ಶುಂಠಿ ಕೃಷಿ: ವಿಷದ ನಂಟು

ಶುಂಠಿ ಕೃಷಿ: ವಿಷದ ನಂಟು

ನಮ್ಮ ಬಂಧುವೊಬ್ಬರಿಗೆ ಅಜೀರ್ಣವಾಗಿ ವಿಪರೀತ ಭೇದಿ. ದಿನವಿಡೀ ನರಳಿದ ಅವರು ಇದರ ಕಾರಣ ಪತ್ತೆಗೆ ಶುರುವಿಟ್ಟರು. ಮುಂಚಿನ ದಿನಗಳ ಆಹಾರಕ್ಕೆ ಹೋಲಿಸಿದಾಗ ಆ ದಿನದ ಅವರ ಆಹಾರದಲ್ಲಿ ಒಂದೇ ಒಂದು ಬದಲಾವಣೆ: ಬೆಂಡೆಕಾಯಿ ಸಾಂಬಾರು.
ಇದರ ಮೂಲಕ್ಕೆ ಹೋದಾಗ ತಿಳಿದ ವಿಷಯ: ಆ ಬೆಂಡೆಕಾಯಿ ಬೆಳೆದಿದ್ದ ಹೊಲದಲ್ಲಿ ಹಿಂದಿನ ವರುಷ ಶುಂಠಿ ಬೆಳೆಯಲಾಗಿತ್ತು. ಎಲ್ಲಿಗೆಲ್ಲಿಯ ಸಂಬಂಧ!
ಮಲೆನಾಡಿನಲ್ಲಿ ಶುಂಠಿ ಬೇಸಾಯ ವ್ಯಾಪಕವಾಗಿ ಹಬ್ಬುತ್ತಿದೆ: ಉತ್ತರಕನ್ನಡ, ದಕ್ಷಿಣಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ. ಕೇರಳದವರು ಇಲ್ಲಿನ ಫಲವತ್ತಾದ ಹೊಲಗಳಿಗೂ ಅರಣ್ಯದಂಚಿನ ಪ್ರದೇಶಗಳಿಗೂ ಲಗ್ಗೆಯಿಡುತ್ತಿದ್ದಾರೆ – ಶುಂಠಿ ಬೆಳೆಯಲಿಕ್ಕಾಗಿ. ಕೇರಳ ಶುಂಠಿ ಬೆಳೆಗಾರರ ಸಂಘದ ಅಂಕೆಸಂಖ್ಯೆಗಳ ಅನುಸಾರ, ಕೇರಳದ ೧೩,೦೦೦ ರೈತತಂಡಗಳು ಮಲೆನಾಡಿನಲ್ಲಿ ಶುಂಠಿ ಬೆಳೆದ ಪ್ರದೇಶದ ವಿಸ್ತೀರ್ಣ ೫೦,೦೦೦ ಹೆಕ್ಟೇರು!  ಭತ್ತ, ಜೋಳ ಇತ್ಯಾದಿ ಆಹಾರದ ಬೆಳೆ ಬೆಳೆಯುತ್ತಿದ್ದ ಹೊಲಗಳು ಈಗ ಶುಂಠಿ ಬೆಳೆಗೆ ಬಳಕೆ.
೨೦೦೫ರಿಂದಲೇ ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರಣ್ಯದ ಅಂಚಿನ ಫಲವತ್ತಾದ ಜಮೀನಿನಲ್ಲಿ ಶುಂಠಿ ಬೆಳೆಯಲು ಶುರು ಮಾಡಿದ ಕೇರಳದ ಕೃಷಿಕರಿಗೆ ಲಾಭದ ರುಚಿ ಹತ್ತಿತು. ಉದಾಹರಣೆಗೆ, ಕೇರಳದ ವಯನಾಡಿನ ಸಿಬಿ ಥೋಮಸ್ ಶಿವಮೊಗ್ಗ ಜಿಲ್ಲೆಯಲ್ಲಿ ಹತ್ತು ಹೆಕ್ಟೇರ್ ಹೊಲ ಖರೀದಿಸಿ ಶುಂಠಿ  ಬೆಳೆಯತೊಡಗಿದರು. ಅವರು ಶುಂಠಿ ಬೇಸಾಯ ಶುರು ಮಾಡಿದ್ದು ತನ್ನೂರಿನಲ್ಲಿ. ಅನಂತರ, ಕೊಡಗು, ದಕ್ಷಿಣಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅವರ ಶುಂಠಿ ಕೃಷಿಯ ವಿಸ್ತರಣೆ. “ಕರ್ನಾಟಕ ರಾಜ್ಯ ಕೇರಳದ ಹಾಗಲ್ಲ. ಇಲ್ಲಿ ವಿಸ್ತಾರವಾದ ಜಮೀನು ಲೀಸಿಗೆ ಸಿಗುತ್ತದೆ ಮತ್ತು ಕೃಷಿಕಾರ್ಮಿಕರ ದಿನಮಜೂರಿ ಕಡಿಮೆ” ಎನ್ನುತ್ತಾರೆ ಅವರು.
ಕೇರಳದ ಕೃಷಿಕರನ್ನು ಮಾತ್ರವಲ್ಲ, ಕರ್ನಾಟಕದ ಕೃಷಿಕರನ್ನೂ ಶುಂಠಿ ಬೇಸಾಯ ಆಕರ್ಷಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಎನ್. ಆರ್. ಲೋಕೇಶ್ ಒಂದು ಹಂಗಾಮಿನಲ್ಲಿ ಒಂದು ಹೆಕ್ಟೇರಿನಲ್ಲಿ ಶುಂಠಿ ಬೆಳೆದು ಗಳಿಸಿದ ಆದಾಯ ಬರೋಬ್ಬರಿ ರೂ.೨೪ ಲಕ್ಷ.
ಇಂತಹ ಭಾರೀ ಆದಾಯದ ನಿರೀಕ್ಷೆಯಲ್ಲಿ ಶುಂಠಿ ಬೆಳೆಯುವ ಹೊಲಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಪೀಡೆನಾಶಕಗಳನ್ನು (ಶಿಲೀಧ್ರನಾಶಕಗಳು, ಕೀಟನಾಶಕಗಳು ಮತ್ತು ಕಳೆನಾಶಕಗಳು) ಸುರಿಯುತ್ತಿದ್ದಾರೆ ರೈತರು. ಹಾಗಾಗಿ ಶುಂಠಿ ಬೆಳೆದು ಲಾಭ ಬಾಚಿಕೊಂಡ ಬಳಿಕ ಆ ಹೊಲವನ್ನು ಕೆಲವು ವರುಷ ಪಾಳುಬಿಡಬೇಕಾಗುತ್ತದೆ. (ಆ ವಿಷಭರಿತ ಜಮೀನಿನಲ್ಲಿ ಬೇರೆ ಬೆಳೆ ಬೆಳೆದರೆ, ಅದರ ಫಸಲಿನಿಂದಾಗಿ ಲೇಖನದ ಆರಂಭದಲ್ಲಿ ತಿಳಿಸಿದಂತಹ ಅಪಾಯ ಖಂಡಿತ.)
ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ ಅಂಗವಾದ ಇಕಾಲಜಿ ವಿಜ್ನಾನಗಳ ಕೇಂದ್ರವು ೨೦೧೪ರಲ್ಲಿ ನಡೆಸಿದ ಅಧ್ಯಯನದ ಫಲಿತಾಂಶಗಳು ಅಂತಹ ಅಪಾಯ ಸಂಭವ(ರಿಸ್ಕ್)ವನ್ನು ಖಚಿತ ಪಡಿಸುತ್ತವೆ. ಶುಂಠಿ ಬೇಸಾಯದಲ್ಲಿ ವಿಷರಾಸಾಯನಿಕಗಳ ವಿವೇಚನಾರಹಿತ ಬಳಕೆಯಿಂದಾಗಿ ದಾಖಲಾಗಿರುವ ಅಪಾಯಗಳು: ಜೀವವೈವಿಧ್ಯದ ನಾಶ ಮತ್ತು ಮಣ್ಣು, ತೊರೆ, ನದಿ, ಸರೋವರಗಳ ಮಾಲಿನ್ಯ – ಇದು ಇಕಾಲಜಿ ವಿಜ್ನಾನಗಳ ಕೇಂದ್ರದ ಹಿರಿಯ ವಿಜ್ನಾನಿ ಮತ್ತು ಅಧ್ಯಯನ ವರದಿ ತಂಡದ ಮುಂದಾಳು ಟಿ.ವಿ. ರಾಮಚಂದ್ರನ್ ನೀಡುವ ಮಾಹಿತಿ.
ಶುಂಠಿ ಬೇಸಾಯದ ಜಮೀನಿನ ಹತ್ತಿರದ ತೊರೆ ಮತ್ತು ಕೆರೆಗಳಿಂದ ಮೀನು, ಏಡಿ ಮತ್ತು ಕಪ್ಪೆಗಳು ಕಣ್ಮರೆ ಆಗುತ್ತಿವೆ. ವರದಾ, ಕುಮುದಾವತಿ, ತುಂಗಾ ಮತ್ತು ಭದ್ರಾ ನದಿಗಳ ನೀರು, ಶುಂಠಿ ಬೇಸಾಯ ಹೊಲಗಳಿಗೆ ಸುರಿದ ವಿಷರಾಸಾಯನಿಕಗಳಿಂದಾಗಿ ಕಲುಷಿತವಾಗುತ್ತಿದೆ. ಶುಂಠಿ ಬೇಸಾಯ ಪ್ರದೇಶದಲ್ಲಿ, ಮಿದುಳು, ಹೃದಯ, ಸಣ್ಣಕರುಳು ಮತ್ತು ಶ್ವಾಸಕೋಶಗಳ ಅನಾರೋಗ್ಯದ ಮತ್ತು ಅಲರ್ಜಿ ಚಿಕಿತ್ಸೆಗೆ ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚುತ್ತಿದೆ.
ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾದ ಶುಂಠಿ ಕೃಷಿಯಿಂದಾಗಿ ದೊಡ್ಡ ಲಾಭ ಆಗಿರುವುದು ಪೀಡೆನಾಶಕಗಳ ಮಾರಾಟ ಮಳಿಗೆಗಳ ಮಾಲೀಕರಿಗೆ! ಶಿಕಾರಿಪುರದ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕ ಮಳಿಗೆಯ ಮಾಲೀಕ ಎಸ್. ಮಂಜುನಾಥ್, ತನ್ನ ವ್ಯವಹಾರ ೨೦೧೦ರಿಂದೀಚೆಗೆ ಹಲವು ಪಟ್ಟು ಜಾಸ್ತಿಯಾಗಿದೆ ಎನ್ನುತ್ತಾರೆ.
ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ ಆ ಅಧ್ಯಯನ ವರದಿಯು ಮಲೆನಾಡಿನಲ್ಲಿ ಪ್ರತಿ ವರುಷ ರೂಪಾಯಿ ಎರಡು ಕೋಟಿ ಬೆಲೆಯ ಪೀಡೆನಾಶಕಗಳು ಮಾರಾಟವಾಗುತ್ತಿವೆ ಎಂಬುದನ್ನು ಬಹಿರಂಗ ಪಡಿಸಿದೆ.
ಶುಂಠಿ ಬೆಳೆಸುವಾಗ ಹೆಕ್ಟೇರಿಗೆ ರೂ.೮ರಿಂದ ರೂ.೧೦ ಲಕ್ಷ ಖರ್ಚು ಮಾಡಬೇಕಾಗುತ್ತದೆ; ಹಾಗಾಗಿ ಕಿಲೋಗಟ್ಟಲೆ ವಿಷರಾಸಾಯನಿಕಗಳನ್ನು ಆ ಬೆಳೆಗೆ ಸುರಿಯಲೇ ಬೇಕಾಗುತ್ತದೆ ಎನ್ನುತ್ತಾರೆ ಶುಂಠಿ ಬೆಳೆಗಾರರು. ಸಾವಯವ ವಿಧಾನದಲ್ಲಿ ಶುಂಠಿ ಬೆಳೆದರೆ ವೆಚ್ಚ ಕಡಿಮೆ; ಫಸಲು ಕಡಿಮೆಯಾದರೂ ಲಾಭ ಕಡಿಮೆಯಾಗದು ಎನ್ನುತ್ತಾರೆ ಅನುಭವಿ ಬೆಳೆಗಾರರು. ನಾವು ಬೆಳೆಸುವ ಆಹಾರ ಆರೋಗ್ಯದಾಯಕ ಆಗಿರಬೇಕೇ ಅಥವಾ ವಿಷಭರಿತ ಆಗಿರಬೇಕೇ? ಇದುವೇ ಈಗಿನ ಸವಾಲು. ಮಣ್ಣು, ನೀರು, ಗಾಳಿ ಎಲ್ಲ ವಿಷಮಯವಾದರೆ ನಮಗಾರಿಗೂ ಉಳಿಗಾಲವಿಲ್ಲ, ಅಲ್ಲವೇ?
ಫೋಟೋ ಕೃಪೆ: ಪಿಕ್ಸಬೇ ಮತ್ತು ಫೋಟೋಸ್ ಕಾರ್ಟ್ ಜಾಲತಾಣ