ಶಾಕ್ಯ ಕುಲದ ಸಂಕೇತ ಆನೆಯಾಗಿತ್ತು...!
ಶಾಕ್ಯರ ಗಣರಾಜ್ಯಕ್ಕೆ ಬುದ್ಧನ ತಂದೆ ಶುದ್ಧೋಧನ ಗಣಪತಿ(ಅಧಿಪತಿ) ಆಗಿದ್ದ. ಶುದ್ಧೋಧನನ ನಂತರ, ಅವನ ಮಗ ಸಿದ್ಧಾರ್ಥ ಗೌತಮನು ಗಣಾಧಿಪತಿ ಆಗಬೇಕಿತ್ತು. ಅದರ ಸೂಚ್ಯವಾಗಿ ಶಾಕ್ಯ ಗಣದ ಜನರು ಸಿದ್ಧಾರ್ಥ ಗೌತಮನನ್ನು ಗಣಾಧಿಪತಿ, ಗಣಪತಿ ಈ ಹೆಸರಿನಲ್ಲಿ ಕರೆಯುತ್ತಿದ್ದರು. ಶಾಕ್ಯ ಗಣವು ಅಂದಿನ "ಕೋಸಲ" ಸಾಮ್ರಾಜ್ಯದ ಅಧೀನ ಗಣರಾಜ್ಯವಾಗಿತ್ತು. ಶಾಕ್ಯರ ಸಂಕೇತ ಆನೆಯನ್ನೇ ಕೋಸಲವೂ ತನ್ನ ಸಂಕೇತವನ್ನಾಗಿ ಮಾಡಿಕೊಂಡಿತು. ಕೋಸಲ ಸಾಮ್ರಾಜ್ಯವನ್ನು "ಮತಂಗ"ರು ಹಾಗೂ ಅಂದಿನ "ಕೋಸಲ"ಕ್ಕೆ ಸಮಕಾಲೀನವಾಗಿ ಅಸ್ತಿತ್ವದಲ್ಲಿದ್ದ "ಮಗಧ" ಸಾಮ್ರಾಜ್ಯಕ್ಕೆ "ನಾಗ"ರು ಅಧಿಪತಿಗಳು ಆಗಿದ್ದರು.
ಮಗಧಕ್ಕೆ "ನಾಗರಹಾವು" ಸಂಕೇತವಾಗಿತ್ತು. ಮತಂಗ ಹಾಗೂ ನಾಗರ ಮಧ್ಯೆ ವಿವಾಹ ಸಂಬಂಧವೂ ಏರ್ಪಟ್ಟಿತ್ತು. ಕೋಸಲದ ಪಸೇನದಿ ಹಾಗೂ ಮಗಧದ ಬಿಂಬಸಾರನು ಇವರಿಬ್ಬರೂ ತಮ್ಮ ಎರಡೂ ಸಾಮ್ರಾಜ್ಯ ಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ಸಂಬಂಧವನ್ನು ಬೆಳೆಸಿದ್ದರು. ಮಗಧವು ಕಾಲಾನಂತರ ಚಂದ್ರಗುಪ್ತ ಮೌರ್ಯನ ನೇತೃತ್ವದಲ್ಲಿ ಮೌರ್ಯ ಸಾಮ್ರಾಜ್ಯವಾಗಿ ಇಡೀ ಇಂಡಿಯಾದ ಬಹುಭಾಗವನ್ನು ತನ್ನ ಆಳ್ವಿಕೆಯ ತೆಕ್ಕೆಗೆ ಒಳಪಡಿಸಿತು. ಮೌರ್ಯ ಸಾಮ್ರಾಜ್ಯದ ಕೊನೆಯ ದೊರೆ ಬೃಹದ್ರತ ಮೌರ್ಯನ ಸೇನಾಧಿಪತಿಯಾಗಿ, ಆರ್ಯರ ಪುಷ್ಯಮಿತ್ರ ಶುಂಗನು ನೇಮಕವಾಗಿದ್ದನು. ಹೀಗೆಯೇ ಒಂದು ದಿನ ದುರ್ಬಲನಾದ ಬೃಹದ್ರತ ಮೌರ್ಯನನ್ನು, ಪುಷ್ಯಮಿತ್ರನು ಮೋಸದಿಂದ ಕೊಂದನು. ಮೌರ್ಯರ ಸಾಮ್ರಾಜ್ಯ ಪತನವಾಯಿತು.
ಹೀಗೆ ಪತನಗೊಂಡ ಮೌರ್ಯರ ಆಡಳಿತವನ್ನು ಪುಷ್ಯಮಿತ್ರಶುಂಗ ತನ್ನ ತೆಕ್ಕೆಗೆ ತಂದುಕೊಂಡನು. ಆರ್ಯರ ನೇತೃತ್ವದ ಶುಂಗ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿತು. ಶುಂಗರು ಆಡಳಿತಕ್ಕೆ ಬಂದ ತಕ್ಷಣವೇ ಅಂದು ಎಲ್ಲಾ ಕಡೆ ಇದ್ದ ಬೌದ್ಧ ವಿಹಾರಗಳನ್ನು, ಬೌದ್ಧ ಸ್ಮಾರಕಗಳನ್ನು ನಾಶಮಾಡಿದ್ದಲ್ಲದೆ ಬೌದ್ಧ ಬಿಕ್ಕುಗಳ ಮಾರಣಹೋಮ ನೆಡೆಸಲಾಯಿತು. ಇವೆಲ್ಲದರ ನಂತರ ಈ ದೇಶದ ಮೂಲನಿವಾಸಿಗಳ ಸಾಂಸ್ಕೃತಿಕ ಕುರುಹುಗಳನ್ನು ಆರ್ಯೀಕರಣ ಮಾಡಲಾಯಿತು.
ಆ ರೀತಿ ಆರ್ಯೀಕರಣ ಗೊಂಡವನೇ ಇಂದು ಇಂಡಿಯಾದಲ್ಲಿ ಆಚರಣೆ ಮಾಡುತ್ತಿರುವ "ಗಣಪತಿ ಪ್ರತಿಷ್ಠಾಪನೆ". ಗಣಪತಿಯ ಮುಖವು ಆನೆ. ಆನೆಯು ಪ್ರಾಚೀನ ಮತಂಗ(ಶಾಕ್ಯ ಗಣದ) ಸಾಮ್ರಾಜ್ಯದ ಸಂಕೇತ. ಗಣಪತಿ ಹೊಟ್ಟೆಗೆ ಸುತ್ತಿರುವ "ನಾಗರ ಹಾವು" ಅಂದಿನ ನಾಗ ಸಾಮ್ರಾಜ್ಯದ ಸಂಕೇತ. ಗಣಪತಿ ಬೊಪ್ಪ ಮೋರಿಯಾ! ಅನ್ನುವ ಘೋಷಣೆ "ಮೌರ್ಯ" ಸಾಮ್ರಾಜ್ಯದ ತದ್ಭವ ಪದ. ಪಾರ್ವತಿಯ ಮೈಮೇಲಿನ ಮಣ್ಣು ಕೂಡಾ, ಅಂದು ಬುದ್ಧ ತನ್ನ ಬೋಧಿನೆಗಳಲ್ಲಿ ಪ್ರತಿಪಾದಿಸುತ್ತಿದ್ದ ದೇಹದ ಅಂದರೆ ಮನಸ್ಸಿನ "ಹಿತವಲ್ಲದ"(ಅಕುಶಲ) ಭಾವನೆಗಳನ್ನು ಹೊರತೆಗೆಯುವುದು ಎಂದರ್ಥ.
ಬರಹ: 'ಸುಮಾ' ಸುಮಂಜಲಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ