದಷ್ಟೆ. ಹೀಗೆ ವಿಷಯ ಎನ್ನುವುದನ್ನೇ ವಿಷಯವನ್ನಾಗಿಸಿಕೊಂಡು ಬರೆದ ಈ ಬರಹಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಬಹುದಾದರೂ ವಿಷಯಾಂತರವಾದೀತು ಎಂಬ ಭಯದಿಂದ ಇಲ್ಲಿಗೇ ಮುಗಿಸುತ್ತೇನೆ. ಮತ್ತೆ ಸಿಗೋಣ!
Comments
ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
In reply to ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ... by kavinagaraj
ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
In reply to ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ... by Chikku123
ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...
In reply to ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ... by gopaljsr
ಉ: ವಿಷಯ ಎಂಬುದರ ಬಗ್ಗೆ ಟೈಪಿಸುತ್ತಾ...