ಶಿಕ್ಷಣ ಜಾತ್ರೆಗೆ ಸಜ್ಜಾಗೋಣ

ಶಿಕ್ಷಣ ಜಾತ್ರೆಗೆ ಸಜ್ಜಾಗೋಣ

ಮಧ್ಯಾಹ್ನದ ಊಟ ಮುಗಿಸಿದ್ದೆ. "ಸಾರ್..... 'ಅಜೇಯ' ಅಳುತ್ತಿದ್ದಾನೆ...." ವಿದ್ಯಾರ್ಥಿಯೊಬ್ಬ ಓಡಿ ಬಂದು ಹೇಳಿದ. "ಯಾಕಪ್ಪ" ಅಂದೆ. "ಅವನ ಅಮ್ಮ ಬಂದು ಸ್ಕೂಲಲ್ಲಿ ಬಿಟ್ಟೋದ್ರು. ಮನೆಗೆ ಹೋಗ್ತೇನೆ ಅಂತ ಅಳ್ತಿದ್ದಾನೆ." ವಸತಿ ಶಾಲೆಗಳಲ್ಲಿ ಇದೆಲ್ಲ ಸಾಮಾನ್ಯ. ಪದೇ ಪದೇ ಮನೆ ನೆನಪಾಗುತ್ತದೆ. ಅಪ್ಪ ಅಮ್ಮ ನೆನಪಾಗ್ತಾರೆ. ಅಮ್ಮನ ಅಪ್ಪುಗೆ, ಅಪ್ಪನ ಪ್ರೀತಿ, ಅಜ್ಜಿಯ ಮಮತೆ, ಅಕ್ಕನ ಸಲುಗೆ, ತಮ್ಮನ ಬೆಸುಗೆ ಎಲ್ಲದರ ನೆನಪುಗಳು ಮೆರವಣಿಗೆ ಹೊರಡುತ್ತವೆ. ಒಬ್ಬ ಒಳ್ಳೆ ಗೆಳೆಯ ಸಿಕ್ಕಿದ ತಕ್ಷಣ ಎಲ್ಲವೂ ಮರೆತು ಹೋಗುತ್ತದೆ. "ಏಯ್..... ಯಾಕೊ ಸಪ್ಪಗಿದ್ದೀಯ..? ಯಾರಾದ್ರು ತಂಟೆ ಮಾಡಿದ್ರೇನೊ...?" ಎಂದು ಪ್ರೀತಿಯಿಂದ ಕೇಳುವ ಸಹಪಾಠಿ ಸಿಕ್ಕ ತಕ್ಷಣ ಮನೆ ಮಠ ಮರೆತೋಗಿ ಬಿಡುತ್ತದೆ. ಆದ್ರೆ 'ಅಜೇಯ' ನ ವಿಚಾರದಲ್ಲಿ ಮಾತ್ರ ಹಾಗಾಗಲಿಲ್ಲ. ಆತನಿಗೆ ಮನೆಯ ನೆನಪು ಪದೇ ಪದೇ ಕಾಡುತ್ತಿತ್ತು. ದಿನಾ ತಲೆ ನೋವು ಎಂದು ಅಳುತ್ತಾ ಕೂರುತ್ತಿದ್ದ. ಒಟ್ಟಾರೆ ಕಾಡುವ ಮನೆಯ ನೆನಪುಗಳು. ಸರಿ "ಅವನನ್ನು ಕರ್ರ್ಕೊಂಡು ಬಾ" ಅಂದೆ. ಅಳುತ್ತಲೇ ಬಂದು ನನ್ನೆದುರು ನಿಂತ. "ಹೇ ...ಅಜೇಯ ಯಾಕೋ ಅಳ್ತಾ ಇದ್ದೀಯ..? ನೋಡು ನಿನ್ನ ಪ್ರೆಂಡ್ಸ್ ಎಲ್ಲಾ ಎಷ್ಟು ಆರಾಮಕ್ಕಿದ್ದಾರೆ" ಅನ್ನುವಷ್ಟರಲ್ಲಿ. "ಸರ್ ತಲೆ ನೋವು" ಅಂದ. "ನೋಡು ತಲೆ ನೋವು ಅಂತ ಎಷ್ಟು ದಿನ ಅಳುತ್ತಾ ಕೂರ್ತೀಯಾ..?ನಿನ್ ತರ ತಲೆ ನೋವೂಂತ ಅದೆಷ್ಟು ಮಕ್ಕಳು ಅಳ್ತಾ ಕೂತಿದ್ದಾರೋ ಏನೋ.. ಅವರಿಗೆ ಔಷಧಿ ನೀಡಿ ಸಾಂತ್ವನ ಹೇಳೋ ಡಾಕ್ಟರ್ ನೀನಾಗ್ಬೇಕು. ಅದು ಬಿಟ್ಟು ಹೀಗೆ ಅಳ್ತಾ ಕೂತ್ರೆ ಹೇಗೆ..?" ಅಂದೆ. ಪಕ್ಕನೆ ಅಳು ನಿಲ್ಲಿಸಿ ದಿಟ್ಟಿಸಿ ನೋಡಿದ. "ನಿಂಗೆ ಡೇವಿಡ್ ಹಾರ್ಟ್ ಮೆನ್ ಗೊತ್ತಾ" ಅಂದೆ. ಕಣ್ಣರಳಿಸಿ "ಇಲ್ಲ" ಅಂದ. "ನೀನು ಅಳು ನಿಲ್ಲಿಸಿ ನಗು ಚೆಲ್ಲಿದರೆ ನಿನಗೊಂದು ಕಥೆಯಿದೆ" ಅಂದೆ. ಕಣ್ಣೊರಸಿ ಸಣ್ಣಗೆ ಮುಗುಳ್ನಕ್ಕ.

'ಡೇವಿಡ್ ಹಾರ್ಟ್ ಮೆನ್' ಮನುಕುಲದ ಮಹಾನ್ ಸ್ಫೂರ್ತಿ. ಜಗತ್ತಿನ ಮೊತ್ತ ಮೊದಲ ಅಂಧ ವೈದ್ಯ. ಕಣ್ಣಿಲ್ಲದಿದ್ದರೇನಂತೆ ನನ್ನ ಬಳಿ ಸಾವಿರ ಸಾವಿರ ಕನಸುಗಳಿವೆ ಎಂದು ಸಾರಿ ಸಾರಿ ಹೇಳಿದಾತ. ಅದಮ್ಯ ಉತ್ಸಾಹಿ. ಈತನ ಹೆಸರು ಕೇಳಿದರೆ ಸಾಕು ಎಂತಹ ಪರಮ ಆಲಸಿಯೂ ಸಹ ಮಧ್ಯ ರಾತ್ರಿಯಲ್ಲಿಯೂ ಎದ್ದು ಕೂತು ಮಹತ್ಸಾಧನೆಯೆಡೆಗೆ ತುಡಿಯುವಂತೆ ಮಾಡಬಲ್ಲ ಪ್ರೇರಣಾದಾಯಿ ವ್ಯಕ್ತಿತ್ವ. ಹುಟ್ಟಿದ್ದು ಜೂನ್ 25ರ 1949ರಲ್ಲಿ. 8ನೇ ವಯಸ್ಸಿನಲ್ಲಿ ಮೂರು ಬಾರಿ ಕಣ್ಣಿನ ಶಸ್ತ್ರ ಚಿಕೆತ್ಸೆಗೊಳಗಾದರೂ ಫಲಿತಾಂಶ ಮಾತ್ರ ಶೂನ್ಯ. ಬದುಕು ಕತ್ತಲಾದಾಗ ತತ್ತರಿಸಿ ಹೋದ ಡೇವಿಡ್. ಚಿಕ್ಕ ವಯಸ್ಸಿನಲ್ಲಿಯೇ ಗ್ಲುಕೋಮಾ ಕಾಯಿಲೆಯಿಂದ ಕಣ್ಣು ಕಳೆದುಕೊಂಡ ಈತನಿಗೆ ತಂದೆ ಪ್ರಡ್ ಹಾರ್ಟ್‌ಮೆನ್ ಬದುಕಿನ ಗುರುವಾಗುತ್ತಾರೆ. ಆತ ಓರ್ವ ಬ್ಯಾಂಕ್ ನೌಕರನಾಗಿದ್ದರು. "ಪ್ರಯತ್ನ ಪಟ್ಟು ನೋಡು. ನೀನಂದುಕೊಂಡಿದ್ದನ್ನು ಸಾಧಿಸ್ತೀಯಾ. ಪ್ರಯತ್ನ ಪಡದ ಹೊರತು ಯಾವುದು ಸಾಧ್ಯವಿಲ್ಲ ಮಗು" ಅಂದಿದ್ರು ಅಪ್ಪ. ಅಮ್ಮ ಪ್ರೀತಿಯ ಅಪ್ಪುಗೆಯನ್ನು ನೀಡಿ ಸಾಂತ್ವನ ನೀಡುತ್ತಾರೆ. "ಅಮ್ಮಾ ಕತ್ತಲೆ ಕಂಡಾಗ ನಂಗೆ ಭಯ ಆಗ್ತದೆ" ಅಂದಾಗ ಬಾಚಿ ತಬ್ಬಿ "ನಾನಿಲ್ಲೇ ಇದ್ದೇನೆ ಮಗು" ಅಂತಿದ್ರು ಅಮ್ಮ. ಅಕ್ಕ ನಿನ್ನ ಕೆಲಸವನ್ನು ನೀನೇ ಮಾಡ್ಕೋ, ಸೋಮಾರಿತನ ಬಿಡು ಅಂತ ಗದರಿಸಿದವಳು. ಹಾರ್ಟ್‌ಮೆನ್ ಕುರುಡು ಕಣ್ಣುಗಳಲ್ಲಿ ವೈದ್ಯನಾಗಬೇಕೆಂದು ಕನಸು ಕಂಡಾತ. ಕಠಿಣ ಸವಾಲುಗಳನ್ನು ಮೈ ಮೇಲೆ ಎಳೆದುಕೊಂಡರೆ ಅದೇನೊ ಖುಷಿ. ಅದನ್ನು ಗೆದ್ದಾಗ ಅದೇನೋ ಆನಂದ. ಒಂಬತ್ತು ಕಾಲೇಜುಗಳು ಕಣ್ಣು ಕಾಣೋದಿಲ್ಲ ಅನ್ನೋ ಕಾರಣಕ್ಕೆ ಇವರ ಅರ್ಜಿಯನ್ನು ತಿರಸ್ಕರಿಸಿದಾಗ ಅಂತಹ ಪರಮ ಉತ್ಸಾಹಿಯ ಕಣ್ಣಲ್ಲೂ ನೀರು ಜಿನುಗಿತ್ತು. ಕಟ್ಟಕಡೆಗೆ ಟೆಂಪಲ್ ಯುನಿರ್ವಸಿಟಿ ಆತನ ವೈದ್ಯ ಪದವಿಗೆ ಅವಕಾಶ ನೀಡಿದಾಗ ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಮುಂದೆ ನಡೆದದ್ದೆಲ್ಲಾ ಇತಿಹಾಸ. ಸೂಕ್ಷ್ಮ ದರ್ಶಕಕ್ಕೆ ಇಣುಕಲಾಗದೆ, ನೋಡಲಾಗದ್ದನ್ನು ನೋಡಲಾಗದೆ ಸ್ಪರ್ಶಿಸಿ ಅರ್ಥೈಸಿಕೊಳ್ಳುತ್ತಿದ್ದ ಡೇವಿಡ್. ದ್ರಾವಣಗಳಲ್ಲಿ ಅದ್ದಿದ್ದ ಅಂಗಾಂಗಗಳನ್ನು ಸ್ಪರ್ಶಿಸಿ ಕೈ ಸುಟ್ಟು ಹೋಗುತ್ತಿದ್ದರೂ ಗುರಿಯಿಂದ ವಿಮುಖರಾಗಲಿಲ್ಲ. ಮೊದಲನೇ ರೇಂಕ್ ಪಡೆದು ನಗೆ ಬೀರಿದ್ದ ಡೇವಿಡ್. ಈತನ ಪದವಿ ಪ್ರದಾನ ಸಮಾರಂಭಕ್ಕೆ ಸೇರಿದ್ದು ಬರೋಬರಿ ಹತ್ತು ಸಾವಿರ ಜನ. ಆತನ ಭಾಷಣಕ್ಕೆ ಜನ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದರು. ಕೆಲವರು ಗದ್ಗದಿತರಾಗಿ ಕಣ್ಣೀರಿಡುತ್ತಿದ್ದರು. "ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಂಗವಿಕಲರೆ. ಆದರೆ ಪ್ರಯತ್ನ ಪಟ್ಟರೆ ಯಾರೂ ಸಹ ಏನನ್ನೂ ಸಹ ಸಾಧಿಸಬಹುದು. ಪ್ರಯತ್ನ ಪಡದೆ ಏನನ್ನೂ ಸಾಧಿಸಲಾಗದು. ಅಪ್ಪ ಅಂದಿದ್ದು ಅಕ್ಷರಶಃ ಸತ್ಯ" ಅಂದಿದ್ದರು. ಡೇವಿಡ್‌ ಹಾರ್ಟ್‌ಮೆನ್ ಮನಸ್ಸಿಗೆ ಶಾಂತಿ ನೀಡುವ ಮನೋವೈದ್ಯನಾಗಿ ವೃತ್ತಿ ನಡೆಸುತ್ತಾರೆ. ರೋಗಿಗಳ ಬದುಕಿನ ತುಮುಲಗಳಿಗೆ ಸಾಂತ್ವನ ನೀಡುತ್ತಾರೆ. 1975 ರಲ್ಲಿ ತೆರೆಕಂಡ Journey from Darkness ಚಲನ ಚಿತ್ರಕ್ಕೆ ಈತನೇ ಪ್ರೇರಣೆ. ಕಣ್ಣು ಕಾಣೋದಿಲ್ಲ ಅಂತ ಸುಮ್ಮನೆ ಕೂತಿದ್ದರೆ ಇಂದು ಯಾರದ್ದೋ ಆಸರೆಯಲ್ಲಿ ಬದುಕಬೇಕಾಗಿತ್ತು. ಸಾಧಿಸ್ತೇನೆ ಅಂತ ಹೊರಟವನ ಕಾಲ ಬುಡಕ್ಕೆ ಬಂದು ಬೀಳ್ತದೆ ಯಶಸ್ಸು ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಇನ್ಯಾವುದಿದೆ ?

ಅಜೇಯ ಮುಂದೆಂದೂ ಅಳಲಿಲ್ಲ. ಆತನಿಗೆ ತಲೆನೋವೂ ಕಾಡಲಿಲ್ಲ. "ಮುಂದೆ ಓದಿ ಏನಾಗ್ಬೇಕು ಅಂದು ಕೊಂಡಿದ್ದೀಯೋ?" ಅಂದ್ರೆ "ಡಾಕ್ಟರ್ " ಅನ್ನುತ್ತಾ ಹುಬ್ಬು ಹಾರಿಸ್ತಾನೆ !

ಹಾಗೆಯೇ ನಡೆಯುವ ಹಾದಿಯನ್ನೇ ಬದಲಿಸ ಬಲ್ಲ ಇನ್ನೋರ್ವ ಮಹಾನ್ ಸಾಧಕಿಯ ಹೆಸರು ಹೆಲೆನ್ ಕೆಲ್ಲರ್.  2006ರ ಪಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ 'ದಿಲ್ ವಾಲೆ ದುಲ್ಹ್ ನಿಯಾ ಲೇಜಾಯೇಂಗೆ' ಚಿತ್ರದ ದಾಖಲೆಗಳನ್ನು ಮುರಿದು ಬರೋಬರಿ 11 ಪ್ರಶಸ್ತಿಯನ್ನು ಬಾಚಿಕೊಂಡ ಚಿತ್ರ "ಬ್ಲ್ಯಾಕ್". ರಾಣಿ ಮುಖರ್ಜಿ ಹಾಗೂ ಅಮಿತಾಬ್ ಬಚ್ಚನ್ ಜಿದ್ದಿಗೆ ಬಿದ್ದವರಂತೆ ನಟಿಸಿ ಉತ್ತಮ ನಟಿ, ನಟ ಪ್ರಶಸ್ತಿಗೆ ಭಾಜನರಾಗುತ್ತಾರೆ. ಅಷ್ಟಲ್ಲದೆ ಉತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯೂ ಈ ಚಿತ್ರದ ಪಾಲಾಗುತ್ತದೆ. ಈ ಚಿತ್ರಕ್ಕೆ ಪ್ರೇರಣೆ ಹೆಲೆನ್ ಕೆಲ್ಲರ್‍ ಎಂಬ ಕಣ್ಣು ಕಾಣದ ಹಾಗೂ ಕಿವಿಕೇಳಿಸದ ದಿವ್ಯಾಂಗ ಸಾಧಕಿಯ ಬದುಕು. ಮಾರಕ ರೋಗದಿಂದ ಕಣ್ಣು ಹಾಗೂ ಕಿವಿ ಕಳೆದುಕೊಂಡ ಈಕೆ ಜಗತ್ಪ್ರಸಿದ್ಧ ಸಾಹಿತಿಯಾಗಿ, ಹೆಣ್ಣುಮಕ್ಕಳ ಹಾಗೂ ಕಾರ್ಮಿಕರ ಹಕ್ಕಿನ ಹೋರಾಟಗಾರ್ತಿಯಾಗಿ ರೂಪು ಗೊಳ್ಳುವುದರಲ್ಲಿ ಈಕೆ ಶಿಕ್ಷಕಿ ಆನ್ ಸುಲಿವನ್ ರದ್ದು ಮಹತ್ತರ ಪಾತ್ರ. ಈಕೆ ಹೆಲೆನ್ ಕೆಲ್ಲರ್‍ ನ ಕತ್ತಲ ಬದುಕಿಗೆ ಬೆಳಕಿನ ಕೋಲ್ಮಿಂಚಾಗಿ ಬಂದವಳು. ಒಂದು ಕೈಗೆ ತಂಪಾದ ನೀರು ಸುರಿಯುತ್ತಾ ಇನ್ನೊಂದು ಕೈಯಲ್ಲಿ ಹೆಲೆನ್ ಕೈಯಲ್ಲಿ W-A-T- E-R ಅಂತ ಬರೆಯುತ್ತಲೆ ಅಕ್ಷರ ಕಲಿಸುತ್ತಾರೆ. ತುಟಿಗಳ ಮೇಲೆ ಬೆರಳಿಟ್ಟು ಅದರ ಚಲನೆಯಲ್ಲಿ ಅಕ್ಷರ ಕಲಿಸುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಸಾಮಾನ್ಯ ಮಕ್ಕಳಿಗೆ ಕಲಿಸುವುದರಲ್ಲಿ ಹೈರಾಣಾಗಿ ಹೋಗುವಲ್ಲಿ, ಕಣ್ಣು ಕಾಣಿಸದ, ಕಿವಿ ಕೇಳಿಸದವಳಿಗೆ ಈಕೆ ಕಲಿಸಲು ಹೆಣಗಾಡಿದ ಪರಿ ಅದ್ಯಾವ ಬಗೆಯದ್ದಿರಬಹುದು ಎಂದು ಯೋಚಿಸುವುದೇ ಕಷ್ಟ. ಆಸ್ತಿ , ಅಂತಸ್ತು, ಅಧಿಕಾರ ಎಲ್ಲಾ ಇದ್ದು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳೆಡೆಗೆ ದಿವ್ಯ ಕುರುಡು ಪ್ರದರ್ಶಿಸುವವರ ಮಧ್ಯೆ ಹೆಲೆನ್, ಕಣ್ಣು ಕಾಣದವರ ಅದೆಷ್ಟೋ ಜನರ ಬದುಕಿಗೆ ಬೆಳಕಾದವಳು. ಕಿವಿ ಕೇಳಿಸದ ಕಿವುಡರ ಪಾಲಿಗೆ ಧ್ವನಿಯಾಗುತ್ತಾಳೆ. 45 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಿ ಅಂಧರ, ಕಿವುಡರ, ಕಾರ್ಮಿಕರ, ಹೆಣ್ಣುಮಕ್ಕಳ ಒಳಿತಿಗಾಗಿ ಶ್ರಮಿಸುತ್ತಾಳೆ. ಹೆಲೆನ್ ಕೆಲ್ಲರ್‍ ಫೌಂಡೇಶನ್ ಮುಖಾಂತರ ಸಮಾಜ ಸೇವೆಗಾಗಿ ಬದುಕು ಮುಡಿಪಿಡುತ್ತಾರೆ. 21ನೇ ವಯಸ್ಸಿನಲ್ಲಿ ತನ್ನ ಆತ್ಮಕಥೆಯನ್ನು ಬರೆದು ಮುಗಿಸುತ್ತಾರೆ. ತನ್ನ ಪ್ರೇರಣದಾಯಿ ಭಾಷಣದ ಮೂಲಕ ಸ್ಫೂರ್ತಿಯಾಗುತ್ತಾರೆ. ಈಕೆಯನ್ನು ಸುಶಿಕ್ಷಿತಳನ್ನಾಗಿ ಮಾಡಲು ಹೆಣಗಾಡಿದ ಶಿಕ್ಷಕಿ ಹಾಗೂ ಹೆಲೆನ್ ಳ ಬದುಕನ್ನಾಧರಿಸಿದ ಚಿತ್ರವೇ 1962ರ ಜುಲೈ 28 ರಂದು ತೆರೆಕಂಡ The Miracle Worker.

ದೂರದ ಮಾತೇಕೆ ನಮ್ಮದೇ ರಾಜ್ಯದ ಬೆಳಗಾವಿಯ ಮಾನವ ಕಂಪ್ಯೂಟರ್ ಎಂದೇ ಪ್ರಖ್ಯಾತವಾದ ಬಸವರಾಜ ಅಥಣಿಯವರ ಮೇರು ಸಾಧನೆ ನಮ್ಮ ಕಣ್ಣ ಮುಂದಿದೆ. ದೃಷ್ಟಿ ದಿವ್ಯಾಂಗರಾದ ಇವರು ಎಷ್ಟೇ ಅಂಕೆಯ ಯಾವುದೇ ಗುಣಿತ, ಸಂಕಲನಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸ ಬಲ್ಲರು. ಸಾವಿರಾರು ದೂರವಾಣಿ ಸಂಖ್ಯೆಗಳನ್ನು ನೆನಪಿಟ್ಟು ಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕೆಂದಾಗ ಇವರಿಗೆ ಸಿಕ್ಕಿದ್ದು ಬರೀ ಐದು ನಿಮಿಷ ಕಾಲಾವಕಾಶ. ಬಸವರಾಜರನ್ನು ಭೇಟಿಯಾದ ಪ್ರಧಾನಿಯವರು ಅವರ ಜ್ಞಾನಕ್ಕೆ, ನೆನಪು ಶಕ್ತಿಗೆ ದಂಗಾಗಿ ಹೋಗುತ್ತಾರೆ. ಐದು ನಿಮಿಷ ಕಾಲಾವಕಾಶ ನೀಡಿದವರು ತನ್ನ ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೂ ಅವರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆಯುತ್ತಾರೆ. ಅಭಿನಂದಿಸುತ್ತಾರೆ. ಇಂದು ಬಸವರಾಜುರವರು ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಪ್ರಯತ್ನದಲ್ಲಿ ಶಾಲೆ ಶಾಲೆಗಳಿಗೆ ಎಡತಾಕುತ್ತಿದ್ದಾರೆ. ತನ್ನ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಏಕಲವ್ಯನ ಕಥೆಯನ್ನು ನೀವೆಲ್ಲ ಕೇಳಿರುತ್ತೀರಿ. ಗುರುವಿಲ್ಲದೆ ಗುರಿಯ ಸಾಧನೆ ಮಾಡಿದವನು. ಅಪ್ರತಿಮ ಬಿಲ್ವಿದ್ಯಾಗಾರನಾಗಿ ಗುರುವನ್ನೇ ಅವಕ್ಕಾಗಿಸಿದವನು. ಗುರಿ, ಹಠ, ಸಾಧನೆಯ ಹಂಬಲವಿದ್ದಲ್ಲಿ ಏನನ್ನೂ ಸಾಧಿಸಬಹುದು. ಸಾಮಾನ್ಯ ಮದ್ಯಮ ವರ್ಗದ ಕುಟುಂಬದ ಶ್ರೀ ಸಾಮಾನ್ಯರೊಬ್ಬರು ಮಹಾನ್ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಜನಾನುರಾಗಿಯಾದದ್ದು ನಮ್ಮ ಕಣ್ಣ ಮುಂದಿದೆ. ನಮ್ಮ ನಿಮ್ಮ ನಡುವೆಯೇ ಅದೆಷ್ಟೊ ಸಾಧಕರು ಉನ್ನತ ಪದವಿಗೇರಿ ಜನಸಾಮಾನ್ಯರ ಕಣ್ಣೀರೊರೆಸುವ ಕಾರ್ಯದಲ್ಲಿ, ರಾಷ್ಟ್ರ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದು ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಬನ್ನಿ ಇನ್ನೇಕೆ ತಡ. ಶಿಕ್ಷಣ ಜಾತ್ರೆಗೆ ಅದ್ಧೂರಿಯಾಗಿ ಸಜ್ಜಾಗೋಣ. ದಿನದ ಕ್ಷಣ ಕ್ಷಣಗಳನ್ನು ಪರೀಕ್ಷಾ ತಯಾರಿಗಾಗಿ ಬಳಸಿಕೊಳ್ಳೋಣ. ಗುರಿಯೆಡೆಗೆ ನಡೆದು ಬಿಡೋಣ. ನಿಮಗೆಲ್ಲರಿಗು ಶುಭವಾಗಲಿ.

-ಜಯಪ್ರಕಾಶ್ ಪುಣಚ, ಉಪ್ಪಿನಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ