ವಿಷಾದಗಾಥೆ

ವಿಷಾದಗಾಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಪ್ರಕಾಶಕರು
ಯಾಜಿ ಪ್ರಕಾಶನ, ಪಟೇಲ ನಗರ, ಹೊಸಪೇಟೆ-೫೮೩೨೦೧.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಕವಿತೆಗಳ ಸಂಗ್ರಹ ‘ವಿಷಾದಗಾಥೆ'. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳ ಆಯ್ದ ಭಾಗ ಇಲ್ಲಿದೆ...

“ಅರಿಸ್ಟಾಟಲನ ಪ್ರಕಾರರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ ವಸ್ತುವಾಗಿ ಅಥವಾ ಭಾವವಾಗಿ ನೋಡದೆ ಹೋದರೆ ನಿಜಕ್ಕೂ ಹೊಸದೇನನ್ನೂ ಕಾಣಿಸಲಾಗದು. ಗೆಳೆಯ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಈ ‘ವಿಷಾದ ಗಾಥೆ’ಯಲ್ಲಿ ವಸ್ತುಗಳು ತಮ್ಮ ಅಸ್ಮಿತೆಯನ್ನು ಒಂದಿಷ್ಟೂ ಕಳೆದುಕೊಳ್ಳದೆ ರೂಪಕಗಳಾಗಿ ತಮ್ಮದೇ ದನಿಯಲ್ಲಿ ಮಾತಾಡುತ್ತವೆ. ಅವುಗಳ ಅಂತಃಶಕ್ತಿ ಅವರ ಭಾಷೆಯ ಸಂರಚನೆಯಲ್ಲೇ ಹೊರಹೊಮ್ಮುವುದರಿಂದ ಅದು ಸಹಜವಾಗಿಯೇ ಅವರ ಶಬ್ದವಿನ್ಯಾಸಕ್ಕೊಂದು ವಿಶಿಷ್ಟ ಧ್ವನ್ಯರ್ಥವನ್ನು ನೀಡುತ್ತದೆ.

ವರ್ತಮಾನವನ್ನು ಭೂತದ ದರ್ಪಣದಲ್ಲಿ ಪರಿಶೀಲಿಸುವ ಈ ಗಾಥೆಗಳ ವಸ್ತು ಮಾನವನ ಇತಿಹಾಸ, ಅವನ ದುರ್ವಿಧಿ, ಪಲ್ಲಟಗೊಂಡಿರುವ ಪ್ರಪಂಚದಲ್ಲಿ ಅವನ ಸ್ಥಿತಿ, ಬದುಕು ಹೀಗೇಕೆ ಎಂಬ ಜಿಜ್ಞಾಸೆ. ಕೌತುಕದ ಜೊತೆಜೊತೆಗೇ ಪ್ರಶ್ನೆಗಳನ್ನೂ ತುಂಬಿಕೊಂಡಿರುವ ಇವು ಸಸ್ಯ ಮತ್ತು ಪ್ರಾಣಿಲೋಕದ ಬಗ್ಗೆ, ನಿಸರ್ಗದ ವಿದ್ಯಮಾನಗಳ ಬಗ್ಗೆ, ಮುಗ್ಧತೆಯ ಬಗ್ಗೆ, ಮುಗ್ಧತೆ ನಷ್ಟವಾಗುವುದರ ಬಗ್ಗೆ, ಹಮ್ಮುಬಿಮ್ಮಿನ ಬಗ್ಗೆ, ಕಳೆದುಹೋದ ಜಗತ್ ಪ್ರಜ್ಞೆಯ ಬಗ್ಗೆ, ಸೋಲಿನ ಬಗ್ಗೆ, ಹಿಂಸೆಯ ಬಗ್ಗೆ ಮಾತಾಡುತ್ತವೆ. ಅರ್ಥಶೋಧನೆಯನ್ನು ಪ್ರತಿನಿಧಿಸುವ ಇವು ಸರಳವಾಗಿರುವಂತೆಯೇ ಶಕ್ತವಾಗಿಯೂ ಇವೆ. 

ಅವನನ್ನು ಕೇಳುತ್ತೇನೆ
ಎಲ್ಲವೂ ವಿಷ ಆಗಿದೆ
ಒಂದಷ್ಟು ಜೇನು ತಾರೋ ಮಾರಾಯ
ಅವ ಹೇಳುತ್ತಾನೆ
ಜೇನುಗಳೇ ಬೇಡಿಕೆ ಇಡುತ್ತಿವೆ
ವಿಷ ಬೆರೆತ ಹೂವುಗಳ ಅರಳಿಸದಿರೆಂದು
* * *
ಇಲ್ಲಿನ ‘ಅವನು’ ಯಾರು? ಕವಿ ಅಥವಾ ನಮ್ಮೆಲ್ಲರ ಹಂಬಲ, ಆಶಯಗಳ ಒಬ್ಬ ಪ್ರತಿನಿಧಿ. ಅವನು ಕಾಣಿಸುತ್ತಿರುವುದು ವಾಸ್ತವದಲ್ಲೇ ಇರುವ ಒಂದು ವಿಪರ್ಯಾಸ. ಜೇನು, ವಿಷ ಈ ಪದಗಳು ಮನುಷ್ಯನ ಕನಸೇನು, ಅವನು ಸೃಷ್ಟಿಸಿಕೊಂಡಿರುವುದು ಎಂಥ ಬದುಕು ಎಂಬುದನ್ನು ಪ್ರತೀಕಾತ್ಮಕವಾಗಿ ಸ್ಪಷ್ಟಪಡಿಸುತ್ತವೆ.
ಇವು ಗಾಥೆಗಳು ಹೇಗೆ? “ಕವಿತೆಗೆ ಇಂತಿಷ್ಟೇ ಸಾಲುಗಳು ಇರಬೇಕು, ಇರುತ್ತವೆ ಎಂಬ ನಿಯಮವೇನಿಲ್ಲ. ಸಾವಿರ ಸಾಲುಗಳ, ಲಕ್ಷ ಪದಗಳಿಂದ ಆವೃತವಾದ ರಚನೆಗಳೆಲ್ಲಾ ಕವಿತೆಯಾಗಿ ಬಿಡುವುದಿಲ್ಲ.... ನಾನು ಗಾಥೆಗಳಿಗೆ ಇಷ್ಟೇ ಪದಗಳಿರಬೇಕು, ಇಷ್ಟು ಸಾಲುಗಳಿರಬೇಕು ಎಂಬ ಒಂದು ಚೌಕಟ್ಟು ಹಾಕಿಕೊಂಡಿದ್ದೇನೆ ಅಷ್ಟೆ” ಎಂದಿದ್ದಾರೆ ಮಲ್ಲಿಕಾರ್ಜುನಸ್ವಾಮಿ. ಈ ಗಾಥೆಗಳ ರಾಚನಿಕ ಸ್ವರೂಪದ ಬಗ್ಗೆ ಹೇಳುವುದಾದರೆ ಆರು ಸಾಲುಗಳ ಪ್ರತಿಯೊಂದು ಗಾಥೆಯಲ್ಲೂ ಎರಡು ಪಾದಗಳಿವೆ. ಒಂದನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ತಲಾ ಎರಡೆರಡು ಪದಗಳು, ಎರಡನೆಯ ಮತ್ತು ಐದನೆಯ ಸಾಲುಗಳಲ್ಲಿ ತಲಾ ಮೂರು ಮೂರು ಪದಗಳು, ಮೂರನೆಯ ಮತ್ತು ಆರನೆಯ ಸಾಲುಗಳಲ್ಲಿ ತಲಾ ನಾಲ್ಕು ನಾಲ್ಕು ಪದಗಳು. ಹೀಗೆ ಒಟ್ಟು ಹದಿನೆಂಟು ಪದಗಳಿಂದ ಒಂದು ಗಾಥೆ ರೂಪುಗೊಳ್ಳುತ್ತದೆ. ಪದಗಳ ಬಗ್ಗೆ ಹೇಳುವುದಾದರೆ ಕೆಲವು ಪದಗಳಲ್ಲಿ ಒಂದೋ ಎರಡೋ ಅಕ್ಷರಗಳಿದ್ದರೆ, ಇನ್ನು ಕೆಲವು ಪದಗಳಲ್ಲಿ ಮೂರರಿಂದ ಐದಾರು ಅಕ್ಷರಗಳವರೆಗೂ ಇವೆ. ಹಾಗಾಗಿ ಇಡೀ ಗಾಥೆ ಮಾತ್ರಾಲಯವನ್ನು ಬಿಟ್ಟುಕೊಟ್ಟಿದೆ. ಹಾಗೆಂದು ಇಲ್ಲಿ ಲಯವೇ ಇಲ್ಲವೆನ್ನುವಂತಿಲ್ಲ. ವಸ್ತುವನ್ನೋ ಭಾವವನ್ನೋ ಅನುಭವ ವೇದ್ಯಗೊಳಿಸುವುದಕ್ಕೆ ಪೂರಕವಾದ ಲಯ ಉದ್ದಕ್ಕೂಇದೆ. ಈ ಲಯ ಬಹುಮಟ್ಟಿಗೆ ಆಡುಮಾತನ್ನು ಅನುಸರಿಸಿರುವ ಗದ್ಯಲಯ. ನಿರ್ದಿಷ್ಟ ಛಂದೋ ರೂಪಕ್ಕೆ ಬದ್ಧವಾಗದೆ ಇರುವುದರಿಂದಲೇ ಇಲ್ಲಿನ ಗದ್ಯಲಯ ಕವಿಕಲ್ಪನೆಗೆ ವಿಶೇಷ ಸ್ವಾತಂತ್ರ್ಯವನ್ನು ನೀಡಿದೆಯೆನ್ನಬೇಕು.

ನಮ್ಮ ಕಾಲದ ನಾಡಿಯೇ ಮಿಡಿಯುತ್ತಿರುವ ಇಲ್ಲಿನ ಗಾಥೆಗಳು ಒಂದಿಡೀ ಕಾಲಧರ್ಮದ ಧ್ವನಿಯನ್ನು ನಿರ್ಣಯಾತ್ಮಕ ರೀತಿಯಲ್ಲಿ ಹಿಡಿದುಕೊಡುತ್ತವೆ. ಮಲ್ಲಿಕಾರ್ಜುನಸ್ವಾಮಿಯವರದು ಸಮಕಾಲೀನ ಪ್ರಜ್ಞೆಯಷ್ಟೇ ಅಲ್ಲ, ಆಧುನಿಕವೂ ಕೂಡ. ಮನುಷ್ಯನ ಘನತೆಯ ಬಗ್ಗೆ, ನೈತಿಕತೆಯ ಹಂಬಲದ ಬಗ್ಗೆ, ಮಾನವನ ಅಮಾನವೀಯ ಗುಣದ ಬಗ್ಗೆ ಇವರು ಬರೆದಿರುವುದು ಸಾಮಾನ್ಯ ವಸ್ತು ವಿಶೇಷಗಳಷ್ಟೇ ಅಲ್ಲ, ಸತತವಾಗಿ ಕಾಡಿದಂಥ ವೈಯಕ್ತಿಕ ಅನುಭವಗಳು ಕೂಡ.

ಮಹಾಮನೆಯವರ ಯಶಸ್ಸಿರುವುದು ಭಾಷೆಯನ್ನು ಪುನರ್ರೂಪಿಸುವುದರಲ್ಲಿ ಅಲ್ಲ, ಅದಕ್ಕೊಂದು ಹೊಸ ದೃಷ್ಟಿ ನೀಡುವುದರಲ್ಲಿ. ಅವರ ಪ್ರಯತ್ನವಿರುವುದು ಆಡುಮಾತಿನ ಲಯದಲ್ಲೇ ಹೊರತು ಗೇಯತೆಯಲ್ಲಲ್ಲ. ನಮ್ಮ ಅನುಭವ ಬೇರೆಯವರಿಗೂ ಮೌಲಿಕವಾಗಬೇಕಾದರೆ ಆ ಅನುಭವಕ್ಕೆ ಸೂಕ್ತವಾದ ಭಾಷೆ, ವಿಹಿತ ಲಯ ಅತ್ಯಗತ್ಯವಷ್ಟೆ. ಅಮೆರಿಕನ್ ಕವಿ ವ್ಯಾಲೆಸ್ ಸ್ಟೀವನ್ಸ್... “ಕವಿಗೆ ಮುಖ್ಯವಾದದ್ದು ‘ಬಾಹ್ಯ ಒತ್ತಡ’ವನ್ನು ಹತ್ತಿಕ್ಕಬಲ್ಲ ‘ಆಂತರಿಕ ಒತ್ತಡ’ ಎಂದ”. ಅವನ ಪ್ರಕಾರ ಆಂತರಿಕ ಒತ್ತಡ ಕ್ರಿಯಾಶೀಲವಾಗುವುದು ಪ್ರತಿಭೆಯಿಂದ. ಮತ್ತೆ ಈ ಪ್ರತಿಭೆ ಯೆನ್ನುವುದು “ಶಬ್ದಗಳ ಧ್ವನಿ”ಯಿಂದ ಸ್ಫುರಣಗೊಂಡು ಅನುಭವದ ಹಲವು ಮಗ್ಗುಲುಗಳನ್ನು ಧ್ವನಿಸಬಲ್ಲದು. ಕವಿಯ ಪ್ರತಿಭೆ ಅವನ ಆತ್ಮದ ದನಿಯೂ ಆದಾಗ ಅದು ಹೊರಜಗತ್ತಿನ ಜೊತೆ ಸಂಪರ್ಕ ಸಾಧಿಸುತ್ತ ಒಂದಿಡೀ ಕಾಲಧರ್ಮವನ್ನೇ ಸೂಚಿಸಿಬಿಡುತ್ತದೆ.

ಇಲ್ಲಿನ ಗಾಥೆಗಳಲ್ಲಿ ವಸ್ತುಸ್ಥಿತಿಯನ್ನು ರೂಪಾಂತರಗೊಳಿಸುವ ಕಾವ್ಯ ಪ್ರಕ್ರಿಯೆಯಿದೆ. ಎರಡು ವಿಭಿನ್ನ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ಪಕ್ಕಪಕ್ಕದಲ್ಲಿಟ್ಟು ಹೊಸದೊಂದೇ ಧ್ವನಿಯನ್ನು ಹೊಮ್ಮಿಸುವ ನೈಪುಣ್ಯವಿದೆ. ಅಮೂರ್ತ ಅನುಭವವನ್ನು ದೃಶ್ಯೀಕರಿಸುವ ಪ್ರತಿಭೆಯಿದೆ. ಸಮಕಾಲೀನ ವಿದ್ಯಮಾನಗಳ ಹಿಂದಿರುವ ಕಟು ವಾಸ್ತವವನ್ನು ಅನಾವರಣಗೊಳಿಸುವ ಶಕ್ತಿಯಿದೆ.” ಇದು ಎಸ್ ದಿವಾಕರ್ ಅವರ ಅಭಿಪ್ರಾಯ.  

ಈ ಕೃತಿಗೆ ಡಾ.ವಿಜಯಾ ಹಾಗೂ ಡಾ.ಬೈರಮಂಗಲ ರಾಮೇಗೌಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ “ಮಹಾಕಾವ್ಯಗಳಲ್ಲಿ ಮತ್ತು ಆಧುನಿಕ ಕಾವ್ಯದಲ್ಲಿ ಭಾವವನ್ನೇ ಕೇಂದ್ರವಾಗಿಸಿಕೊಂಡು, ಕಂಡುಂಡ ಅನುಭವಗಳಲ್ಲಿನ ವಿಷಾದವನ್ನು ಕೆಲವೇ ಶಬ್ದಗಳಲ್ಲಿ ಆಪ್ತತೆ ಮತ್ತು ನವಿರುತನಗಳೊಂದಿಗೆ ಓದುಗರ ಮನ ತಟ್ಟಿ ಕಾಡುವ ಹಾಗೆ ಅಭಿವ್ಯಕ್ತಿಸುತ್ತಿರುವ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹಲವರನ್ನು ಆಕರ್ಷಿಸುವಂಥ ಹೊಸ ದಾರಿಯಲ್ಲಿ ನಡೆಯುತ್ತಿರುವುದು ಕುತೂಹಲಕಾರಿಯಾಗಿದೆ” ಎಂದಿದ್ದಾರೆ ಡಾ. ಬೈರಮಂಗಲ ರಾಮೇಗೌಡ.

ಬೇಕೋ ಬೇಡವೋ.. ನುಗ್ಗಿ ಬಂದಪ್ಪಳಿಸುವ ನೋವು ವಿಷಾದದ ಮುಸುಕಿನಲ್ಲಿ ಅಡಗಿದ್ದರೂ ಬದಿಗೆ ಸರಿಸುತ್ತ ಕತ್ತಲೆಯ ಗಾಢ ಮೌನದ ನಡುವೆ ಸುಳಿವ ಮಿಂಚು ಹುಳುವಿಗಾಗಿ ಕಾಯುತ್ತಾ, ಬದುಕು ಬಹಳ ದೊಡ್ಡದು, ಹಣತೆಯಾದರೂ ಹಚ್ಚಿಡಬೇಕು ಎನ್ನುತ್ತ ಬದುಕನ್ನು ಅರ್ಥಮಾಡಿಸುವ ಉತ್ಕಟ ಜೀವನ ಪ್ರೀತಿಯನ್ನು ಈ ವಿಷಾದ ಗಾಥೆಗಳು ಬಯಲಾಗಿಸುತ್ತವೆ ಎಂದಿದ್ದಾರೆ ಡಾ. ವಿಜಯಾ.