ಶಾಂತಿ ಸ್ಥಾಪನೆಗೆ ಅಡ್ಡಿಬೇಡ
ಮಧ್ಯಪ್ರಾಚ್ಯದ ಯುದ್ಧದ ಜ್ವಾಲಾಗ್ನಿಯು ಸಮರಭೂಮಿಯಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗಳಿಗೂ ಅಡ್ಡಿಯಾಗುತ್ತಿರುವುದು ದುರಂತ. ಹೆಜ್ಬೊಲ್ಲಾ ಗುರಿಯಾಗಿಸಿ ಲೆಬನಾನ್ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾಪಡೆಯ ಐವರು ತೀವ್ರವಾಗಿ ಗಾಯಗೊಂಡಿರುವುದಕ್ಕೆ ಜಾಗತಿಕವಾಗಿ ಭಾರೀ ವಿರೋಧ ವ್ಯಕ್ತವಾಗಿದೆ. ಭಾರತ ಸೇರಿದಂತೆ ವಿಶ್ವಸಂಸ್ಥೆಯ ೩೪ ಸದಸ್ಯ ರಾಷ್ಟ್ರಗಳು ಈ ಕುರಿತು ಜಂಟಿ ಪ್ರಕಟಣೆ ಹೊರಡಿಸಿ, ಖಂಡನಾ ಪತ್ರಕ್ಕೆ ಸಹಿ ಹಾಕಿರುವುದು ಯುದ್ಧ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅತ್ಯಂತ ದಿಟ್ಟ ಕ್ರಮ.
ಯಾವುದೇ ರಾಷ್ಟ್ರಗಳು ಯುದ್ಧದಲ್ಲಿ ನಿರತರಾದಾಗ, ಮಾನವೀಯ ಕಾಳಜಿಯಲ್ಲಿ ಯುದ್ಧಪೀಡಿತರನ್ನು ಶುಶ್ರೂಷೆ ಮಾಡುವ ಒಂದು ವರ್ಗ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಜಗತ್ತಿನ ವಿವಿಧೆಡೆ ನಡೆದ ಯುದ್ಧದ ಸಂದರ್ಭಗಳಲ್ಲಿ ಸಮರ ನೆಲದ ಸಂಕಷ್ಟಗಳಿಗೆ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ ಮಿಡಿಯುತ್ತಾ ಬಂದಿದೆ. ೧೯೪೮ರಿಂದ ಈ ೭೬ ವರ್ಷಗಳಲ್ಲಿ ವಿವಿಧ ರಾಷ್ಟ್ರಗಳಲ್ಲಿ ಒಟ್ಟು ೭೧ ಕ್ಷೇತ್ರ ಕಾರ್ಯಾಚರಣೆಗಳಲ್ಲಿ ಶಾಂತಿ ಸ್ಥಾಪಿಸಲು ಈ ಪಡೆ ಮಹತ್ತರವಾಗಿ ಕೆಲಸ ಮಾಡಿದೆ. ಅದರಲ್ಲೂ ೧೯೯೯ರಿಂದ ಇದರ ಶಾಂತಿ ಸ್ಥಾಪನೆಯ ಅಭಿಯಾನ ಶೇಕಡಾ ೯ ಪಟ್ಟು ಹೆಚ್ಚಳ ಕಂಡಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಯುದ್ಧದಲ್ಲಿ ಅತಿಹೆಚ್ಚು ಬಾಧಿತವಾಗಿರುವುದು ಇಸ್ರೇಲ್ ನ ನೆರೆರಾಷ್ಟ್ರಗಳು. ಉಗ್ರರ ನಿರ್ನಾಮ ಒಪ್ಪುವಂಥದ್ದೇ ಆದರೂ ನಾಗರಿಕರೂ ಸೇರಿದಂತೆ ೫೦ ಸಾವಿರಕ್ಕೂ ಹೆಚ್ಚಿನ ಜನಸಾಮಾನ್ಯರ ಪ್ರಾಣನಷ್ಟ ಒಪ್ಪುವಂಥದ್ದಲ್ಲ. ಏತನ್ಮಧ್ಯೆ, ಗಂಭೀರವಾಗಿ ಗಾಯಗೊಳ್ಳುವ ಜನರನ್ನು ಯಾರೂ ಚಿಕಿತ್ಸೆಗೊಳಪಡಿಸದಿದ್ದರೆ ಅದಕ್ಕಿಂತ ದೊಡ್ಡ ಕ್ರೌರ್ಯ ಬೇರೊಂದಿಲ್ಲ. ಶಾಂತಿ ಕಾರ್ಯಪಾಲನಾ ಪಡೆಯ ಸದಸ್ಯರು ಹಗಲಿರುಳೆನ್ನದೆ ಜೀವಹಾನಿ ತಗ್ಗಿಸುವ ಕಾರ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಇಲ್ಲಿ ಶಾಂತಿಪಾಲನಾ ಪಡೆಯ ಒಬ್ಬ ಸದಸ್ಯನಿಗೆ ಹಾನಿಯಾದರೂ ಅದು ಯುದ್ಧಸಂತ್ರಸ್ಥ ಹತ್ತಾರು ಜೀವಗಳಿಗೆ ಬಹುದೊಡ್ಡ ನಷ್ಟ ಎಂಬುದನ್ನು ಮರೆಯಬಾರದು.
ಇಸ್ರೇಲ್ ಯುದ್ಧ ಸಂಘರ್ಷವನ್ನು ಭಾರತ ಅತ್ಯಂತ ಸಮತೋಲನದಿಂದ ಅವಲೋಕಿಸುತ್ತಿದೆ. ಭಾರತಕ್ಕೆ ಇಸ್ರೇಲ್ ಎಷ್ಟು ಆಪ್ತನೋ, ಇರಾನ್ ಕೂಡಾ ಹತ್ತಿರದ ಗೆಳೆಯ. ಆದರೆ, ಇವರಲ್ಲಿ ಯಾರೇ ಅಮಾನುಷ ವರ್ತನೆ ತೋರಿದರೂ ಅದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವುದು ಭಾರತ ನಂಬಿರುವ ಅಲಿಪ್ತ ಧರ್ಮ ಕೂಡ. ಇಸ್ರೇಲ್ ನ ಯುದ್ಧೋನ್ಮಾದವನ್ನು ಮಾನವೀಯ ನೆಲೆಗಟ್ಟಿನಲ್ಲಿ ಖಂಡಿಸಿರುವುದು ಸ್ವಾಗತಾರ್ಹ.
ವಿಶ್ವಶಾಂತಿಪಾಲನಾ ಪಡೆಯಲ್ಲಿ ೮೧,೮೨೦ ಶಾಂತಿಪಾಲಕರಿದ್ದು, ಪ್ರಸ್ತುತ ಇವರು ಜಗತ್ತಿನ ೧೩ ವಿವಿಧ ಶಾಂತಿ ಸ್ಥಾಪನಾ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ೫,೫೦೦ ಮಂದಿ ಭಾರತೀಯ ಸದಸ್ಯರಿದ್ದಾರೆ. ವಿಶ್ವಸಂಸ್ಥೆ ಪ್ರಕಾರ, ಲೆಬನಾನ್ ನಲ್ಲಿ ೯೦೩ ಭಾರತೀಯರು ಯುದ್ಧಪೀಡಿತರ ಆರೈಕೆಯಲ್ಲಿ ತೊಡಗಿದ್ದಾರೆ. ೧೯೫೦ರ ಕೊರಿಯನ್ ಯುದ್ಧದಿಂದಲೂ ಭಾರತ ತನಗೆ ಸಂಬಂಧವೇ ಇಲ್ಲದ ನೆಲದಲ್ಲಿ ಶಾಂತಿಯನ್ನು ಸ್ಥಾಪಿಸಲು ಶ್ರಮಿಸುತ್ತಿದೆ. ಒಂದು ಜೀವದ ಬೆಲೆ ಏನೆನ್ನುವುದರ ಅರಿವಿರುವ ಕಾರಣಕ್ಕೇ ಭಾರತ ಇದನ್ನು ಗಟ್ಟಿ ದನಿಯಲ್ಲಿ ಖಂಡಿಸಿದೆ. ಯುದ್ಧನಿರತ ರಾಷ್ಟ್ರಗಳು ನಾಗರಿಕರು ಹಾಗೂ ಶಾಂತಿಪಾಲನಾ ಸದಸ್ಯರ ಜೀವಗಳನ್ನು ಗೌರವಿಸಲಿ. ಶಾಂತಿಸ್ಥಾಪನಾ ಕೆಲಸಗಳಿಗೆ ಅಡ್ಡಿಪಡಿಸುವುದು ಯುದ್ಧ ನೀತಿಯಲ್ಲ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೫-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ