ವೈಜಯಂತಿಪುರ`
ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ಒಂದು ಸಾಹಸದ ಕಥೆ. ಏಕೆಂದರೆ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹೊರಟಾಗ ನೀವು ನಿಮ್ಮ ಮನದಲ್ಲಿ ಮೂಡಿದ ಕಲ್ಪನಾ ಲಹರಿಗಳನ್ನೆಲ್ಲಾ ಅದರಲ್ಲಿ ಅಳವಡಿಸುವಂತಿಲ್ಲ. ಕಥೆಗೆ ಪೂರಕ ಎಂದು ಅನಗತ್ಯ ವಿಷಯಗಳನ್ನು ತುರುಕುವಂತಿಲ್ಲ. ಇಂತಹ ಕಾದಂಬರಿಗಳನ್ನು ಬರೆಯಲು ತಾಳ್ಮೆ, ತಿರುಗಾಟದ ಹುಚ್ಚು, ಅಧ್ಯಯನ ಪ್ರವೃತ್ತಿ ಎಲ್ಲವೂ ಅತ್ಯಂತ ಅಗತ್ಯ. ಇಂತಹ ಎಲ್ಲಾ ಗುಣಗಳನ್ನು ತುಂಬಿಕೊಂಡಿರುವ ಕನ್ನಡ ಅಪರೂಪದ ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆ ಎಂದರೆ ತಪ್ಪಾಗಲಾರದು. ಏಕೆಂದರೆ ಇವರು ಈ ಹಿಂದೆ ಬರೆದಿರುವ ಕೆಲವು ಕಾದಂಬರಿಗಳನ್ನು ಓದಿದಾಗ ಆ ವಸ್ತು ವಿಷಯಗಳಲ್ಲಿ ಕೈಗೊಂಡ ಆಳವಾದ ಅಧ್ಯಯನದ ವಿಚಾರಗಳು ನಮ್ಮ ಅನುಭವಕ್ಕೆ ಬರುತ್ತದೆ.
ಅದು ಅಘೋರಿಗಳ ಸಾಮ್ರಾಜ್ಯವೇ ಆಗಿರಲಿ, ಕಶ್ಮೀರದ ರಕ್ತಸಿಕ್ತ ಕಥೆಯೇ ಆಗಿರಲಿ ಓದುವಾಗ ಆ ವಿಷಯಗಳು, ಪಾತ್ರಗಳು ನಮ್ಮ ಎದುರು ಜೀವಂತವಾಗಿ ಬಂದು ನಿಲ್ಲುತ್ತವೆ. ಇದಕ್ಕೆ ಕಾರಣ ಇವರು ಆ ಪಾತ್ರಗಳನ್ನು ಸ್ವತಃ ಅನುಭವಿಸಿ ಬರೆದಿದ್ದಾರೆ. ಮನೆಯ ಮೂಲೆಯೊಂದರಲ್ಲಿ ಕುಳಿತು ಕಶ್ಮೀರದ ಬಗ್ಗೆ, ಅಘೋರಿಗಳ ಬಗ್ಗೆ ಬರೆದಿಲ್ಲ. ಅಲೆಮಾರಿಗಳಂತೆ ಅಲೆದು ಅನುಭವ ಪಡೆದು ಅದನ್ನು ಬರಹ ರೂಪಕ್ಕೆ ತಂದಿದ್ದಾರೆ. ಈಗ ಹೊರ ಬಂದಿರುವ ಕರ್ನಾಟಕದ ಕದಂಬ ವಂಶದ ಸಾಮ್ರಾಟ ಮಯೂರವರ್ಮನ ಮಹಾ ಚರಿತೆ “ವೈಜಯಂತಿಪುರ" ವನ್ನು ಬರೆದು ಮುಗಿಸಲು ೬ ತಿಂಗಳು ತೆಗೆದುಕೊಂಡರೂ, ಮಯೂರವರ್ಮನ ಚರಿತ್ರೆಯನ್ನು ಅಧ್ಯಯನ ಮಾಡಲು ಸುಮಾರು ಆರು ವರ್ಷಗಳನ್ನೇ ತೆಗೆದುಕೊಂಡಿದ್ದಾರೆ ಎಂದು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ರೀತಿಯ ಅಧ್ಯಯನದ ಕಾರಣದಿಂದಲೇ ಸಂತೋಷಕುಮಾರ ಅವರ ಕಾದಂಬರಿಗಳು ಎಲ್ಲೂ ಬೋರ್ ಹೊಡೆಸುವುದಿಲ್ಲ. ಇದೇ ಕಾರಣದಿಂದ ಅವರು ತಮ್ಮ ಯಾವುದೇ ಕಾದಂಬರಿಯನ್ನು ಓದಿ ಅದು ಓದುಗರಿಗೆ ರುಚಿಸದೇ ಇದ್ದ ಪಕ್ಷದಲ್ಲಿ ಪುಸ್ತಕದ ಹಣವನ್ನು ಹಿಂದೆ ನೀಡುವ ಭರವಸೆ ನೀಡುತ್ತಾರೆ.
ಕದಂಬ ಸಾಮ್ರಾಟ ಮಯೂರವರ್ಮನ ಬಗ್ಗೆ ನಮ್ಮ ಇತಿಹಾಸ ಹೇಳುವ ಚರಿತ್ರೆ ಬಹಳ ಕಡಿಮೆ. ಒಂದೆರಡು ಚಲನಚಿತ್ರಗಳಲ್ಲಿ ಮಯೂರವರ್ಮನ ಪಾತ್ರಗಳು ಕಾಣಿಸಿಕೊಂಡರೂ ಅದರಲ್ಲಿ ಚಿತ್ರದ ಸ್ವಾರಸ್ಯಕ್ಕಾಗಿ ಕೆಲವು ಸಂಬಂಧ ಪಡದ ಘಟನೆಗಳೂ ತುರುಕಲ್ಪಟ್ಟಿದ್ದವು. ಆದರೆ ಸಮಗ್ರ ಅಧ್ಯಯನ ನಡೆಸಿ, ಪುಸ್ತಕದ ಪುಟಗಳಲ್ಲಿ ಎಲ್ಲೆಲ್ಲಿ ಅವಶ್ಯವೋ ಅಲ್ಲಿ ದಾಖಲೆಗಳನ್ನು ನೀಡುತ್ತಾ ಹೋಗಿದ್ದಾರೆ ಲೇಖಕರು. ಈ ಕಾದಂಬರಿ ನಮಗೆ ಏಕೆ ಮುಖ್ಯ? ಎನ್ನುತ್ತಾ ಲೇಖಕರು ಬರೆಯುತ್ತಾರೆ…
“ಇದು ಮಯೂರನ ಮೂರು ಪುಟದ ಕತೆಯಲ್ಲ. ಮೂರು ದಶಕದ ರಕ್ತಸಿಕ್ತ ಚರಿತ್ರೆ. ಇದು ಉತ್ತರದ ಗುಪ್ತರನ್ನು ತಡೆದ, ದಕ್ಷಿಣದ ಪಲ್ಲವರ ಬಡಿದು ಬಾಯಿಗಿಟ್ಟುಕೊಂಡ ರಣವೀಳ್ಯದ ಕದನ ಕಾದಂಬರಿ. ಇಲ್ಲಿಯವರೆಗಿನ ಲಭ್ಯವಿರದಿದ್ದ ಕದಂಬರ ಮೊದಲ ಸಾಮ್ರಾಟನ ಕಥಾನಕ. ಇದು ಕನ್ನಡಕ್ಕೆ ಅಸ್ಮಿತೆ ಮತ್ತು ಐತಿಹಾಸಿಕ ದಾಖಲೆ ಬಿಟ್ಟುಹೋದ ಮಹಾವೀರನ ಬಗೆಗಿನ ಕಾದಂಬರಿ. ಇಲ್ಲಿಯವರೆಗಿನ ಕದಂಬರ ಚರ್ವಿತ ಚರ್ವಣ ದಾಖಲೆಗಳನ್ನು ಓರೆಗೆ ಹಚ್ಚಲಿದೆ. ಏನೂ ಅಲ್ಲದ ಬಡ ವಿದ್ಯಾರ್ಥಿಯೊಬ್ಬ ಬೃಹತ್ ಸಾಮ್ರಾಜ್ಯ ಕಟ್ಟಿದ ಕತೆ. ಇದು ಆಗಿನ ಕುಂತಳ ಸಾಮ್ರಾಜ್ಯ ಕನ್ನಡ, ಕರ್ನಾಟಕ ಎಂದು ಗುರುತಿಸಿಕೊಳ್ಳಲು ಕೊಡುಗೆಯಾದ ರಣವೀರನ ಇತಿಹಾಸ. ಮೊದಲ ಕನ್ನಡ ಶಾಸನ ಬರೆಸಿ ದಾಖಲಿಸಿದ ವೀರನ ಕಥಾನಕ. ನಮ್ಮ ನಿಮ್ಮೆಲ್ಲರ ಹೆಮ್ಮೆಯ ವೈಜಯಂತಿಪುರದ (ಬನವಾಸಿ) ರೋಚಕ ಇತಿಹಾಸ. ಅವನು ಹುಟ್ಟು ಹಾಕಿದ್ದೇ ಗೆರಿಲ್ಲ ಯುದ್ಧ ಪದ್ಧತಿ. ಸಹಸ್ರಾರು ಜನ ರಕ್ತ ಚೆಲ್ಲಿ ಕಟ್ಟಿದ ಮೊದಲ ಕನ್ನಡ ಸಾಮ್ರಾಜ್ಯ. ಭೂಲೋಕದ ಸ್ವರ್ಗವೆಂದೇ ಹೆಸರಾಗಿದ್ದ ಬನವಾಸಿಯ ಕಥಾನಕ. ಕಾಳಿದಾಸ ಕಾಲಿಟ್ಟ ನೆಲ. ಇಂಥ ರಣ ರೋಚಕ ಚರಿತ್ರೆ ಬರೆದವನ ಹೆಸರು ಮಯೂರಶರ್ಮ. ಅವನು ಕೆಡವಿದ ಹೆಣಗಳಿಗೆ ಇದುವರೆಗೂ ಲೆಕ್ಕ ಸಿಕ್ಕಿಲ್ಲ.” ಎಂದಿದ್ದಾರೆ. ಇದನ್ನು ಓದುವಾಗಲೇ ಕಾದಂಬರಿಯನ್ನು ಓದಲೇ ಬೇಕೆಂಬ ಕುತೂಹಲ ಗರಿಗೆದರುತ್ತದೆ.
ಈ ಕದಂಬ ಮಯೂರವರ್ಮನ ಅಥವಾ ಮಯೂರಶರ್ಮನ ಮಹಾಚರಿತೆ ನಡೆದದ್ದು ಕ್ರಿ.ಶ. ೩೧೬ ರಿಂದ ಕ್ರಿ.ಶ.೩೫೫ರ ಸಮಯದಲ್ಲಿ ಎಂದು ದಾಖಲಿಸಲಾಗಿದೆ. ಮಯೂರವರ್ಮನ ಬಗ್ಗೆ ಲೇಖಕರು ತಮ್ಮ ‘ನನ್ನುಡಿ' ಯಲ್ಲಿ ಹೀಗೆ ಬರೆದಿದ್ದಾರೆ “ಮಯೂರವರ್ಮನ ಕಥಾನಕ ನಮಗೆ ಅನೂಚಾನವಾಗಿ ಲಭ್ಯವಿಲ್ಲದಿದ್ದರೂ, ಅಲ್ಲಲ್ಲಿ ಕನ್ನಡ ಶಬ್ಧಗಳನ್ನು ಬಳಸಿದ್ದ ಎಂಬ ಕಾರಣಕ್ಕಾಗಿ ಆತನೇ ಮೊದಲ ಕನ್ನಡ ರಾಜವಂಶಸ್ಥ ಇತ್ಯಾದಿಯಾಗಿ ಪರಿಗಣಿಸಲಾಯಿತು. ಉಳಿದಂತೆ ಏನೇ ಇದ್ದರೂ ಇತಿಹಾಸದ ಸಾಕ್ಷಿಗಳು ಲಭ್ಯವಾಗುವುದರ ಮೇಲೆಯೇ. ತರ್ಕ ಹಾಗು ಲೇಖಕನ ತಾರ್ಕಿಕ ಕಲ್ಪನೆ ಜೊತೆಗೆ ಆಯಾ ಕಾಲಘಟ್ಟದ ಪರಿಸರದಲ್ಲಿ ಆಗಿರಬಹುದಾದ ಘಟನಾವಳಿಗಳ ಊಹಾತ್ಮಕ ರೂಪ ನೀಡುವುದರ ಮೂಲಕ ಒಂದು ದೃಶ್ಯ ಅಂದಾಜಿಗೆ ಸಿಕ್ಕಾಗ, ಅದೇ ಸತ್ಯ ಎನ್ನುವಷ್ಟರ ಮಟ್ಟಿಗೆ ಛಾಪು ಒತ್ತುತ್ತದೆ. ಹಾಗಾಗಿ ಇತಿಹಾಸದ ಘಟನೆ ಸಾಕ್ಷಿಗಳ ಮೇಲೆ ಕಾದಂಬರಿ ರಚಿಸುವಾಗ ಈ ಪ್ರಜ್ಞೆ ಲೇಖನನಲ್ಲಿ ಸದಾ ಎಚ್ಚರವಾಗಿರಬೇಕಾದ ಅನಿವಾರ್ಯತೆ ಇದ್ಡೇ ಇರಬೇಕಾಗುತ್ತದೆ. ಇಲ್ಲದಿದ್ದರೆ ಇತಿಹಾಸವೇ ದಿಕ್ಕು ತಪ್ಪುವ ಅವಕಾಶವಿರುತ್ತದೆ.”
ಸುಮಾರು ೩೦೦ ಪುಟಗಳ ಮಯೂರವರ್ಮನ ಇತಿಹಾಸವನ್ನು ಓದಲು ಪ್ರಾರಂಭಿಸಿದ ಬಳಿಕ ಕುತೂಹಲ ಕೆರಳಿಸುತ್ತಾ ಹೋಗುತ್ತಾ ಕೊನೆಯ ಪುಟಕ್ಕೆ ತಲುಪಿದ್ದೇ ಗೊತ್ತಾಗುವುದಿಲ್ಲ. ಕಾದಂಬರಿಕಾರರಾದ ಸಂತೋಷಕುಮಾರ ಮೆಹಂದಳೆ ಇವರು ಈ ಕೃತಿಯನ್ನು ತಮ್ಮ “ಆಯಿ-ಬಾಬಾ”ಗೆ ಸಮರ್ಪಣೆ ಮಾಡಿದ್ದಾರೆ. ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಅಗತ್ಯವಾಗಿ ಓದಬೇಕಾದ ಕೃತಿ ಇದು.