ಶ್ರೀ ಪಲ್ಲಿಕೊಂಡೇಶ್ವರ ದೇವಸ್ಥಾನದ ವಿಶೇಷತೆ ಗೊತ್ತೇ?
ಇಲ್ಲಿರುವ ಚಿತ್ರವನ್ನು ನೋಡಿ ನೀವು ಮಹಾವಿಷ್ಣು ತನ್ನ ಪತ್ನಿ ಲಕ್ಷ್ಮೀದೇವಿಯ ತೊಡೆಯ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಮೂರ್ತಿ ಎಂದು ಭಾವಿಸಿರಬಹುದಲ್ಲವೇ? ಹಾಗಾದರೆ ನಿಮ್ಮ ಭಾವನೆ ತಪ್ಪು. ಇದು ಮಹಾವಿಷ್ಣು ಹಾಗೂ ಲಕ್ಷ್ಮೀದೇವಿಯರ ಮೂರ್ತಿಯಲ್ಲ. ಅಪರೂಪದಲ್ಲಿ ಅಪರೂಪವೆನಿಸುವ ಈಶ್ವರ ಹಾಗೂ ಪಾರ್ವತಿಯರ ಮೂರ್ತಿ. ಭಾರತದ ಉದ್ದಗಲಕ್ಕೂ ನಾವು ಈಶ್ವರ ದೇವರನ್ನು ಲಿಂಗದ ರೂಪದಲ್ಲೇ ಪೂಜಿಸುತ್ತೇವೆ. ಮೂರ್ತಿ ಇರುವುದು ಬಹಳ ಅಪರೂಪ, ಅದರಲ್ಲೂ ಶಯನ ಭಂಗಿಯಲ್ಲಿರುವ ಮೂರ್ತಿ ಇರುವುದು ಇದೊಂದೇ ಎನ್ನುವುದು ಬಹಳ ಮಂದಿಯ ಅಭಿಪ್ರಾಯ. ಈ ಮೂರ್ತಿ ಇರುವುದೆಲ್ಲಿ? ಏನಿದರ ವೈಶಿಷ್ಟ್ಯತೆ? ಬನ್ನಿ ತಿಳಿದುಕೊಳ್ಳುವ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಸುರುಟಪಲ್ಲಿ ಎಂಬ ಊರಿನಲ್ಲಿ ಇರುವ ಈ ದೇಗುಲದ ಹೆಸರು ಶ್ರೀ ಪಲ್ಲಿಕೊಂಡೇಶ್ವರ ಸ್ವಾಮಿ ದೇವಸ್ಥಾನ. ಪಲ್ಲಿಕೊಂಡೇಶ್ವರ ಎಂದರೆ ಒರಗಿಕೊಂಡಿರುವ ಅಥವಾ ಶಯನ ಭಂಗಿಯಲ್ಲಿರುವ ಈಶ್ವರ ಎಂದರ್ಥ. ಈ ಹೆಸರಿನಂತೆಯೇ ಈ ದೇವಾಲಯದಲ್ಲಿ ಈಶ್ವರನು ಲಿಂಗದ ರೂಪದಲ್ಲಿ ಇರದೇ ಶಯನ ಭಂಗಿಯಲ್ಲಿದ್ದಾನೆ. ಇದಕ್ಕೆ ಒಂದು ಪುರಾಣದ ಕಥೆಯಿದೆ.
ದೇವ-ದಾನವರ ನಡುವೆ ಅಮೃತವನ್ನು ಪಡೆಯಲು ಸಮುದ್ರಮಥನ ನಡೆಯಿತಲ್ಲವೇ? ಮಂದಾರ ಪರ್ವತವನ್ನು ವಾಸುಕಿ ಎಂಬ ಬೃಹತ್ ಗಾತ್ರದ ಹಾವಿನ ಸಹಾಯದಿಂದ ಸಮುದ್ರದಲ್ಲಿ ಮಥಿಸಲು ಪ್ರಾರಂಭಿಸಿದಾಗ ಹಲವಾರು ವಸ್ತುಗಳು ಉದ್ಭವವಾದುವು. ಪ್ರಯೋಜನಕಾರೀ ವಸ್ತುಗಳನ್ನು ತಮ್ಮ ತಮ್ಮ ಅನುಕೂಲತೆಯನ್ನು ಗಮನಿಸಿ ದೇವತೆಗಳು ಪಡೆದುಕೊಂಡರು. ಅದರೆ ಸಮುದ್ರ ಮಥನದಿಂದ ವಾಸುಕಿ ಹಾವು ವಿಷವನ್ನು ಉಗುಳಲಾರಂಭಿಸಿತು. ಈ ಹಾಲಾಹಲ (ವಿಷ) ವನ್ನು ಪಡೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಕಡೆಗೆ ಬ್ರಹ್ಮಾಂಡವನ್ನು ರಕ್ಷಿಸಲು ಈಶ್ವರನೇ ಮುಂದೆ ಬಂದ. ವಿಷವನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ಕುಡಿದೇ ಬಿಟ್ಟ. ಈ ದೃಶ್ಯವನ್ನು ಕಂಡ ಶಿವ ಪತ್ನಿ ಪಾರ್ವತಿ ಹೌಹಾರಿದಳು. ಈ ವಿಷ ತನ್ನ ಪತಿಯ ಹೊಟ್ಟೆಗೆ ಹೋದರೆ ವಿನಾಶ ಶತಃಸಿದ್ಧ, ಅದಕ್ಕೆ ತಾನೇನಾದರೂ ಮಾಡಬೇಕು ಎಂದು ನಿರ್ಧರಿಸಿ, ತನ್ನ ಎರಡೂ ಕೈಗಳಿಂದ ಶಿವನ ಕುತ್ತಿಗೆಯ ಭಾಗವನ್ನು (ಕಂಠ) ಬಿಗಿಯಾಗಿ ಹಿಡಿದಳು. ವಿಷ ಕಂಠದಲ್ಲೇ ಉಳಿಯಿತು. ಹೊಟ್ಟೆಗೆ ಇಳಿಯಲಿಲ್ಲ. ಕಂಠವು ವಿಷದ ಪರಿಣಾಮದಿಂದ ನೀಲವರ್ಣ ಪಡೆಯಿತು. ಅಂದಿನಿಂದ ಶಿವನು ‘ನೀಲಕಂಠ' ಎಂಬ ಹೆಸರು ಪಡೆದುಕೊಂಡ. ವಿಷವು ಕಂಠದಲ್ಲೇ ಉಳಿದರೂ ಅದರ ಪರಿಣಾಮದಿಂದ ಶಿವನು ತುಂಬಾನೇ ಸುಸ್ತಾಗಿದ್ದ. ತುರ್ತಾಗಿ ಅವನಿಗೆ ವಿಶ್ರಾಂತಿ ಬೇಕಾಗಿತ್ತು. ಅದಕ್ಕಾಗಿ ಅವನು ಪಾರ್ವತಿ ದೇವಿಯ ತೊಡೆಯ ಮೇಲೆ ತನ್ನ ತಲೆಯನ್ನಿರಿಸಿ ವಿಶ್ರಾಂತಿ ಪಡೆದುಕೊಂಡ. ವಿಶ್ರಾಂತಿ ಪಡೆದುಕೊಳ್ಳುವ ಸಮಯದಲ್ಲಿ ಹಲವು ಮಂದಿ ದೇವ- ದೇವತೆಗಳು ಶಿವನ ಸುತ್ತ ನಿಂತ ಪ್ರತಿಮೆಗಳು ಇವೆ. ಈ ಮೂರ್ತಿ ಅದೇ ಸಮುದ್ರ ಮಥನ ಕಥೆಗೆ ಸಂಬಂಧಿಸಿದ್ದು. ಬಹುಷಃ ಇಡೀ ಭಾರತದಲ್ಲಿ ಈ ರೀತಿಯ ಪ್ರತಿಮೆ ಇರೋದು ಸುರುಟಪಲ್ಲಿಯ ಪಲ್ಲಿಕೊಂಡೇಶ್ವರ ದೇವಸ್ಥಾನದಲ್ಲಿ ಮಾತ್ರ.
ಪಲ್ಲಿಕೊಂಡೇಶ್ವರ ದೇವಸ್ಥಾನವು ವಿಜಯನಗರದ ಅರಸರ ಸಮಯದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸಕಾರರ ಅನಿಸಿಕೆ. ಇಲ್ಲಿ ಪಾರ್ವತಿ ದೇವಿಯನ್ನು ಸರ್ವ ಮಂಗಳಾಂಬಿಕೆ ಎಂದು ಕರೆಯುತ್ತಾರೆ. ಶಿವ ಪಾರ್ವತಿಯರ ಮೂರ್ತಿಯ ಸಮೀಪದಲ್ಲಿ ಗಣೇಶ, ಕಾರ್ತಿಕೇಯ, ಸೂರ್ಯ, ಚಂದ್ರ, ಇಂದ್ರ ದೇವ ಹಾಗೂ ನಾರದ ಮುನಿಗಳ ವಿಗ್ರಹವೂ ಕಾಣಬಹುದು. ಇವುಗಳೇ ಅಲ್ಲದೇ ಈ ದೇವಾಲಯದಲ್ಲಿ ಬ್ರಹ್ಮ, ವಿಷ್ಣು, ಕುಬೇರ ಮೊದಲಾದ ದೇವರ ವಿಗ್ರಹಗಳೂ, ಭೃಗು, ಮಾರ್ಕಾಂಡೇಯ, ಅಗಸ್ತ್ಯ, ಗೌತಮ, ವಿಶ್ವಾಮಿತ್ರ ಮೊದಲಾದ ಮುನಿಗಳ ವಿಗ್ರಹಗಳನ್ನೂ ಕಾಣಬಹುದು. ಶಿವನ ವಾಹನವಾದ ನಂದಿಯ ವಿಗ್ರಹವೂ ದೇಗುಲದ ಎದುರು ಭಾಗದಲ್ಲಿದೆ.
ಪಲ್ಲಿಕೊಂಡೇಶ್ವರ ದೇವಸ್ಥಾನದಲ್ಲಿ ಹದಿನೈದು ದಿನಗಳಿಗೊಮ್ಮೆ ಪ್ರದೂಶಂ ಎಂಬ ಪೂಜೆಯನ್ನು ಆಚರಿಸಲಾಗುತ್ತದೆ. ವಾರ್ಷಿಕವಾಗಿ ಶಿವರಾತ್ರಿ ಹಬ್ಬದ ಆಚರಣೆಯೂ ನಡೆಯುತ್ತದೆ. ಈ ಸಮಯ ಸುಮಾರು ಮೂವತ್ತು ಸಾವಿರ ಜನರು ಇಲ್ಲಿ ಸೇರುತ್ತಾರೆ. ಚಿತ್ತೂರು ಜಿಲ್ಲೆಗೆ ಹೋದಾಗ ನೀವು ಈ ದೇವಸ್ಥಾನವನ್ನು ನೋಡಲು ಮರೆಯಬೇಡಿ. ತಿರುಪತಿಗೆ ಹೋಗುವ ರಸ್ತೆಯಲ್ಲಿ ಈ ದೇವಸ್ಥಾನ ಸಿಗುತ್ತದೆ ಎಂಬ ಮಾಹಿತಿ ಇದೆ. ಈ ಅಪರೂಪದ ದೇಗುಲವನ್ನು ನೋಡುವ ಅವಕಾಶ ಸಿಕ್ಕರೆ ಖಂಡಿತಾ ತಪ್ಪಿಸಿ ಕೊಳ್ಳಬೇಡಿ.
ಚಿತ್ರ ಕೃಪೆ: ಅಂತರ್ಜಾಲ ತಾಣ