ಶಂಕರಾನಂದ ಹೆಬ್ಬಾಳರ ಗಝಲ್ ಗಳ ಲೋಕ!
ಗಝಲ್-೧
ಜೀವನದ ನೌಕೆಯು ದೌರ್ಭಾಗ್ಯದಲಿ
ಸಾಗುತಲಿದೆ ದೇವರೆ|
ನೋವಿನೊಡಲ ಸುಮವದು ಕಿಚ್ಚಿನಲಿ
ಸುಡುತಲಿದೆ ದೇವರೆ||
ಕರಗಳು ಎನಗಿಲ್ಲ ಧಾಷ್ಟ್ರ್ಯದ
ವಿಧಿಯ ಆಟವಿದು|
ದುರದೃಷ್ಟ ಜೀವವು ಅಹರ್ನಿಶಿ
ಬಾಡುತಲಿದೆ ದೇವರೆ||
ಸತಿಸುತರ ಹಂಗಿಲ್ಲದೆ ಬದುಕಿನ
ಬಂಡಿಯ ಪಯಣವಿದು|
ಜತನವಾದ ಸೈಕಲಿನಲಿ ಆನಂದವು
ಸಿಗುತಲಿದೆ ದೇವರೆ||
ಉಪವಾಸ ಮಾಡದೆ ಬೇಡಿತಿನ್ನುವ
ಜಾಯಮಾನ ನನ್ನದಲ್ಲ|
ತಪಸಿ ವಿಶ್ವಾಮಿತ್ರನಂತಹ ಮನವ
ಕೇಳುತಲಿದೆ ದೇವರೆ||
ನಭದ ಕಾರ್ಮೋಡವು ಚಕ್ರದಂತೆ
ಕಂಗಳಿಗೆ ಆವರಿಸಿದೆ|
ಅಭಿನವನ ಪದ್ಯವು ಚರಮಗೀತೆಯ
ಹಾಡುತಲಿದೆ ದೇವರೆ||
*******
ಗಝಲ್-೨ (ತೀನ ಕಾಫಿಯಾ)
ಮೇಘರಾಜನ ಹೆಜ್ಜೆಯಲ್ಲಿ ಕುಣಿತ
ನೋಡುತಿರುವೆ ಗೆಳೆಯ|
ಒಲವಿನ ಭಾವದಲ್ಲಿ ನೋಡುತ
ಹಾಡುತಿರುವೆ ಗೆಳೆಯ||
ಓಡುತಿದೆ ಜೀವನದ ನೋವುಗಳು
ಅರಿವಿರದ ಬದುಕಲಿ|
ಮೇನೆಯ ಜೊತೆಯಲ್ಲಿ ಸಾಗುತ
ಓಡುತಿರುವೆ ಗೆಳೆಯ||
ಬಾನಿನಲಿ ಕಾರ್ಮೋಡ ಕತ್ತಲೆಯ
ಕವಿಯುತ್ತ ನಿಂತಿಹುದು|
ಸಂತಸದ ಚಣದಲ್ಲಿ ಬಾಗುತ
ನಗುತಿರುವೆ ಗೆಳೆಯ||
ನಭವನ್ನು ದಿಟ್ಟಿಸುತ ಚಿಣ್ಣರಲಿ
ತೋಷವದು ಉಕ್ಕುತಿದೆ|
ಮೋಡದ ಮರೆಯಲ್ಲಿ ಕಾಣುತ
ಹೇಳುತಿರುವೆ ಗೆಳೆಯ||
ಕಡಲಿನಂತೆ ಒಂದಾಗಿ ನಲಿವೆವು
ಅಭಿನವನಲ್ಲಿ ಇಂದು|
ಗರಿಕೆಯ ಹುಲ್ಲಿನಲ್ಲಿ ಕೂಗುತ
ಕಾಯುತಿರುವೆ ಗೆಳೆಯ||
-ಶಂಕರಾನಂದ ಹೆಬ್ಬಾಳ
