ಸಂಕ್ರಾಂತಿ: ಬದುಕಿನ ಹೊಸದಾರಿಗೆ ಬೆಳಕಾಗಲಿ

ಸಂಕ್ರಾಂತಿ: ಬದುಕಿನ ಹೊಸದಾರಿಗೆ ಬೆಳಕಾಗಲಿ

ಇವತ್ತು ಸಂಕ್ರಾಂತಿಯ ಶುಭ ದಿನ. ಸಂಕ್ರಾಂತಿ ಎಂದರೆ ದಾಟುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದಕ್ಕೆ ದಾಟುವ ದಿನವೇ ಸಂಕ್ರಾಂತಿ ಅಥವಾ ಸಂಕ್ರಮಣ. ಒಂದು ರಾಶಿಗೆ ಪ್ರವೇಶಿಸುವ ಸೂರ್ಯ ಒಂದು ತಿಂಗಳ ಅವಧಿ ಅಲ್ಲಿರುತ್ತಾನೆ. ಹಾಗಾಗಿ, ಒಂದು ವರುಷದಲ್ಲಿ ೧೨ ಸಂಕ್ರಾಂತಿಗಳು. ಯಾಕೆಂದರೆ ಮೇಷದಿಂದ ಮೀನದ ವರೆಗೆ ೧೨ ರಾಶಿಗಳಿವೆ.

ಸೂರ್ಯನು ಮಕರ ರಾಶಿ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ. ಇದು ಉತ್ತರಾಯಣದ ಆರಂಭ. ಶುಭಕಾರ್ಯಗಳಿಗೆ ಉತ್ತರಾಯಣ ಸೂಕ್ತವಾದ ಕಾರಣ ಮಕರ ಸಂಕ್ರಾಂತಿಗೆ ಮಹತ್ವ. ಸೂರ್ಯೋದಯವನ್ನು ಗಮನಿಸಿದ್ದೀರಾ? ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಸೂರ್ಯೋದಯ. ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆ, ರಾತ್ರಿಯ ಅವಧಿ ಜಾಸ್ತಿ. ಇದಕ್ಕೆ ಅನುಸಾರವಾಗಿ, ರಾತ್ರಿಯ ಅವಧಿ ಜಾಸ್ತಿಯಾದಂತೆ, ಸೂರ್ಯ ದಕ್ಷಿಣ ದಿಕ್ಕಿಗೆ ಹೆಚ್ಚು ಚಲಿಸುವುದನ್ನು ಕಾಣಬಹುದು.

ಮಕರ ಸಂಕ್ರಾಂತಿಯ ಮುಂಚಿನ ದಿನಗಳಲ್ಲಿ ದಕ್ಷಿಣದ ತುದಿಯನ್ನು ತಲಪುವ ಸೂರ್ಯ, ಮಕರ ಸಂಕ್ರಾಂತಿಯಂದು ವಿರುದ್ಧ ದಿಕ್ಕಿಗೆ (ಅಂದರೆ ಉತ್ತರಕ್ಕೆ) ಚಲಿಸಲು ಆರಂಭಿಸುತ್ತಾನೆ. ಅದುವೇ ಉತ್ತರಾಯಣದ ಮೊದಲಿನ ದಿನ. ಉತ್ತರಾಯಣದ ಆರಂಭ ಬೇಸಗೆಯ ಆರಂಭವನ್ನು ಸೂಚಿಸುತ್ತದೆ. ಬೇಸಗೆಯಲ್ಲಿ (ಚಳಿಗಾಲಕ್ಕೆ ವಿರುದ್ಧವಾಗಿ) ಹಗಲಿನ ಅವಧಿ ಜಾಸ್ತಿ, ರಾತ್ರಿಯ ಅವಧಿ ಕಡಿಮೆ.

ಭಾರತ ಸಹಿತ ಹಲವಾರು ದೇಶಗಳಲ್ಲಿ ಸೂರ್ಯನನ್ನು ಆರಾಧಿಸುವ ಪದ್ಧತಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿದೆ. ಯಾಕೆಂದರೆ ನಮ್ಮ ಇಡೀ ಬದುಕಿನ ಅಧಿದೇವತೆ ಸೂರ್ಯ. ಬೆಳ್ಳಂಬೆಳಗ್ಗೆ ಪೂರ್ವದಲ್ಲಿ ಉದಯಿಸಿ, ಮುಸ್ಸಂಜೆ ಪಶ್ಚಿಮದಲ್ಲಿ ಕಣ್ಮರೆಯಾಗುವ ಸೂರ್ಯನ ಚಲನೆಗೆ ಹೊಂದಿಕೊಂಡು ನಮ್ಮೆಲ್ಲ ದೈನಂದಿನ ಚಟುವಟಿಕೆಗಳ ಮುನ್ನಡೆ.

ಸೂರ್ಯನ ಆರಾಧನೆಗಾಗಿ ಹಲವಾರು ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕೋನಾರ್ಕದ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ತಾಂಡ ಸೂರ್ಯ ದೇವಾಲಯ ಸುಪ್ರಸಿದ್ಧ. ತಮಿಳುನಾಡಿನ ಕುಂಭಕೋಣಂನ ಸೂರ್ಯನಾರ್ ದೇವಾಲಯ, ಮಧ್ಯಪ್ರದೇಶದ ಝಾನ್ಸಿ ಹತ್ತಿರದ ಉನ್ನಾವ್ ಬ್ರಹ್ಮಣ್ಯ ದೇವಸ್ಥಾನ, ಗುಜರಾತಿನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಸೂರ್ಯ ದೇವಾಲಯ, ರಾಜಸ್ಥಾನದ ಝಾಲಾರ್ ಪಟನ್ ಸೂರ್ಯ ಮಂದಿರ, ಬಿಹಾರದ ಗಯಾದ ದಕ್ಷಿಣಾರ್ಕ ದೇವಸ್ಥಾನ - ಇವು ಇತರ ಕೆಲವು ಸೂರ್ಯ ದೇವಾಲಯಗಳು.

ಹಲವು ದೇವಾಲಯಗಳನ್ನು ನಿರ್ಮಿಸುವಾಗ, ಗರ್ಭಗುಡಿಯ ಮೂಲದೇವರ ವಿಗ್ರಹದ ಮೇಲೆ ವರುಷದ ನಿರ್ದಿಷ್ಟ ದಿನದಂದು ಸೂರ್ಯನ ಕಿರಣಗಳು ಬೀಳುವಂತೆ ಶಾಸ್ತ್ರಬದ್ಧವಾಗಿ ರೂಪಿಸಲಾಗಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ ಇದಕ್ಕೊಂದು ಉತ್ತಮ ಉದಾಹರಣೆ. ಅಲ್ಲಿನ ಮೂಲದೇವರ ವಿಗ್ರಹದ ಮೇಲೆ ಸಂಕ್ರಾಂತಿಯಂದು ಸೂರ್ಯರಶ್ಮಿ ಬೆಳಗುವ ಕ್ಷಣಗಳು ಭಕ್ತರಲ್ಲೊಂದು ಅನುಭೂತಿಯನ್ನು ಮೂಡಿಸುತ್ತವೆ.

ದಕ್ಷಿಣ ಭಾರತದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಹಲವೆಡೆ ಸಂಕ್ರಾಂತಿಯ ಹೊತ್ತಿಗೆ ಕಬ್ಬಿನ ಬೆಳೆ ಕೊಯ್ಲಿಗೆ ತಯಾರು. ಆದ್ದರಿಂದ ತೆನೆಹಬ್ಬವಾಗಿ ಸಂಕ್ರಾಂತಿ ಆಚರಿಸಲ್ಪಡುತ್ತದೆ. ಅಕ್ಕಿ ಮತ್ತು ಬೆಲ್ಲಗಳ ತಿನಿಸುಗಳ ತಯಾರಿ ಒಂದೆಡೆ. ಇನ್ನೊಂದೆಡೆ, ದವಸಧಾನ್ಯ ಮನೆ ತುಂಬುವ ಹೊತ್ತಿನಲ್ಲಿ ಬೇಸಾಯಕ್ಕೆ ಸಹಕರಿಸಿದ ದನಕರುಗಳನ್ನೂ ಪೂಜಿಸುವ ಪದ್ಧತಿ. ಜೊತೆಗೆ ದನಕರುಗಳಿಗೆ ದೃಷ್ಟಿಯಾಗದಂತೆ ವಿಶಿಷ್ಟ ಅಲಂಕಾರ ಮಾಡುವ, ಅವುಗಳ ರೋಗನಿವಾರಣೆಗೆ ಸಹಾಯವಾಗಲೆಂದು ಬೆಂಕಿ ಹಾಯಿಸುವ ಆಚರಣೆಗಳು.

ಎಳ್ಳುಬೆಲ್ಲದ ಸೇವನೆ ಮತ್ತು ಬಂಧುಬಳಗದವರಿಗೆ ಎಳ್ಳುಬೆಲ್ಲದ ದಾನ ಸಂಕ್ರಾಂತಿ ಹಬ್ಬದ ವಿಶೇಷ. ಬಂಧುಗಳಿಗೆ, ಹಿತೈಷಿಗಳಿಗೆ ಮತ್ತು ಗೆಳೆಯರಿಗೆ ವಿವಿಧ ಆಕೃತಿಯ ಸಕ್ಕರೆಯ ಅಚ್ಚುಗಳ ಸಹಿತ ಎಳ್ಳುಬೆಲ್ಲದ ಹಂಚಿಕೆ ಸಂಕ್ರಾಂತಿಯ ನಂತರವೂ ಒಂದು ತಿಂಗಳವಧಿ ಮುಂದುವರಿಯುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಭಿನ್ನ ಹೆಸರು: ಭೋಗಿ ಹಬ್ಬ, ಪೊಂಗಲ್ ಇತ್ಯಾದಿ.

ಸಂಕ್ರಾಂತಿಯ ಎಳ್ಳು ಬೀರುವ ಸಂಪ್ರದಾಯದ ಹಿನ್ನೆಲೆ ತಿಳಿಸುವ ಪುರಾಣ ಕಾಲದ ಕತೆಯೊಂದಿದೆ. ತಿಲಾಸುರನೆಂಬ ರಕ್ಕಸ ತಪಸ್ಸು ಮಾಡಿ, ಬ್ರಹ್ಮನಿಂದ ವರ ಪಡೆಯುತ್ತಾನೆ. ಅನಂತರ, ವರದ ಬಲದಿಂದ ಅಹಂಕಾರಿಯಾದ ಆತ ಲೋಕಕಂಟಕನಾಗುತ್ತಾನೆ. ಕೊನೆಗೆ ಸೂರ್ಯನಿಂದಲೇ ತಿಲಾಸುರನ ಸಂಹಾರ. ಇದಕ್ಕಾಗಿ ಮಕರ ಮತ್ತು ಕರ್ಕ ಎಂಬ ಮಹಿಳೆಯರ ಸಹಾಯ. ತಿಲಾಸುರನ ಹೊಟ್ಟೆಯನ್ನು ಮಕರ ಸೀಳಿದಾಗ, ಭೂಮಿಗೆ ಎಳ್ಳು ಬಂತು ಎಂಬುದು ಪ್ರತೀತಿ. ಆಗ, ಮಕರನ ಸಾಹಸ ಮೆಚ್ಚಿದ ಸೂರ್ಯನು ಹೀಗೆ ಹರಸಿದನಂತೆ: “ನಿನ್ನನ್ನು ಹಾಗೂ ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳ್ಳೆಯದಾಗಲಿ.” ಇದುವೇ ಎಳ್ಳು ಬೀರುವ ಆಚರಣೆ ಶುರುವಾಗಲು ಕಾರಣವೆನ್ನುತ್ತದೆ ಪುರಾಣ ಕಾಲದ ಕತೆ.

ಸಂಕ್ರಾಂತಿಯ ಆಚರಣೆಗಳು ವಿಭಿನ್ನ. ಎಳ್ಳೆಣ್ಣಿ ಹಚ್ಚಿ, ನದಿ ಅಥವಾ ಕೆರೆಯ ನೀರಿಗಿಳಿದು ಸ್ನಾನ ಮಾಡಿ ಸೂರ್ಯನನ್ನು ನಮಿಸುವ ಆಚರಣೆ “ಸಂಕ್ರಾಂತಿಯ ಕರಿ ಕಳೆಯುವುದು." ಹೀಗೆ ಸ್ನಾನ ಮಾಡದಿದ್ದರೆ, ಸಂಕ್ರಾಮಪ್ಪ ದೇವರು ಬಂದು ಮೈ ವಾಸನೆ ನೋಡಿ, ಶಾಪ ಕೊಡುತ್ತಾನೆ ಎಂಬುದು ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಜನರ ನಂಬಿಕೆ. ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ “ಬೆಚನ್ ಸಂಕ್ರಾಂತಿ" ಆಚರಣೆ. ಅಂದರೆ, ಪೈರು ಬೆಳೆದು ನಿಂತ ಗದ್ದೆಗೆ ದೃಷ್ಟಿಯಾಗದಿರಲೆಂದು ಬೆಚ್ಚನ್ನು ನಿಲ್ಲಿಸುವುದು. ಕೊಡಗಿನ ಗಡಿಯ ಕೆಲವೆಡೆ “ಬಿಸು ಸಂಕ್ರಾಂತಿ" ಆಚರಣೆ. ಅಂದರೆ, ಎತ್ತುಗಳಿಗೆ ನೊಗ ಕಟ್ಟಿ, ಬೇಸಾಯ ಪ್ರಾರಂಭಿಸುವ ಅನುಕರಣೆ ಮಾಡುವುದು.

ಒಟ್ಟಿನಲ್ಲಿ ಸಂಭ್ರಮದ ಹಬ್ಬವೇ ಸಂಕ್ರಾಂತಿ. ಸಂಕ್ರಾಂತಿಯ ಆಹಾರ ವೈವಿಧ್ಯವಂತೂ ಬೆರಗು ಹುಟ್ಟುಸುತ್ತದೆ. ವಿವಿಧ ಪಾಯಸಗಳು, ಜೋಳದ ರೊಟ್ಟಿ, ಹಾಗಲಕಾಯಿ ಪಲ್ಯ, ಗುರೆಳ್ಳು ಚಟ್ನಿ, ಕಲಬೆರಕೆ ಸೊಪ್ಪು ಸಾರು, ತರಕಾರಿಗಳ ಬರ್ತ ಇತ್ಯಾದಿ.

ಭೂಮಿಯ ಎಲ್ಲ ಜೀವರಾಶಿಗಳ ಚೈತನ್ಯದ ಮೂಲ ಸೂರ್ಯದೇವನಿಗೆ ನಮಿಸುತ್ತ, ನಮ್ಮ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧವನ್ನು ನೆನೆಯುತ್ತ, ನೆಮ್ಮದಿಯ ಬಾಳಿಗಾಗಿ ಹೊಸವರುಷದ ದಿನದಿನದ ಕಾಯಕಕ್ಕೆ ಸಜ್ಜಾಗುವುದೇ ಸಂಕ್ರಾಂತಿಯ ಆಚರಣೆಗಳ ಅರ್ಥ.