ಶ್ರೀ ಅನಂತಪದ್ಮನಾಭ ವ್ರತ

ಶ್ರೀ ಅನಂತಪದ್ಮನಾಭ ವ್ರತ

ಭಾದ್ರಪದ ಶುಕ್ಲದ ೧೪ ನೇ ದಿನ ಅನಂತ ಚತುರ್ದಶಿ. ಜನರು ಶ್ರದ್ಧಾಭಕ್ತಿಗಳಿಂದ ಕೈಗೊಳ್ಳುವ ವ್ರತವಿದು. ನಮ್ಮ ಭಾರತೀಯರಲ್ಲಿ ಭಕ್ತನಿಗೂ ಭಗವಂತನಿಗೂ ಅವಿನಾಭಾವ ಸಂಬಂಧವಿದೆ. ಸನಾತನ ಧರ್ಮದ ಮೂಲ ಕೊಂಡಿಯೇ ಹಾಗೆ. ದೇಶತಃ ಕಾಲತಃ ಗುಣತಃ ಅನಂತನಾಗಿರುವ  ಶ್ರೀ ಮಹಾವಿಷ್ಣುವಿನ ಸಾಕ್ಷಾತ್ ರೂಪವೇ ಅನಂತಪದ್ಮನಾಭ. ಸಮಸ್ತ ಬ್ರಹ್ಮಾಂಡವನ್ನು ಹೊತ್ತ ಆದಿಶೇಷನ ಮೇಲೆ ಪವಡಿಸಿದ ಶ್ರೀಮನ್ನಾರಾಯಣನ ಪರಮ ಮಂಗಳ ರೂಪದ ಅವತಾರವೇ ಅನಂತ ಪದ್ಮನಾಭ.  

ಪೌರಾಣಿಕ ಹಿನ್ನೆಲೆಯ ಉಲ್ಲೇಖದಂತೆ ಪಾಂಡವರು ಜೂಜಾಟದಲ್ಲಿ ಸೋತು, ಎಲ್ಲವನ್ನೂ ಕಳೆದುಕೊಂಡು, ವನವಾಸಕ್ಕೆ ತೆರಳಿದ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣ ಭೇಟಿಗೆ ಬಂದನಂತೆ. ಕಾಡಿನಲ್ಲಿ ಕಂದಮೂಲಗಳನ್ನು ತಿಂದುಕೊಂಡು ಕಷ್ಟ ಅನುಭವಿಸುತ್ತಿದ್ದ ಧರ್ಮರಾಯನು, "ದೇವಾ, ನಿನ್ನ ಭಕ್ತರಾದ ನಮಗೆ ಈ ಕಷ್ಟ ಯಾಕೆ? ನಮ್ಮೊಂದಿಗೆ ದ್ರೌಪದಿಯೂ ನೋವು ಪಡುತ್ತಿದ್ದಾಳೆ. ಇದರಿಂದ ಮುಕ್ತಿ ಎಂದು ಸ್ವಾಮಿ? ಮರಳಿ ಸಂಪತ್ತನ್ನು ಪಡೆಯುವ ದಾರಿ ಯಾವುದು? "ಎಂದಾಗ ಭಗವಂತನು "ಧರ್ಮದ ಸಾಕಾರಮೂರ್ತಿ ನೀನು. ಯಾಕೆ ದು:ಖಿಸುತ್ತಿರುವೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಕಾಯುವ ತಾಳ್ಮೆಯಿರಬೇಕು. ನೀವೆಲ್ಲರೂ ಶ್ರದ್ಧಾಭಕ್ತಿಯಿಂದ ಅನಂತ ಪದ್ಮನಾಭನ ವ್ರತವನ್ನು ಆಚರಿಸಿ. ಕಳೆದುಹೋದ ಸುಖ, ಶಾಂತಿ, ನೆಮ್ಮದಿ, ಸಂಪತ್ತು ನಿಮ್ಮದಾಗುವುದೆಂದು ಹೇಳಿ, ಸಕಲಸಿದ್ಧಿಪ್ರದವಾದ ವ್ರತಾಚರಣೆಯ ಕಥೆಯನ್ನು ಹೇಳಿದನಂತೆ.

ಕೌಂಡಿನ್ಯನೆಂಬ ಋಷಿಯು ಶೀಲ ಎಂಬ ಹೆಸರಿನ ಬ್ರಾಹ್ಮಣ ಕನ್ಯೆಯನ್ನು ವಿವಾಹವಾಗಿ ತನ್ನ ಆಶ್ರಮದತ್ತ ಬರುವಾಗ, ವಿಶ್ರಾಂತಿಗೆಂದು ಮರದಡಿಯಲ್ಲಿ ಕುಳಿತರಂತೆ. ಆ ಹೆಣ್ಣು ಮಗಳಿಗೆ ಹತ್ತಿರದ ನದಿಯ ದಡದ ಮೇಲೆ ಕೆಲವಾರು ಜನರು ಸೇರಿ ಪೂಜೆ ಮಾಡುವ ಹಾಗೆ ಕಂಡು ಹತ್ತಿರ ಬಂದು ಕೇಳಿದಳಂತೆ. ಇದು ಅನಂತ ಪದ್ಮನಾಭನ ವ್ರತವೆಂದು ತಿಳಿಸಿದ ಅವರು ಈಕೆಗೂ ಪೂಜಿಸಿದ ದಾರವನ್ನು ಕೊಟ್ಟರಂತೆ. ಅದನ್ನು ಪಡೆದ ಆ ಸುಶೀಲೆ ಕೈಗೆ ಕಟ್ಟಿಕೊಂಡು ಆಶ್ರಮಕ್ಕೆ ಬಂದಾಗ ಎಲ್ಲಾ ಸೌಕರ್ಯಗಳೂ ಆಯಿತಂತೆ. ಆದರೆ ಪತಿಯಾದ ಕೌಂಡಿನ್ಯ ಕೋಪದಿಂದ ವಶೀಕರಣದಾರವೆಂದು ಎಸೆದ ಕಾರಣ ಪುನಃ ಬಡತನ ತಲೆದೋರಿತು. ಆಕೆ ತನ್ನ ಪತಿಗೆ ನಡೆದ ವಿಷಯವನ್ನೆಲ್ಲ ತಿಳಿಸುತ್ತಾಳೆ. ಮುಂದೆ ವೃದ್ಧ ಬ್ರಾಹ್ಮಣನೋರ್ವ ಕೌಂಡಿನ್ಯನಿಗೆ ಸಿಕ್ಕಿ ವ್ರತದ ಮಾಹಿತಿ ನೀಡಿದಂತೆ ಕೌಂಡಿನ್ಯ ಋಷಿಯು ಅನಂತನ ವ್ರತ, ಪೂಜೆ ಮಾಡಿ, ಕಳೆದುಕೊಂಡ ಸಂಪತ್ತನ್ನೆಲ್ಲ ಮರಳಿ ಪಡೆಯುತ್ತಾನೆ. ವಯಸ್ಸಾದವರೆಂಬ ಕಾರಣಕ್ಕಾಗಿ ಈ ವ್ರತದಲ್ಲಿ ಮೆತ್ತಗಿನ ನೈವೇದ್ಯ ವ‌ಸ್ತುಗಳನ್ನೇ ತಯಾರಿಸಿ ಅರ್ಪಿಸಲಾಗುತ್ತದೆಯಂತೆ.

ಶ್ರದ್ಧಾಭಕ್ತಿಯಿಂದ ಆಚರಿಸಿದವರಿಗೆ ಕಷ್ಟಗಳು ದೂರವಾಗಿ, ಕಳೆದುದು ಪುನ:ಸಿಗುವುದೆಂಬ ಪ್ರತೀತಿ. ಎಲ್ಲವೂ ಹದಿನಾಲ್ಕೇ ಇದ್ದರೆ ಶುಭ. ೧೪ ಕ್ಕೆ ಪ್ರಾಶಸ್ತ್ಯ. ತಿರುವನಂತಪುರದಲ್ಲಿರುವ ಅನಂತಶಯನ ದೇವಾಲಯ ಬಹಳ ಪ್ರಸಿದ್ಧ. ಹಾಗೆಯೇ ಕಾರ್ಕಳ, ಉಡುಪಿ, ಪಣಿಯಾಡಿ, ಪಾಜಕ, ಪೆರ್ಡೂರುಗಳಲ್ಲಿಯೂ ಅನಂತಶಯನ, ಅನಂತಪದ್ಮನಾಭ ದೇವಸ್ಥಾನವಿದೆ. ಕಷ್ಟಗಳ ಪರಿಹಾರ, ಆರೋಗ್ಯ ವೃದ್ಧಿ, ಏನೇ ಬಂದರೂ ಎದುರಿಸುವ ಶಕ್ತಿ ಕೊಡೆಂದು ಭಗವಂತನಿಗೇ ಮೊರೆಹೋಗೋಣ.

(ಸಂಗ್ರಹ:ಮಹಾಭಾರತ)

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ