" ಸಂಕ್ರಾಂತಿ " ಶುಭಾಶಯಗಳು ; " ಹ್ಯಾಪಿ ಪೊಂಗಲ್ ", " ತಿಲ್ ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ." !
" ಸಂಕ್ರಾಂತಿ " ಶುಭಾಶಯಗಳು ; " ಹ್ಯಾಪಿ ಪೊಂಗಲ್ ", " ತಿಲ್ ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ." !
ಸರ್ವಜಿತ್ ಸಂವತ್ಸರದ, ಪೌಷಮಾಸ, (ಜನವರಿ) ೧೫, ೨೦೦೮ ರಂದು.
೧೪, ರಂದು, ಭೋಗಿ ಹಬ್ಬ :
೧೪ ನೆಯ ತಾರೀಖು, ಭೋಗಿ ಹಬ್ಬ. ಆದಿನ, ಕೆಂಪು-ಕುಂಬಳಕಾಯಿ, ಹತ್ತಿ, ಸಜ್ಜೆ ಧಾನ್ಯವನ್ನು ಪುರೋಹಿತರಿಗೆ ಕೊಟ್ಟು ನಮಸ್ಕಾರಮಾಡಿ, ಅವರ ಆಶೀರ್ವಾದವನ್ನು ಪಡೆಯತಕ್ಕದ್ದು.
೧೫ ರಂದು ಸಂಕ್ರಾಂತಿಹಬ್ಬ :
ಪ್ರತಿವರ್ಷವೂ, " ಸಂಕ್ರಾಂತಿ ಹಬ್ಬ, " ನಿಖರವಾಗಿ ಜನವರಿ ೧೪, ಅಥವಾ ೧೫ ಕ್ಕೆ ಬರುತ್ತಲಿದೆ. ನಮಗೆಲ್ಲಾ ಸೂರ್ಯದೇವನಿಂದಲೇ ಊರ್ಜಾ ಸಿಕ್ಕುತ್ತಿದೆ. ವಿಶ್ವದ ವ್ಯಾಪಾರಗಳೆಲ್ಲಾ, ಅಂದರೆ ಕಾಲಮಾನಗಳ ಬದಲಾವಣೆ, ಮತ್ತು ಅದರ ಪರಿಣಾಮಗಳನ್ನು ನಿಯಂತ್ರಿಸುವಲ್ಲಿ " ಸವಿತ್ರದೇವ " ನ ಕೈವಾಡವೇ ಅಲ್ಲವೇ ! ಇಂದು ಉತ್ತರಾಯಣಪುಣ್ಯಕಾಲ ಪ್ರಾರಂಭ. ಸೂರ್ಯ ಈ ಮಾಸದಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಅದನ್ನೇ ಸಂಕ್ರಮಣವೆನ್ನುವುದು. ಇಂತಹ ಸಂಕ್ರಮಣಗಳು ವರ್ಷದಲ್ಲಿ ೧೨ ಬರುತ್ತವೆ. ೬ ಋತುಗಳು.ಜುಲೈ ೧೫ ರಿಂದ ಜನವರಿ ೧೫ ರವರೆಗೆ. ಮೇಷರಾಶಿಯಿಂದ ಮೀನ ರಾಶಿಯಿವರೆಗಿನ ೧೨ ರಾಶಿಗಳಿಗೆ ಪ್ರವೇಶ, ಅದರಲ್ಲೂ ಮಕರಕ್ಕೆ ಮಾಡಿದ ಪ್ರವೇಶವನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.
ಈ ಸಮಯದಲ್ಲಿ, *ಕುಸುರಿ ಎಳ್ಳಿನ ಜೊತೆಗೆ, ಕಬ್ಬು, ಇಲಚಿಹಣ್ಣು [ಬೋರೆಹಣ್ಣು] ಮತ್ತು ಬೆಲ್ಲ, ಸಕ್ಕರೆ ಅಚ್ಚುಗಳು, ಕಡ್ಲೆ ಕಾಯಿಯನ್ನು ತಮ್ಮ ಇಷ್ತ ದೇವತೆಯ ಮುಂದಿಟ್ಟು ಪೂಜಿಸಿ ಸೇವಿಸುತ್ತಾರೆ. ಸಂಕ್ರಾಂತಿ, ಹುಗ್ಗಿ ಹಬ್ಬವೂ ಹೌದು. ಇದಕ್ಕೆ ಕಾರಣ, ಧನುರ್ಮಾಸದಲ್ಲಿ ಶರೀರದ ಉಷ್ಣಾಂಷ ಹೆಚ್ಚು ವ್ಯಯವಾಗುತ್ತದೆ, ಮತ್ತು ಶರೀರದ ಅಗ್ನಿಮಾಂದ್ಯತೆಯೂ ಹೆಚ್ಚು. ಇದನ್ನು ಪೂರೈಸಲು, ಇಲಚಿಹಣ್ಣು ಉಪಯೋಗಕ್ಕೆ ಬರುತ್ತದೆ. ಇದು ಉದ್ವೇಗವನ್ನು ನಿಯಂತ್ರಿಸಲು ಮತ್ತು ಕಡಿಮಮಾಡಲು ಸಾಧ್ಯವಾಗುತ್ತದೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು 'ಪೊಂಗಲ್,' ಎಂದು ಕರೆದು ಆಚರಿಸುತ್ತಾರೆ.
ಉತ್ತರಾಯಣ ಕಾಲದಲ್ಲಿ, ರವಿಯು ಉತ್ತರ ಪಥದ ಕಡೆಗೆ ಸಾಗುತ್ತಾನೆ. ಹವಾಮಾನದಲ್ಲಿ ನೈಜವಾಗಿ ಅನೇಕ ಬದಲಾವಣೆಗಳನ್ನು ನಾವು ಅನುಭವಿಸುತ್ತೇವೆ. ಮೊದಲನೆಯದಾಗಿ, ದಿನದ ಉಷ್ಣತೆ ನಿಧಾನವಾಗಿ ಹೆಚ್ಚುತ್ತಾ ಹೋಗುತ್ತದೆ. ಇದು ಚಿಕ್ಕಮಕ್ಕಳ ಆರೋಗ್ಯದಲ್ಲಿ ಏರುಪೇರು ಮಾಡುವ ಸಾಧ್ಯತೆ ಹೆಚ್ಚು. ಹೃದಯದ ಬಡಿತ, ಹಾಗೂ ರಕ್ತಚಲನೆ ಹೆಚ್ಚುತ್ತದೆ. ಇದನ್ನು ಹತೋಟಿಯಲ್ಲಿಡಲು ಬೋರೆಹಣ್ಣು ಕೆಲಸಕ್ಕೆ ಬರುತ್ತದೆ.
ಸವಿತೃದೇವನ ಕಾರ್ಯಗಳಾದ, ದೈನಂದಿಕ ಸೂರ್ಯೋದಯ ಹಾಗೂ ಸೂರ್ಯಾಸ್ತಗಳು, ನಿಮೇಶದಿಂದ, [ಕ್ಷಣ], ಕಾಷ್ಠ, ಕಲಾ, ಮುಹೂರ್ತ, ಅಹೋರಾತ್ರ, ಪಕ್ಷ, ಮಾಸ, ಋತು, ವರ್ಷ, ಶತಮಾನ, ಮುಂತಾದ ಕಾಲಗಣನೆಯು. ಸೂರ್ಯದೇವನ ಪ್ರಖರ ಕಿರಣಗಳು, ವಿಶ್ವದ ಜೀವಿಗಳ ಆರೋಗ್ಯದ ಮೇಲೆ, ಪರಿಣಾಮಬೀರುತ್ತದೆ. ಸಕಾಲಕ್ಕೆ ಮಳೆ ಬೀಳುವ ಪ್ರಕ್ರಿಯೆ, ಉರಿಬಿಸಿಲು, ಅದರಿಂದ ಸಾಗರಗಳ ನೀರು ಕಾದು ಆವಿಯಾಗಿ ಮೇಲೇರಿ ಮೋಡವಾಗಿಬಂದು, ಮಳೆಸುರಿಸುವುದು, ಇತ್ಯಾದಿ.
ಸುಗ್ಗಿ-ಹುಗ್ಗಿ :
(ಮಾರ್ಗಶಿರ ಮಾಸದಿಂದ ಪುಷ್ಯಮಾಸದವರೆಗೆ ಅಂದರೆ, ಡಿಸೆಂಬರ್ ತಿಂಗಳಿನಿಂದ, ಜವವರಿತಿಂಗಳ ಮಧ್ಯಭಾಗದವರೆಗೆ) ಸೂರ್ಯ ಧನುರಾಶಿಯನ್ನು ಪ್ರವೇಶಮಾಡಿದ ದಿನದಿಂದ, ಮಕರರಾಶಿಗೆ ಪ್ರವೇಶಮಾಡುವವರೆಗೆ, 'ಧನುರ್ಮಾಸ," ವೆಂದು ಹೇಳುತ್ತಾರೆ.
ಸುಗ್ಗಿಹಬ್ಬದ ಪ್ರಮುಖ ಆಕರ್ಷಣೆ, ಹುಗ್ಗಿ ಊಟ !
ಹೆಸರುಬೇಳೆಯಿಂದ ತಯಾರಾದ ಹುಗ್ಗಿ, ಅತ್ಯಂತ ಪ್ರಮುಖವಾದ ಹಬ್ಬದೂಟ. ೨ ಭಾಗ ಹೆಸರುಬೇಳೆಗೆ, ೧ ಭಾಗ ಅಕ್ಕಿ, ಮೆಣಸು, ಲವಂಗ, ಕೊಬ್ಬರಿ, ಬೆಣ್ಣೆ ಅಥವ ತುಪ್ಪ, ಸೇರಿಸಿಮಾಡಿದ ಶಾಸ್ತ್ರೀಯ ಖಾದ್ಯ-" ಹುಗ್ಗಿ ". ರೋಚಕ ಹಾಗೂ ವಿರೇಚಕ ; ಇದಕ್ಕೆ, ಲವಂಗ, ಮೆಣಸು ಬೆರೆಸಿದಾಗ ಸ್ವಾದಿಷ್ಟವಾಗುತ್ತದೆ, ಹಾಗೂ ಲವಂಗ, ಮೆಣಸು ಶರೀರದ ಉಷ್ಣತೆಯನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ.
ಚಾಂದ್ರಮಾನದ ಪ್ರಕಾರ ಸಂಕ್ರಾಂತಿ, ಜನವರಿ ೧೪/೧೫ ರಂದು, ಬರುತ್ತದೆ. ಸಂಕ್ರಾಂತಿಯ ಗಣನೆಯನ್ನು ಚಾಂದ್ರಮಾನದ ರೀತ್ಯ, [ಅಮಾವಾಸ್ಯೆಯಿಂದ ಅಮಾವಾಸ್ಯೆಯವರಗೆ] ಚಾಂದ್ರಮಾನದ ಪ್ರಕಾರ, ಸಂಕ್ರಾಂತಿಯಿಂದ ಸಂಕ್ರಾಂತಿಗೆ ಒಂದು ಮಾಸವೆಂಬ ಲೆಕ್ಕ.
ವರ್ಷದ ೬ ಋತುಗಳು ಕೆಳಗೆಕಂಡಂತಿವೆ :
೧. ಮಾಘ-ಫಾಲ್ಗುಣ- ಶಿಶಿರ ಋತು.
೨. ಚೈತ್ರ-ವೈಶಾಖ-ವಸಂತ ಋತು
೩. ಜೇಷ್ಠ-ಆಶಾಢ-ಗ್ರೀಷ್ಮ ಋತು
೪. ಶ್ರಾವಣ-ಭಾದ್ರಪದ-ವರ್ಷಾ ಋತು
೫. ಆಶ್ವಯುಜ-ಕಾರ್ತೀಕ-ಶರದ್ ಋತು
೬. ಮಾರ್ಗಶಿರ-ಪುಷ್ಯ(ಪೌಷ)- ಹೇಮಂತ ಋತು.
೨ ತಿಂಗಳಿಗೆ ೧ ಋತು. ವೈದಿಕಕಾಲದಲ್ಲಿ, ಈ ಋತುಗಣನೆ, ಶಿಶಿರಋತುವಿನಿಂದ ಪ್ರಾರಂಭವಾಗುತ್ತಿತ್ತು. ಈಗ, ವಸಂತಋತುವಿನಿಂದ ಶುರುವಾಗುತ್ತಿದೆ. ಗುಜರಾತ್ ರಾಜ್ಯದ, ಸೂರತ್ ನಗರದಲ್ಲಿ, ಗಾಳಿಪಟ ಆಡಿಸುವ ಸ್ಪರ್ಧೆ, ಬಹಳ ಬಿರುಸಿನಿಂದ ನಡೆಯುತ್ತದೆ. ದೇಶವಿದೇಶಗಳಿಂದ ಅನೇಕಜನ ಇದಕ್ಕಾಗಿಯೇ ಬಂದು ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
* ಕುಸುರಿಯೆಳ್ಳು ತಯಾರಿಕೆಗೆ, ಕನಿಷ್ಟಪಕ್ಷ ೧ ತಿಂಗಳಾದರೂ ಬೇಕೇಬೇಕು. ಹೆಂಗೆಳೆಯರಿಗೆ ಇದನ್ನು ಮಾಡಲು ಅತಿ ಸಂಭ್ರಮ. ಪ್ರತಿಯೊಂದು ಧಾನ್ಯಗಳನ್ನೂ ಆರಿಸಿ, ಹೆಕ್ಕಿ-ಹೆಕ್ಕಿ ನೋಡಿ ಅದರಲ್ಲಿ ಅತಿ ಧೃಡವಾದ ಕಾಳುಗಳನ್ನು ಆರಿಸುವುದು, ಕೊಬ್ಬರಿ ಬಟ್ಟಲಿನ ಮೇಲೆಮಾಡುವ ಚಿತ್ತಾರ. ಕೊನೆಗೆ, ಸಕ್ಕರೆ ಅಚ್ಚುಗಳ ತಯಾರಿಕೆ. ಇವೆಲ್ಲಾ ಮಾಡುವಾಗ ನೋಡಬೇಕು ಅವರ ಸಂಭ್ರಮವನ್ನು !