ವೈವಾಹಿಕ ಬದುಕನ್ನು ಸಂರಕ್ಷಿಸಿ : ಸಮಾಜ ಚಿಂತಿಸುವ ಕಾಲ

ವೈವಾಹಿಕ ಬದುಕನ್ನು ಸಂರಕ್ಷಿಸಿ : ಸಮಾಜ ಚಿಂತಿಸುವ ಕಾಲ

ಕುಟುಂಬ ಮೌಲ್ಯಗಳಿಗೆ ಅಪಾರ ಗೌರವ ಹೊಂದಿರುವ ಭಾರತದಂತಹ ದೇಶದಲ್ಲಿ ಇತ್ತೀಚೆಗೆ ವಿವಾಹ ವಿಚ್ಚೇದನಗಳು ಹೆಚ್ಚುತ್ತಿರುವುದು ತೀರಾ ವಿಷಾದಕರ. ಅದರಲ್ಲೂ ಕರ್ನಾಟಕವು ಈ ವಿಷಯದಲ್ಲಿ ದೇಶದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ ಎಂಬ ಅಂಶವು ಇನ್ನಷ್ಟು ಖೇದಕರ ಮತ್ತು ಒಂದು ರೀತಿಯಲ್ಲಿ ಎಚ್ಚರಿಕೆಯ ಕರೆಘಂಟೆ. ರಾಜ್ಯದಲ್ಲಿ ವೈವಾಹಿಕ ವಿಚ್ಚೇದನದ ದರ ಶೇ. ೧೧.೭ರಷ್ಟು ಇರುವುದು ಕಳೆದ ಐದು ವರ್ಷಗಳ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದಕ್ಕೆ ಪರಿಹಾರ ಕಂಡುಹಿಡಿಯಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು, ನ್ಯಾಯಾಂಗ ಅಥವಾ ಆಪ್ತ ಸಮಾಲೋಚಕರ ಸಹಿತ ಆರೋಗ್ಯ ಸೇವಾಪೂರೈಕೆದಾರರು ಮಾತ್ರವೇ ಕಾರ್ಯಪ್ರವೃತ್ತರಾದರೆ ಸಾಲದು ; ಜನ ಸಮುದಾಯಗಳು ತತ್ ಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.

ವೈವಾಹಿಕ ಬದುಕಿನಲ್ಲಿ ಅತಿಯಾದ ನಿರೀಕ್ಷೆ, ಅತಿಯಾದ ವ್ಯಾಮೋಹ, ಕೆಲಸ ಕಾರ್ಯಗಳ ನಿರ್ವಹಣೆಯ ವಿಷಯದಲ್ಲಿ ಲಿಂಗಾಧಾರಿತ ಅಪೇಕ್ಷೆ, ಆರ್ಥಿಕ ಸ್ವಾವಲಂಬನೆ, ಅಣು ಕುಟುಂಬಗಳು ಹೀಗೆ ವೈವಾಹಿಕ ಸಂಬಂಧ ಬಿರುಕು ಬಿಡುವುದಕ್ಕೆ ಹತ್ತು ಹಲವು ಕಾರಣಗಳಿವೆ. ಈ ವರ್ಷದ ಅಂಕಿಅಂಶಗಳನ್ನೇ ನೋಡುವುದಾದರೆ, ೨೦೨೫ರ ಜನವರಿಯಿಂದ ಮಾರ್ಚ್ ವರೆಗೆ ರಾಜ್ಯದಲ್ಲಿ ೫,೫೭೬ ವಿಚ್ಚೇದನ ಪ್ರಕರಣಗಳು ದಾಖಲಾಗಿವೆ. ಕಳೆದ ಐದು ವರ್ಷಗಳ ಅವಧಿಯನ್ನು ಪರಿಶೀಲಿಸಿದರೆ ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಬರುತ್ತಿರುವುದು ತಿಳಿದುಬರುತ್ತದೆ. ಇತ್ತೀಚಿಗಿನ ವರ್ಷದಲ್ಲಿ ಯುವ ಜನರ ವಿವಾಹವು ಒಂದು ಬದ್ಧತೆಯಾಗಿ ಉಳಿದಿಲ್ಲ. ಪತಿ ಪತ್ನಿಯ ನಡುವೆ ಪಾರದರ್ಶಕತೆ ಇಲ್ಲದಿರುವುದು, ಸಣ್ಣಪುಣ್ಣ ಅಸಮಾಧಾನಗಳನ್ನು ಕೂಡ ತಡೆದುಕೊಳ್ಳುವ ಮನೋಸ್ಥಿತಿ ಇಲ್ಲದಿರುವುದು, ಲೈಂಗಿಕ ಸಂಬಂಧಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು, ಅನೈತಿಕ ಸಂಬಂಧಗಳು, ಕೆಟ್ಟ ಚಟಗಳು, ಮಾನಸಿಕ - ದೈಹಿಕ ಹಿಂಸೆ ಕೂಡ ವಿವಾಹ ವಿಚ್ಛೇದನಕ್ಕೆ ಕಾರಣವಾಗುತ್ತಿವೆ.

ಇವು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ವಿಷಯವಾದರೆ ಅದೆಷ್ಟೋ ಸಂಸಾರಗಳು ನಿಶ್ಯಬ್ಧವಾಗಿ ಒಡೆದುಹೋಗಿರುವುದೂ ಇದೆ. ಪತಿ ಪತ್ನಿ ಜತೆಯಾಗಿದ್ದೂ ಮಾನಸಿಕವಾಗಿ ದೂರವಾಗಿರುವುದು, ಒಂದು ಒಪ್ಪಂದದ ರೀತಿಯಲ್ಲಿ ಸಂಸಾರ ಮುನ್ನಡೆಸುವುದನ್ನು ಕೂಡ ವಿಚ್ಛೇದನದ ಸೂಕ್ಷ್ಮ ರೂಪಗಳೆಂದೇ ಪರಿಗಣಿಸಬೇಕಾಗುತ್ತದೆ. ವಿವಾಹ ವಿಚ್ಚೇದನದಿಂದ ಪತಿ-ಪತ್ನಿ ಅವರ ಮಕ್ಕಳು, ಹೆತ್ತವರು, ಕುಟುಂಬ -ಹೀಗೆ ಎಲ್ಲರ ಮೇಲೆಯೂ ಹಲವು ಆಯಾಮಗಳಿಂದ ಬಹುವಾದ ದುಷ್ಪರಿಣಾಮ ಉಂಟಾಗುತ್ತದೆ. ಪಾಶ್ಚಾತ್ಯ ದೇಶಗಳ ಜೀವನ ಶೈಲಿಯೇ ಬೇರೆ ರೀತಿಯದ್ದು. ಆರ್ಥಿಕ ಸ್ಥಿತಿಗತಿಯೂ ನಮ್ಮಲ್ಲಿಗಿಂತ ತೀರಾ ಭಿನ್ನ. ಹೀಗಾಗಿ ಸಂಸಾರ ಒಡೆದುಹೋಗುವಂತಹ ಪ್ರಕ್ರಿಯೆ ಅಲ್ಲಿ ಉಂಟು ಮಾಡುವ ಪ್ರತ್ಯಕ್ಷ -ಪರೋಕ್ಷ ಪರಿಣಾಮಗಳು ಮತ್ತು ನಮ್ಮಲ್ಲಿಯ ಪರಿಣಾಮಗಳು ಬೇರೆ ಬೇರೆಯೇ ಆಗಿವೆ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ, ಸಂಸಾರ, ಮಕ್ಕಳು, ಹಿರಿಯರು ಇತ್ಯಾದಿಗಳನ್ನು ಬಹಳ ಎತ್ತರದ ಸ್ಥಾನದಲ್ಲಿರಿಸಿ ನೊಡಲಾಗುತ್ತದೆ. ಇವುಗಳಿಗೆ ಬಹುಮೌಲ್ಯವನ್ನು ನೀಡುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ಆಧುನಿಕ ಬದುಕಿನ ನಾಗಾಲೋಟ ಈ ಮೌಲ್ಯಗಳಿಗೆಲ್ಲ ಧೂಳು ಮುಸುಕುವಂತೆ ಮಾಡಿರುವುದು ವಿವಾಹ ವಿಚ್ಚೇದನದಂತಹ ಪತನಕಾರಿ ಅಂಶಗಳು ಹೆಚ್ಚಲು ಕಾರಣ ಎಂದು ಬೊಟ್ಟು ಮಾಡದೆ ವಿಧಿಯಿಲ್ಲ. ಮಕ್ಕಳಿಗೆ ಸಣ್ಣಂದಿನಿಂದಲೇ ಸಂಬಂಧಗಳು, ಸಾಂಸಾರಿಕ ಮೌಲ್ಯಗಳ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮನೆ, ಶಾಲೆ-ಕಾಲೇಜುಗಳಲ್ಲಿ ಆಗಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೮-೦೪-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ