ಶಿವಕುಮಾರ್ ಶರ್ಮಾ ಎಂಬ ಸಂತೂರ್ ಮಾಂತ್ರಿಕನ ನಿರ್ಗಮನ

ಶಿವಕುಮಾರ್ ಶರ್ಮಾ ಎಂಬ ಸಂತೂರ್ ಮಾಂತ್ರಿಕನ ನಿರ್ಗಮನ

ನೀವು ೯೦ರ ದಶಕದಲ್ಲಿ ದೂರದರ್ಶನವನ್ನು ವೀಕ್ಷಿಸುತ್ತಿದ್ದೀರಾದರೆ ಹಲವಾರು ಖ್ಯಾತ ಕಲಾವಿದರು ಸೇರಿ ಸಂಯೋಜಿಸಲಾದ ‘ಮಿಲೇ ಸುರ್ ಮೇರಾ ತುಮಾರಾ’ ಎಂಬ ಹಾಡಿನ ಪುಟ್ಟ ವಿಡಿಯೋವನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಈ ಚಿತ್ರದಲ್ಲಿ ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ನಿಂದ ಹಿಡಿದು, ಅಮಿತಾಬ್ ಬಚ್ಚನ್, ಪಿ ಟಿ ಉಷಾ, ಭೀಮಸೇನ ಜೋಶಿ, ಬಾಲಮುರಳಿ ಕೃಷ್ಣನ್, ರೇಖಾ, ಹೇಮಾ ಮಾಲಿನಿ ಮೊದಲಾದ ಹಲವಾರು ಖ್ಯಾತನಾಮರು ಕಾಣಿಸಿಕೊಂಡಿದ್ದರು. ಇದು ದಶಕಗಳ ಕಾಲ ಬಹುತೇಕರ ಮನಃ ಪಟಲದಲ್ಲಿ ಅಚ್ಚಳಿಯದೇ ಉಳಿದಿತ್ತು. ಈಗಲೂ ಈ ಹಾಡು ಅಪರೂಪಕ್ಕೆ ಕೇಳಿಬಂದಾಗ ಏನೋ ರೋಮಾಂಚನ. ಇಂತಹ ದೃಶ್ಯಮಯ ಹಾಡಿಗೆ ಪ್ರಮುಖ ಸಂಯೋಜಕರಾಗಿದ್ದರು ‘ಸಂತೂರ್' ಮಾಂತ್ರಿಕ ಶಿವಕುಮಾರ್ ಶರ್ಮಾ ಇವರು. ಇವರು ಇಂದು ನಮ್ಮೊಂದಿಗಿಲ್ಲ. ಆ ನೆನಪಿಗೆ ಈ ಲೇಖನ.

ಶಿವಕುಮಾರ್ ಶರ್ಮಾ ಇವರು ಜನಿಸಿದ್ದು ಜನವರಿ ೧೩, ೧೯೩೮ರಲ್ಲಿ ಜಮ್ಮುವಿನಲ್ಲಿ. ಈ ಕಾರಣದಿಂದಲೇ ಬಹುಷಃ ಇವರು ಕಾಶ್ಮೀರದಲ್ಲಷ್ಟೇ ಬಹುಖ್ಯಾತಿ ಪಡೆದಿದ್ದ ಸಂತೂರ್ ಎಂಬ ತಂತಿ ವಾದ್ಯವನ್ನು ದೇಶಾದ್ಯಂತ ಖ್ಯಾತರಾಗುವಂತೆ ಮಾಡಿದರು. ಸಂತೂರ್ ವಾದನವೆಂದರೆ ಶಿವಕುಮಾರ್ ಶರ್ಮ ಅವರದ್ದು ಎಂದೇ ಪ್ರಚಲಿತವಾಗಿತ್ತು. ಈ ವಾದ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಳಿಸಿದ ಖ್ಯಾತಿ ಶಿವಕುಮಾರ್ ಶರ್ಮಾ ಇವರದ್ದು. ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ, ಬಾಲ್ಯದಲ್ಲಿ ಶಿವಕುಮಾರ್ ಶರ್ಮಾ ಅವರನ್ನು ಆಕರ್ಷಿಸಿದ್ದು ಸಂತೂರ್ ವಾದ್ಯ ಅಲ್ಲ, ಬದಲಾಗಿ ತಬಲಾ. ಬಾಲ್ಯದಲ್ಲಿ ತಬಲಾ ನುಡಿಸುತ್ತಿದ್ದ ಶರ್ಮಾ ಅವರು, ರಾಷ್ಟ್ರಮಟ್ಟದಲ್ಲಿ ತಬಲಾ ಸ್ಪರ್ಧೆಯಲ್ಲಿ (ಶಾಲಾ ವಿಭಾಗ) ಮೊದಲ ಸ್ಥಾನವನ್ನೂ ಪಡೆದಿದ್ದರು. ಆಗ ಅವರಿಗೆ ಕೇವಲ ೧೨ ವರ್ಷ. ಆದರೆ ನಂತರದ ದಿನಗಳಲ್ಲಿ ಕ್ರಮೇಣ ಶರ್ಮಾ ಅವರು ಸಂತೂರ್ ವಾದನದತ್ತ ಆಕರ್ಷಿತರಾದರು.

ಇವರ ತಂದೆ ಉಮಾದತ್ತ ಶರ್ಮಾ. ಇವರೂ ಉತ್ತಮ ಗಾಯಕರು ಹಾಗೂ ಸಂಗೀತಗಾರರಾಗಿದ್ದರು. ಇವರದ್ದು ಬನಾರಸ್ ಘರಾನಾ. ಶಿವಕುಮಾರ್ ಶರ್ಮಾ ಅವರು ತಮ್ಮ ಬಾಲ್ಯದ ತರಬೇತಿಯನ್ನು ತಮ್ಮ ತಂದೆಯವರಿಂದಲೇ ಪಡೆದುಕೊಂಡರು. ಇವರು ಪರಿಣತಿಯನ್ನು ಪಡೆದಿದ್ದ ತಬಲಾ ವಾದನವನ್ನು ಬಿಟ್ಟು ಸಂತೂರ್ ವಾದ್ಯವನ್ನು ಕಲಿಯಲು ಹೊರಟಾಗ ಬಹುತೇಕರು ಇವರನ್ನು ಹೀಗಳೆದರೂ ಇವರ ತಂದೆ ಇವರಿಗೆ ಬೆಂಬಲ ನೀಡಿದರು. ಈ ಕಾರಣದಿಂದಲೇ ಶಿವಕುಮಾರರು ಸಂತೂರ್ ವಾದ್ಯದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದರು. ನೂರು ತಂತಿಗಳಿದ್ದ ಈ ವಾದ್ಯದ ಹಲವಾರು ತಂತಿಗಳನ್ನು ಕಡಿತಗೊಳಿಸಿದರು. ಈ ಸಂತೂರ್ ವಾದ್ಯವನ್ನು ಶತತಂತಿ ವೀಣೆ (ನೂರು ತಂತಿಗಳ ವೀಣೆ) ಎಂದೂ ಕರೆಯಲಾಗುತ್ತಿತ್ತು.

ಸಂತೂರ್ ವಾದನದಲ್ಲಿ ಪರಿಣತಿಯನ್ನು ಪಡೆದು ತಮ್ಮ ಹದಿಮೂರನೇಯ ವಯಸ್ಸಿನಲ್ಲಿಯೇ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದರು. ಈ ಕಾರ್ಯಕ್ರಮದ ಬಳಿಕ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಜನರು ಅಪರೂಪವಾಗಿ ಕಂಡಿದ್ದ ಸಂತೂರ್ ಎಂಬ ವಾದ್ಯವನ್ನು ಬಹಳ ಸೊಗಸಾಗಿ ಅದರಲ್ಲೂ ಶಾಸ್ತ್ರೀಯವಾಗಿ ನುಡಿಸುತ್ತಿದ್ದ ಶರ್ಮಾ ಅವರು ಬಹಳ ಬೇಗನೇ ಖ್ಯಾತಿಯನ್ನು ಪಡೆದರು.

ಇವರು ಹಲವಾರು ಸಿನೆಮಾಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಹಿಂದಿ ಚಲನ ಚಿತ್ರಗಳಾದ ಡರ್, ಸಿಲ್ ಸಿಲಾ, ಚಾಂದನಿ, ಲಮ್ಹೇ, ಝನಕ್ ಝನಕ್ ಪಾಯಲ್ ಬಾಜೇ ಮೊದಲಾದುವುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಶರ್ಮಾ ಅವರ ಹಲವಾರು ಆಲ್ಬಮ್ ಸಂಗೀತಗಳನ್ನೂ ಹೊರತಂದಿದ್ದಾರೆ. ಅವುಗಳಲ್ಲಿ ‘ಕಾಲ್ ಆಫ್ ದಿ ವ್ಯಾಲಿ' ಸಂಪ್ರದಾಯ್, ಮ್ಯೂಜಿಕ್ ಆಫ್ ದಿ ಮೌಂಟೆನ್, ಮೇಘ ಮಲ್ಹಾರ್ ಮೊದಲಾದುವುಗಳು ಖ್ಯಾತಿವೆತ್ತವುಗಳು. ಇವರು ಶಾಸ್ತ್ರೀಯ ಸಂಗೀತ ಮತ್ತು ಸಿನೆಮಾ ಸಂಗೀತ ಎರಡರಲ್ಲೂ ಬಹಳ ಆಸಕ್ತಿಯನ್ನು ಹಾಗೂ ಪರಿಣತಿಯನ್ನು ಹೊಂದಿದ್ದರು.

ಶಿವಕುಮಾರ ಶರ್ಮಾ ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಹಲವು. ಇವರಿಗೆ ಕೇಂದ್ರ ಸರಕಾರದಿಂದ ಪದ್ಮಶ್ರೀ, ಪದ್ಮಭೂಷಣ ಗೌರವ ಲಭಿಸಿದೆ. ಸಂಗೀತ ನಾಟಕ ಅಕಾಡೆಮಿಯ ಗೌರವ ಪುರಸ್ಕಾರವೂ ದೊರೆತಿದೆ. ಜಮ್ಮು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯೂ ದೊರೆತಿದೆ. 

ಕಳೆದ ೬ ತಿಂಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರೂ ತಮ್ಮ ಕಾರ್ಯಕ್ರಮಗಳನ್ನು ಯಥಾಪ್ರಕಾರ ನಡೆಸಿಕೊಂಡು ಬರುತ್ತಿದ್ದರು. ನಿರಂತರ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ ತಮ್ಮ ೮೪ರ ವಯಸ್ಸಿನಲ್ಲೂ ಕಚೇರಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಮೇ ೧೦, ೨೦೨೨ರಂದು ಇವರು ಹೃದಯಾಘಾತದಿಂದ ನಿಧನ ಹೊಂದಿದರು. ಇವರು ತಮ್ಮ ಪತ್ನಿ ಮನೋರಮಾ ಮತ್ತು ಪುತ್ರರಾದ ರಾಹುಲ್ ಮತ್ತು ರೋಹಿತ್ ಅವರನ್ನು ಅಗಲಿದ್ದಾರೆ. ಇವರ ಪುತ್ರರಲ್ಲಿ ರಾಹುಲ್ ಅವರು ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಾ ಸಂತೂರ್ ವಾದನದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ.

ಚಿತ್ರ ಕೃಪೆ: ಅಂತರ್ಜಾಲ ತಾಣ