ವ್ಯಾಸ ಪೂರ್ಣಿಮೆಯ ಪೌರಾಣಿಕ ಹಿನ್ನಲೆ
ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎನ್ನುವರು. ಗುರುವನ್ನು ಸ್ಮರಿಸುವ, ಗುರುವಿಗೆ ತನು ಮನ ಮತ್ತು ಧನಗಳನ್ನು ಸಮರ್ಪಿಸುವ ದಿನವಿದು. ಗುರುವಿಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನವಿದೆ. ತಾಯಿ ತಂದೆಯ ನಂತರದಲ್ಲಿ ಗೌರವದ ಅಗ್ರಪಟ್ಟವು ಗುರುವಿಗೆ ಸಲ್ಲುತ್ತದೆ. ‘ಗು’ ಎಂದರೆ ಕತ್ತಲು ಅಥವಾ ಅಜ್ಞಾನ ಎಂದೂ, ‘ರು’ ಎಂದರೆ ಪರಿಹಾರಕ ಎಂದೂ ವಿವರಣೆಯಿದೆ. ಭೌತಿಕವಾದ ಪರಿಸರದ ಕತ್ತಲೆಯನ್ನು ಕಳೆಯುವ ಗುರು ಸೂರ್ಯ. ನಮ್ಮ ಅಂತರಂಗದ ಅಜ್ಞಾನ ಎಂಬ ಕತ್ತಲೆಯನ್ನು ಕಳೆಯುವವನು ಗುರು. ಪರಿಸರದಲ್ಲಿ ಕತ್ತಲು ಆವರಿಸಿದ್ದರೆ ಬದುಕು ಹೇಗೆ ಶೂನ್ಯವಾಗುತ್ತದೆಯೋ ಅದೇ ರೀತಿ ಅಂರಂಗದಲ್ಲಿ ಕತ್ತಲೆಯಿದ್ದರೂ ಬದುಕು ಗೌಣವೆನಿಸುತ್ತದೆ.
ಗುರುಪೂರ್ಣಿಮೆಗೆ ವ್ಯಾಸ ಪೂರ್ಣಿಮೆಯೆಂದೂ ಹೇಳುವರು. ವ್ಯಾಸರು ಯಾರು? ಅವರು ಯಾಕಾಗಿ “ಗುರು” ಎಂದು ಸಾರ್ವತ್ರಿಕವಾಗಿದ್ದಾರೆ? ಎಂಬ ಅರಿವು ನಮಗಿರಲಿ. ವ್ಯಾಸರು ಓರ್ವ ಮಹರ್ಷಿ. ಇವರು ಐದು ಸಾವಿರ ವರ್ಷಗಳ ಹಿಂದೆ ಹುಟ್ಟಿರಬಹುದೆಂದು ಊಹಿಸಲಾಗಿದೆ. ಮತ್ಸ್ಯದೊರೆ ದಾಶರಾಜನ ಸಾಕು ಮಗಳು ಸತ್ಯವತಿ ಮತ್ತು ವಸಿಷ್ಠ ಮಹರ್ಷಿಗಳ ಮೊಮ್ಮಗ ಪರಾಶರ ಋಷಿಗಳಿಗೆ ಮಗನಾಗಿ ಹುಟ್ಟಿದ ಇವರ ಜನ್ಮ ನಾಮ ಕೃಷ್ಣ. ದೇಹದ ವರ್ಣ ಕರಿಯದಾದುದರಿಂದ ಹೆಸರನ್ನು ಕೃಷ್ಣ ಎಂದಿಡಲಾಗಿದೆಯಂತೆ. ಯಮುನಾ ತೀರದ ದ್ವೀಪ ಪ್ರದೇಶದಲ್ಲಿ ಹುಟ್ಟಿದವನಾದುದರಿಂದ ಕೃಷ್ಣ ದ್ವೈಪಾಯನ ಎಂದು ನಾಮಾಂಕಿತನಾದನು. ಪರಾಶರರು ಕೃಷ್ಣನ ಜನನದ ನಂತರ ಲೋಕ ಸಂಚಾರ ಹೋದರು..
ಲೋಕಸಂಚಾರದಲ್ಲಿರುವಾಗ ಒಂದು ದಿನ ಪರಾಶರರು ಮರಳಿ ಬಂದರು. ಆಗ ಕೃಷ್ಣನಿಗೆ ಆರು ವರ್ಷ. ಪರಾಶರರು ಮತ್ತೆ ಲೋಕಯಾನ ಹೊರಟಾಗ ಕೃಷ್ಣನೂ ಅಪ್ಪನೊಡನೆ ಹೊರಟು ನಿಂತ. ಪರಾಶರರಿಗೆ ಪುಟ್ಟ ಬಾಲಕನನ್ನು ಜೊತೆಗೊಯ್ಯುವುದು ಹಿತಕರವೆನಿಸಲಿಲ್ಲ. ಆಗ ಪರಾಶರ ಮುನಿಗಳು “ಮಗೂ, ನೀನಿನ್ನೂ ಬಹಳ ಎಳೆಯನು. ದೊಡ್ಡವನಾದ ಮೇಲೆ ಜತೆಗೊಯ್ಯುವೆ. ಈಗ ನನ್ನ ಜೊತೆಗೆ ನನ್ನ ಶಿಷ್ಯರು ಮಾತ್ರವೇ ಇರಬಹುದಷ್ಟೇ” ಎಂದರಂತೆ. ತಕ್ಷಣ ಬಾಲಕ ಕೃಷ್ಣ “ಹಾಗಾದರೆ ನೀನು ನನಗೆ ಶಿಷ್ಯ ದೀಕ್ಷೆ ಕೊಡು, ನಾನೂ ನಿನ್ನ ಶಿಷ್ಯನಾಗುವೆ.” ಎಂದನಂತೆ.
ಆರು ವರ್ಷ ವಯಸ್ಸಿನ ಬಾಲಕನ ಅಂತಃಪ್ರಜ್ಞೆ, ಪುರಾಣ ಕಾವ್ಯೇತಿಹಾಸಗಳ ಜ್ಞಾನ ಶಕ್ತಿ, ಪ್ರಬುದ್ಧತೆ ಮೊದಲಾದುವುಗಳನ್ನು ಗಮನಿಸಿದ ಪರಾಶರರು ಮಗನಿಗೆ ಬ್ರಹ್ಮದೀಕ್ಷೆಯನ್ನು ನೀಡಿ ಶಿಷ್ಯನನ್ನಾಗಿ ಸ್ವೀಕರಿದರು. ಹೊರಟು ನಿಂದ ಕೃಷ್ಣನು ದುಃಖಿತಳಾದ ತಾಯಿ ಸತ್ಯವತಿಗೆ, “ಅಮ್ಮಾ ನಿನಗೆ ನನ್ನ ಜ್ಞಾಪಕವಾದೊಡನೆ ನಿನ್ನ ಕಣ್ಣ ಮುಂದೆ ಕಾಣಿಸುವೆ. ಆಶೀರ್ವದಿಸಿ ಕಳುಹಿಸಿ ಕೊಡು.” ಎಂದು ವಿನೀತನಾಗಿ ಪ್ರಾರ್ಥಿಸಿದನು. ನಂತರದಲ್ಲಿ ಶತ ಶತಮಾನಗಳ ಬಾಳಿದ ಕೃಷ್ನ ದ್ವೈಪಾಯನನು ಕಬ್ಬಿಣದ ಕಡಲೆಯಂತಿದ್ದ ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಸರಳೀಕರಿಸಿ ಜಗತ್ತಿಗೆ ನೀಡಿದರು. ಇದರಿಂದಾಗಿ ಕೃಷ್ಣ ದ್ವೈಪಾಯನ ವೇದ ವ್ಯಾಸನಾದ.
ಋಗ್, ಯಜುರ್, ಸಾಮ ಮತ್ತು ಅಥರ್ವವೆಂಬ ನಾಲ್ಕೂ ವೇದಗಳು ಜ್ಞಾನದ ಕೋಠಿ. ನಮ್ಮ ಜ್ಞಾನಗಳೆಲ್ಲದರ ಮೂಲ ವೇದಗಳು. ಅವರು ಮಹಾಭಾರತ ಕಥೆಯ ಸೂತ್ರಧಾರಿ ಮತ್ತು ಪಾತ್ರಧಾರಿ. ಧರ್ಮಾಧಾರಿತ ಬದುಕಿನ ಸುಂದರ ವ್ಯಾಖ್ಯಾನ ಭಗವದ್ಗೀತೆ. ಇದು ವ್ಯಾಸರ ಕೊಡುಗೆ. ಭಾಗವತ ಆಧ್ಯಾತ್ಮಿಕ ಬದುಕಿಗೆ ದರ್ಶನ ಗ್ರಂಥ. ವ್ಯಾಸರ ಯೋಚನೆಯ ವೇಗವನ್ನು ಅನುಸರಿಸಿ ಬರೆಯುವವರೇ ದೊರೆಯದಿದ್ದಾಗ ಭಗವಾನ್ ಶ್ರೀಗಣೇಶನು ಲಿಪಿಕಾರನಾಗಿ ಸಹಕರಿಸಿದನು. ಸಾಕ್ಷಾತ್ ಗಣಪತಿ ದೇವನೇ ಲಿಪಿಕಾರನಾದನೆಂದರೆ ವ್ಯಾಸರು ಎಷ್ಟು ಮಹಾನ್ ಗುರು ಅಲ್ಲವೇ?
ವ್ಯಾಸರು ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೈಯಾಡಿಸಿದ ಜ್ಞಾನೇಶ್ವರ. ಸ್ಮೃತಿ ಪುರಾಣಗಳು, ಧರ್ಮ ಸೂತ್ರಗಳು, ಜ್ಯೋತಿಷ್ಯ ಶಾಸ್ತ್ರ, ಖಗೋಳ ಶಾಸ್ತ್ರ ಹೀಗೆ ಅವರು ಲೋಕಕ್ಕೆ ನೀಡಿದ ಜ್ಞಾನ ಭಂಡಾರ ಮಹಾಸಾಗರ. ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲ ಅನ್ವೇಷಣೆಗಳು ವ್ಯಾಸ ಪ್ರಣೀತ ಜ್ಞಾನದ ಆಧಾರದಲ್ಲಿವೆ. ವೃತ್ತವೊಂದರ ಪರಿಧಿಯನ್ನು ಜೋಡಿಸುವ ರೇಖೆಗೆ ವ್ಯಾಸ ಎನ್ನುವರು. ವ್ಯಾಸವು ಮೂರು ಬಿಂದುಗಳನ್ನು ಸ್ಪರ್ಶಿಸುತ್ತವೆ. ಪರಿಧಿಯ ಎರಡು ಮತ್ತು ವೃತ್ತ ಕೇಂದ್ರವೇ ಆ ಮೂರು ಬಿಂದುಗಳು. ವೃತ್ತ ಕೇಂದ್ರವು ಧರ್ಮವಾದರೆ ಪರಿಧಿಯ ಎರಡು ಬಿಂದುಗಳು ಬದುಕಿನ ಲೌಕಿಕ ಮತ್ತು ಅಲೌಕಿಕ ಗುರಿಗಳು. ಜೀವನದ ಲೌಕಿಕ ಮತ್ತು ಪಾರಮಾರ್ಥಿಕ ಗುರಿಗಳನ್ನು ವೃತ್ತ ಕೇಂದ್ರವಾದ ಧರ್ಮವು ನಿಯಂತ್ರಿಸುತ್ತದೆ. ಸರಿಯಾದ ದಾರಿಯನ್ನು ತೋರುವವನೇ ಗುರು. ಜ್ಞಾನದ ಸಾಗರದಲ್ಲಿ ಮೀಯಿಸುವವನೇ ಗುರು. ಲೋಕಕ್ಕೆ ಜ್ಞಾನದ ಬೆಳಕು ಧರ್ಮದ ಬೆಳಕನ್ನು ನೀಡಿದ ವ್ಯಾಸರನ್ನು ಭೂಮಂಡಲವೇ ಗುರು ಎಂದು ಗೌರವಿಸುತ್ತದೆ. ಆದುದರಿಂದಲೇ ಭಾರತೀಯರಿಗೆ ಗುರು ಪೂರ್ಣಿಮೆ ಮಹತ್ತರವಾವಾದುದು. ಪೂಜನೀಯವಾದುದು.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ