ಶ್ರೀಗಂಧದ ಘಮಲಿನ ಮುತ್ತು ಮಣಿ

ಶ್ರೀಗಂಧದ ಘಮಲಿನ ಮುತ್ತು ಮಣಿ

ಕವನ

ಕನ್ನಡಮ್ಮನ ಸೇವೆಯನು ಒಮ್ಮತದಿ ಮಾಡೋಣ

ಕನ್ನಡ ನಾಡುನುಡಿಯ ಅನವರತ ರಕ್ಷಿಸೋಣ|

ತನುವ ಕಣಕಣದಲಿ ತಾಯಿಭಾಷೆ ಬಿಂಬಿಸೋಣ

ನಾಲಿಗೆಯ ಮೇಲೆ ಹೊರಳಾಡಲಿ  ಹೊನ್ನಿನ ಕಣ||

 

ಓದು ಬರಹದಲಿ ಕಾಣಿಸಲಿ ಚೆಲುಕನ್ನಡ

ಕಂದಮ್ಮಗಳ ಭಾಷಾ ಮಾಧ್ಯಮವಾಗಲಿ  ಒಲವ ಕನ್ನಡ|

ಅನ್ಯಭಾಷೆಯ ದ್ವೇಷಿಗಳು ನಾವಲ್ಲ ನೋಡು

ಅಪ್ಪಿ ಒಪ್ಪುವ ಆದರಣೀಯ ಗುಣ ನಮ್ಮನಾಡು||

 

ಸಾಸಿರ ವರುಷಗಳ ಗತ ಇತಿಹಾಸದ ಸೊಗಡಿದೆ

ಹಳೆ ನಡು ಹೊಸಗನ್ನಡದ ಇಂಪು ಕಂಪಿದೆ|

ಪಂಪ ರನ್ನ ಪೊನ್ನ ಜನ್ನ ಹರಿಹರರ ನುಡಿಯಲಡಗಿದೆ

ಬೇಂದ್ರೆ ಪುಟ್ಟಪ್ಪ ಅಡಿಗ ಕಯ್ಯಾರ ಗೋಕಾಕರ ಶ್ರಮವಿದೆ||

 

ಸಾಹಿತ್ಯ ಸೇವೆಯಲಿ ತಾಯಿಮಾತು ಪ್ರತಿಧ್ವನಿಸಲಿ

ಗಡಿನಾಡಿನಲಿ ಎಸಗುವ ಭಾಷಾ ಪ್ರಹರವ ನಿಲ್ಲಿಸಲಿ|

ನಿಟ್ಟುಸಿರು ಹೊರಚೆಲ್ಲಿ ಶುದ್ಧ ಉಸಿರು ಬೆಸೆಯಲಿ

ಭುವನೇಶ್ವರಿಯ ತನುಮನದಿ ಅಕ್ಷರಮಾಲೆ ಪ್ರಕಾಶಿಸಲಿ||

 

ಕನ್ನಡ ನೆಲಜಲ ಶ್ರೀ ಗಂಧದ ಘಮಲಿನ ಮುತ್ತು ಮಣಿ

ಕವಿಕೋಗಿಲೆ ದಾಸವರೇಣ್ಯ ಸಂತರು ಹೆಣೆದ ಸರಮಣಿ|

ಹೋಳಿಗೆಯೊಳಗಿನ ಸಿಹಿಪಾಕದ ಸವಿ ರುಚಿಯ ಹೂರಣ

ನಮ್ಮೆಲ್ಲರ ಮಾತು ಕನ್ನಡ ಹೆತ್ತಬ್ಬೆಯ ಸೆರಗಿನ ತೋರಣ

 

(ವಿಶ್ವ ಮಾತೃಭಾಷಾ ಸಂದರ್ಭದಲ್ಲಿ ಬರೆದ ಕವನ)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್