ಶಿಕ್ಷಕರ ಮೌನ...!

ಶಿಕ್ಷಕರ ಮೌನ...!

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಪ್ರಸಾರವಾಗುತ್ತದೆ. ಸರಿ, ತಪ್ಪು ಏನೇ ಇರಲಿ ಯಾರದೇ ಇರಲಿ ಒಬ್ಬ ಶಿಕ್ಷಕರಿಗೆ ಜನ ಪ್ರತಿನಿಧಿಯೊಬ್ಬರು ಬಹಿರಂಗವಾಗಿ ಹೊಡೆಯುತ್ತಾರೆ ಎಂದರೆ ಅದು ಒಂದು ಗಂಭೀರ ಅಪರಾಧ.

ಈ ದೇಶದ ಕಾನೂನು, ಇಲ್ಲಿನ ಪೋಲೀಸರು, ಇಲ್ಲಿನ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಈಗಾಗಲೇ ಶಾಸಕರನ್ನು ಬಂಧಿಸಿ ಕ್ರಮಕೈಗೊಳ್ಳಬೇಕಾಗಿತ್ತು. ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸುದ್ದಿಗಳನ್ನು ಪ್ರಸಾರ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ, ‌ಖಾಸಗಿ, ಅನುದಾನಿತ ಶಿಕ್ಷಕರ ಸಂಘಗಳು ಇದಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗಿತ್ತು. ಇಂದು ಈ ಶಿಕ್ಷಕರಿಗೆ ಆದದ್ದು ನಾಳೆ ನಮಗೂ ಆಗಬಹುದು. ಈ ರೀತಿ ಯಾರೇ ಆಗಲಿ ದೈಹಿಕ ಹಲ್ಲೆ ಒಂದು ದೊಡ್ಡ ಕ್ರಿಮಿನಲ್ ಅಪರಾಧ ಮತ್ತು ಏಟು ತಿನ್ನುವ ವ್ಯಕ್ತಿಯ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುತ್ತದೆ ಎಂಬ ಪ್ರಜ್ಞೆಯಿಂದ  ವರ್ತಿಸಬೇಕಾಗಿತ್ತು.

ದುರಾದೃಷ್ಟವಶಾತ್ ಇಡೀ ವ್ಯವಸ್ಥೆ ಸಂವೇದನೆಯನ್ನೇ ಕಳೆದುಕೊಂಡಿದೆ. ಇದು ಭವಿಷ್ಯದ ದುಷ್ಪರಿಣಾಮಗಳ ಮುನ್ಸೂಚನೆ ಎನಿಸುತ್ತದೆ. ಶಿಕ್ಷಕರು ಹಾದಿ ತಪ್ಪುತ್ತಿದ್ದಾರೆ. ಟಿವಿ ಸುದ್ದಿ ಮಾಧ್ಯಮಗಳಲ್ಲಿ ಅನೇಕ ಮೂಡ ನಂಬಿಕೆಗಳು, ಶೈಕ್ಷಣಿಕ ಪಠ್ಯ ಕ್ರಮಕ್ಕೆ ವಿರುದ್ಧವಾದ ವಿಚಾರಗಳು ಪ್ರಸಾರ ವಾಗುತ್ತದೆ. ಆದರೆ ಇಲ್ಲಿಯವರೆಗೂ ಯಾವುದೇ ಶಿಕ್ಷಕರು ಅಥವಾ ಶಿಕ್ಷಕರ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ. ಶಿಕ್ಷಕರು ಸಂಬಳ ಪಡೆಯುವ ಸರ್ಕಾರದ ಸೇವಕರು ಎಂಬ ಜವಾಬ್ದಾರಿ ಮಾತ್ರ ನಿರ್ವಹಿಸುತ್ತಿದ್ದಾರೆ. ಅನ್ಯಾಯಗಳನ್ನು ಪ್ರತಿಭಟಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ.

ಒಂದು ಇಡೀ ಜನಾಂಗವನ್ನು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಶಿಕ್ಷಿತರನ್ನಾಗಿ ಮತ್ತು ನಾಗರಿಕರನ್ನಾಗಿ ಮಾಡಬೇಕಾದ ಶೈಕ್ಷಣಿಕ ಹಿನ್ನೆಲೆಯ ಶಿಕ್ಷಕರೇ ಅನ್ಯಾಯದ ವಿರುದ್ಧ ಕುರುಡಾದರೆ, ಹೊಟ್ಟೆ ಪಾಡಿಗಾಗಿ ದೌರ್ಜನ್ಯದ ವಿರುದ್ಧ ಮಾತನಾಡದೆ ಮೌನವಾದರೆ ಗತಿಯೇನು ? ಪ್ರಜಾಪ್ರಭುತ್ವ ನಿಧಾನವಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಮತ್ತೆ ಗುಲಾಮಗಿರಿಗೆ ನಾವುಗಳು ಜಾರುತ್ತಿದ್ದೇವೆ. ಮುಂದೆ ಹೆಚ್ಚು ಹೆಚ್ಚು ಶಿಕ್ಷಕರ ಮೇಲೆ, ವೈದ್ಯರ ಮೇಲೆ, ಪತ್ರಕರ್ತರ ಮೇಲೆ, ಕೊನೆಗೆ ಪೋಲೀಸರ ಮೇಲೆಯೂ ಹಲ್ಲೆಗಳಾದರೆ ಆಗಲೂ ವ್ಯವಸ್ಥೆಯ ಪ್ರತಿಕ್ರಿಯೆ ಹೀಗೆಯೇ ತಣ್ಣಗೆ ಇರುತ್ತದೆ. ಇನ್ನು ಜನ ಸಾಮಾನ್ಯರ ಪಾಡು ಕೇಳುವವರೇ ಇಲ್ಲ.

ದಯವಿಟ್ಟು, ಏಳಿ ಎದ್ದೇಳಿ ಎಚ್ಚರಗೊಳ್ಳಿ, ಕನಿಷ್ಠ ನಮ್ಮ ಕಾನೂನಾತ್ಮಕ ಹಕ್ಕುಗಳನ್ನಾದರೂ ಕಾಪಾಡಿಕೊಳ್ಳೋಣ. ಬಲಿಷ್ಠರು ಜಾತಿ ಧರ್ಮ ಹಣ ಅಧಿಕಾರದ ಬಲದಿಂದ ನಮ್ಮನ್ನು ತುಳಿಯುತ್ತಿದ್ದಾರೆ. ದುರ್ಬಲರ ಮೇಲೆ ಎಲ್ಲಾ ದಿಕ್ಕುಗಳಿಂದ ಬೇರೆ ಬೇರೆ ರೂಪದಲ್ಲಿ ನಿಯಂತ್ರಣ ಸಾಧಿಸುತ್ತಿದ್ದಾರೆ. ಈಗ ಧೈರ್ಯವಾಗಿ ಮುನ್ನುಗ್ಗುವ ಸಮಯ ಬಂದಿದೆ. ಬೆಲೆಗಳನ್ನು ಏರಿಸಿ, ಶಿಕ್ಷಣ ಆರೋಗ್ಯ ಮುಂತಾದ ಅತ್ಯವಶ್ಯಕಗಳನ್ನು ದುಬಾರಿಯಾಗಿಸಿ ಕೊಳ್ಳುಬಾಕ‌ ಸಂಸ್ಕೃತಿಯನ್ನು ಸೃಷ್ಟಿಸಿ ಎಷ್ಟೇ ಸಂಪಾದನೆ ಮಾಡಿದರೂ ಸಾಮಾನ್ಯ ಬದುಕು ಕಷ್ಟವಾಗುವಂತೆ ಮಾಡಿ ಜೀವನಪೂರ್ತಿ ದುಡಿಯುತ್ತಲೇ ಇರಬೇಕು. ಬೇರೆ ಯಾವುದೇ ಕ್ರಿಯಾತ್ಮಕ ಚಟುವಟಿಕೆಗಳಿಗೆ ಸಮಯವೂ ಇರಬಾರದು, ಏನನ್ನೂ ಯೋಚಿಸಲೂ‌ ಸಾಧ್ಯವಾಗದಂತ ಮನಸ್ಥಿತಿ ನಿರ್ಮಿಸಲಾಗುತ್ತಿದೆ. 

ನಮ್ಮ ಮಕ್ಕಳು ‌ಮತ್ತೆ ಗುಲಾಮಿ‌ ಸಂತತಿಗೆ ಬಲಿಯಾಗುವ ಮುನ್ನ ನಾವು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಕೇವಲ ಶಿಕ್ಷಕರು ಮಾತ್ರವಲ್ಲ ಸಮಾಜದ ಎಲ್ಲಾ ವರ್ಗದ ಜನ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಪ್ರಯತ್ನಿಸೋಣ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ