ಶುದ್ಧ ಹೃದಯದ ಪ್ರೇಮ
ಇತ್ತೀಚಿಗೆ ನಮ್ಮ ಕಚೇರಿಗೆ ಒಂದು ಅನಾಮಧೇಯ ಪತ್ರ ಬಂದಿತ್ತು. ಅದರಲ್ಲಿ ಹೆಸರಾಗಲಿ, ವಿಳಾಸವಾಗಲಿ ಇರಲಿಲ್ಲ. ಆದರೆ ಅದರಲ್ಲಿ ಇದ್ದಿದ್ದು ಕಚೇರಿಯ ಕಡತಕ್ಕೆ ಸಂಬಂಧಿಸಿದಾಗಲಿ, ಆಡಳಿತಕ್ಕೆ ಸಂಬಂಧಿಸಿದಾಗಲಿ ಇರಲಿಲ್ಲ. ಆ ಪತ್ರ ಒಂದು ಸಮುದಾಯದವರನ್ನು ಬಿಟ್ಟು, ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯಾದ ಡಿ ದರ್ಜೆ ನೌಕರ, ವಾಹನ ಚಾಲಕರನ್ನು ಬಿಟ್ಟು, ಉಳಿದ ಎಲ್ಲಾ ಸಿಬ್ಬಂದಿಯ ವೈಯಕ್ತಿಕ ವಿಚಾರ ಟೈಪ್ ಮಾಡಲಾಗಿತ್ತು. ಅದು ಹೇಗಿತ್ತೆಂದರೆ ಹಾಜರಾತಿ ವಹಿಯಲ್ಲಿ ಇರುವಂತೆ, ಮೇಲಿಂದ ಕೆಳಕ್ಕೆ ಶ್ರೇಣೀಕೃತವಾಗಿ ಬರೆಯಲಾಗಿತ್ತು. ಸಿಬ್ಬಂದಿ ಎಲ್ಲಿಂದ ಬಂದರು? ಅವರ ಸ್ಥಿತಿ ಏನು ? ಅವರ ವೇಷಭೂಷಣ, ಅವರು ಯಾರ ಜೊತೆ ಮಾತನಾಡುತ್ತಾರೆ ? ಅವರ ನಡತೆ, ಹೀಗೆ ಪ್ರತಿಯೊಬ್ಬರ ತೇಜೋವಧೆ ಮಾಡಿ ಬರೆಯಲಾಗಿತ್ತು. ಆ ಪತ್ರ ಬಂದ ದಿನ ಎಲ್ಲಾ ಸಿಬ್ಬಂದಿ ನನ್ನ ಬಳಿಗೆ ಬಂದರು. ಅವರ ಸಮ್ಮುಖದಲ್ಲಿ ಆ ಪತ್ರ ಓದಿದಾಗ ನನ್ನ ಗಮನಕ್ಕೆ ಹಾಗೂ ಕಚೇರಿಯ ಸಿಬ್ಬಂದಿಯ ಎಲ್ಲರ ಗಮನಕ್ಕೆ ಬಂದಿದ್ದು, ಇದು ಹೊರಗಿನವರು ಬರೆದಿದ್ದಲ್ಲ, ಬರೆದಿದ್ದರೆ ನಮ್ಮ ಕಚೇರಿ ಸಿಬ್ಬಂದಿ ಪೂರ್ಣ ಶಾಮೀಲಾಗಿರಬೇಕು, ಇಲ್ಲವೇ ಬೇರೆಯವರ ಹೆಸರಿನಲ್ಲಿ ನಮ್ಮ ಕಚೇರಿಯ ಸಿಬ್ಬಂದಿಯೇ ಬರೆದಿರುವುದು ಖಾತ್ರಿಯಾಗುತ್ತದೆ.
ಈ ಪತ್ರ ಬಂದ ನಂತರ ಕೆಲಸದ ಒತ್ತಡದಿಂದ ಚರ್ಚಿಸಲು ಆಗಲಿಲ್ಲ. ಪತ್ರ ಚರ್ಚಿಸಬೇಕೊ, ಬೇಡವೋ ಎನ್ನುವ ಗೊಂದಲವಾಯಿತು. ಏಕೆಂದರೆ ಆ ಪತ್ರದಲ್ಲಿ ಬರೆದಿರುವ ವಿಷಯ ಸಂತೋಷ ಕೊಡುವುದಲ್ಲ. ಇದನ್ನು ಚರ್ಚಿಸಿದರೆ ಸಿಬ್ಬಂದಿಯ ಮನಸ್ಥಿತಿ ಹಾಳಾಗುತ್ತದೆ ಎಂದು ಭಾವಿಸಿದೆ. ಆದರೆ ಈ ಪತ್ರ ಬಂದ ಮೇಲೆ ಸಿಬ್ಬಂದಿಗಳ ಮುಖದಲ್ಲಿ ಸಂತೋಷವೇ ಹೊರಟು ಹೋಯಿತು. ಪ್ರತಿಯೊಬ್ಬರ ಮುಖದಲ್ಲಿ ಅಸಮಾಧಾನ, ಅನುಮಾನ ಹೆಚ್ಚಾಗ ತೊಡಗಿತು. ಇದರಿಂದ ಕಚೇರಿಯ ಸುಂದರ ಸಂತೋಷದ ವಾತಾವರಣ ಕಾಣದಾಯಿತು. ಆಗ ಒಂದು ದಿನ ಪೂರ್ವಾಹ್ನ ಎಲ್ಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ಚರ್ಚಿಸಿದಾಗ, ಸಿಬ್ಬಂದಿಗಳೆಲ್ಲ ತಮ್ಮ ತಮ್ಮ ನೋವನ್ನು ತೋಡಿಕೊಂಡರು. ವಿಚಾರಣೆ ಮಾಡಿದಾಗ ಯಾರೊಬ್ಬರೂ ಮಾಡಿಲ್ಲ ಎಂದರು. ಆಗ ಸಿಬ್ಬಂದಿಯಲ್ಲಿ ಕೆಲವರು ದೇವರ ಮೇಲೆ ಆಣೆ ಮಾಡುವುದು. ದೇವರ ಮೊರೆಹೋಗುವುದಾಗಿ ತಿಳಿಸಿದರು. ಇದಕ್ಕೆ ಎಲ್ಲರೂ ಒಪ್ಪಿದರು.
ಈ ಘಟನೆ ಓದಿದಾಗ ನನ್ನನ್ನು ಕಾಡಿದ ಪ್ರಶ್ನೆ, ಏಕೆ ಜನ ಈ ರೀತಿ ಮಾಡುತ್ತಾರೆ?. ವಿಮರ್ಶೆ ಮಾಡಿದಾಗ ನನಗೆ ತಿಳಿದು ಬಂದಿದ್ದೇನೆಂದರೆ...
* ಇಂದಿನ ದಿನಗಳಲ್ಲಿ ಜ್ಞಾನ ಎಲ್ಲಾ ಕಡೆಯಿಂದ ಹರಿದು ಬರುತ್ತಿದೆ. ಹಾಗಾಗಿ ಜ್ಞಾನ ಹೆಚ್ಚಿದೆ ಆದರೆ ಹೃದಯ ಸತ್ತಿದೆ ಅಂದರೆ ಭಾವನೆಗಳು ಬತ್ತಿವೆ.
* ಭಾವನೆ ಬತ್ತಲು ಕಾರಣ ಪಡೆದ ಜ್ಞಾನ ಅನುಭವವಾಗದೇ ಇರುವುದು. ಅನುಭವವಿಲ್ಲದ ಜ್ಞಾನ ಶಿಕ್ಷಣವಲ್ಲ ಅದು ಜ್ಞಾನವೂ ಅಲ್ಲ.
* ಇಂದು ಜನ ಅಂಕಗಳ ಹಿಂದೆ ಬಿದ್ದಿದ್ದು, ಹೆಚ್ಚು ಅಂಕ ಪಡೆದರೆ ಬುದ್ಧಿವಂತ ಎಂದು ತಿಳಿದಿರುವುದರಿಂದ, ಅಂಕ ಪಡೆಯುವುದೇ ಗುರಿಯಾಗಿರುತ್ತದೆ. ಮಾರ್ಗ ಯಾವುದಾದರೂ ಸರಿ?. ಕಂಠ ಪಾಠ ಮಾಡಿಯಾದರೂ ಸರಿ, ಅಂಕ ಬೇಕು. ಕಂಠಪಾಠದಿಂದ ಜ್ಞಾನ ಅನುಭವವಾಗುವುದಿಲ್ಲ.
* ತನ್ನದಲ್ಲದ ಭಾಷೆಯಲ್ಲಿ ಶಿಕ್ಷಣ ಪಡೆಯುವುದು. ಇದರಿಂದ ಶಿಕ್ಷಣ ಅನುಭವಕ್ಕೆ ಬರುವುದಿಲ್ಲ.
* ಖಾಲಿ ಬಿದ್ದ ಭೂಮಿಯಲ್ಲಿ ಬೇಡದ ಹುಲ್ಲು ಗಿಡಗಂಟಿ ಕಳೆ ಬೆಳೆಯುವಂತೆ ಜ್ಞಾನ ಅನುಭವವಾಗದೆ ಇದ್ದಾಗ ಜ್ಞಾನದಲ್ಲಿರುವ ಸೌಂದರ್ಯ, ಮಾಧುರ್ಯ, ಸುವಾಸನೆ, ಸ್ಪರ್ಶ ಅನುಭವ ಮತ್ತು ಕ್ರಿಯಾ ಅನುಭವ ಆಗುವುದಿಲ್ಲ. ಅದರಲ್ಲಿ ದ್ವೇಷ, ಮತ್ಸರ, ಅಸೂಯೆ ಬೆಳೆದು ಹೆಮ್ಮರವಾಗುತ್ತದೆ. ವ್ಯಕ್ತಿಯಲ್ಲಿ ಜ್ಞಾನ ಇರುತ್ತದೆ ಮನಸ್ಸಿನಲ್ಲಿ ದ್ವೇಷ, ಮತ್ಸರ ಇದ್ದಾಗ ಆ ಜ್ಞಾನ ದ್ವೇಷಕ್ಕೆ ಬಳಕೆಯಾಗುತ್ತದೆ. ಅನುಭವ ಇಲ್ಲದ ಶಿಕ್ಷಣ ಪಡೆದಾಗ ಪಡೆದ ಜ್ಞಾನ ದ್ವೇಷಕ್ಕೆ ಬಳಕೆಯಾಗಿ ಸಮಾಜದಲ್ಲಿ ಘರ್ಷಣೆ ವೈಷಮ್ಯಕ್ಕೆ ಕಾರಣವಾಗುತ್ತದೆ.
* ಅನುಭವದ ಶಿಕ್ಷಣ ಪಡೆದಾಗ ಜ್ಞಾನದಲ್ಲಿರುವ ಸೌಂದರ್ಯ, ಮಾಧುರ್ಯ, ಸುವಾಸನೆ, ಸುರುಚಿ ಅನುಭವವಾದಾಗ ಸಂತೋಷವಾಗುತ್ತದೆ. ಜ್ಞಾನದ ಕಾರ್ಯಾನುಭವದಿಂದಲೂ ಸಂತೋಷವಾಗುತ್ತದೆ. ಈ ಸಂತೋಷ ಮನಸ್ಸನ್ನು ತುಂಬಿದಾಗ, ಪ್ರೀತಿ, ಪ್ರೇಮ, ಕರುಣೆ, ಮತ್ತು ಮಮತೆ ಹೃದಯದಲ್ಲಿ ಬೆಳೆಯುತ್ತದೆ. ಪಡೆದ ಜ್ಞಾನ ಸಂತೋಷಕ್ಕೆ ಬಳಕೆ ಆಗುತ್ತದೆ. ಮಕ್ಕಳೇ ಅಂಕ ಕಡಿಮೆಯಾದರೂ ಚಿಂತೆ ಇಲ್ಲ, ಜ್ಞಾನ ಅನುಭವ ಮಾಡಿಕೊಳ್ಳಿ, ಅಲ್ಲವೇ?
-ಎಂ.ಪಿ. ಜ್ಞಾನೇಶ್, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೇಟ್ ತಾಣ