ಶುಚಿ ಯೋಜನೆಗೆ ಮರುಚಾಲನೆ - ಗುಣಮಟ್ಟದಲ್ಲಿ ರಾಜಿ ಬೇಡ

ಶುಚಿ ಯೋಜನೆಗೆ ಮರುಚಾಲನೆ - ಗುಣಮಟ್ಟದಲ್ಲಿ ರಾಜಿ ಬೇಡ

ರಾಜ್ಯದ ಪ್ರೌಢ ಮತ್ತು ಪದವಿಪೂರ್ವ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಮರುಚಾಲನೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರಂತೆ ಮುಂದಿನ ಎರಡು ವಾರಗಳಲ್ಲಿ ರಾಜ್ಯದ ೧೭.೪೫ ಲಕ್ಷ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸಲಾಗುವುದು. ಹೆಣ್ಣು ಮಕ್ಕಳ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹದಿ ಹರೆಯದ ಹೆಣ್ಣು ಮಕ್ಕಳಲ್ಲಿ ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಶುಚಿತ್ವ ಕಾಯ್ದುಕೊಳ್ಳುವ ಬಗೆಗೆ ಅರಿವು ಮೂಡಿಸುವ ಜತೆಯಲ್ಲಿ ಅವರಲ್ಲಿ ಆರೋಗ್ಯ ರಕ್ಷಣೆಯ ಕಾಳಜಿ ಮೂಡಿಸುವ ಮಹತ್ತರ ಉದ್ದೇಶದೊಂದಿಗೆ ಆರಂಭಿಸಲಾಗಿದ್ದ ಈ ಯೋಜನೆಗೆ ಮರುಚಾಲನೆ ನೀಡುವ ರಾಜ್ಯ ಸರಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ ಮತ್ತು ಸಮುಚಿತವಾದುದಾಗಿದೆ.

ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದಾಗಿ ಅವರನ್ನು ವಿವಿಧ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಕಾಡುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳಾಗಿದ್ದರೂ, ಈ ವಿಷಯದಲ್ಲಿ ಹೆಣ್ಣು ಮಕ್ಕಳು ಕೀಳರಿಮೆಯ ಮನೋಭಾವವನ್ನು ಹೊಂದಿದ್ದಾರೆ. ಇದೇ ವೇಳೆ ಮಕ್ಕಳ ಹೆತ್ತವರು ಮತ್ತು ಹಿರಿಯರು ಕೂಡ ಮುಟ್ಟಿನ ಸ್ರಾವದ ನಿರ್ವಹಣೆಗೆ ಈ ಹಿಂದಿನಂತೆ ಹಳೆಯ ಬಟ್ಟೆ ಬಳಕೆಯಂತಹ ಅವೈಜ್ಞಾನಿಕ ವಿಧಾನಗಳ ಬಳಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದಾಗಿ ಹದಿಹರೆಯದ ಹೆಣ್ಮಕ್ಕಳು ಅನಿವಾರ್ಯವಾಗಿ ಇದೇ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಋತುಸ್ರಾವದ ಕುರಿತಂತೆ ಸಮರ್ಪಕ ತಿಳುವಳಿಕೆ ಇಲ್ಲದಿರುವುದರಿಂದಾಗಿ ಅವರು ಶುಚಿತ್ವವನ್ನು ನಿರ್ಲಕ್ಷಿಸುತ್ತಿರುವುದೂ ಇದೆ. ಇದರಿಂದಾಗಿ ಹೆಣ್ಣುಮಕ್ಕಳನ್ನು ವಿವಿಧ ತೆರನಾದ ಅನಾರೋಗ್ಯ ಕಾಡುವಂತಾಗಿದೆ. 

ಈ ಕಾರಣದಿಂದಾಗಿಯೇ ರಾಜ್ಯ ಸರಕಾರ ‘ಶುಚಿ' ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ವಕ್ಕರಿಸಿ, ಆನ್ ಲೈನ್ ತರಗತಿಗಳು ಚಾಲ್ತಿಗೆ ಬಂದ ಸಂದರ್ಭದಲ್ಲಿ ಈ ಯೋಜನೆಗೆ ಗ್ರಹಣ ಬಡಿದಿತ್ತು. ಒಂದೂವರೆ ವರ್ಷದ ಬಳಿಕ ಶಾಲಾ ತರಗತಿಗಳು ಆರಂಭಗೊಂಡರೂ ಈ ಯೋಜನೆ ಪುನರಾರಂಭಗೊಂಡಿರಲಿಲ್ಲ. ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ‘ಶುಚಿ' ಯೋಜನೆಗೆ ಮರುಚಾಲನೆ ನೀಡಲು ಮುಂದಾಗಿದೆ. ಅದರಂತೆ ಟೆಂಡರ್ ಪ್ರಕ್ರಿಯೆ ಯಾದಿಯಾಗಿ ಬಹುತೇಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಅಂತಿಮ ಹಂತದ ತಪಾಸಣೆಯನ್ನು ಪೂರ್ಣಗೊಳಿಸಿ, ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ನ್ಯಾಪ್ ಕಿನ್ ಗಳನ್ನು ಪೂರೈಕೆ ಮಾಡಲು ಭರದ ಸಿದ್ಧತೆ ನಡೆದಿದೆ.

ಶಾಲಾ-ಕಾಲೇಜುಗಳಿಗೆ ಪೂರೈಸಲುದ್ದೇಶಿಸಿರುವ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಪರೀಕ್ಷಿಸಿಯೇ ಮಕ್ಕಳಿಗೆ ವಿತರಿಸಲು ಸರಕಾರ ಕ್ರಮ ಕೈಗೊಂಡಿದೆಯಾದರೂ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ನ್ಯಾಪ್ ಕಿನ್ ಗಳ ಗುಣಮಟ್ಟದಲ್ಲಿ ಎಲ್ಲೂ ರಾಜಿ ಮಾಡಿಕೊಳ್ಳದೆ ಅತ್ಯಂತ ಸುರಕ್ಷಿತ ಮತ್ತು ನಿಗದಿಪಡಿಸಲಾದ ಮಾನದಂಡಗಳಿಗನುಗುಣವಾಗಿ ತಯಾರಿಸಲ್ಪಟ್ಟ ನ್ಯಾಪ್ ಕಿನ್ ಗಳೇ ಶಾಲಾಕಾಲೇಜುಗಳಿಗೆ ಸರಬರಾಜಾಗುವಂತೆ ಕಟ್ಟೆಚ್ಚರ ವಹಿಸಬೇಕು. ಬಳಕೆ ಅವಧಿ ಮುಗಿದಿರುವ ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ನ್ಯಾಪ್ ಕಿನ್ ಗಳ ಬಳಕೆ ಕೂಡ ಹೆಣ್ಣು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುವ ಮತ್ತು ಅವರ ಅರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇತ್ತ ಸರಕಾರ ಗಂಭೀರ ಲಕ್ಷ್ಯ ಹರಿಸಬೇಕು. ಇದರ ಜತೆಯಲ್ಲಿ ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯಿಂದ ಈ ನ್ಯಾಪ್ ಕಿನ್ ಗಳ ಸಮರ್ಪಕ ಬಳಕೆ ಮತ್ತು ಇದರ ಪ್ರಯೋಜನಗಳ ಕುರಿತಂತೆ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೬-೦೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ