ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 3)

1925ರಲ್ಲಿ ’ವಸಂತ’ ಪತ್ರಿಕೆಯಲ್ಲಿ ಪ್ರಕಟಗೊಂಡ, ಕ್ರೌನ್ ಚತುರ್ಥ ಆಕಾರದ 49 ಪುಟಗಳ ಕಾರಂತರ ಸಾಮಾಜಿಕ ಕಾದಂಬರಿಯೇ ’ನಿರ್ಭಾಗ್ಯ ಜನ್ಮ’ದ ಬಗ್ಗೆ ಪ್ರಸ್ತಾಪಿಸುವ ಮಾಲಿನಿ ಮಲ್ಯ ಅವರು 1925ರಲ್ಲಿ ಪ್ರಕಟವಾದ `ಭೂತ’ವೂ ಪತ್ತೇದಾರಿ ಕಾದಂಬರಿಯೇ. ಇದೂ ಭಾಷೆಯ ಸಮರ್ಥ ಪ್ರಯೋಗ, ವಸ್ತು ಮತ್ತು ಕಾದಂಬರಿಯ ಪ್ರಕಾರದಿಂದಾಗಿ, ಕಾದಂಬರಿ ಹುಟ್ಟಿಕೊಂಡ ಕಾಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ವಿಮರ್ಶಿಸಿದಾಗ, ಕಾರಂತರ ಮೊದಲ ಯಶಸ್ವೀ ಕಾದಂಬರಿ ಎಂಬುದಾಗಿ ಧಾರಾಳವಾಗಿ ಹೇಳಬಹುದು. ಭೂತಪ್ರೇತಗಳು ನಿಜವೆಂಬು ನಂಬಿ, ಭಯ ವಿಹ್ವಲರಾಗುವ ಜನರಿಗೆ ವೈಜ್ಞಾನಿಕ ಪ್ರಯೋಗಗಳ ಮೂಲಕ 1925ರಲ್ಲಿಯೇ ಕಾರಂತರು ತೋರಿಸಿಕೊಟ್ಟರು’ ಎಂದು ಕಾರಂತರ ಕಾದಂಬರಿ ಬರವಣಿಗೆಯ ಆರಂಭದ ದಿನಗಳ ಬಗ್ಗೆ ಬರೆಯುತ್ತಾರೆ.
`1923 ರಲ್ಲಿ ಶಿವರಾಮ ಕಾರಂತರು ರಚಿಸಿದ ಕವನ ಸಂಕಲನ `ರಾಷ್ಟ್ರಗೀತ ಸುಧಾಕರ’ ಎಂಬ ಹೆಸರಿನಲ್ಲಿ ಉಡುಪಿಯ ಸತ್ಯಾಗ್ರಹೀ ಮುದ್ರಣಾಲಯದಲ್ಲಿ ಮುದ್ರಣಗೊಂಡು ಪ್ರಕಟವಾಯಿತು. ಇದರಲ್ಲಿ 22 ಕಿರು ಪದ್ಯಗಳಿವೆ. ಉತ್ತರಾದಿ ಶೈಲಿಯಲ್ಲಿ ಹಾಡಲು ಅನುವಾಗುವಂತೆ ರಾಗ, ತಾಳಗಳನ್ನು ಸೂಚಿಸಲಾಗಿದೆ. ಕವನ ಸಂಕಲನದ ಶಿರೋನಾಮೆಯೇ ಸೂಚಿಸುವಂತೆ, ರಾಷ್ಟ್ರಭಕ್ತಿಯಿಂದ ಪ್ರೇರಿತವಾದುದು. ಮದ್ಯಪಾನದ ದುಷ್ಪರಿಣಾಮ, ಅಸ್ಪೃಶ್ಯತೆಯ ಕಳಂಕ, ಮುಂತಾದ ಸಮಾಜ ಸುಧಾರಣಾ ಕನಸುಗಳಿಂದ ಪ್ರೇರಿತವಾಗಿರುವ ವಸ್ತುಗಳ ಕಾರಣಕ್ಕಾಗಿ ಈ ಕಿರುಗೀತ ಸಂಕಲನ ಐತಿಹಾಸಿಕ ಮಹತ್ವವುಳ್ಳದ್ದು’ ಎಂದು ಮಾಲಿನಿ ಮಲ್ಯ ಅವರು ಬರೆದಿದ್ದಾರೆ.
ಭೀಮಪಲಾಸ ರಾಗ ಮತ್ತು ತ್ರಿವಟ ತಾಳದಲ್ಲಿ ಹಾಡಬಹುದಾದ ’ಚರಣ ಕಿಂಕರನ ಪ್ರಾರ್ಥನೆ’ ಎಂದು ಎರಡು ಸಾಲುಗಳ
’ಜನನಿ ನಿನ್ನಯಾ ಪ್ರೇಮರಸವೇ| ಆಶೀರ್ವಾದಂ ಬಲು ಸುರಸಾ ||೧||
ಜನನಿ ನಿನ್ನೊಳೂ ಸ್ವರ್ಗಸುಖವೂ | ನಿತ್ಯಾನಂದವನು ಕೊಡುವಾ ||೨||
ಎಂಬ ಕವಿತೆಯು ಸಂಕಲನದ ಮೊದಲ ಕವಿತೆ. ಹೀಗೆಯೇ ಅಮೀರ ಕಲ್ಯಾಣಿ, ಕಲ್ಯಾಣಿ, ಕಾಂಬೋಧಿ, ಜುಂಜೂಟಿ ಮಿಶ್ರ, ಪೀಲ ಜಿಲ್ಹಾ, ಕಾಫಿ ಜಿಲ್ಹಾ, ಮುಖಾರಿ, ಕೇದಾರ, ಪೂರ್ವಿ, ಕಾನಡಾ, ಕೇದಾರಗೌಳ, ಯಮನ್ ಕಲ್ಯಾಣಿ, ದರ್ಬಾರಿ ಕಾನಡಾ, ಚಾಲ್ ರಾಗಗಳಲ್ಲಿ ಹಾಡಬಹುದಾದ ಒಟ್ಟು 22 ಗೀತೆಗಳಿವೆ. ಭಜನೆ ಮಟ್ಟಿನ ಎರಡು ಹಾಡುಗಳೂ ಇದರಲ್ಲಿ ಸೇರಿವೆ.
ಬಹುತೇಕ ಗೀತೆಗಳು ದೇಶವನ್ನು ಕುರಿತವು. `ಸ್ವಯಂಸೇವಕನ ಮಂತ್ರ’, `ಎದ್ದು ಕರ್ತವ್ಯವನ್ನು ತಿಳಿ’, `ಗಾಂಧಿ ಯಾರು?’, `ಭರತ ಬಂಧುವಿನ ಕರ್ತವ್ಯ’, `ದೇವತೆಗಳ ಆಶೀರ್ವಾದ’, `ಮಾತೆಯ ಸೇವೆ’, `ಬಾಲಗಂಗಾಧರ ವಾ ಮಾತಾ ವಿಲಾಪ’, `ಸ್ವರಾಜ್ಯ ಛಲ’, `ವಂದೇ ಮಾತರಂ’ ಈ ಕವಿತೆಗಳು ದೇಶದ ಬಗೆಗಿನ ಕವಿಯ ದ್ಯೋತಕವಾಗಿವೆ. ಅಲ್ಲದೇ `ಮದ್ಯಪಾನದ ಪರಿಣಾಮ’, `ಯವನನಾರು?’, `ಅಸ್ಪರ್ಶತಾ ಕಲಂಕ’ ಎಂಬ ಸಾಮಾಜಿಕ ಪಿಡುಗುಗಳನ್ನು ಕುರಿತ ಕವಿತೆಗಳನ್ನೂ ಈ ಸಂಕಲನ ಒಳಗೊಂಡಿದೆ. ಮಾತಾ ಸ್ತುತಿ’ ಎಂಬ ದೀರ್ಘ ಗೀತೆಯೂ `ವಿದೇಶಿ ಬಹಿಷ್ಕಾರ’ `ವಾಸ್ತವಿಕ ಸ್ಥಿತಿ’ ಎಂಬ ಗೀತೆಗಳೂ ಕೂಡ ಸಂಕಲನದ ಭಾಗವಾಗಿವೆ. ’ಮಂಗಳಂ’ ಕವಿತೆಯೊಂದಿಗೆ ಸಂಕಲನ ಮುಗಿಯುತ್ತದೆ.
1923ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ಉಡುಪಿಯ ಸತ್ಯಾಗ್ರಹೀ ಮುದ್ರಣಾಲಯದಲ್ಲಿ ಮುದ್ರಣವಾಗಿತ್ತು. ಉ. ಶಾಂತರಾಮ ರಾಯರು ಮುದ್ರಕರಾಗಿದ್ದರೆ ಕವಿ ಕೋಟ ಶಿವರಾಮ ಕಾರಂತರು ಪ್ರಕಾಶಕರಾಗಿ ಪ್ರಕಟಿಸಿದ್ದರು.
1923ರಲ್ಲಿಯೇ ಕವನ ಸಂಕಲನ ಪ್ರಕಟಿದ್ದರೂ ಕಾರಂತರಿಗೆ ಕವಿತೆ-ಕಾವ್ಯ ಕುರಿತು ಅಂತಹ ವಿಶೇಷ ಆಸಕ್ತಿಯೇನೂ ಇರಲಿಲ್ಲ ಎಂಬುದು ಸ್ಮೃತಿಪಟಲದಿಂದ (ಎರಡನೇ ಸಂಪುಟ) ಗೊತ್ತಾಗುತ್ತದೆ. ’ಬೇಂದ್ರೆಯವರು, ಗೋವಿಂದ ಪೈಗಳು ಆ ವಿಷಯದಲ್ಲಿ ನನಗೆ ನೆರವಾದದ್ದುಂಟು. ಸ್ವತಃ ಕವನಗಳಲ್ಲಿ ಪ್ರೀತಿ ಬೆಳೆಯಿಸಿಕೊಳ್ಳದಿದ್ದ ನಾನು, ಕನ್ನಡದ ಸೇವೆ ಮಾಡುವುದಕ್ಕೆ ಇಂಥ ಮಿತ್ರರನ್ನು ಮೊರೆಹೋಗಬೇಕಾಯಿತು’ ಎಂದು ತಿಳಿದು ಬರುತ್ತದೆ. ಅದು ಕೂಡ ಅಷ್ಟೇನು ನಿಜವಾದ ಸಂಗತಿಯಲ್ಲಿ ನಂತರದ ದಿನಗಳಲ್ಲಿ ಅವರು `ಸೀಳ್ಗವನಗಳು’ ಎಂಬ ಮತ್ತೊಂದು ಸಂಕಲನ ಪ್ರಕಟಿಸಿದ್ದರು. ಹಾಗೆಯೇ ಅವರ ಗೀತ ನಾಟಕಗಳು ಅವರ ಕಾವ್ಯಶಕ್ತಿಯ ಮುಂದುವರಿಕೆಯೇ ಆಗಿದೆ.
ಊರಿನ ಕೆರೆಯೊಂದರ ಬಗ್ಗೆ ಅವರು ಬರೆದ ಪ್ರಬಂಧವೊಂದರಲ್ಲಿ ಬರೆದ ಮೂರು ಸಾಲಿನ ಕವನ ಇಂತಿದೆ-
ಮೊದಲು ನಾನಾದೆ ಋಷಿಗಾಗಿ
ಆಮೇಲೆ ನಾನಾದೆ ಕೃಷಿಗಾಗಿ
ಈಗಿರುವೆ ನೋಡಯ್ಯ ನುಸಿಗಾಗಿ
ಪತನಮುಖೀ ಸಮಾಜವನ್ನು ಕಾರಂತರು ಚಿತ್ರಿಸುವ ಬಗೆ ಈ ರೀತಿಯದು.
’ಬೆಟ್ಟದ ಜೀವ’ವು ಕಾರಂತರು ಬರೆದ ಕಾವ್ಯದಂಥಾ ಕಾದಂಬರಿ’ ಎಂದು ಪುರುಷೋತ್ತಮ ಬಿಳಿಮಲೆ ಅವರು `ಶಿವರಾಮ ಕಾರಂತ ವೇದಿಕೆಯ ಮುಖಪತ್ರಿಕೆಯಾದ `ಹಣತೆ’ಯಲ್ಲಿ ಪ್ರಕಟವಾದ ’ಶಿವರಾಮ ಕಾರಂತರ ಅನನ್ಯತೆ’ ಲೇಖನದಲ್ಲಿ ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪೂರಕವೆಂಬಂತೆ `ಮಗುವಿನ ಮುಗ್ಧತೆ, ವಿಜ್ಞಾನಿಯ ಕುತೂಹಲ, ಕಲಾವಿದನ ಸೂಕ್ಷ್ಮತೆ, ತತ್ವಜ್ಞಾನಿಯ ತರ್ಕ, ಕವಿಯ ಭಾವುಕತೆಗಳೆಲ್ಲ ಮೇಳೈಸಿದ ವರ್ಣರಂಜಿತ ವ್ಯಕ್ತಿತ್ವ ಅವರದು’ ಎಂದು ಬಿಳಿಮಲೆ ಬರೆದಿದ್ದಾರೆ.
`ವೈಚಾರಿಕತೆ ಇರುವವರಿಗೆ ಭಾವುಕವಾದ ಕವನಗಳನ್ನು ಬರೆಯಲಾಗುವುದಿಲ್ಲ. ಗದ್ಯವೇ ಅವರ ಪ್ರಮುಖ ಮಾಧ್ಯಮ. ಡಾ. ಶಿವರಾಮ ಕಾರಂತರಿಗಾದರೂ ಅಷ್ಟೆ. `ಸೀಳ್ಗವನಗಳು’, `ರಾಷ್ಟ್ರಗೀತ ಸುಧಾಕರ’ ಎಂಬ ಹೆಸರಿನ ಕವನ ಸಂಕಲನಗಳನ್ನು ಅವರು ಪ್ರಕಟಿಸಿರುವರಾದರೂ ಕನ್ನಡಿಗರು ಅವನ್ನು ಗಂಭೀರವಾಗಿ ಸ್ವೀಕರಿಸಿಲ್ಲ’ ಎಂಬ ಅಭಿಪ್ರಾಯ ಬಿಳಿಮಲೆ ಅವರದು. ಅದೇನೇ ಇದ್ದರೂ ಕಾರಂತರು 1923ರಲ್ಲಿ ಪ್ರಕಟಿಸಿದ `ರಾಷ್ಟ್ರಗೀತ ಸುಧಾಕರ’ವೇ ಅವರ ಮೊದಲ ಪ್ರಕಟಿತ ಕೃತಿ. ಅದಕ್ಕಿಂದ ಮೊದಲು ಕಾರಂತರು ಬರವಣಿಗೆಯ ಹಲವು ಪ್ರಯೋಗಗಳನ್ನ ಮಾಡಿದ್ದು ತಿಳಿದು ಬರುತ್ತದೆ.
ಸಾಹಿತ್ಯ ಕುರಿತ ಕಾರಂತರ ಗ್ರಹಿಕೆಯನ್ನು ಸೂಚಿಸುವ ಈ ಸಾಲುಗಳೊಂದಿಗೆ ಈ ಬರೆಹಕ್ಕೆ ವಿರಾಮ ನೀಡಬಹುದು. ಸಾಹಿತ್ಯ ಕೃತಿಗಳು ಸಹಜ ಜೀವನದ ಚಿತ್ರಗಳಂತೆ ಕಂಡರೂ ತೀರ ಅವುಗಳ ತದ್ ಪ್ರತಿಗಳಲ್ಲ. ವಸ್ತುವನ್ನು ಇದ್ದಕ್ಕಿದ್ದಂತೆ ಹೇಳುವುದಕ್ಕೆ ಇಂದು ಎಷ್ಟೋ ಯಂತ್ರೋಪಕರಣಗಳಿವೆ. ಕೆಮರಾ ಆ ಕೆಲಸ ಮಾಡುತ್ತದೆ. ಮಾತುಗಳ ವಿಚಾರದಲ್ಲಿ ಬರಿಯ ಅಷ್ಟೊಂದು ಕೆಲಸಕ್ಕೆ ಸಾಹಿತಿಯೂ ಬೇಡ, ಕಲಾವಿದನೂ ಬೇಡ. ಆದರೆ ಈ ರೀತಿಯಲ್ಲಿ ಅನುಕರಣೆ ಮಾಡುವುದಕ್ಕೆ ಕಲೆ ಎನ್ನುವುದಿಲ್ಲ. ವಾಸ್ತವಿಕ ಜಗತ್ತಿನಲ್ಲಿ ಬಾಳಿ, ಕೇಳಿ, ನೋಡಿ, ಮೂಸಿ, ಆಸ್ವಾದಿಸಿ, ಮುಟ್ಟಿ ತೂಗುವ ಮನುಷ್ಯ ತನ್ನದಾದ ಅನುಭವಗಳನ್ನು ಗಳಿಸಿ, ಯಾವುದೋ ಆಂತರಿಕ ಒತ್ತಡದಿಂದ ಪ್ರಕಟಿಸುವ ಬಗೆಯ್ನು ನಾವು ಕೆಲ, ಸಾಹಿತ್ಯ ಅನ್ನುತ್ತೇವೆ.
(ಮುಗಿಯಿತು)
-ದೇವು ಪತ್ತಾರ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ