ಶಿವರಾತ್ರಿಯ ಮಹತ್ವ ಹಾಗೂ ಶಿವತತ್ವ (ಭಾಗ 1)

ಏನಿದು ಶಿವರಾತ್ರಿ ಏತಕ್ಕಾಗಿ ಆಚರಿಸಬೇಕು ಶಿವರಾತ್ರಿ ಆಚರಣೆಯಿಂದ ಏನು ಲಾಭ ಎಲ್ಲವನ್ನು ಸೂಕ್ಷ್ಮವಾಗಿ ನೋಡೋಣ ಬನ್ನಿ,
ಸಾಮಾನ್ಯವಾಗಿ ಜನರು ಧಾರ್ಮಿಕ ಹಾಗೂ ರೂಢಿ ಪದ್ಧತಿ ವಿಧಿ ವಿಧಾನಗಳಿಂದ ಹಬ್ಬ ಹರಿದಿನಗಳನ್ನು ಹಾಗೂ ಶಿವರಾತ್ರಿಯನ್ನು ಆಚರಿಸುತ್ತಾ ಇರುತ್ತಾರೆ. ಈ ದಿನ ರುದ್ರಪಠಣ ಮಾಡಬೇಕು, ಏಕಾದಶಿ ರುದ್ರ ,ಲಘು ರುದ್ರ, ಮಹಾರುದ್ರ, ಅತಿರುದ್ರ ಹೀಗೆ ಕೆಲಕಡೆ ಆಚರಿಸುತ್ತಾರೆ, ಶಿವನನ್ನು ಕುರಿತು ಹೋಮ, ಹವನ, ಶಿವ ಪಾರ್ವತಿ ಕಲ್ಯಾಣ ಶಿವನಿಗೆ ಜಲಾಭಿಷೇಕ ಮಾಡುತ್ತಾ ಇರುತ್ತಾರೆ, ಕೆಲವರು ಇಂದು ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಬಿಲ್ವಪತ್ರೆ ಏರಿಸಬೇಕು, ಭಸ್ಮ ಧರಿಸಬೇಕು, ಉಪವಾಸ ಮಾಡಬೇಕು, ರಾತ್ರಿ ಭಜನೆ, ಜಾಗರಣೆ ಮಾಡಬೇಕು, ಕಾರಣ ಶಾಬುದಾನ, ಶೇಂಗಾ, ಹಣ್ಣುಗಳು ಮಾತ್ರ ತಿನ್ನಬಹುದು ಇಷ್ಟು ಮಾತ್ರ ಮಾಡಿದರೆ ಶಿವರಾತ್ರಿ ಹಬ್ಬ ಸಂಪೂರ್ಣವಾಯಿತು ಎಂಬ ನಂಬಿಕೆಯಲ್ಲೆ ಉಳಿದುಬಿಡುತ್ತಾರೆ, ಇವೆಲ್ಲ ತಪ್ಪು ಮಾಡಬೇಡಿ ಎಂದು ಹೇಳುತ್ತಿಲ್ಲ, ಇದರ ಜೊತೆಯಲ್ಲಿ ನಾವೆಲ್ಲ ಶಿವ ತತ್ವವನ್ನು ತಿಳಿದು ನಮ್ಮ ದಿನನಿತ್ಯ ಜೀವನ ದಲ್ಲಿ ಕೂಡ ಶಿವ ತತ್ವ ಅಳವಡಿಸಿಕೊಳ್ಳಲು ಪ್ರಯತ್ನ ಸಾಗಿಸಬೇಕು, ಕೇವಲ ಅನ್ನ ಉಪವಾಸಕ್ಕಿಂತ ಮಾನಸಿಕ ಉಪವಾಸ ಕೂಡ ಅವಶ್ಯಕ.
ಮಾಘ ಮಾಸದ ಬಹುಳ ತ್ರಯೋದಶಿಯಂದು ಶಿವ ರಾತ್ರಿ ಹಬ್ಬವನ್ನು ಆಚರಿಸುತ್ತಾರೆ, ಈ ದಿನದಂದು ಶಿವ ಪಾರ್ವತಿ ವಿವಾಹವಾಯಿತೆಂದು ಹೇಳಲಾಗುತ್ತದೆ, ಸಮುದ್ರ ಮಥನದಲ್ಲಿ ಬಂದ ಹಾಲಹಲ ವಿಷವನ್ನು ಈ ದಿನದಂದೆ ಶಿವ ಸೇವಿಸಿದನೆಂದು ಹೇಳಲಾಗುತ್ತದೆ, ಸಮುದ್ರ ಮಥನದಲ್ಲಿ ಐರಾವತ, ಮಹಾಲಕ್ಷ್ಮಿ, ಅಮೃತ, ಪಾರಿಜಾತ ,ಕಲ್ಪವೃಕ್ಷ ಹೀಗೆ ಅನೇಕ ವಸ್ತುಗಳು ಬಂದವಂತೆ ಎಲ್ಲವನ್ನು ಒಬ್ಬೊಬ್ಬ ದೇವತೆಗಳು ತೆಗೆದುಕೊಂಡರು ಆದರೆ ಹಾಲಹಲ ವಿಷ ಬಂದಾಗ ಯಾವ ದೇವರು ತೆಗೆದುಕೊಳ್ಳಲಿಲ್ಲವಂತೆ, ಲೋಕಕಲ್ಯಾಣಕ್ಕಾಗಿ ಶಿವ ಪರಮಾತ್ಮ ಆ ವಿಷವನ್ನು ಕುಡಿದನಂತೆ, ಅಂದು ರಾತ್ರಿಯೆಲ್ಲ ಪಾರ್ವತಿ ದೇವಿ ಜಾಗರಣೆ ಮಾಡಿ ಶಿವನ ಕಂಠದಿಂದ ವಿಷ ಕೆಳಗೆ ಇಳಿಯದಂತೆ ನೋಡಿಕೊಂಡಳಂತೆ, ಅದಕ್ಕಾಗಿ ಶಿವನಿಗೆ ನೀಲಕಂಠ, ನಂಜುಂಡೇಶ್ವರ, ಮೃತ್ಯುಂಜಯ ಎಂಬೆಲ್ಲ ಹೆಸರುಗಳು ಉಂಟು.
ಈ ದಿನ ಮಹಾವಿಷ್ಣು ಶಿವನ ಆರಾಧನೆಗಾಗಿ ಸಾವಿರ ಕಮಲಗಳನ್ನು ತಂದನಂತೆ ಒಂದೊಂದಾಗಿ ಮಂತ್ರ ಉಚ್ಛಾರ ಮಾಡುತ್ತಾ ಶಿವ ನನ್ನು ಭಕ್ತಿ ಇಂದ ಭಜಿಸುತ್ತ ಒಂದೊಂದು ಕಮಲಗಳನ್ನು ಶಿವನ ಪಾದಗಳಿಗೆ ಮಹಾ ವಿಷ್ಣು ಏರಿಸುತ್ತಿದ್ದನಂತೆ, ಶಿವ ವಿಷ್ಣುವನ್ನು ಪರೀಕ್ಷಿಸಲೆಂದು ಒಂದು ಕಮಲವನ್ನು ಕಡಿಮೆ ಮಾಡಿದನಂತೆ, ಸಾವಿರ ಕಮಲಗಳ ಪೂಜೆಯಲ್ಲಿ ಒಂದು ಕಮಲ ಕಡಿಮೆಯಾಯಿತು ಮಧ್ಯದಲ್ಲಿ ಪೂಜೆ ಬಿಟ್ಟು ಮಹಾವಿಷ್ಣು ಎದ್ದು ಹೋಗುವ ಹಾಗಿಲ್ಲ ಆಗ ಮಹಾ ವಿಷ್ಣು ತನ್ನ ಕಮಲದಂತಹ ಕಣ್ಣನ್ನೇ ಕಿತ್ತಿ ಶಿವನ ಪಾದಗಳ ಮೇಲೆ ಸಮರ್ಪಿಸಿದನಂತೆ, ಮಹಾವಿಷ್ಣುವನ್ನು ಕಮಲ ನಯನ, ಕಮಲನಾಭ ಎಂದೆಲ್ಲಾ ಕರೆಯುತ್ತಾರೆ ಕಮಲದಂತಿದ್ದ ಕಣ್ಣನ್ನೇ ಶಿವನ ಪಾದಗಳಿಗೆ ಏರಿಸಿದಾಗ ಶಿವ ಬಂದು ಅಲಿಂಗನ ಮಾಡಿಕೊಂಡಂತೆ, ಶ್ರೀ ರಾಮ ಸಮುದ್ರ ದಡದ ಮೇಲೆ ಶಿವನನ್ನು ಪೂಜಿಸುತ್ತಾನೆ ಅದಕ್ಕಾಗಿಯೇ ಆ ಸ್ಥಳಕ್ಕೆ ರಾಮೇಶ್ವರ ಎಂಬ ಹೆಸರು ಉಂಟು.
ಶ್ರೀರಾಮನನ್ನು ಎಲ್ಲರು ಇಷ್ಟೇಕೆ ಮಹತ್ವ ಕೊಡುತ್ತಾರೆ ಎಂಬ ಶಂಕೆ ಯಿಂದ ಶಿವನನ್ನು ಕೇಳಲು ಕೆಲ ಋಷಿಗಳು ಕೈಲಾಸಕ್ಕೆ ಹೋಗುತ್ತಾರಂತೆ, ಆಗ ಶಿವ ಕೈಲಾಸದಲ್ಲಿ ಇರುವುದಿಲ್ಲವಂತೆ ಶಿವ ಎಲ್ಲಿದ್ದಾನೆ ಎಂದು ವಿಚಾರಿಸಿದಾಗ ಕಾಕಶಿಖಂಡಿ ಎಂಬಾತ ಶ್ರೀ ರಾಮನ ಚರಿತ್ರೆ, ಹಾಗೂ ಮಹತ್ವ ಹೇಳುತ್ತಿದ್ದಾನೆ ಅದನ್ನು ಕೇಳಲು ಶಿವ ಹೋಗಿದ್ದಾನೆ ಎಂದು ಹೇಳುತ್ತಾರಂತೆ, ಆಗ ಋಷಿಗಳು ಶ್ರೀರಾಮನ ಬಗ್ಗೆ ಇನ್ನು ಯಾರಿಗೂ ಏನು ಕೇಳಬೇಕಾಗಿಲ್ಲ ಎಂಬ ನಿರ್ಣಯಕ್ಕೆ ಬಂದರಂತೆ, ಸೋಮಶೇಖರ ತನ್ನ ಭಾಮೆಗೆ ಪೆಳಿದ ಮಂತ್ರ ರಾಮ ಮಂತ್ರವ ಜಪಿಸೋ ಹೇ ಮನುಜ ಎಂದಿದ್ದಾರೆ, ಶಿವ ಮತ್ತು ಕೇಶವರಲ್ಲಿ ಇಷ್ಟು ಅನ್ಯೋನ್ಯತೆ, ಅವರಿಬ್ಬರೂ ಒಂದೇ.
ಈ ದಿನದಲ್ಲಿ ಬ್ರಹ್ಮ ಮತ್ತು ವಿಷ್ಣು ಶಿವಲಿಂಗದ ಆದಿ ಮತ್ತು ಅಂತ್ಯ ಹುಡುಕಲು ವಿಶ್ವ ಪ್ರಯತ್ನ ಮಾಡಿ ಸೋತರಂತೆ, ಆಕಾಶ ಪಾತಾಳ 7 ಲೋಕಗಳು ತಿರುಗಿದರು ಶಿವಲಿಂಗದ ಕೊನೆ ಮತ್ತು ಪ್ರಾರಂಭ ಕಂಡು ಹಿಡಿಯಲು ಬ್ರಹ್ಮ ವಿಷ್ಣುವಿಗೆ ಸಾಧ್ಯವಾಗಲಿಲ್ಲವಂತೆ, ಶಿವ ಪರಮಾತ್ಮ ಕರುಣಾಮಯ ಸಾಗರ ಒಂದು ಸಲ ಓಂ ನಮಃ ಶಿವಾಯ ಎಂದರೆ ಮೋಕ್ಷವನ್ನು ಕೊಡುತ್ತಾನಂತೆ, ಎರಡನೇ ಸಲ ಓಂ ನಮಃ ಶಿವಾಯ ಎಂದರೆ ತನ್ನನ್ನೇ ಭಕ್ತನಿಗೆ ಸಮರ್ಪಣೆ ಮಾಡಿಬಿಡುತ್ತಾನಂತೆ, ಅದಕ್ಕಾಗಿ ಶಿವ ನನ್ನು ಭೋಲಾ ಶಂಕರ ಎಂದು ಕೂಡ ಕರೆಯುತ್ತಾರೆ, ಈ ಸ್ವಭಾವದಿಂದಲೇ ಶಿವ ಅನೇಕ ಸಲ ತಾನು ತೊಂದರೆ ಪಟ್ಟಿದ್ದಾನೆ ಎನ್ನಲಾಗಿದೆ, ಮಹಾವಿಷ್ಣು ಬಂದು ಶಿವನನ್ನು ಕಾಪಾಡಿದ್ದಾನೆ ಎಂದು ಪುರಾಣ ಕಥೆಗಳು ಬರುತ್ತವೆ, ಭಸ್ಮಾಸುರನಿಗೆ ವರಕೊಟ್ಟು, ರಾವಣನಿಗೆ ಆತ್ಮಲಿಂಗ ಕೊಟ್ಟು, ಅನೇಕ ಅಸುರರಿಗೆ ಇದೇ ರೀತಿ ವರ ಕೂಟ್ಟು ಬಿಟ್ಟನಲ್ಲವೇ ನಮ್ಮ ಶಿವ.
ನಮ್ಮ ದೇಹ ಪಂಚ ಮಹಾ ಭೂತಗಳಿಂದ, ಬ್ರಹ್ಮ, ವಿಷ್ಣು, ಮಹೇಶ್ವರ ತತ್ವದಿಂದ ನಿರ್ಮಾಣವಾಗಿದೆಯಂತೆ, ನಾವು ಬ್ರಹ್ಮತತ್ವದಿಂದ ಹುಟ್ಟುತ್ತೇವೆ, ನಂತರ ಜೀವನವೆಲ್ಲ ನಮ್ಮ ಪೋಷಣೆ ಬೆಳವಣಿಗೆ ಎಲ್ಲ ವಿಷ್ಣು ತತ್ವ, ಕೊನೆಯದಾಗಿ ನಾವು ಲಯವಾಗುವುದು ನಮ್ಮ ಶರೀರ ದಹನವಾಗುವುದು, ಮಣ್ಣಲಿ ಕಲಿಯುವುದು ಶಿವ ತತ್ವದಲ್ಲಿ, ಕಾರಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಶಿವ ತತ್ವ, ಮತ್ತು ವಿಷ್ಣು ತತ್ವ," ಶಿವಶ್ಯ ಹೃದಯಂ ವಿಷ್ಣುಹು, ವಿಷ್ಣುಸ್ಯ ಹೃದಯಂ ಶಿವಃ, " ಏಕೋ ದೇವ ಕೇಶವೂವ ಶಿವೂವ, ಎಂದೇ ನಮ್ಮ ಪುರಾಣಗಳು ಹೇಳುತ್ತವೆ, ಶಿವ ಕೇಶವರಲ್ಲಿ ಭೇದ ಹೆಚ್ಚು ಕಡಿಮೆ ಎಂಬ ವಿಚಾರ ಹಾಗೂ ಈತನೇ ಸರ್ವೋತ್ತಮ ಎಂದು ಹೇಳಿದಲ್ಲಿ ಅವರಿಗೆ ಖಚಿತವಾಗಿ ನರಕಪ್ರಾಪ್ತಿಯೆಂದು ನಮ್ಮ ಪುರಾಣಗಳಲ್ಲಿ ಉಲ್ಲೇಖವಿದೆಯಂತೆ,
ಮಹಾಭಾರತದಲ್ಲಿ ಶ್ರೀ ಕೃಷ್ಣ ಒಂದು ಕಡೆ ಹೇಳುತ್ತಾರೆ ಶಿವನನ್ನು ದ್ವೇಷಿಸಿ ನನ್ನನ್ನು ಪೂಜಿಸಿದಲ್ಲಿ ಅಂತವರ ಯಾವ ಪೂಜೆ ಕೂಡ ನಾನು ಸ್ವೀಕಾರ ಮಾಡುವುದಿಲ್ಲ ಎಂದು, ಹರಿಹರ ಎಂಬ ಕ್ಷೇತ್ರದಲ್ಲಿ ಒಂದೇ ಕಲ್ಲಿನಲ್ಲಿ ಶಿವ ಮತ್ತು ಕೇಶವರನ್ನು ಕೆತ್ತಿದ್ದಾರೆ ಅವರಲ್ಲಿ ಬೇದ ಮಹಾ ಪಾಪ ಎಂಬ ಉದ್ದೇಶದಿಂದ, ಆ ಊರಿನ ಹೆಸರು ಹರಿಹರ. ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು ಶಿವನ ಗುರು ಮಹಾ ವಿಷ್ಣು. ಮಹಾವಿಷ್ಣುವಿನ ಗುರು ಶಿವ ಎಂದು,
ಶಿವ ಕೈಲಾಸವಾಸಿ ಶಿವ ಸ್ಮಶಾನವಾಸಿ ಎಂದೆಲ್ಲಾ ಹೇಳುತ್ತಾರೆ, ಸ್ಮಶಾನದಲ್ಲಿ ಶಿವನದು ಏನು ಕೆಲಸ ಎಂದು ಕೇಳಿದರೆ ಮನುಷ್ಯನನ್ನು ದಹನ ಮಾಡಿದ ನಂತರ, ಮಣ್ಣಲ್ಲಿ ಹುತ ನಂತರ ಬಂಧು ಬಾಂಧವರೆಲ್ಲ ತಮ್ಮ ತಮ್ಮ ಮನೆಗಳಿಗೆ ಹೋಗಿ ಬಿಡುತ್ತಾರಂತೆ ಆಗ ಆ ಜೀವಿಗೆ ಎಚ್ಚರ ಬಂದು ಕತ್ತಲಲ್ಲಿ ಗಾಬರಿಯಿಂದ ಅಳುತ್ತಾ ಇರುತ್ತದೆಯಂತೆ, ನನ್ನವರೆಲ್ಲ ನನ್ನನ್ನು ಈ ಕತ್ತಲಲ್ಲಿ ಬಿಟ್ಟು ಎಲ್ಲಿಗೆ ಹೋದರು ಎಂದು ಸ್ಮಶಾನದಲ್ಲಿ ರೋಧಿಸುತ್ತಿರುವಾಗ ಅಲ್ಲಿದ್ದ ಶಿವ ಆ ಜೀವಿಯನ್ನು ಹತ್ತರಿ ಕೂಡಿಸಿಕೊಂಡು ಅಳಬೇಡ ನಾನಿದ್ದೇನೆ ಎಂದು ಧೈರ್ಯ ಹೇಳುತ್ತಾನಂತೆ ಅದಕ್ಕಾಗಿ ಆತನನ್ನು ಸ್ಮಶಾನವಾಸಿ ಎಂದು ಕರೆದಿದ್ದಾರೆ.
(ಇನ್ನೂ ಇದೆ)
-ಅಮರ್ ದೀಕ್ಷಿತ್ ಕೃಷ್ಣ
ಚಿತ್ರ ಕೃಪೆ: ಇಂಟರ್ನೆಟ್ ತಾಣ