ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳೇನು?

ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳೇನು?

ಕ್ಯಾನ್ಸರ್ ಎಂಬ ಹೆಸರು ಕೇಳಿದೊಡನೆಯೇ ಎಷ್ಟೇ ಗಟ್ಟಿ ಗುಂಡಿಗೆಯವರಾದರೂ ಹೆದರಿ ಹೋಗುವುದು ಸಹಜ. ಏಕೆಂದರೆ ಈಗಿನ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಈ ರೋಗ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ. ದೈಹಿಕವಾಗಿ ಮಾತ್ರವಲ್ಲ, ಆರ್ಥಿಕವಾಗಿಯೂ ಬಲಹೀನರನ್ನಾಗಿಸುತ್ತದೆ. ಕ್ಯಾನ್ಸರ್ ಇದೆ ಎಂದು ತಿಳಿಯುವಾಗಲೇ ಬಹಳಷ್ಟು ಸಮಯ ಕಳೆದು ಹೋಗಿರುತ್ತದೆ. ಮತ್ತೆ ನಡೆಯುವ ಕ್ಯಾನ್ಸರ್ ಪರೀಕ್ಷೆಗಳು, ಉಪಚಾರಗಳು ಇವುಗಳನ್ನು ಅನುಭವಿಸುವಾಗ ರೋಗಿಯ ಮನಸ್ಥಿತಿ ಇನ್ನಷ್ಟು ಕುಸಿದುಹೋಗಿರುತ್ತದೆ. ಈ ಕಾರಣದಿಂದಲೇ ಬಹಳಷ್ಟು ರೋಗಿಗಳು ಕ್ಯಾನ್ಸರ್ ಎಂದ ಪದವನ್ನು ಕೇಳಿದಾಕ್ಷಣವೇ ಅರ್ಧ ಸತ್ತು ಹೋಗಿರುತ್ತಾರೆ. ಆದರೆ ನಮ್ಮ ಸಮಾಜದಲ್ಲೇ ನೂರಾರು ಮಂದಿ ಈ ರೋಗದ ಜೊತೆ ಹೋರಾಡಿ, ತಮ್ಮ ಧೃಢ ಮನಸ್ಥಿತಿಯ ಕಾರಣ ಮತ್ತು ವೈದ್ಯಕೀಯ ಉಪಚಾರಗಳಿಂದ ಬದುಕಿ ಬಾಳಿದವರಿದ್ದಾರೆ. ಅದಕ್ಕೇ ಹೇಳೋದು ಕ್ಯಾನ್ಸರ್ ಎಂದರೆ ಅತಿ ಭಯ ಬೇಡ.

ನಮ್ಮ ದೇಹದ ಯಾವುದೇ ಭಾಗಕ್ಕೆ ಕ್ಯಾನ್ಸರ್ ತಗುಲಬಹುದು. ಧೂಮಪಾನ, ಗುಟ್ಕಾ, ಪಾನ್ ಮಸಾಲಾ, ಮದ್ಯಪಾನ ಮೊದಲಾದ ಚಟಗಳು ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿಸುತ್ತದೆ. ಧೂಮಪಾನದ ಚಟ ಇದ್ದವರಿಗೆ ಶ್ವಾಸಕೋಶದ ಕ್ಯಾನ್ಸರ್ ತಗಲುವ ಸಾಧ್ಯತೆ ಅಧಿಕ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ನಿಯಂತ್ರಣ ಸಾಧ್ಯ. ಮೊದಲೇ ಹೇಳಿದಂತೆ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವವರು ಬಹಳಷ್ಟು ಮಂದಿ ಧೂಮಪಾನಿಗಳೇ. ಆದರೂ ಧೂಮಪಾನದ ಚಟ ಇಲ್ಲದವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಕೆಲವೊಂದು ಪ್ರಾಥಮಿಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಸೂಚನೆ ಸಿಗುತ್ತದೆ. 

ಕೆಲವು ಅಸ್ವಾಭಾವಿಕ ಲಕ್ಷಣಗಳನ್ನು ಕಂಡಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಹೀಗೆ ಮಾಡುವುದರಿಂದ ಈ ರೋಗ ಇನ್ನಷ್ಟು ಉಲ್ಬಣವಾಗುದನ್ನು ತಪ್ಪಿಸಬಹುದಾಗಿದೆ. ಆದರೆ ಇದರ ಲಕ್ಷಣಗಳು ಇತರೆ ಸಾಮಾನ್ಯ ಕಾಯಿಲೆಯಂತೇ ಇರುವುದರಿಂದ ಬಹಳಷ್ಟು ಮಂದಿ ಅದನ್ನು ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ವರ್ಷದ ಯಾವುದೇ ಕಾಲದಲ್ಲೂ ಕೆಮ್ಮು ಕಾಣಿಸಬಹುದಾದರೂ ಸಾಮಾನ್ಯ ಕೆಮ್ಮು ಒಂದು ವಾರದ ಒಳಗೆ ಗುಣವಾಗುತ್ತದೆ. ಒಂದು ವಾರಕ್ಕಿಂತ ಅಧಿಕ ಸಮಯದ ಕೆಮ್ಮು ಮತ್ತು ಚಳಿಗಾಲದಲ್ಲಿ ವಿಪರೀತ ಚಳಿ ಬಾಧಿಸಿದರೆ ಹಾಗೂ ಅತಿಯಾಗಿ ಶೀತವಾದರೆ ಅದು ಕ್ಯಾನ್ಸರ್ ನ ಪ್ರಾರಂಬಿಕ ಲಕ್ಷಣವಾಗಿರಬಹುದು.

ವಿವಿಧ ಕಾರಣಗಳಿಂದ ಉಸಿರಾಟದ ತೊಂದರೆ ಉಂಟಾಗುವುದು ಸಹಜವಾದರೂ ಶ್ವಾಸಕೋಶದ ಕ್ಯಾನ್ಸರ್ ನಿಂದಲೂ ತೀವ್ರ ಉಸಿರಾಟದ ಸಮಸ್ಯೆ ಪ್ರಾರಂಭವಾಗಬಹುದು. ಈ ಕಾರಣದಿಂದ ಉಸಿರಾಟದ ತೊಂದರೆ ಇದ್ದರೆ ತಜ್ಞ ವೈದ್ಯರನ್ನು ಕೂಡಲೇ ಸಂದರ್ಶಿಸುವುದು ಉತ್ತಮ. ದೇಹದ ಬೇರೆ ಬೇರೆ ಅಂಗಗಳಲ್ಲಿ ವಿಪರೀತ ನೋವು ಕಾಣಿಸುವುದು, ಹೆಚ್ಚಾಗಿ ಎದೆ, ಭುಜ, ಬೆನ್ನು ಮತ್ತು ಕೈಗಳಲ್ಲಿ ನೋವು ಪದೇ ಪದೇ ಕಾಣಿಸಿಕೊಳ್ಳುವುದು ಕ್ಯಾನ್ಸರ್ ರೋಗದ ಪ್ರಾಥಮಿಕ ಲಕ್ಷಣವಾಗಿರಲೂ ಬಹುದು. 

ಪದೇ ಪದೆ ಆರೋಗ್ಯ ಹದಗೆಡುವುದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ನಿರಂತರ ವರ್ಷಾನುಗಟ್ಟಲೆ ಧೂಮಪಾನ ಮಾಡುತ್ತಿದ್ದವರಿಗೆ ಹಠಾತ್ ಆಗಿ ತೀವ್ರ ಬಳಲಿಕೆ, ಖಿನ್ನತೆ, ತೂಕ ಕಳೆದುಕೊಳ್ಳುವುದು, ಗಂಟುಗಳಲ್ಲಿ ನೋವು, ಕೆಮ್ಮು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ನ್ಯೂಮೋನಿಯಾ ರೋಗದ ಸಮಸ್ಯೆಗಳು ಸೂಕ್ತ ವೈದ್ಯೋಪಚಾರ ಮಾಡಿದರೂ ಗುಣವಾಗದೇ ಇರುವುದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣ ಇರಬಹುದು. 

ಇದೇ ವೇಳೆ ರಾತ್ರಿ ಮಲಗಿ ನಿದ್ರೆ ಮಾಡುವ ಸಮಯದಲ್ಲಿ ಬಿಗಿಲ್ (ವಿಶಲ್) ಊದಿದಂತೆ ಶಬ್ದ ಬಂದರೆ ಅದನ್ನು ನಿರ್ಲಕ್ಷಿಸದೇ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಚಿಕಿತ್ಸೆಯ ಬಳಿಕವೂ ಪದೇ ಪದೇ ಇದೇ ಲಕ್ಷಣಗಳು ಮರುಕಳಿಸಿದರೆ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರುವ ಸಂಭವವಿದೆ. ನಿರಂತರ ಶೀತದಿಂದ ಸ್ವರದಲ್ಲಿ ಬದಲಾವಣೆಯಾಗಿ ಗೊರ ಗೊರ ಶಬ್ಧ ಬರುವ ಸಾಧ್ಯತೆ ಇದೆ. ನಿಮ್ಮ ದೇಹದಲ್ಲಿನ ಧ್ವನಿ ಪೆಟ್ಟಿಗೆಯು ಸೋಂಕಿಗೆ ಒಳಗಾಗಿರಬಹುದು. ದೇಹದಲ್ಲಿನ ನರಗಳ ಮೇಲೆ ಕ್ಯಾನ್ಸರ್ ಪ್ರಭಾವ ಬೀರಲು ಪ್ರಾರಂಭಿಸಿದಾಗ ಈ ರೀತಿಯ ಚಿನ್ಹೆಗಳು ಕಾಣಿಸಲು ಪ್ರಾರಂಭವಾಗುತ್ತವೆ.

ಎಲ್ಲರೂ ತಿಳಿದಿರಬೇಕಾದ ಮುಖ್ಯ ವಿಷಯವೇನೆಂದರೆ ಇಲ್ಲಿ ಮೇಲೆ ತಿಳಿಸಿದ ಎಲ್ಲಾ ಲಕ್ಷಣಗಳು ಸಾಮಾನ್ಯವಾದದ್ದೇ. ಒಂದೆರಡು ದಿನಗಳ ಮದ್ದಿನಿಂದ ಗುಣವಾಗುವಂತಹ ಕಾಯಿಲೆಗಳು. ಆದರೆ ಈ ಕಾಯಿಲೆಗಳು ತಿಂಗಳುಗಟ್ಟಲೇ ಗುಣವಾಗದೇ ಇದ್ದಲ್ಲಿ ಇವು ಕ್ಯಾನ್ಸರ್ ಕಾಯಿಲೆಯ ಲಕ್ಷಣಗಳಿರಲೂ ಬಹುದು. ಈ ಕಾರಣದಿಂದ ತುಂಬಾ ಸಮಯ ನಿರ್ಲಕ್ಷ್ಯ ಮಾಡದೇ ಕೂಡಲೇ ನುರಿತ ವೈದ್ಯರನ್ನು ಸಂಪರ್ಕಿಸಿ ಪರಿಶೀಲನೆಗೆ ಒಳಪಟ್ಟು ಅಗತ್ಯವಿದ್ದಲ್ಲಿ ಔಷಧಗಳನ್ನು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಒಂದು ವೇಳೆ ಅಂತಿಮ ಘಟ್ಟದಲ್ಲಿ ಕಾಯಿಲೆಯ ಇರುವಿಕೆ ಪತ್ತೆಯಾದರೆ ಜೀವವನ್ನೇ ಬಲಿ ತೆರಬೇಕಾದೀತು. 

(ಆಧಾರ)

ಚಿತ್ರ ಕೃಪೆ: ಇಂಟರ್ನೇಟ್ ತಾಣ