ಶಿಶು ಗೀತೆ - ಜಾತ್ರೆಗೆ ಹೋಗೋಣ
ಜೋಡೆತ್ತಿನ ಮರದ ಗಾಡಿಯಲಿ
ಹತ್ತಿರಿ ಚಿಣ್ಣರೆ ನಗು ನಗುತಲಿ
ಊರಿನ ಜಾತ್ರೆಗೆ ಹೋಗೋಣ
ದೇವರ ತೇರನು ನೋಡೋಣ
ಬಣ್ಣ ಬಣ್ಣದ ಜರಿಯಲಿ ದಿರಿಸು
ಜಡೆಯ ತುಂಬ ಕನಕಾಂಬರ ಸೊಗಸು
ಕಾಲಿಗೆ ಬೆಳ್ಳಿಯ ಗೆಜ್ಜೆಯ ತೊಟ್ಟು
ಕೈಕೈ ಹಿಡಿದು ಸುತ್ತೋಣ ಒಟ್ಟು
ಊರಿನ ರಸ್ತೆಲಿ ಸಾಗುತ ಗಾಡಿ
ಗಡಗಡ ಸದ್ದನು ಮಾಡಿತು ನೋಡಿ
ಎತ್ತಿನ ಕೊರಳಲಿ ಗಂಟೆಯ ಜೋಡಿ
ಕಿಂಕಿಣಿ ಕಿಣಿ ಕಿಣಿ ಕಿವಿಗದು ಮೋಡಿ
ಗಾಡಿ ಹೊಡೆಯುವ ಮಾಮನ ನೋಡಿ
ಕೇಕೆಯ ಹಾಕುತ ಕುಣಿಯೋಣ ಕೂಡಿ
ಕೆರೆಯ ದಂಡೆಲಿ ಕೊಕ್ಕರೆ ದಂಡು
ಹುಲ್ಲನು ಮೇಯುವ ಹಸುಗಳ ಹಿಂಡು
ಜಾತ್ರೆಯ ಗದ್ದಲ ಕಣ್ಣಿಗೆ ಚಂದ
ಮಿಠಾಯಿ ಅಂಗಡಿ ಬಲು ಆನಂದ
ದೇವರ ಮೂರುತಿ ಅಂದವೇ ಅಂದ
ಕಾಪಾಡು ತಂದೆಯೆ ಬೇಡುವ ಕಂದ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್