ಶ್ರೀ ದುರ್ಗೆ ನಮೋ ಎನುವೆ- (ಚಂದ್ರಘಂಟಾ ದೇವಿ)

ಶ್ರೀ ದುರ್ಗೆ ನಮೋ ಎನುವೆ- (ಚಂದ್ರಘಂಟಾ ದೇವಿ)

ಕವನ

ನವರಾತ್ರಿಯ ಮೂರನೆಯ ದಿನದ ತಾಯ ರೂಪ

ಅರ್ಧ ಚಂದ್ರನನು ಮಸ್ತಕದಿ ಧರಿಸಿದ ಪ್ರತಿರೂಪ|  

ತನುಕಾಂತಿ ಹೊನ್ನಿನ ಬಣ್ಣದಲಿ ಹೊಳೆಯುತ

ಚಂದ್ರಘಂಟಾದೇವಿ ಸಿಂಹಾರೂಢಳಾಗಿ  ಮೆರೆಯುತ||

 

ದುರ್ಗುಣಗಳ ದೂರೀಕರಿಸಿ ಸುಕ್ಷೇಮದಿ ಪೊರೆಯುವಳು

ದುಷ್ಟ ಶಕ್ತಿಗಳ ಮೆಟ್ಟಿ ಕೆಡಹುತ ಅನವರತ ಹರಸುವಳು|

ತಾಯಿಯಂತೆ ಸಲಹುವ ವಾತ್ಸಲ್ಯ ಕಾರುಣ್ಯನಿಧಿಯವಳು

ಕ್ಷಮಾಗುಣ ಸಂಪನ್ನೆ ಸಹನಾಶೀಲೆ ಗುಣನಿಧಿಯವಳು||

 

 ಘಂಟಾನಾದದ ಧ್ವನಿ ಎದೆ ನಡುಗಿಸಿ ತರಂಗವಾಗಿ

ಸಜ್ಜನರ ಪಾಲಿಗದು ಒದಗಿಬರೆ ರಕ್ಷಾಕವಚವಾಗಿ|

ಆತ್ಮಶಕ್ತಿ ಹೆಚ್ಚುತ ಭರವಸೆಯು ಚಿಗುರುತಿರಲು

ಸಾಧಕನ ಮನದ ಅಂಧಕಾರ ತಮವ ಕಳೆಯಲು||

 

ತಾಯಿ ಜಗಜ್ಯೋತಿಯಾಗಿ ಭೀತಿಯ ತೊಲಗಿಸುವಳು

ಮಣಿಪುರ ಚಕ್ರಧಾರಿಣಿಯಾಗಿ ಅಭಯನೀಡುವಳು|

ಧೂಪ ದೀಪ ಮಲ್ಲಿಗೆ ಸುಗಂಧ ಪುಷ್ಪ ಭಕ್ಷ್ಯ ಗಳರ್ಪಿಸುವೆ

ಹರಸಿ ರಕ್ಷಿಸು ಮಹಾಮಾತೆ ಶ್ರೀ ದುರ್ಗೆ ನಮೋ ಎನುವೆ||

 

-ರತ್ನಾ ಕೆ.ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್