ಶ್ರೀಸಾಮಾನ್ಯರು ಪ್ರಶ್ನಿಸುವುದನ್ನು ಕಲಿಯಬೇಕು

ಶ್ರೀಸಾಮಾನ್ಯರು ಪ್ರಶ್ನಿಸುವುದನ್ನು ಕಲಿಯಬೇಕು

ವಾರೆಂಟ್ ಜಾರಿಯಾಗಿದ್ದ ವ್ಯಕ್ತಿಯ ಬದಲಾಗಿ ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಕ್ಕಾಗಿ ಮತ್ತು ಬಂಧಿತ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ಬಾಧಿತ ವ್ಯಕ್ತಿಗೆ ೫ ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಬೆಂಗಳೂರಿನ ನಿವಾಸಿ ಎನ್.ನಿಂಗರಾಜು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ. ಪರಿಹಾರದ ಮೊತ್ತವನ್ನು ಯಾವ ಪೋಲೀಸ್ ಅಧಿಕಾರಿ ತಪ್ಪೆಸಗಿದ್ದಾರೋ ಅವರ ವೇತನದಿಂದ ವಸೂಲಿ ಮಾಡಲು ತಿಳಿಸಿದೆ. ಆ ಮೂಲಕ ತಪ್ಪಿತಸ್ಥ ಪೋಲೀಸ್ ಅಧಿಕಾರಿಗೆ ಚಾಟಿ ಬೀಸಿದೆ. ಜತೆಗೆ, ಬಂಧಿಸುವ ವಿಧಿ ವಿಧಾನ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವಂತೆಯೂ ಸೂಚಿಸಿದೆ. ಸಾಮಾನ್ಯ ಜನರ ಹಕ್ಕು ರಕ್ಷಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಈ ಆದೇಶವು ಮಹತ್ವದ್ದಾಗಿದೆ. 

ಪೋಲೀಸ್ ಕಾರ್ಯವೈಖರಿಯಲ್ಲಿನ ಈ ರೀತಿಯ ತಪ್ಪುಗಳು, ಬೇಜವಾಬ್ದಾರಿತನದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ನ್ಯಾಯಾಲಯದ ತನಕ ಬರುವುದಿಲ್ಲ. ಶ್ರೀ ಸಾಮಾನ್ಯರಿಗೂ ಕಾನೂನಿನ ಕುರಿತು ಅರಿವು ಇಲ್ಲದಿರುವುದೇ ಕಾರಣ. ಆದರೆ, ಯಾವುದೂ ತಪ್ಪು ಮಾಡದೇ ಬಂಧನಕ್ಕೊಳಗಾಗಿದ್ದ ಬೆಂಗಳೂರಿನ ನಿವಾಸಿ ನಿಂಗರಾಜು ಅವರು ಪೋಲೀಸರ ಬೇಜವಾಬ್ದಾರಿತನದ ವಿರುದ್ಧ ಕೋರ್ಟ್ ಮೆಟ್ಟಲೇರಿ, ನ್ಯಾಯವನ್ನು ಪಡೆದುಕೊಂಡಿದ್ದಾರೆ. ಇದು, ಮೌನವಾಗಿ ಪೋಲೀಸ್ ದೌರ್ಜನ್ಯಗಳನ್ನು ಅನುಭವಿಸುವವರಿಗೆ ಧೈರ್ಯ ನೀಡಲಿದೆ ಎಂದು ಭಾವಿಸಬಹುದಾಗಿದೆ. ಈ ಪ್ರಕರಣವನ್ನು ಮತ್ತೊಂದು ಮಗ್ಗಲಿನಿಂದಲೂ ನೋಡಬಹುದು. ಪೋಲೀಸರಿಂದ ಮಾತ್ರವಲ್ಲದೇ ಇನ್ಯಾವುದೇ ರೀತಿಯ ಅನ್ಯಾಯವಾದಾಗಲೂ ಜನರು ಕೋರ್ಟ್ ಗಳಿಗೆ ಹೋಗುವುದಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. "ನಮ್ಮ ದೇಶದಲ್ಲಿ ತುಂಬಾ ಕಡಿಮೆ ಜನರು ಕೋರ್ಟ್ ಮೊರೆ ಹೋಗುತ್ತಾರೆ. ಉಳಿದವರು ಮೌನವಾಗಿಯೇ ತಮ್ಮ ಮೇಲಾಗುವ ಅನ್ಯಾಯವನ್ನು ಸಹಿಸಿಕೊಳ್ಳುತ್ತಾರೆ." ಎಂದು ಸಿಜೆಐ ಅವರು ಅಭಿಪ್ರಾಯಪಟ್ಟಿದ್ದರು. ವಾಸ್ತವದಲ್ಲಿ ಇದು ನಿಜ. ಬಹಳಷ್ಟು ಜನರು ಕೋರ್ಟ್ ಕಚೇರಿ ನಮಗ್ಯಾಕೆ ಎಂದು ಸುಮ್ಮನಿದ್ದುಬಿಡುತ್ತಾರೆ.

ನಮ್ಮ ಮೂಲಭೂತ ಹಕ್ಕುಗಳೆಲ್ಲವೂ ಸಂವಿಧಾನದತ್ತವಾಗಿ ಬಂದಿದೆ. ಅವುಗಳನ್ನು ಯಾವುದೇ ವ್ಯಕ್ತಿಯಾಗಲೀ, ವ್ಯವಸ್ಥೆಯಾಗಲೀ, ಸರಕಾರವಾಗಲೀ ದಮನಿಸಲು ಇಲ್ಲವೇ ಹತ್ತಿಕ್ಕಲು ಸಾಧ್ಯವಿಲ್ಲ. ಒಂದೊಮ್ಮೆ, ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದರೆ ಸಂವಿಧಾನವು ಮಧ್ಯೆ ಪ್ರವೇಶಿಸಿ, ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ. ಈ ವಿಷಯದಲ್ಲಿ ಕೋರ್ಟ್ ಗಳ ಕ್ರಿಯಾಶೀಲತೆ ಹಾಗೂ ಅವುಗಳ ಪಾತ್ರ ಬಹುಮುಖ್ಯವಾಗುತ್ತದೆ. ಈ ಅಂಶವನ್ನು ನಾವು ಕ್ರಿಯಾಶೀಲತೆ ಹಾಗೂ ಅವುಗಳ ಪಾತ್ರ ಬಹುಮುಖ್ಯವಾಗುತ್ತದೆ. ಈ ಅಂಶವನ್ನು ನಾವು ನಿಂಗರಾಜು ಪ್ರಕರಣದಲ್ಲೂ ಕಾಣಬಹುದಾಗಿದೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರವಲ್ಲ, ಅನ್ಯಾಯಗಳು ನಡೆದಾಗ, ದೌರ್ಜನ್ಯಗಳು ನಡೆದಾಗ ಜನರು ಕೋರ್ಟ್ ನೆರವು ಪಡೆದುಕೊಳ್ಳಲೇಬೇಕು. ಅನ್ಯಾಯ ನಡೆದಾಗ ಬಲಾಢ್ಯರನ್ನು, ಸರಕಾರವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರವೇ ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯ. ಜತೆಗೆ, ಈ ರೀತಿಯ ಪ್ರಕರಣಗಳು ಕೋರ್ಟ್ ಮುಂದೆ ಬಂದಾಗ, ನ್ಯಾಯಾಲಯಗಳೂ ಬಹಳ ಗಂಭೀರವಾಗಿ ಪರಿಗಣಿಸಬೇಕು. ಹೆಚ್ಚು ಕ್ರಿಯಾಶೀಲತೆಯಿಂದ ವರ್ತಿಸಬೇಕು ಮತ್ತು ತ್ವರಿತ ನ್ಯಾಯದಾನ ಮಾಡಬೇಕು. ಆಗ ಮಾತ್ರವೇ ಕೋರ್ಟ್ ನಂಬಿ ಬರುವ ಜನರಿಗೂ ವಿಶ್ವಾಸ ಮೂಡಲು ಸಾಧ್ಯ. ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ  ಬೆಂಗಳೂರು ನಿವಾಸಿ ನಿಂಗರಾಜು ಅವರ ಪ್ರಕರಣವು ಮಹತ್ವವನ್ನು ಪಡೆದುಕೊಂಡಿದೆ. ಇಂಥ ಅನ್ಯಾಯಗಳನ್ನು ಎದುರಿಸುತ್ತಿರುವ ಜನರು ಕೋರ್ಟ್ ಮೂಲಕ ತಮ್ಮ ಪಾಲಿನ ನ್ಯಾಯವನ್ನು ಪಡೆದುಕೊಳ್ಳಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೩-೦೮-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ