ಶೀಲಾಳ ಬೊಂಬಾಟ್ ಜೋಕ್ಸ್

ಶೀಲಾಳ ಬೊಂಬಾಟ್ ಜೋಕ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ತೈರೊಳ್ಳಿ ಮಂಜುನಾಥ ಉಡುಪ
ಪ್ರಕಾಶಕರು
ಮಂಗಳ ಪ್ರಕಾಶನ, ಬಾಳಗಡಿ-೫೭೭೧೨೬, ಚಿಕ್ಕಮಗಳೂರು
ಪುಸ್ತಕದ ಬೆಲೆ
ಬೆಲೆ: ನಮೂದಿಸಿಲ್ಲ.

ಹಾಸ್ಯ ಬರಹಗಳು ಹಾಗೂ ನಗೆಹನಿಗಳ ರಚನೆಗೆ ಖ್ಯಾತಿ ಪಡೆದ ತೈರೊಳ್ಳಿ ಮಂಜುನಾಥ ಉಡುಪ ಇವರು ಅಗಲಿದ ತಮ್ಮ ಗೆಳತಿ ‘ಶೀಲಾ’ಳ ನೆನಪಿಗೆ ‘ಶೀಲಾಳ ಬೊಂಬಾಟ್ ಜೋಕ್ಸ್'ಗಳು ಪುಸ್ತಕವನ್ನು ಹೊರತಂದಿದ್ದಾರೆ. ಮಂಜುನಾಥ ಉಡುಪರು ತಮ್ಮ ‘ಮೊದಲ ಮಾತು' ಎಂಬ ಮುನ್ನುಡಿಯಲ್ಲಿ ಬರೆಯುವುದು ಹೀಗೆ “ನಮ್ಮ ಪ್ರಕಾಶನದ ಎಂಟನೆಯ ಕೃತಿ ತೀರಾ ಲೇಟಾಗಿ ಹೊರಬರುತ್ತಿದೆ. ಇತೀಚೆಗೆ ಈ ನನ್ನ ಸಾಹಿತ್ಯಮಿತ್ರರ ವಲಯದಲ್ಲಿ ಸ್ವಾರ್ಥಿಗಳೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಈ ಕೃತಿಯಲ್ಲಿ ತೀರಾ ಇತ್ತೀಚೆಗೆ ಪ್ರಕಟವಾದ ನನ್ನ ೫೨ ನಗೆಹನಿಗಳಿವೆ. ಅವುಗಳನ್ನು ಪ್ರಕಟಿಸಿದ ಸ್ಪೈ ಹಾಗೂ ಹಂಸರಾಗ ಬಳಗಕ್ಕೆ ನನ್ನ ವಂದನೆಗಳು.

ನನ್ನ ಜೋಕೆಲ್ಲಾ ಓದಿ ದೂರದ ಮುಂಬೈಯಿಂದ ಆಗಾಗ ಪತ್ರಿಸುತ್ತಾ ನನ್ನ ಮನಸ್ಸಿಗೆ ಹತ್ತಿರವಾಗಿ ಆಕೆಯ ಪತ್ರಕ್ಕಾಗಿ ಸದಾ ಕಾಯುವಂತೆ ಮಾಡಿದ, ಕನಿಷ್ಟ ವಾರಕ್ಕೊಂದಾದರೂ ಪತ್ರ ಬರೆಯುತ್ತಿದ್ದ ನೆಚ್ಚಿನ ಗೆಳತಿ ‘ಶೀಲಾ’ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸತ್ತಳೆಂಬ ಸುದ್ದಿ ನನಗಂತೂ ನಂಬಲಾಗುತ್ತಿಲ್ಲ. ಆದರೂ ನಂಬಲೇ ಬೇಕಾಗಿದೆ. “ ಎಂದು ತಮ್ಮ ಗೆಳತಿಯ ಅಗಲುವಿಕೆಯ ಬಗ್ಗೆ ನೋವನ್ನು ವ್ಯಕ್ತ ಪಡಿಸುತ್ತಾರೆ.

ಪುಸ್ತಕದಲ್ಲಿರುವ ನಗೆಹನಿಗಳು ಪುಟ್ಟ ಪುಟ್ಟದ್ದಾಗಿದ್ದು ಓದಲು, ಓದಿ ನಗಲು ಬಹಳ ಚೆನ್ನಾಗಿವೆ. ನೋಡಿ ಒಂದೆರಡು ಸ್ಯಾಂಪಲ್ ಗಳು.

ಜಡ್ಜ್ : ಕೋರ್ಟಿನಲ್ಲಿ ಸುಳ್ಳು ಹೇಳಿದ್ರೆ ಏನಾಗುತ್ತೆ ಗೊತ್ತೇ?

ಶೀಲಾ: ಗೊತ್ತು, ನರಕಕ್ಕೆ ಹೋಗ್ತೀನಿ

ಜಡ್ಜ್ : ಮತ್ತೆ ನಿಜ ಹೇಳಿದ್ರೆ?

ಶೀಲಾ: ಜೈಲಿಗೆ...!

***

ಶೀಲಾ: ಏನ್ರಿ ಇದು ಇಡ್ಲಿ ಮಾಡಿ ವಾರವಾದಂತಿದೆ?

ಹೋಟೇಲ್ ಮಾಲಿಕ: ನೋಡಮ್ಮ, ನಾವು ನಿಮ್ಮ ತಂದೆ ಕಾಲದಲ್ಲೇ ಹೋಟೇಲ್ ಮಾಡಿರುವೆ.

ಶೀಲಾ: ಸರಿ ಸರ್, ಆಗ ಮಾಡಿದ್ದನ್ನು ಈಗ ಯಾಕೆ ಮಾರುತ್ತೀರಾ?!

***

೧೨ ಪುಟಗಳ ಪುಟ್ಟ ಪುಸ್ತಕವನ್ನು ಆಸಕ್ತರು ಒಂದೇ ಗುಟುಕಿಗೆ ಓದಿ ಮುಗಿಸಬಹುದಾಗಿದೆ. ಸುರೇಂದ್ರನಾಥ ಮಂಗಳೂರು ಇವರು ಲೇಖಕರಾದ ತೈರೊಳ್ಳಿ ಮಂಜುನಾಥ ಉಡುಪ ಇವರ ಪರಿಚಯವನ್ನು ಕೊನೆಯ ಪುಟದಲ್ಲಿ ಮಾಡಿಕೊಟ್ಟಿದ್ದಾರೆ.