ಶಿಕ್ಷಣದ ಬಗ್ಗೆ ಎರಡು ಕವನಗಳು
ವಿದ್ಯಾಗಮ
ವಿದ್ಯಾಗಮದಲಿ ನಡೆದಿದೆ ತರಗತಿ
ವದ್ಯಾ ಭಾಷೆಯ ಬಿತ್ತುತಲಿ
ಸದ್ಯದಿ ನೂತನ ಯೋಜನೆ ಬಂದಿದೆ
ಮದ್ಯೆಯೆ ಪಾಠವ ಹೇಳುತಲಿ..||
ಅಕ್ಷರ ಕಲಿಸುತ ಮಕ್ಕಳ ನಲಿಸುತ
ದಕ್ಷರ ಪಡೆಯನು ಕುಣಿಸುತಲಿ
ರಕ್ಷೆಯ ನೀಡುತ ಹಳತನು ನೆನೆಪಿಸಿ
ಕಕ್ಷೆಲಿ ಕೂರಿಸಿ ಕಲಿಸುತಲಿ...
ಊರಿನ ನಡುವೆಯೆ ಚಾವಡಿ ಕೆಳಗೆಯೆ
ಕೂರಿಸಿ ವಿದ್ಯೆಯ ನೀಡುತಲಿ
ದೂರದಿಯಂತರ ಕಾಯ್ದಿಹೆ ಕಲಿಸುತ
ದಾರಿಲಿ ಮರದಡಿ ಮಾಡುತಲಿ...
ಮನೆಮನೆ ಬಾಗಿಲ ತಟ್ಟುತ ಕುಟ್ಟುತ
ಜನರಿಗೆ ಖಾತರಿ ಮಾಡುವರು
ಘನತೆಯ ಮೆರೆಯುತ ಗುರುಗಳು ಸುತ್ತುತ
ಸನಿಹವೆ ತೆರಳಿ ಹೋಗುವರು...
ಎಲ್ಲೆಂದರಲ್ಲಿ ಮಕ್ಕಳ ಕರೆಯುತ
ಬಲ್ಲರು ಶಿಷ್ಯರ ಬುದ್ದಿಯನು
ಗೆಲ್ಲಲು ಪಾಡನು ಪಟ್ಟಿಹೆ ಗುರುಗಳು
ಚಲ್ಲುತ ಮೆಲ್ಲುತ ಪಾಠವನು....
ಜಗಲಿಯು ಮರದಡಿ ಮಕ್ಕಳ ಕೂರಿಸಿ
ಮಗುವಿನ ಕಲಿಕೆಯ ನೋಡುತಲಿ
ಹಗುರದಿ ಲೆಕ್ಕವ ಬಿಡಿಸುತಲಿದ್ದರು
ನಗುವಿನ ಜೊತೆಯಲಿ ಬೆರೆಯುತಲಿ...
-ಅಭಿಜ್ಞಾ ಪಿ ಎಮ್ ಗೌಡ
************************
ಭಾಮಿನಿ ಷಟ್ಪದಿಯಲ್ಲಿ
*ವಿದ್ಯೆಯ ಆಗಮ...*
ಮನೆಯ ಮುಂದೆಯೆ ಶಾಲೆ ತೆರೆಯಿತು
ಮನದಿ ನೆಮ್ಮದಿ ಮತ್ತೆಯುದಿಸಿತು
ಹಣದ ತೊಂದರೆ ಕಳೆಯಿತೆಂದನು ಬಡವ ಹರುಷದಲಿ!|
ತನಗೆ ಕೊಟ್ಟಿಹ ಕೆಲಸ ಮಾಡುತ
ಮನನ ಮಾಡುತ ತಿರುಗ ಕಳುಹಿಸಿ
ತನಗೆ ಕಲಿಕೆಯು ಮುಗಿಯಿತೆಂದನು ಪೋರ ಸಂತಸದಿ||
ಜಂಗಮಕೆ ಶರಣು ಗುರು ಶಿಷ್ಯರು
ಮಂಗ ಮಾಡದೆ ಬಿಡರೆ ಮಕ್ಕಳು?
ಭಂಗವಾಗದೆ ಕಲಿಕೆ ಸಾಗಿಲಿ ದಿನವು ತಾಂತ್ರಿಕದಿ|
ತಂಗ ಬಾರದು ವಿದ್ಯೆ ತಲೆಯಲಿ
ನುಂಗಿ ನೋವನು ಪಾಠ ಸಾಗಿದೆ
ಹಂಗಿಸುವ ಮನವೆಂದು ಬಾರದು ಕಷ್ಟ ಕಾಲದಲಿ||
ಮೂರು ನಾಲ್ಕರ ಗುಂಪು ಮಾಡುತ
ಮಾರು ದೂರದಿಯೊಂಟಿ ಕೂರುತ
ಮೋರೆ ಮುಚ್ಚುವ ಕವಚ ಧರಿಸುತ ಕಲಿಕೆ ಸಾಗುವುದು|
ಭೂರಿ ಭೋಜನ ನಿತ್ಯ ಮನೆಯಲೆ
ಬೋರು ಹೊಡೆಸದೆ ಕಲಿಕೆ ನಡೆಯಲಿ
ಬಾರು ಕೋಲಿನ ಭಯವು ಕಾಡದು ಮುದ್ದು ಮಕ್ಕಳಿಗೆ||
ಮಳೆಯ ನಡುವೆಯು ಗಲ್ಲಿ ಸುತ್ತುತ
ಹಳೆಯ ಮನೆಗಳ ಕದವ ತಟ್ಟುತ
ಹಳಿದ ಹಾದಿಯ ಗೆಲಲು ಸಾಗಿಹ ಗುರುವು ಗುರಿಯೆಡೆಗೆ||
ಮಲಗಿ ನಿದ್ರಿಪ ಜಾಡ್ಯ ಕಳೆಯುತ
ಕಳೆದ ದಿನಗಳ ಮತ್ತೆ ಹಿಡಿಯುತ
ಬೆಳಗ ಬೇಕಿದೆ ವಿದ್ಯೆ ತುಂಬುತ ತುಂಟ ಮನಗಳಿಗೆ||
✍️ *ಜನಾರ್ದನ ದುರ್ಗ*