ವ್ಯೂಹ-(ಪತ್ತೇದಾರಿ ಕಾದಂಬರಿ)-ಅಧ್ಯಾಯ-4

ವ್ಯೂಹ-(ಪತ್ತೇದಾರಿ ಕಾದಂಬರಿ)-ಅಧ್ಯಾಯ-4

ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗವಾದ ನಂತರ ರಘು,ವಿನಯನ ಕೊಲೆ ಕೇಸಿನ ಫೈಲ್ ಅನ್ನು ಮತ್ತೆ ಪರಿಶೀಲಿಸಿದನು.ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.ಆ ಫೈಲ್ ನಲ್ಲಿ ಮೊದಲು ಅಲ್ಲಿದ್ದ ಇನಸ್ಪೆಕ್ಟೆರ್ ನನ್ನು ಭೇಟಿ ಮಾಡಿದಾಗ ಎಷ್ಟು ವಿವರಗಳು ದೊರೆತಿದ್ದವೋ,ಅಷ್ಟೇ ವಿವರಗಳು ಈಗಲೂ ಉಳಿದಿದ್ದವು.ಆದ್ದರಿಂದ ರಘು ಈ ಕೇಸಿನ ವಿಚಾರಣೆಯನ್ನು ಹೊಸದಾಗಿ ಪ್ರಾರಂಭಿಸಲು ಯೋಚಿಸಿದನು.ರಘು ಈ ಕೇಸಿನ ವಿಚಾರದಲ್ಲಿ ತುಂಬಾ ಕ್ರಮಬದ್ಧವಾಗಿಯೂ ಮತ್ತು ಜಾಗರೂಕತೆಯಿಂದಲೂ ಮುಂದುವರೆಸಬೇಕೆಂದು ನಿರ್ಧರಿಸಿದನು.ಏಕೆಂದರೆ ರಘು ಸ್ವಲ್ಪ ಅಜಾಗರೂಕನಾದರೂ ಈ ಕೇಸು ಕೈ ಬಿಟ್ಟು ಹೋದಂತೆಯೇ.ಈ ಮೊದಲು ಅಲ್ಲಿದ್ದ ಅಧಿಕಾರಿಯ ಬೇಜವಾಬ್ದಾರಿಯಿಂದಾಗಿ ಕೊಲೆಗಾರನ ಬಗ್ಗೆ ಅತಿ ಸಣ್ಣ ಸುಳಿವೂ ಕೂಡ ಲಭ್ಯವಾಗಿರಲಿಲ್ಲ.ಸಣ್ಣ ಸುಳಿವು ಬಿಡಿ ಆ ಅಧಿಕಾರಿ ಮಹಾಶಯ ಸರಿಯಾದ ಪ್ರಾಥಮಿಕ ತನಿಖೆಯನ್ನೂ ಕೂಡ ಮಾಡಿರಲಿಲ್ಲ.ಆದ ಕಾರಣ ರಘುವಿಗೆ ಅತಿ ಜಾಗರೂಕತೆ ಮತ್ತು ಕ್ರಮಬದ್ಧತೆ ತುಂಬಾ ಮುಖ್ಯವಾದ ಅಂಶಗಳಾಗಿದ್ದವು.

ರಘು ಮೊದಲು ಕೊಲೆ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ ಏನಾದರೂ ಸುಳುಹು ಸಿಗಬಹುದೇ ಎಂದು ಪ್ರಯತ್ನಿಸಬೇಕು,ಎಂದು ನಿರ್ಧರಿಸಿದನು.ಅದಕ್ಕಾಗಿ ಸ್ಟೇಷನ್ ನಲ್ಲಿದ್ದ ಒಬ್ಬ ಪೇದೆಯನ್ನು ಕರೆದುಕೊಂಡು ವಿನಯನ ಕಾಲೇಜ್ ಹಾಸ್ಟೆಲ್ ಗೆ ಹೋದನು.ಅದೇ ಹಾಸ್ಟೆಲಿನ ಹಿಂಭಾಗದ ಗೇಟಿನ ಬಳಿ ವಿನಯನ ಕೊಲೆ ನಡೆದಿತ್ತು.ರಘು ವಿನಯನ ಹಾಸ್ಟೆಲ್ ತಲುಪಿ,ಹಾಸ್ಟೆಲ್ ಮೇಲ್ವಿಚಾರಕನನ್ನು ಕರೆದುಕೊಂಡು ಕೊಲೆ ನಡೆದ ಸ್ಥಳಕ್ಕೆ ಹೋದನು.ಕೊಲೆ ಹಾಸ್ಟೆಲಿನ ಹಿಂಭಾಗದ ಗೇಟಿನ ಬಳಿ ಇರುವ ಒಂದು ಚಿಕ್ಕ ಸಂದಿಯಲ್ಲಿ ನಡೆದಿತ್ತು.ಆ ಸಂದಿ ವಿನಯನ ಹಾಸ್ಟೆಲಿನ ಹಿಂಭಾಗದ ಗೋಡೆ ಮತ್ತು ಅಲ್ಲೇ ಪಕ್ಕದಲ್ಲೇ ಇದ್ದ ಲೇಡಿಸ್ ಹಾಸ್ಟೆಲಿನ ಹಿಂಭಾಗದ ಗೋಡೆಯ ನಡುವಿನ ಸುಮಾರು ೪೦ ಅಡಿ ಅಗಲದ ಜಾಗವಾಗಿತ್ತು.ವಿನಯನ ಕೊಲೆ ಆದ ಮೇಲಿಂದ ಆ ಜಾಗಕ್ಕೆ ಹೋಗಲು ಎಲ್ಲರೂ ಹೆದರುತ್ತಿದ್ದರು.ಹಗಲಿನಲ್ಲಿಯೂ ಕೂಡ ಯಾರೂ ಜೊತೆಗಾರರಿಲ್ಲದೆ ಆ ಜಾಗಕ್ಕೆ ಹೋಗಲು ಜನ ಭಯಭೀತರಾಗುತ್ತಿದ್ದರು.ಆದ ಕಾರಣ ಅಲ್ಲಿ ಜನ ಓಡಾಡಿ,ಕೊಲೆಯ ಕುರುಹುಗಳು ನಾಶವಾಗಿರುವ ಸಾಧ್ಯತೆ ಅತಿ ಕಡಿಮೆಯಿತ್ತು.ಆದ್ದರಿಂದ ರಘುವಿಗೆ ಕೊಲೆಯ ಬಗ್ಗೆ ಏನಾದರೂ ಒಂದು ಚಿಕ್ಕ ಸುಳುಹು ಸಿಗಬಹುದೆಂಬ ಆಶಾಕಿರಣ ಮನಸ್ಸಿನಲ್ಲಿ ಮೂಡಿತು.

ಕೊಲೆ ನಡೆದ ಸ್ಥಳದಲ್ಲಿ,ಕೊಲೆಯಾದ ದಿನ ಶವದ ಪಂಚನಾಮೆ ಮಾಡಿ ಹಾಕಿದ ಬಳಪದ ಗುರುತು ಇನ್ನೂ ಹಾಗೆ ಇತ್ತು.ಆ ಬಳಪದ ಗುರುತಿನ ಅಕ್ಕ ಪಕ್ಕ ಅಲ್ಲಲ್ಲಿ ರಕ್ತದ ಗುರುತು ಕೂಡ ಇನ್ನೂ ಮಾಸಿರಲಿಲ್ಲ.ರಘು ರಕ್ತದ ಗುರುತುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ತನ್ನ ಬಳಿಯಿದ್ದ ಡೈರಿಯಲ್ಲಿ ನೋಟ್ ಮಾಡಿಕೊಳ್ಳತೊಡಗಿದನು.ಬಳಪದ ಗುರುತಿನ ಹೊಟ್ಟೆ ಭಾಗದಲ್ಲಿ ತುಂಬಾ ರಕ್ತ ಸೋರಿಹೊದಂತೆ ಕಂಡುಬಂದಿತು.ಇದು ವಿನಯನ ಹೊಟ್ಟೆಗೆ ಚಾಕುವಿನ ಇರಿತದಿಂದ ವಿಪರೀತವಾದ ರಕ್ತಸ್ರಾವವಾದುದನ್ನು ಸ್ಪಷ್ಟಪಡಿಸಿತ್ತು.ಅದಲ್ಲದೆ ತೋಳು ಮತ್ತು ಕಾಲುಗಳ ಗುರುತಿನ ಮೇಲೆಯೂ ಕೂಡ ರಕ್ತದ ಕಲೆಗಳು ಇದ್ದಿದುದರಿಂದ,ವಿನಯನಿಗೆ ಆ ಭಾಗಗಳಲ್ಲಿಯೂ ಕೂಡ ಚಾಕುವಿನಿಂದ ಇರಿಯಲಾಗಿತ್ತು ಎಂಬುದು ಸ್ಪಷ್ಟವಾಗಿತ್ತು.ಹಾಗೆಯೇ ರಘು ಬಳಪದ ಗುರುತಿನ ಸುತ್ತ ಮುತ್ತ ಯಾರದಾದರೂ ಹೆಜ್ಜೆ ಗುರುತುಗಳು ಇವೆಯೇ ಎಂದು ಪರೀಕ್ಷಿಸತೊಡಗಿದನು.ಅಲ್ಲಿನ ನೆಲ ಸ್ವಲ್ಪ ಗಟ್ಟಿಯಾಗಿದ್ದಿದ್ದರಿಂದ ಅಲ್ಲಿ ಯಾರ ಹೆಜ್ಜೆಗುರುತುಗಳೂ ಕೂಡ ಕಾಣಲಿಲ್ಲ.ಹಾಗೆ ರಘು ಗಮನಿಸಿದ ಇನ್ನೊಂದು ಅಂಶವೇನೆಂದರೆ ಶವದ ಗುರುತಿನ ಸುತ್ತ ಮುತ್ತ ಯಾವುದೇ ಕಸಕಡ್ಡಿಯಾಗಲಿ,ಪ್ಲಾಸ್ಟಿಕ್ ಚೂರಾಗಲಿ ಕಾಣಿಸುತ್ತಿರಲಿಲ್ಲ.ಇದರಿಂದ ರಘುವಿಗೆ,ಕೊಲೆಗಾರ ತುಂಬಾ ಚಾಣಾಕ್ಷತನದಿಂದ ಶವದ ಸುತ್ತಮುತ್ತಲಿನ ಪ್ರದೇಶವನ್ನು ಗುಡಿಸಿ ಯಾವುದೇ ಸುಳುಹು ಸಿಗದ ಹಾಗೆ ಮಾಡಿದ್ದಾನೆಂದು ಅತ್ಯಂತ ಸ್ಪಷ್ಟವಾಗಿ ಅನ್ನಿಸಿತು.ರಘು ಬಳಪದ ಗುರುತನ್ನು ದಾಟಿ ಮುಂದೆ ಹೋಗಿ ಏನಾದರೂ ಸುಳುಹು ಸಿಗಬಹುದೇ ಎಂದು ಹುಡುಕಿದನು.ಆದರೆ ಚಾಣಾಕ್ಷ ಕೊಲೆಗಾರ ಯಾವುದೇ ತಪ್ಪನ್ನು ಮಾಡಿರಲಿಲ್ಲ.ರಘುವಿಗೆ ಯಾವುದೇ ಸುಳುಹು ಅಥವಾ ಸಾಕ್ಷ್ಯ ಸಿಗಲಿಲ್ಲ.ಆದರೆ ರಘುವಿನ ಅಂತರಾತ್ಮ ಏನಾದರೂ ಒಂದು ಚಿಕ್ಕ ಸುಳುಹು ಸಿಕ್ಕೆ ಸಿಗುತ್ತದೆಂದು ಸಾರಿ ಸಾರಿ ಹೇಳುತ್ತಿತ್ತು.

ಹಾಗೆ ರಘು ಯೋಚನೆ ಮಾಡುತ್ತಾ ನಿಂತಿರಬೇಕಾದರೆ,ಆ ಸಂದಿಯಲ್ಲಿ ತುಂಬಾ ದೂರದಲ್ಲಿ ಒಂದು ಚಿಕ್ಕ ಗುಡಿಸಲು ಕಾಣಿಸಿತು.ಅದೇಕೋ ಏನೋ ರಘುವಿಗೆ ಆ ಗುಡಿಸಿಲಿಗೆ ಹೋಗಿ ಅಲ್ಲಿ ವಾಸಿಸುವವರಿಗೆ ಕೊಲೆಯ ಬಗ್ಗೆ ಏನಾದರೂ ತಿಳಿದಿದೆಯೇ ಎಂದು ಕೇಳುವ ಮನಸ್ಸಾಯಿತು.ಹಾಗನ್ನಿಸಿದ್ದೆ ತಡ ರಘು ಆ ಗುಡಿಸಲಿನೆಡೆಗೆ ನಡೆಯತೊಡಗಿದನು.ಆ ಗುಡಿಸಲನ್ನು ಸಮೀಪಿಸಿದಾಗ ಆ ಗುಡಿಸಲಿನ ಪಕ್ಕ ಆಟವಾಡುತ್ತಿದ್ದ ಎರಡು ಪುಟಾಣಿ ಮಕ್ಕಳು ಕಾಣಿಸಿದವು. ಅವು ರಘುವನ್ನು ಪೋಲಿಸ್ ದಿರಿಸಿನಲ್ಲಿ ನೋಡಿದ ತಕ್ಷಣ ಹೆದರಿಕೊಂಡು,
"ಅವ್ವ......ಅವ್ವ......ಯಾರೋ ಪೋಲಿಸ್ ಗುಮ್ಮ ನಮನ್ನ ಹಿಡ್ಕೊಂಡು ಹೊಗಾಕೆ ಬರ್ತಾವ್ನೆ....ಬೇಗ ಬಾವ್ವ....." ಎಂದು ಕೂಗಿಕೊಂಡವು.ಬಹುಶ ಅವಕ್ಕೆ ರಘು ಗುಮ್ಮನ ಹಾಗೆ ಕಂಡಿರಬಹುದು.ಈ ಕೂಗನ್ನು ಕೇಳಿದ ಆ ಮಕ್ಕಳ ತಾಯಿ ಗುಡಿಸಲಿನಿಂದ ಹೊರಕ್ಕೆ ಬಂದು ರಘುವನ್ನು ನಿಂತ ನಿಲುವಿನಲ್ಲಿಯೇ ದಿಟ್ಟಿಸಿದಳು.ಅವಳಿಗೆ ಯಾರೋ ಒಬ್ಬ ಪೋಲಿಸ್ ಅಧಿಕಾರಿ ತನ್ನಂತಹ ಬಡವಳ ಮನೆಗೆ ಬಂದದ್ದು ತುಂಬಾ ಅಚ್ಚರಿಯನ್ನೂ ಮತ್ತು ಭಯವನ್ನೂ ಉಂಟುಮಾಡಿತ್ತು.ಆದರೂ ತುಂಬಾ ಪ್ರಯತ್ನಿಸಿ ಸ್ವಲ್ಪ ಧೈರ್ಯ ತಂದುಕೊಂಡು,
"ಯಾ....ಯಾ...ಯಾರ್.....ಸೋಮಿ ತಾವು.......ತ....ತ....ತಮಗೆ ಎನೋಗೊಬೇಕಿತ್ತು ?" ಎಂದು ಕಷ್ಟಪಟ್ಟು ಎರಡು ವಾಕ್ಯಗಳನ್ನಾಡಿದಳು.ಇದನ್ನು ಕೇಳಿದ ರಘು ಅವಳಿಗೆ,
"ಭಯ ಪಡಬೇಡಮ್ಮ....ನಿನ್ನಿಂದ ಸ್ವಲ್ಪ ಸಹಾಯವಾಗಬೇಕಿತ್ತು....." ಎಂದನು.ಇದನ್ನು ಕೇಳಿದ ಅವಳಿಗೆ ಸ್ವಲ್ಪ ಸಮಾಧಾನವಾಯಿತು.ತನ್ನಂತಹ ದರಿದ್ರಳನ್ನು ಇಷ್ಟು ಚೆನ್ನಾಗಿ ಮಾತನಾಡಿಸುತ್ತಿರುವ ರಘುವನ್ನು ಕಂಡು ಅವಳಿಗೆ ಅವನ ಮೇಲೆ ಕೊಂಚ ಗೌರವವೂ ಮತ್ತು ಅಭಿಮಾನವೂ ಉಕ್ಕಿ ಬಂದಿತು.ಅವಳು ರಘುವನ್ನು ಉದ್ದೇಶಿಸಿ,
"ಅದೇನ್ ಹೇಳಿ ಸೋಮಿ....ಏನ್ ಸಾಯಾ ಬೇಕಾದರೂ ಮಾಡ್ತೀನಿ.....ನಿಮ್ ಎಕ್ಕಡದಲ್ಲಿ ತೋರ್ಸಿದನ್ನ...ತಲೆ ಮ್ಯಾಗೆ ಇಟ್ಕೊಂಡು ಮಾಡ್ತೀನಿ..."ಎಂದಳು.ಆಗ ರಘು,
"ಏನಿಲ್ಲಮ್ಮ.....ಈಗೆ ಸ್ವಲ್ಪ ದಿನಗಳ ಹಿಂದೆ ಇಲ್ಲಿ ಕೊಲೆ ನಡೆದಿತ್ತಲ್ಲ...ಆ ದಿನ ಏನಾದರೂ ಅನುಮಾನ ಬರುವ ಘಟನೆಗಳು ನಡೆದಿದ್ದವೆ ? ಅಥವಾ ಕೊಲೆ ನಡೆದಿದ್ದನ್ನು ನೀವೇನಾದರೂ ನೋಡಿದ್ದೀರಾ ? ಆ ಕೊಲೆಯ ಬಗ್ಗೆ ನಿಮಗೆ ಏನಾದರೂ ಗೊತ್ತಿದೆಯಾ ?" ಎಂದು ಕೇಳಿದನು. ಅದಕ್ಕೆ ಆ ಹೆಂಗಸು,
"ಹಾಂ....ಸಾಯೇಬ್ರೆ....ಅದರ ಬಗ್ಗೆ ಕೆಳಿವ್ನಿ....ಆದ್ರೆ ಕೊಲೆ ಬಗ್ಗೆ ಏನೂ ಗೊತ್ತಿಲ್ಲ...ಸಾಯೇಬ್ರೆ.......ಆ ದಿನಾನೂ......ರಾತ್ರೆ ಸರೋತ್ತನಲ್ಲಿ ಯಾರೋ ಜೋರಾಗಿ ಕೂಗ್ಕೊಂಡಿದ್ದು....ಕೇಳ್ದೆ....ಆಮ್ಯಾಕೆ....ಯಾವೊಂನೋ ಕೂಗಿರ್ಬೇಕು ಅಂದ್ಕೊಂಡೆ....ಮುಂಜಾವು.....ಅದೇನೋ ಜನ ಸೇರ್ಕೊಂಡಿದ್ರು...ಪೋಲಿಸ್ನೋರು...ಬಂದಿದ್ದರು.....ಯಾರೋ....ಕೊಲೆಯಾಗವ್ರೆ ಅಂತ ಯಾರೋ ಹೇಳಿದ್ರು...ಅದ್ರ ಬಗ್ಗೆ ನಾ ತಲೇನೆ ಕೆದಸ್ಕಲಿಲ್ಲ....ಯಾರಿಗ್ಬೇಕೆ ಹೇಳಿ....ಈ ಎಲ್ಲದರ ಸಾವಾಸ...ನಂಗೆ ನಂ ಮಕ್ಕಳ ನೋಡೋದೇ ಸಾಕಾಗೈತೆ...ಹಾಂ....ಅವತ್ತು....ನಮ್ಮುಡಗನಿಗೆ...ಒಂದು ಶರ್ಟ್ ಸಿಕ್ಕೈತೆ...ಅದಕ್ಕೆ ಸ್ವಲ್ಪ ರಕ್ತ ಅಂಟಗೊಂಡಿತ್ತು....ಅದನ್ನ ಇಲ್ಲೇ ಮಡಿಕೆಯಲ್ಲಿ ಹಾಕಿ ಇಟ್ಟಿದ್ದೇನೆ..." ಎಂದು ಹೇಳಿದಳು.
ಆಗ ರಘುವಿಗೆ ಕೋಟಿ ರೂಪಾಯಿ ಸಿಕ್ಕಂತಾಗಿತ್ತು.ಅವನು ಬೇಗನೆ ಆ ಹೆಂಗಸಿನಿಂದ ಆ ಬಟ್ಟೆಯನ್ನು ಪಡೆದುಕೊಂಡು ಪರೀಕ್ಷಿಸಿದನು.ರಘು ವಿನಯನ ಶವವನ್ನು ನೋಡಲು ಹೋದಾಗ ಡಾಕ್ಟರ ಅವನಿಗೆ ವಿನಯನ ಬಟ್ಟೆಗಳನ್ನು ನೀಡಿದ್ದರು.ಆ ಬಟ್ಟೆಗಳಲ್ಲಿ ವಿನಯನ ಶರ್ಟ್ ಕೂಡ ಇತ್ತು. ಆದರೆ ಈ ಹೆಂಗಸಿನ ಹತ್ತಿರ ಇರುವ ಶರ್ಟ್ ಬೇರೆಯದಾಗಿತ್ತು.ಅದಕ್ಕೆ ಎದೆಯ ಭಾಗದಲ್ಲಿ ರಕ್ತದ ಕಲೆಗಳಿದ್ದವು.ಅಂದರೆ ಈ ಹೆಂಗಸಿನ ಹತ್ತಿರವಿದ್ದ ಶರ್ಟ್ ಕೊಲೆಗಾರನದು ಎಂಬುದು ಅತ್ಯಂತ ಸ್ಪಷ್ಟವಾಗಿ ರಘುವಿಗೆ ತಿಳಿದುಹೋಗಿತ್ತು.ಕೊಲೆಗಾರ ಎಷ್ಟೇ ಚಾಣಾಕ್ಷತನ ತೋರಿಸಿದರೂ ಒಂದು ಸಣ್ಣ ತಪ್ಪು ಅವನ ಸುಳುಹನ್ನು ತಿಳಿಸಿಕೊಟ್ಟಿತ್ತು.ವಿನಯನ ಕೊಲೆಯಾದ ನಂತರ ಕೊಲೆಗಾರ ರಕ್ತಮಯವಾದ ತನ್ನ ಶರ್ಟನ್ನು ಅಲ್ಲೇ ಎಲ್ಲೋ ಎಸೆದುಹೊಗಿದ್ದನು. ಆ ಒಂದು ಚಿಕ್ಕ ಸಾಕ್ಷ್ಯ ರಘುವಿಗೆ ಅತ್ಯಂತ ಮಹತ್ವದಾಗಿತ್ತು.ರಘು ಲಗುಬಗೆಯಿಂದ ಆ ಹೆಂಗಸಿಗೆ ಧನ್ಯವಾದಗಳನ್ನು ತಿಳಿಸಿ ಆಕೆಯ ಕೈಗೆ ನೂರು ರೂಪಾಯಿ ಕೊಟ್ಟು ಅಲ್ಲಿಂದ ಸ್ಟೇಷನ್ ಗೆ ಹೊರಟನು.ಆ ಹೆಂಗಸು ನೂರು ರೂಪಾಯಿ ದೊರೆತದ್ದಕಾಗಿ ತುಂಬಾ ಸಂತೋಷಗೊಂಡಿದ್ದಳು.

*******************************************************************
ಸಂಪದ ಓದುಗರೇ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಕಳೆದ ವಾರ ಊರಿಗೆ ಹೋಗಿದ್ದರಿಂದ ನನಗೆ ಮುಂದಿನ ಭಾಗವನ್ನು ಹಾಕುವದು ಆಗಿರಲಿಲ್ಲ.ಈಗ ಹಾಕಿದ್ದೇನೆ.ಇನ್ನು ಮುಂದೆ ಹೀಗೆ ಆಗುವದಿಲ್ಲ.
ಅಧ್ಯಾಯ- 4 - ಮುಗಿಯಿತು
ಅಧ್ಯಾಯ- 5 - ಮುಂದಿನ ವಾರ

ಅಧ್ಯಾಯ- 3- ಲಿಂಕ್

http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-3

Comments