ವ್ಯತ್ಯಾಸ

ವ್ಯತ್ಯಾಸ

ಕವನ

ನನಗೂ ಗಾಂಧಿಗೂ ಇರುವ ವ್ಯತ್ಯಾಸ

ಸ್ವಲ್ಪವೇ ಸ್ವಲ್ಪ-ಅಷ್ಟೇ!

 

ಅವರಿದ್ದಾಗ ನಾನೋ-ಇನ್ನೂ

ಹುಟ್ಟಿರಲೇ ಇಲ್ಲ

ನಾ ಹುಟ್ಟಿದ ಮೇಲೆ ಅವರು ಬದುಕಿ

ಉಳಿಯಲೆ ಇಲ್ಲ!

 

ನಕಲನು ಹೊಡೆಯದೆ ಮೇಲಿನ ದರ್ಜೆಗೆ

ತೇರ್ಗಡೆಯಾದರು ಅವರು

ಸ್ವಲ್ಪವೆ ಸ್ವಲ್ಪ ನಕಲಿನ ಮೂಲಕ

ಮೇಲಕೆ ಏರಿದೆ ನಾನು.

 

ಅವರೋ ಕಡಲೆಯ ಮೆಲ್ಲುತ್ತಿದ್ದರು

ಆಹಾರಕ್ಕಾಗಿ

ನಾನೂ ಕಡಲೆಯ ಮೆಲ್ಲುವುದುಂಟು

ವಿಹಾರಕ್ಕಾಗಿ

 

ಅವರದೊ-ಎರಡನೆ ದರ್ಜೆಯ ಪಯಣ

ಈ ದೇಶದ ಜನಕಾಗಿ

ನನ್ನದೂ ಹಾಗೆಯೇ ಪಯಣ-ಮೇಲ್ದರ್ಜೆಗೆ

ಹಣವಿಲ್ಲದ್ದಕ್ಕಾಗಿ

 

ಅವರ ಕೈಯಲಿ ಇತ್ತಾ ದೊಣ್ಣೆ

ಊರಿ ನಡೆಯಲಿಕಾಗಿ

ನನ್ನ ಕೈಯಲೂ ದೊಣ್ಣೆ-ಆಗದ

ಜನರೆಡೆ ಬೀಸಲಿಕಾಗಿ

 

ಜನತೆಗೆ ಬಟ್ಟೆಯ ಉಳಿಸಲು ಅವರು

ಇದ್ದರು ಬರಿಮೈಯಲ್ಲಿ

ನಾನೂ ಇರುವೆನು ಹಾಗೆಯೇ ಇಲ್ಲಿ

ಈ ಉರಿ ಬೇಸಗೆಯಲ್ಲಿ

 

ಸತ್ಯ ಅಹಿಂಸೆ ಶಾಂತಿಗೆ ದುಡಿಯುತ

ಕಳೆದರು ಇಡಿ ಜೀವನವ

ನಾನೂ ಅದೆ ಪಾಠವ ಹೇಳುತ್ತ

ಕಳೆಯುವೆ ಸೇವಾವಧಿಯ

 

ವರುಷಕೊಮ್ಮೆ ನಮಗಾಚರಿಸಲು ಇದೆ

ಅವರದು ಜನ್ಮದಿನ

ದಿನವೂ ಸಾಯುವ ನನ್ನಂಥವರಿಗೊ

ಪ್ರತಿದಿನ ಜನ್ಮದಿನ

 

ಕೊನೆಗೂ ಅವರು ಮೋಹನದಾಸ

ನಾನೋ ಮೋಹದ ದಾಸ

ನನಗೂ ಅವರಿಗೂ ನಡುವೆ ಇರುವುದು

ಇಷ್ಟೇ ವ್ಯತ್ಯಾಸ!

-ಸುಬ್ರಾಯ ಚೊಕ್ಕಾಡಿ.

ಚಿತ್ರ್