ಶಾಂತಿಯ ಧ್ವನಿ ಕ್ಷೀಣಿಸಲು ಬಿಡಬೇಡಿ...!
ಪ್ರಚೋದನೆ ಮತ್ತು ಉನ್ಮಾದ,
ಸಕಾರಾತ್ಮಕ ಮತ್ತು ನಕಾರಾತ್ಮಕ...
ಪ್ರಚೋದಿಸುತ್ತಲೇ ಇರುತ್ತೇನೆ,
ದ್ವೇಷದ ದಳ್ಳುರಿ ನಶಿಸಿ, ಪ್ರೀತಿಯ ಒರತೆ ಚಿಮ್ಮುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ…
ಪ್ರಚೋದಿಸುತ್ತಲೇ ಇರುತ್ತೇನೆ,
ಮೌಢ್ಯದ ವಿರುದ್ಧ ವೈಚಾರಿಕ ಪ್ರಜ್ಞೆ ಬೆಳಗುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಹಿಂಸೆಯ ವಿರುದ್ಧ ಅಹಿಂಸೆ ಜಯ ಸಾಧಿಸುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಸುಳ್ಳಿನ ವಿರುದ್ಧ ಸತ್ಯ ಗೆಲ್ಲುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ
ಮುಖವಾಡಗಳು ಬಯಲಾಗಿ ಸಹಜತೆ ಕಾಣುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಜಾತಿಯ ಅಸಮಾನತೆ ತೊಲಗುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಕುತಂತ್ರಿಗಳ ಮುಖವಾಡ ಬಯಲಾಗುವವರೆಗೂ,.......
ಪ್ರಚೋದಿಸುತ್ತಲೇ ಇರುತ್ತೇನೆ,
ಶೋಷಿತರ ದೌರ್ಜನ್ಯ ನಿಲ್ಲುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಜೀವನಮಟ್ಟ ಸುಧಾರಣೆಯ ಆಗುವವರೆಗೂ...
ಪ್ರಚೋದಿಸುತ್ತಲೇ ಇರುತ್ತೇನೆ,
ಯೋಚಿಸುವ ಮನಸ್ಸುಗಳು ವಿಶಾಲವಾಗುವವರೆಗೂ,....
ಪ್ರಚೋದಿಸುತ್ತಲೇ ಇರುತ್ತೇನೆ,
ಜನರ ಕಣ್ಣುಗಳಲ್ಲಿ ನೆಮ್ಮದಿಯ ಆಶಾಕಿರಣ ಕಾಣುವವರೆಗೂ,...
ಪ್ರಚೋದಿಸುತ್ತಲೇ ಇರುತ್ತೇನೆ,
ಹೃದಯಗಳು ಬೆಸೆಯುವವರೆಗೂ,...
ಪ್ರಚೋದಿಸುವುದು,
ಏನು ಯೋಚನೆ ಮಾಡಬೇಕೆಂದಲ್ಲ,
ಹೇಗೆ ಯೋಚನೆ ಮಾಡಬೇಕೆಂದು.....
ಅಂದರೆ, ಒಂದು ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಹೇಗೆ ನೋಡಬೇಕೆಂದು, ಅದರ ಒಳಿತು ಕೆಡುಕುಗಳ ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕೆಂದು, ಸ್ವಲ್ಪ ಆಸಕ್ತಿ, ಸ್ವಲ್ಪ ಸಹನೆ, ಸ್ವಲ್ಪ ಸಹಾನುಭೂತಿ, ಸ್ವಲ್ಪ ತಾಳ್ಮೆ, ಸ್ವಲ್ಪ ಬುದ್ಧಿವಂತಿಕೆ, ಸ್ವಲ್ಪ ಒಳ್ಳೆಯತನ, ಸ್ವಲ್ಪ ಪ್ರೀತಿ ವಿಶ್ವಾಸ ಕರುಣೆ, ಸ್ವಲ್ಪ ಅಧ್ಯಯನ, ಸ್ವಲ್ಪ ಸ್ಥಿರ ಪ್ರಜ್ಞತೆ, ಸ್ವಲ್ಪ ವಾಸ್ತವಿಕತೆ. ಹೀಗೆ ಎಲ್ಲಾ ಆಯಾಮಗಳ ಅವಲೋಕನ. ನಮ್ಮ ಸ್ವಾತಂತ್ರ್ಯ ಉಳಿಸಿಕೊಂಡು, ಇತರರ ಸ್ವಾತಂತ್ರ್ಯ ಗೌರವಿಸುತ್ತಾ...
ಪ್ರಚೋದಿಸುತ್ತಲೇ ಇರುತ್ತೇನೆ,
ಕೊನೆಯ ಉಸಿರೆಳೆಯುವವರೆಗೂ......
ಬರೆಯುವ ಕೈಗಳು ಸ್ತಬ್ಧವಾಗುವವರೆಗೂ...
ಪ್ರಚೋದನೆ ಸ್ವಾರ್ಥಕ್ಕಾಗಿಯಲ್ಲ,
ಸಮಾಜದ ಸುಧಾರಣೆಗಾಗಿ, ಹಾಗೆಯೇ...
ಉನ್ಮಾದಕ್ಕಿಂತ ಶಾಂತಿಯೇ ಬಲಶಾಲಿ....
ಉನ್ಮಾದಕ್ಕಿಂತ ಶಾಂತಿಯೇ ಶಕ್ತಿಶಾಲಿ....
ಉನ್ಮಾದಕ್ಕಿಂತ ಶಾಂತಿಯೇ ಹೆಚ್ಚು ಪರಿಪೂರ್ಣ...
ಉನ್ಮಾದಕ್ಕೆ ಆಯಸ್ಸು ಕಡಿಮೆ,
ಶಾಂತಿ ಚಿರಾಯು...
ಉನ್ಮಾದಕ್ಕೆ ಜನಪ್ರಿಯತೆ ಹೆಚ್ಚು,
ಶಾಂತಿಗೆ ಮೌಲ್ಯ ಹೆಚ್ಚು...
ಉನ್ಮಾದದ ಭಾಷೆ ಶಬ್ದ,
ಶಾಂತಿಯ ಭಾಷೆ ಮೌನ...
ಉನ್ಮಾದದಿಂದ ಮತಗಳನ್ನು ಪಡೆಯಬಹುದು,
ಶಾಂತಿಯಿಂದ ಮನಸ್ಸುಗಳನ್ನು ಪಡೆಯಬಹುದು...
ಉನ್ಮಾದ ಆ ಕ್ಷಣದ ಸತ್ಯ,
ಶಾಂತಿ ಶಾಶ್ವತ ಸತ್ಯ...
ಉನ್ಮಾದ ಕೃತಕ ಭಾವನೆಗಳನ್ನು ಉಂಟು ಮಾಡಿದರೆ,
ಶಾಂತಿ ಸ್ವಾಭಾವಿಕ ನೆಮ್ಮದಿಯನ್ನು ಕೊಡುತ್ತದೆ.
ಉನ್ಮಾದಕ್ಕೆ ಭಾವನೆಗಳೇ ಮೂಲ,
ಶಾಂತಿಗೆ ವಿವೇಚನೆಯೇ ಮೂಲ.
ಉನ್ಮಾದ ಮನಸ್ಸನ್ನು ಉದ್ರೇಕಗೊಳಿಸಿ ಅಪಾಯಕಾರಿ ಕೃತ್ಯಕ್ಕೆ ಪ್ರೇರೇಪಿಸುತ್ತದೆ,
ಶಾಂತಿ ಮನಸ್ಸನ್ನು ವಿಶ್ರಾಂತಗೊಳಿಸಿ ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹಿಸುತ್ತದೆ.
ಉನ್ಮಾದದಿಂದ ಸಾಧಿಸುವ ಯಶಸ್ಸು ಕ್ಷಣಿಕ,
ಶಾಂತಿಯಿಂದ ಸಾಧಿಸುವ ಯಶಸ್ಸು ದೀರ್ಘಕಾಲ ಉಳಿಯುತ್ತದೆ.
ಉನ್ಮಾದ ಅರೆಬೆಂದ ತಿಳಿವಳಿಕೆಯ ಲಕ್ಷಣ,
ಶಾಂತಿ ಪಕ್ವತೆಯ ಮನಸ್ಸಿನ ಪ್ರತಿಬಿಂಬ.
ಉನ್ಮಾದದ ದೇಶಭಕ್ತಿ ಅಲ್ಪಕಾಲದ್ದು,
ಶಾಂತಿಯ ದೇಶಭಕ್ತಿ ಶಾಶ್ವತವಾದದ್ದು..
ಗೆಳೆಯ ಗೆಳತಿಯರೆ, ಉನ್ಮಾದದ ಆವೇಶದಲ್ಲಿ, ಶಾಂತಿಯ ಧ್ವನಿ ಕ್ಷೀಣಿಸಲು ಬಿಡಬಾರದು. ರಾಜಕಾರಣಿಗಳಿಗೆ, ಮಾಧ್ಯದವರಿಗೆ ಉನ್ಮಾದವೇ ಬಂಡವಾಳ, ಸಾಮಾನ್ಯ ಜನರಾದ ನಮಗೆ ಶಾಂತಿಯೇ ಮೂಲಮಂತ್ರವಾಗಬೇಕು. ಉನ್ಮಾದದಲ್ಲಿ ಸತ್ಯ ಮತ್ತು ವಾಸ್ತವ ಕೊಚ್ಚಿ ಹೋಗಬಾರದು.ಆವೇಶದಲ್ಲಿರುವವರ ಮುಖವಾಡ ಕಳಚಲೇ ಬೇಕು. ಇದು ಅಪಾಯಕಾರಿಯಾಗಬಹುದು.ನಿಮ್ಮ ಮೇಲೆ ದೇಶ ವಿರೋಧದ ಆಪಾದನೆ ಬರಬಹುದು. ಆಗಲೂ ವಿಚಲಿತರಾಗದಿರಿ.
ದೇಶದ ರಕ್ಷಣೆ, ದೇಶದ ಹಿತಾಸಕ್ತಿ, ದೇಶದ ಅಭಿವೃದ್ಧಿ, ದೇಶದ ಮಾನ ಮರ್ಯಾದೆ, ದೇಶವಾಸಿಗಳ ಬದುಕು ಶಾಂತಿಯಲ್ಲಿ ಅಡಗಿದೆ. ಉನ್ಮಾದಿಗಳು ಜನರನ್ನು ದಾರಿ ತಪ್ಪಿಸಲು ಬಿಡಬಾರದು. ಅವರು ನಮ್ಮವರೆ, ಆದರೆ ವಿವೇಚನೆ ಕಳೆದುಕೊಂಡಿದ್ದಾರೆ. ಧೈರ್ಯವಾಗಿ ಹೇಳಿ, ನಾವು ಭಾರತಾಂಭೆಯ ಮಡಿಲ ಮಕ್ಕಳು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ