ಶುಮಾಕರನೆಂಬ ವೇಗದ ವಿಪರ್ಯಾಸ
ಈ ಲೋಕದ ವಿಪರ್ಯಾಸಗಳ ಕುರಿತು ಆಲೋಚಿಸಿದಾಗ ನಿಜಕ್ಕೂ ವಿಸ್ಮಯವಾಗುತ್ತದೆ; ಹಾಗೆಯೆ ಖೇದವೂ ಸಹ - ಅದರಲ್ಲೂ ಈ ಘಟನೆಯನ್ನು ನೆನೆದಾಗಲಂತೂ ಈ 'ಗ್ರಹಚಾರ', 'ಟೈಮ್ ಸರಿಯಿಲ್ಲ' ಇತ್ಯಾದಿಯಾಗಿ ಜನ ಸಾಮಾನ್ಯರಾಡುವ ಮಾತು ಅದೆಷ್ಟು ಸತ್ಯವೆನಿಸಿಬಿಡುತ್ತದೆ. ಹೇಳಿ ಕೇಳಿ ಈತ ವೇಗದ ಕ್ರೀಡೆಗಳಲ್ಲೊಂದೆಂದೆ ಪರಿಗಣಿತವಾದ ಕ್ರೀಡೆಯೊಂದರ ಅನಭಿಷಕ್ತ ರಾಜನಾಗಿ ಮೆರೆದವ - ಅದೂ 'ಫಾರ್ಮೂಲ ಒನ್' ರೇಸಿನಲ್ಲಿ ಸತತವಾಗಿ ನಿರಂತರವಾಗಿ ಗೆದ್ದು, ವರ್ಷಗಟ್ಟಲೆ ಚಾಂಪಿಯನ್ನಿನ ಪಟ್ಟ ಅಲಂಕರಿಸಿ ಜನಮನ ಸೂರೆಗೊಂಡವ. ಈ ಕ್ರೀಡೆಗೊ, ವೇಗವೆ ಜೀವಾಳ ಹತೋಟಿ ತಪ್ಪಿದರೆ ನೇರ ಅಂತಕನ ಮನೆಯ ಕದ ತಟ್ಟುವ ಸಾಧ್ಯತೆಯೆ ಬಹಳ. ಅಂತಹ ಕ್ರೀಡೆಯ ಅಪಾಯಕಾರಿ ಮಜಲುಗಳನ್ನೆಲ್ಲ ಪದೆಪದೆ ಮಣಿಸಿ ಗೆದ್ದು ಬಂದ ಮಹಾವೀರ - ಅದೂ ವೇಗದ ಅಸ್ತ್ರ ಬಳಸಿ.
ಯಾರೂ ಸಾಧಿಸದಿದ್ದ ಮಟ್ಟ ಮುಟ್ಟಿದ್ದಾಯ್ತು, ದಾಖಲೆಯ ಮೇಲೆ ದಾಖಲೆ ಬರೆದಿದ್ದೂ ಆಯ್ತು, ಪ್ರಖ್ಯಾತಿಯ ಉತ್ತುಂಗ ಶಿಖರದಲ್ಲಿ ರಾರಾಜಿಸುವ ಗಳಿಗೆಯಲ್ಲೆ ನಿವೃತ್ತಿಯನ್ನು ಘೋಷಿಸಿದ್ದೂ ಆಯ್ತು - ಮತ್ತೆ ಹಿಂದಿರುಗಿ ಬಂದರೂ ಯಾಕೊ ಆ ಹಳೆಯ ಮಟ್ಟ ಮುಟ್ಟಲಾಗದ ಮೇರು ಶಿಖರದಂತೆ ಕಾಡಿತ್ತು . ವೇಗವನ್ನು ಇಷ್ಟರಮಟ್ಟಿಗೆ ಪ್ರೀತಿಸುವ ಜೀವ ಸದಾ ಸುಮ್ಮನಿರಲು ಸಾಧ್ಯವೆ? ಕಾರಿರದಿದ್ದರೆ ಬೇಡ ಎಂದು ಹಿಮದಲ್ಲಿ ಜಾರಾಡುವ ಮನೋಲ್ಲಾಸದ ಕ್ರೀಡೆಯನ್ನು ಆಯ್ದುಕೊಂಡಿತು. ಅಲ್ಲೂ ಬಿಡದೆ ಕಾಡಿದ ವೇಗದ ಭೂತ ಸರಿ ಸುಮಾರು ಗಂಟೆಗೆ ನೂರು ಕಿಲೊಮೀಟರಿನ ಮಟ್ಟಕ್ಕೆ ಮುಟ್ಟಿದಾಗ ಕಾದಿತ್ತು ಗ್ರಹಚಾರದ ನಂಟಿನ ಕುಹಕ. ಜಾರಾಟದಲ್ಲಿ ಕಾಲು ಜಾರಿದ ಶುಮಾಕರನೆಂಬ ಈ ಜೀವಂತ ದಂತಕಥೆ, ಹತೋಟಿ ಮೀರಿ ನಿಯಂತ್ರಣ ಕಳೆದುಕೊಂಡಾಗ ನೇರ ಅಪ್ಪಳಿಸಿದ್ದು ಹಿಮದಲ್ಲಡಗಿದ್ದ ಬಂಡೆಯೊಂದರ ತಲೆಗೆ. ಅದರಲ್ಲೂ ಎಂತಹ ಹೊಡೆತವೆನ್ನುತ್ತೀರಿ? ತಲೆಯ ರಕ್ಷಣೆಗೆಂದು ಹಾಕಿದ್ದ ಶಿರಸ್ತ್ರಾಣವೆ ಎರಡಾಗಿ ಸೀಳಿ ಹೋಗುವಷ್ಟು!
ಆ ಹೊಡೆತಕ್ಕೆ ನೇರ ಕೋಮಾ ಸ್ಥಿತಿಯ ಮಡಿಲ ಸೇರಿದ ಈ ಮಹಾನ್ ಕ್ರೀಡಾಪಟು ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ನಿರತ. ಈಗಲೆ ಏನು ಹೇಳಬರದೆಂಬ ಡಾಕ್ಟರರ ಉವಾಚದ ಜತೆ ಚಿಕ್ಕ ವಯಸಿನ ಈ ವ್ಯಕ್ತಿಯ ಪಕ್ಕದಲ್ಲಿ ಕಣ್ಣೀರಿಡುತ್ತ ನಿಂತಿರುವ ಪತ್ನಿ ಮತ್ತು ಮಕ್ಕಳ ಕುಟುಂಬ. ಬದುಕಿ ಬಂದರೂ ಮೊದಲಿನಂತಿರುವ ಸಾಧ್ಯತೆ ಕಮ್ಮಿ ಎನ್ನುವ ಅಭಿಪ್ರಾಯ ಒಂದೆಡೆಯಾದರೆ, ಆ ಸಾಧ್ಯತೆಯೆ ಶೇಕಡ ಐವತ್ತರಷ್ಟು ಮಾತ್ರ ಎನ್ನುವ ಮತ್ತೊಂದು ಚಿಂತಕರ ಚಾವಡಿ. ಜೀವನವೆಲ್ಲ ಹೋರಾಟದಲ್ಲೆ ಸಾಗಿಸಿದ ಈ ಗಟ್ಟಿ ಜೀವ ಹೇಗೊ ಬದುಕುಳಿಯುವ ಸಾಧ್ಯತೆಯೆ ಹೆಚ್ಚೆಂದು ಬಹುತೇಖರ ಅಭಿಪ್ರಾಯ, ಅಭಿಲಾಷೆಯಾದರೂ ಅದು ಮೊದಲಿನ ಶುಮಾಕರನಾಗಿರಲಾರದು ಎಂಬುದು ಎಲ್ಲರ ಅಭಿಮತ ಸಹ.
ವಿಪರ್ಯಾಸವೆಂದರೆ ವೇಗವನ್ನು ಎಡದ ಕೈನ ಆಟದಂತೆ ಆಡಿಸುತ್ತ ಮಾನ ಸಮ್ಮಾನಗಳನ್ನು ಗಳಿಸಿದವನನ್ನು ಅದೇ ವೇಗವೆ ಕೇವಲ ರಂಜನೆಯ ಜಾರುವ ಕ್ರೀಡೆಯ ನೆಪದಲ್ಲಿ ಹೀಗೆ ಹಿಡಿದು ಮುಕ್ಕಿ ಹೆಣಗಾಡಿಸುತ್ತಿರುವ ಪರಿ. ವಿಧಿ ವಿಪರಿತಗಳನ್ನು ನಂಬದವರನ್ನು ಅಚ್ಚರಿಗೊಳಿಸುವ ವಿಧಿ ವಿಪರೀತ. ಹೊಸ ವರ್ಷದ ಹೊಸ್ತಿಲಲಿ ಇದು ಆ ಕುಟುಂಬಕ್ಕೊದಗಿದ ತೀವ್ರ ಆಘಾತ. ಅದೆಲ್ಲ ಸಂಕಟವನ್ನು ಮೀರಿ ಹೋರಾಡಿ ಜಯಿಸುವ ಸಾಮರ್ಥ್ಯ ಅವನದಾಗಲಿ ಮತ್ತು ಜೀವನದ ಮಿಕ್ಕ ಗಳಿಗೆಗಳನ್ನು ಸಂತಸದಿಂದ ಸವಿಯುತ್ತ ಕಳೆಯುವ ಅದೃಷ್ಟ ಶುಮಿಗೆ ಮತ್ತೆ ಒದಗಿ ಬರಲಿ ಎಂದು ಹಾರೈಸುತ್ತ ಈ ವಿಪರ್ಯಾಸದ ಕುರಿತಾದ ಕಿರುಗವನವೊಂದು ಇಲ್ಲಿ ಪ್ರಸ್ತುತ - ಖೇದ, ವಿಷಾದದ ಹೂರಣದೊಂದಿಗೆ.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಶುಮಾಕರನೆಂಬ ವೇಗದ ವಿಪರ್ಯಾಸ
____________________________
ಶುಮಾಕರ ಬರೆದದ್ದು ಇತಿಹಾಸ
ಫಾರ್ಮೂಲ ಒಂದರ ಸಹವಾಸ
ವೇಗದೊಂದಿಗೆ ತಾನಾಡಿ ಸರಸ
ದಾಖಲೆ ಬರೆದನೆ ಪ್ರತಿ ದಿವಸ ||
ಇಂದಾದರು ಕಾರಿನ ಜತೆ ನಿವೃತ್ತಿ
ಬಿಟ್ಟುಹೋಗದಲ್ಲಾ ವೇಗ ಪ್ರವೃತ್ತಿ
ವೇಗ ಹುಡುಕಿದ ಮನ ವೇಗೋತ್ಕರ್ಷ
ಹಿಮದಲಿ ಜಾರಾಡುವಾಟದ ಆಮಿಷ ||
ಗಳಿಗೆ ಏನಾಗಿತ್ತೊ ಕಾಡಿತ್ತು ಗ್ರಹಚಾರ
ಜಾರಿದ ವೇಗ ಹೆಚ್ಚುಕಮ್ಮಿ ನೂರರ ಹತ್ತಿರ
ಜಾರುತಲೆ ಜಾರಿ ಬಿದ್ದನೊ ವೇಗದ ಕಲಿ
ಸೀಳಿದ ಶಿರಸ್ತ್ರಾಣ ಹೆಬ್ಬಂಡೆಗೆ ತಗುಲಿ ||
ನೇರ ಆಸ್ಪತ್ರೆಯ ಹಾದಿಯಲೆ ಕೋಮಾ
ಹೋರಾಟ ನಡೆದಿದೆ ಉಳಿಸಲು ಕರ್ಮ
ಸಾವು ಬದುಕಿನ ಉಯ್ಯಾಲೆಯಲಿ ಸಿಕ್ಕ
ವೀರಾಗ್ರಣಿಗೆ ಬದುಕು ಕೊಡುವುದೆ ಲೆಕ್ಕ? ||
ಅಪಾಯದ ರೇಸಿನಲೆ ಸೆಣಸಿ ದಾಟಿದವನ
ಜಾರುಬಂಡೆಯ ಆಟ ಬೀಳಿಸಿದ ಕಥನ
ವ್ಯಂಗ್ಯ, ಛೋದ್ಯ, ವಿಪರ್ಯಾಸದ ಬದುಕು
ಕಾಲೆಳೆದು ಬೀಳಿಸಲು ನೆಪವೊಂದಿದ್ದರೆ ಸಾಕು ||
-----------------------------------------------
ನಾಗೇಶ ಮೈಸೂರು, ೦೧. ಜನವರಿ. ೨೦೧೪
-----------------------------------------------
Comments
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ನಾಗೇಶರೆ, ಬದುಕು ಎಂತಹ ವಿಚಿತ್ರ ನೋಡಿ. ನನಗೆ ಇರ್ವಿನ್ ನೆನಪಾಯಿತು. -http://kn.wikipedia.org/wiki/%E0%B2%B8%E0%B3%8D%E0%B2%9F%E0%B3%80%E0%B2%...
ಕವನ ಚೆನ್ನಾಗಿದೆ.
In reply to ಉ: ಶುಮಾಕರನೆಂಬ ವೇಗದ ವಿಪರ್ಯಾಸ by ಗಣೇಶ
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ಗಣೇಶ್ ಜಿ ನಮಸ್ಕಾರ,
.
ಮೊಸಳೆಗಳ ರಾಜನಂತಿದ್ದ ಇರ್ವಿಂಗನ ಕಥೆಯೂ ಇದಕ್ಕೆ ಒಳ್ಳೆಯ ಉದಾಹರಣೆ - ಆ ಕೊಂಡಿಗೆ ಧನ್ಯವಾದಗಳು. ಅಂದ ಹಾಗೆ ಈವತ್ತು (ಮೂರನೇ ಡಿಸೆಂಬರ, ಶುಕ್ರವಾರ) , ಶುಮಾಕರನ ನಲವತ್ತೈದನೇ ಹುಟ್ಟುಹಬ್ಬ. ವೈಭವದ ಆಚರಣೆಯ ಯೋಜನೆಯೆಲ್ಲ ಈ ಘಟನೆಯಿಂದಾಗಿ ರದ್ದಾಯಿತಂತೆ. ಅವನ ಕುಟುಂಬದವರಂತೂ ಅವನು ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಹುಟ್ಟುಹಬ್ಬದ ಹೇಳಿಕೆಯಲ್ಲಿ.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ನಾಗೇಶರೆ,
ಆಗಲೇ ’ಬ್ಯಾಕ್ ಟು ಡ್ಯುಟಿ’ ಆಗಿರುವುದು ಸಂತಸದ ವಿಷಯ. ’ನಾವು ಯಾವುದನ್ನು ಅತಿಯಾಗಿ ಪ್ರೀತಿಸುತ್ತೆವೋ ಅದರಿಂದಲೇ ದುಃಖವುಂಟಾಗುತ್ತದ’ ಎನ್ನುವುದು ಆಧ್ಯಾತ್ಮಿಕದಲ್ಲಿ ಪ್ರಚಲಿತದಲ್ಲಿರುವ ಮಾತು. ಇದು ಶುಮಾಕರನ ವಿಷಯದಲ್ಲಿಯೂ ಅಂತೆಯೇ ಗಣೇಶ್ಜಿ ಕೊಟ್ಟ ಕೊಂಡಿಯಲ್ಲಿರುವ ಇರ್ವಿನ್ ವಿಷಯದಲ್ಲೂ ಉಂಟಾಗಿದೆ. ನಿಮ್ಮ ಮಾತುಗಳಲ್ಲೇ ಹೇಳಬೇಕೆಂದರೆ ಇದನ್ನೇ ವಿಧಿ ವಿಪರ್ಯಾಸ ಎನ್ನಬಹುದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ಶುಮಾಕರನೆಂಬ ವೇಗದ ವಿಪರ್ಯಾಸ by makara
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ಶ್ರೀಧರರೆ ನಮಸ್ಕಾರ. ಯಾವುದನ್ನು ಅತಿಯಾಗಿ ಪ್ರೀತಿಸುತ್ತೇವೊ ಅದರಿಂದಲೆ ಹೆಚ್ಚು ದುಃಖವೆನ್ನುವ ಮಾತು ನಿಜಕ್ಕು ಸತ್ಯ. ಅತಿಯಾಗಿ ಪ್ರೀತಿಸಿದ ಮಕ್ಕಳಿಂದ ದೂರವಿರಬೇಕಾದ ಹೆತ್ತವರಾಗಲಿ, ತವರು ಬಿಟ್ಟು ಹೋಗುವ ಹೆಣ್ಣು ಮಕ್ಕಳ ವೇದನೆಯಾಗಲಿ, ಹಿತವಚನ ಧಿಕ್ಕರಿಸಿ ದೂರಗುವ ಸುತರಾಗಲಿ - ಎಲ್ಲವು ಪ್ರೀತಿಯಿತ್ತ ಬಳುವಳಿಯೆ ಆಗಿ ವಿಧಿ ವಿಲಾಸದಂತೆ ಕಾಡುವುದು ಕಾಕತಾಳೀಯವಷ್ಟೆ ಆಗಿರಲಾರದು. ತಮ್ಮೆ ಪ್ರತಿಕ್ರಿಯೆಗೆತುಂಬಾ ಧನ್ಯವಾದಗಳು :-)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ನಾಗೇಶ ಮೈಸೂರು ರವರಿಗೆ ವಂದನೆಗಳು
ಶೂಮಾಕರನ ಸಾಧನೆಗಳನ್ನು ತೆರೆದು ತೋರಿಸುವ ಕವನ <<< ಅಪಾಯದ ರೇಸಿನಲಿ ..............ಕಾಲೆಳೆದು ಬೀಳಿಸಲು ನೆಪವೊಂದ್ದಿದ್ದರೆ ಸಾಕು >>> ಜಗದ ಸಾಮನ್ಯ ನೀತಿಯನು ಎತ್ತಿ ತೋರುವ ಸಾಲುಗಳು. ಉತ್ತಮ ಕವನ ಧನ್ಯವಾದಗಳು.
In reply to ಉ: ಶುಮಾಕರನೆಂಬ ವೇಗದ ವಿಪರ್ಯಾಸ by H A Patil
ಉ: ಶುಮಾಕರನೆಂಬ ವೇಗದ ವಿಪರ್ಯಾಸ
"ಕಾಲೆಳೆದು ಬೀಳಿಸಲು ನೆಪವೊಂದಿದ್ದರೆ ಸಾಕು" - ಈ ಸಾಲುಗಳು ಹೊಳೆದಾಗ ನನಗೂ ತುಂಬಾ ಸೂಕ್ತ ವ್ಯಾಖ್ಯೆಯಾಗಿ ಕಂಡು ಧನ್ಯತೆಯ ಭಾವವು ಮೂಡಿತು. ಇಡೀ ಕವನದ ಸಾರ ಅದೊಂದು ವಾಕ್ಯದಲ್ಲಿ ಸೂಕ್ತವಾಗಿ ಪ್ರತಿಬಿಂಬಿತವಾಗುವುದರಿಂದಲೂ ಅದು ಚೆನ್ನಿದೆಯೆನಿಸಿತು. ಅದನ್ನು ಸೂಕ್ಷ್ಮಜ್ಞರಾದ ತಾವು ಸರಿಯಾಗಿಯೆ ಹಿಡಿದು ಹಾಕಿದ್ದೀರಾ! ಶುಮಿ ಈ ಜಂಜಡದಿಂದ ಶೀಘ್ರವಾಗಿ ಪಾರಾಗಿ ಹೊರಬರಲೆಂದು ಆಶಿಸೋಣ. ತಮ್ಮೀ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು :-)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ನಾಗೇಶ ಜಿ, ಶೂಮಾಕರನ ಜೀವನ ಉಯ್ಯಾಲೆ ಯಾಡುತ್ತಿರುವ ಸಂದರ್ಭದಲ್ಲಿ ಸಕಾಲಿಕ ಲೇಖನ. ಶೂಮಾಕರನ ಬದುಕು ಮೊದಲಿಂತಾಗಲಿ ಎಂಬುದೇ ನನ್ನದೂ ಹಾರೈಕೆ.
In reply to ಉ: ಶುಮಾಕರನೆಂಬ ವೇಗದ ವಿಪರ್ಯಾಸ by lpitnal
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ನಮಸ್ಕಾರ ಇಟ್ನಾಳರೆ, ಜಗದ ಅಭಿಮಾನಿಗಳ ಮತ್ತು ಹಿತೈಷಿಗಳೆಲ್ಲರ ಹಾರೈಕೆ ಅವನ ಹೋರಾಟಕ್ಕೆ ನೀಡುವ ನೈತಿಕ ಬಲವಾಗಲೆಂದು ಆಶಿಸಿ ಕಾದು ನೋಡುವ. ಪ್ರತಿಕ್ರಿಯೆಗೆ ಧನ್ಯವಾದಗಳು :-)
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ಬೆಂಗಳೂರಿನ ರಸ್ತೆಗಳಲ್ಲಿ ಇಂತಹ ಶುಮಾಕರರು ತಾವು ಅಪಾಯಕ್ಕೆ ಸಿಕ್ಕುವದಲ್ಲದೆ ಇತರರನ್ನು ಸದಾ ಅಪಾಯಕ್ಕೆ ನೂಕುತ್ತಲೆ ಇರುತ್ತಾರೆ !
ಉತ್ತಮ ಕವನ ನಾಗೇಶಮೈಸೂರು ಅಭಿನಂದನೆಗಳು
In reply to ಉ: ಶುಮಾಕರನೆಂಬ ವೇಗದ ವಿಪರ್ಯಾಸ by partha1059
ಉ: ಶುಮಾಕರನೆಂಬ ವೇಗದ ವಿಪರ್ಯಾಸ
ಪಾರ್ಥಾ ಸಾರ್, ಪುಣ್ಯಕ್ಕೆ ಅದೆ ಟ್ರಾಫಿಕ್ಕಿನ ದೆಸೆಯಿಂದಾಗಿ, ತೀರಾ ಮಿತಿ ಮೀರಿದ ವೇಗದಲ್ಲಿ ಹೋಗಲಾಗದಂತೆ ಪ್ರತಿಬಂಧಿಸಲು ಸಾಧ್ಯವಾಗಿದೆಯೇನೊ? ಇರದಿದ್ದರೆ ನಮ್ಮ ಬೀದೀ ಶುಮಾಕಾರರ ಹಾವಳಿ ಇನ್ನೆಷ್ಟು ಅಪಾಯಕಾರಿಯಾಗಿ ಪರಿವರ್ತಿತವಾಗುತ್ತಿತ್ತೊ ಹೇಳಬರದು! ಧನ್ಯವಾದಗಳು :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು