ಶೂಟ್ ಔಟ್ @ ಅಮೆರಿಕ...
ವಿಶ್ವದ ಶ್ರೀಮಂತ, ಬಲಿಷ್ಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಟ ಮಟ್ಟದಲ್ಲಿ ಎತ್ತಿಹಿಡಿಯುತ್ತಿರುವ ಪ್ರಜಾಪ್ರಭುತ್ವ ದೇಶ ಅಮೆರಿಕ. ಇದನ್ನು ವಿಶ್ವದ ದೊಡ್ಡಣ್ಣ ಎಂದೂ ಕರೆಯಲಾಗುತ್ತದೆ. ಇಂತಹ ದೇಶದಲ್ಲಿ ಆಗಾಗ ಯಾರೋ ತಲೆಕೆಟ್ಟವರು ಬಂದೂಕು ಹಿಡಿದು ಮನಬಂದಂತೆ ಶೂಟ್ ಮಾಡುತ್ತಾರೆ. ಗುಂಡಿಗೆ ಸಿಕ್ಕ ಅಮಾಯಕರು ಸಾಯುತ್ತಿರುತ್ತಾರೆ. ಎಷ್ಟೋ ಬಾರಿ ಶಾಲೆಯ ವಿದ್ಯಾರ್ಥಿಗಳೇ ಈ ರೀತಿ ಹುಚ್ಚರಂತೆ ವರ್ತಿಸಿ ಅನೇಕ ಬಾಲಕರ ಸಾವಿಗೆ ಕಾರಣವಾಗಿದ್ದಾರೆ. ಅಮೆರಿಕದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಇದು ಒಂದು ದೊಡ್ಡ ಸಮಸ್ಯೆಯಾಗಿದೆ. ಅಲ್ಲಿನ ಬದುಕು ಭಯೋತ್ಪಾದಕ ದಾಳಿಗೆ ಒಳಗಾದಂತೆ ಅನಿಶ್ಚಿತತೆ ಕಾಡುತ್ತಿದೆ.
ಅಷ್ಟು ಮಾತ್ರವಲ್ಲ, ಒಮ್ಮೆ ಅಮೆರಿಕಾದ ಪ್ರಖ್ಯಾತ ಟೆನಿಸ್ ಆಟಗಾರರಾದ ಸರೇನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಟಿನಿಸ್ ಆಡಲು ಬೆಂಗಳೂರಿಗೆ ಬಂದಿದ್ದಾಗ ಅವರ ಜೊತೆ ಬಂದಿದ್ದ ತಂದೆ ಒಂದು ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಹೇಳಿದರು. " ನೀವು ಭಾರತೀಯರು ನಮಗಿಂತ ಹೆಚ್ಚು ಸುರಕ್ಷಿತವಾಗಿದ್ದೀರಿ. ಅಲ್ಲಿ ಅಮೆರಿಕದಲ್ಲಿ ನಮಗೆ ಅಭದ್ರತೆ ಹೆಚ್ಚು. ATM ಕೌಂಟರಿನಲ್ಲಿ ಹಣ ಡ್ರಾ ಮಾಡಿ ಈಚೆಗೆ ಬರುವಷ್ಟರಲ್ಲಿ ಯಾರೋ ಬಂದೂಕು ತೋರಿಸಿ ಹಣ ದೋಚುವ ಸಾಧ್ಯತೆ ಇದೆ. ಅಲ್ಲಿ ಬಂದೂಕುಗಳಿಂದ ಸಾಮಾನ್ಯ ಜನರಿಗೆ ತುಂಬಾ ಅಪಾಯವಾಗಿದೆ " ಎಂದು ಹೇಳಿದರು.
ಜೊತೆಗೆ ಇನ್ನೊಂದು ಘಟನೆ ನೆನಪಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅಮೆರಿಕಾದ ಕೆಲವು ಪ್ರಾಂತ್ಯಗಳಲ್ಲಿ ಭೀಕರ ಚಂಡಮಾರುತ ಬೀಸಿ ಸಾಕಷ್ಟು ಅನಾಹುತ ಉಂಟು ಮಾಡಿತು. ಆಗ ಆ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಕೆಲವರು ಅಸಹಾಯಕರ ದರೋಡೆ ಮಾಡಿದ್ದರು. ಈಗಲೂ ಅಮೆರಿಕಾದಲ್ಲಿ ಸ್ಲಂಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ ಎಂದು ಹೇಳಲಾಗುತ್ತದೆ ಮತ್ತು ಅಲ್ಲಿ ಮಾದಕವಸ್ತುಗಳ ಕಳ್ಳಸಾಗಾಣಿಕೆ ಸಹ ವ್ಯವಸ್ಥಿತವಾಗಿ ನಡೆಯುತ್ತದೆ ಎಂದೂ ಸುದ್ದಿ ಇದೆ. ಇದು ಅಮೆರಿಕದ ನಿತ್ಯ ಜನಜೀವನದ ಇನ್ನೊಂದು ಮುಖ. ಸಾಕಷ್ಟು ಉತ್ತಮ ಸಾಮಾಜಿಕ ಮೌಲ್ಯಗಳ ನಡುವೆಯೂ ಅಮೆರಿಕ ಈ ರೀತಿಯ ಕೆಲವು ಸಮಸ್ಯೆಗಳಿಂದ ಬಳಲುತ್ತಿದೆ.
ಅಮೆರಿಕಾದಲ್ಲಿ ವಾಸಿಸುತ್ತಿರುವ ಕೆಲವು ಗೆಳೆಯರೊಂದಿಗೆ ಈ ಬಗ್ಗೆ ಚರ್ಚಿಸಿದಾಗ..ಮೂಲತಃ ಅಮೆರಿಕ ವಲಸಿಗರ ದೇಶ. ಸುಮಾರು 300 ವರ್ಷಗಳ ಇತಿಹಾಸವಿದೆ. ಬಹುಮುಖ್ಯವಾಗಿ ಆಫ್ರಿಕಾ ಮತ್ತು ಯೋರೋಪಿನ ಮೂಲದವರು ಹೆಚ್ಚಾಗಿದ್ದಾರೆ. ಏಷ್ಯಾ ಮತ್ತು ಉತ್ತರ - ದಕ್ಷಿಣ ಅಮೆರಿಕಾದ ಅನೇಕ ದೇಶಗಳಿಂದ ಬಂದವರು ಸಹ ಅಲ್ಲಿ ವಾಸವಾಗಿದ್ದಾರೆ. ಆ ಕಾರಣಕ್ಕಾಗಿ ಜನಾಂಗೀಯ ದ್ವೇಷ ಮತ್ತು ವರ್ಣಬೇಧ ಈಗಲೂ ಹೊಗೆಯಾಡುತ್ತಲೇ ಇದೆ. ಆದರೆ ಅಲ್ಲಿ ಅಪರಾಧ ಹೆಚ್ಚಾಗಲು ಮೆಕ್ಸಿಕೋ ಗಡಿಯಿಂದ ನುಸುಳುವ ಕಳ್ಳ ಸಾಗಾಣಿಕೆದಾರರು, ಮಾದಕವಸ್ತುಗಳ ಮಾರಾಟಗಾರರು ಮುಂತಾದ ಅನಧಿಕೃತ ಜನಗಳೇ ಕಾರಣ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ಅಥವಾ ಬೇಲಿ ನಿರ್ಮಿಸಲು ಸುಮಾರು 80,000 ( ಎಂಬತ್ತು ಸಾವಿರ ಕೋಟಿ ) ಗಳ ಯೋಜನೆ ರೂಪಿಸಿದ್ದರು. ಬಹುಶಃ ಹಣಕಾಸಿನ ತೊಂದರೆಯಿಂದ ಅದು ಇನ್ನೂ ಜಾರಿಯಾಗಿಲ್ಲ ಎಂಬ ಸುದ್ದಿ ಇದೆ.
ಆದರೆ ಈ ಶೂಟ್ ಔಟ್ ಗಳು ನೇರವಾಗಿ ಅಲ್ಲಿನ ಜನರೇ ಮಾಡುತ್ತಿರುವುದು. ಇದು ಆ ಸಮಾಜದ ಮಾನಸಿಕ ಸ್ಥಿತಿಯನ್ನೇ ಪ್ರಶ್ನಿಸುವಂತೆ ಮಾಡಿದೆ. ಇದು ಅಪರೂಪ ಎಂಬುದು ಹೋಗಿ ಈಗ ಸಹಜವಾಗುತ್ತಿದೆ. ಅಮೆರಿಕದಲ್ಲಿ ಬಂದೂಕು ಲೈಸೆನ್ಸ್ ಕಡ್ಡಾಯವಲ್ಲ ಎಂಬ ನಿಯಮ ಒಂದು ನೆಪ ಮಾತ್ರ. ಅದಕ್ಕಿಂತ ಅಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಸ್ವಲ್ಪ ಲೋಪ ಇರಬಹುದು. ಸಿನಿಮಾಗಳು, ವಿಡಿಯೋ ಗೇಮ್ ಗಳು, ಪೋಷಕರ ಕೆಲಸದ ಒತ್ತಡ, ಬದುಕಿನ ಬಗ್ಗೆ ಇರುವ ದೃಷ್ಟಿಕೋನ ಮುಂತಾದ ಸಮಾಜ ಶಾಶ್ತ್ರೀಯ ಅಧ್ಯಯನಕ್ಕೆ ಯೋಗ್ಯವಾದ ವಿಷಯಗಳು ಇರಬಹುದು.
ಒಟ್ಟಿನಲ್ಲಿ ಹೆಚ್ಚು ಕಡಿಮೆ ಭಯೋತ್ಪಾದನೆಯಂತ ಘಟನೆಗಳಲ್ಲಿ ಅಮಾಯಕರ ಸಾವು ಅದರಲ್ಲೂ ಶಾಲಾ ಮಕ್ಕಳ ಸಾವು ಜಗತ್ತಿನ ಯಾವ ಮೂಲೆಯಿಂದ ಬಂದರೂ ಅದು ಮನಸ್ಸಿಗೆ ಘಾಸಿ ಮಾಡುತ್ತದೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಅಭಿವೃದ್ಧಿಯ ವೇಗ ಮತ್ತು ದಿಕ್ಕು ಬಹಳ ಮುಖ್ಯವಾಗುತ್ತದೆ ಎಂದು ಅನಿಸುತ್ತಿದೆ. ಈ ಅಭಿವೃದ್ಧಿಯಲ್ಲಿ ಮಕ್ಕಳ ಬೆಳವಣಿಗೆಯನ್ನು - ವಾತಾವರಣವನ್ನು ನಿರ್ಲಕ್ಷಿಸಿದರೆ ಭವಿಷ್ಯ ತುಂಬಾ ಅಪಾಯಕಾರಿಯಾಗಬಹುದು. ಏಕೆಂದರೆ ಮಕ್ಕಳ ಮನಸ್ಥಿತಿ ಅದನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆಯೇ ಹೆಚ್ಚು.
ಭಾರತದಲ್ಲಿ ಹೆಚ್ಚಾಗುತ್ತಿರುವ ಅತಿಯಾದ ತಂತ್ರಜ್ಞಾನ, ಕೆಲವರ ದಿಢೀರ್ ಶ್ರೀಮಂತಿಕೆ, ಕುಸಿಯುತ್ತಿರುವ ಮಾನವೀಯ ಮೌಲ್ಯಗಳು ಮುಂದಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪಲು ಕಾರಣವಾಗಬಹುದು. ಅಮೆರಿಕದ ಶೂಟ್ ಔಟ್ ಪ್ರಕರಣಗಳು ನಮಗೆ ಎಚ್ಚರಿಕೆಯ ಗಂಟೆ ಎಂದು ಅರ್ಥಮಾಡಿಕೊಳ್ಳಬೇಕು. ದುಡಿಮೆಯೇ ದುಡ್ಡಿನ ತಾಯಿ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ, ಕರುಣೆಯೇ ಮನುಷ್ಯ ಧರ್ಮ ಮುಂತಾದ ಮಹತ್ವದ ಜೀವನ ವಿಧಾನಗಳನ್ನು ನಿಧಾನವಾಗಿ ಮತ್ತು ಅರ್ಥಪೂರ್ಣವಾಗಿ ಮಕ್ಕಳಿಗೆ ಕಲಿಸಿಕೊಡಬೇಕಿದೆ. ಇಲ್ಲದಿದ್ದರೆ ಮಕ್ಕಳ ಮನಸ್ಸು ನಿಯಂತ್ರಣ ಮೀರಬಹುದು...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ