ಸಂಕ್ರಾಂತಿ ಸಡಗರವ ನೆನೆಯುತ.....

ಸಂಕ್ರಾಂತಿ ಸಡಗರವ ನೆನೆಯುತ.....

ಸಂಕ್ರಾಂತಿ ಹುಡುಗರಿಗಲ್ಲ ಹುಡುಗಿಯರಿಗೆ ಅಂತ ನಮ್ಮಮ್ಮ ಆಗಾಗ ಹೇಳುತ್ತಿದ್ದು ಕೇಳಿ ಬೇಸರಗೊಳ್ಳುತ್ತಿದ್ದ ನನಗೆ ಸಮಾಧಾನ ನೀಡುತ್ತಿದ್ದು ಅವರು ಮಾಡುತ್ತಿದ್ದ ಎಳ್ಳು-ಬೆಲ್ಲ. ತಂಗಿಯರೆಲ್ಲ ಹೊಸ ಬಟ್ಟೆ ಕೊಳ್ಳುವಾಗ ಹೊಮ್ಮುತ್ತಿದ್ದ ಅಸಮಾಧಾನದ ಕ್ರಾಂತಿ ಸಂಕ್ರಾಂತಿಯಂದು ಬೇಯಿಸಿದ ಹಸಿ ಅವರೆಕಾಯಿ ಮತ್ತು ಗೆಣಸು ತಿಂದ ನಂತರವೇ ಕಡಿಮೆಯಾಗುತ್ತಿತ್ತು. ಸಂಕ್ರಾಂತಿ ಸಂಭ್ರಮ ಹಬ್ಬಕ್ಕೆ ಒಂದೆರಡುವಾರ ಇರುವಾಗಲೇ ಹೊಸವರ್ಷದೊಂದಿಗೆ ಆರಂಭವಾಗುತ್ತಿತ್ತು. ಶಾಲೆಯಲ್ಲಿ ಹೊಸವರ್ಷಕ್ಕೆ ಗ್ರೀಟಿಂಗ್ಸ್ ಕಾರ್ಡ್ ಕೊಡದೆ ಮುನಿಸಿಕೊಳ್ಳುತ್ತಿದ್ದ ಗೆಳೆಯರಿಗೆ ‘ಹೊಸ ವರ್ಷ ಮತ್ತು ಸಂಕ್ರಾಂತಿ’ ಎರಡು ಸೇರಿಸಿ ಗ್ರೀಟಿಂಗ್ಸ್ ಕಾರ್ಡ್ ಕೊಡುವುದಾಗಿ ಹೇಳುತ್ತಲೇ ಸಂಕ್ರಾತಿಯ ಆಗಮನ.

ಗ್ರೀಟಿಂಗ್ಸ್ ಕಾರ್ಡ್ ಜೊತೆಗೆ ಬರೆಯುತ್ತಿದ್ದ ಬಾಲಿಶ ಕವನವೊಂದು ನೆನಪಾಗುತ್ತಿದೆ ... ‘ನಾನೊಂದು ಕ್ರಾಂತಿ... ನೀನೊಂದು ಕ್ರಾಂತಿ... ನಮ್ಮಿಬ್ಬಿರ ಕ್ರಾಂತಿ ಈ ಸಂಕ್ರಾಂತಿ‘     

ಶಾಲೆ ಮುಗಿಸಿ ಮನೆಗೆ ಬಂದರೆ ಸಂಕ್ರಾತಿ ಕಚ್ಚಾ ವಸ್ತುಗಳ ಸಂಗ್ರಹ ... ಗೆಣಸು .. ಅವರೆಕಾಯಿ ... ಕಬ್ಬು .... ಕಲೆಹಾಕಲು ಎಲ್ಲಿಲ್ಲದ ಉತ್ಸಾಹ. ಆಗ ತಾನೇ ಕಟಾವುಗೊಂಡ ಗೆಣಸಿನ ಗದ್ದೆಗಳಲ್ಲಿ ಹೆಕ್ಕುವವರ ಕೈಗೆ ಸಿಕ್ಕದೆ ಮಣ್ಣಿನಲ್ಲೇ ಹುದುಗಿ ಚಿಗುರೊಡೆಯುತ್ತಿದ ಗೆಣಸು ಹುಡುಕಲು ದೊಡ್ಡ ಮರಿಸೈನ್ಯವೇ ಹೊರಡುತ್ತಿತ್ತು. ಕುಡುಗೋಲು , ಪಿಕಾಸಿ , ಗುದ್ದಲಿ... ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳು ಆಯುಧಗಳೇ. ಅತಿ ಹೆಚ್ಚು ಕಲೆಹಾಕಿದವರಿಗೆ ದಿನದ ಗೌರವ.ಹಾಗೆ ಮನೆಗೆ ಹಿಂದಿರುಗುವಾಗ ಹಾದಿಯಲ್ಲಿ ಕೊಯ್ದ ರಾಗಿ ಹೊಲಗಳ ಅವರೆಕಾಯಿ ಸಾಲುಗಳ ಮೇಲೆ ದಾಳಿ. ಅಪ್ಪಿ ತಪ್ಪಿ ಹೊಲದವರ ಕಣ್ಣಿಗೆ ಬಿದ್ದರೆ ಓಟ, ಸಂಕ್ರಾಂತಿಯ ಸಮಯವಾದ್ದರಿಂದ ಹೊಲದವರ ಕೋಪ ಏಟಿಗೆ ಬದಲು ಬೆದರಿಕೆಗಷ್ಟೇ ಸೀಮಿತ. ಮನೆಗೆ ಮರಳಿ ಅಂದಿನ ಶ್ರಮಫಲದ ರಾಶಿ ನೋಡುತ್ತಿದ್ದರೆ ಗೆಣಸು ಬಗೆದು ತರಚಿದ ಕೈಯಾಗಲಿ.ಅವರೆಕಾಯಿ ಸೋನೆ ತಗುಲಿ ಉರಿಯುತ್ತಿದ್ದ ಮುಖವಾಗಲಿ, ಕೂಳೆ ತರಚಿ ರಕ್ತ ಸೋರುವ ಕಾಲಾಗಲಿ ಪರಿವೆಗೆ ಬರುತ್ತಿರಲಿಲ್ಲ...

ಸಂಕ್ರಾಂತಿ ದಿನ ಚುಮು-ಚುಮು ಚಳಿಯಲ್ಲಿ ಬೇಗನೆ ಎದ್ದು ಅಪ್ಪನ ಜೊತೆ ದನ ಕುರಿ ಹಿಡಿದು ಹೊಳೆಗೆ ಹೊರಟರೆ ಅಷ್ಟರಲ್ಲಾಗಲೆ ಸೇರುರುತ್ತಿದ್ದ ಜನರ ದಂಡಿನೊಡನೆ ಸೇರಿ ಓರಗೆಯವರೊಂದಿಗೆ ದನಗರುಗಳೊಂದಿಗೆ ಸ್ಪರ್ದೆಯೊಡ್ಡಿ ಈಜಾಟ. ಕಾವೇರಿ ಅಭ್ಯಂಜನ.ಮುಗಿಸಿ ನೇಸರನ ಉತ್ತರಾಯಣ ಪಯಣದ ಮೊದಲ ಕಿರಣಗಳಿಗೆ ಹೊಳೆದಂಡೆಯಲಿ ಕೆಲಕಾಲ ಮೈಯೊಡ್ಡಿ ಮಲಗಿದರೆ ಅದೇನೋ ಉಲ್ಲಾಸ. ಹೊಳೆಯಿಂದ ಬರುತ್ತಲೇ ಗೋವುಗಳ ಶೃಂಗಾರಕ್ಕೆ ಮನೆಯಲ್ಲಿ ಎಲ್ಲ ಸಿದ್ದವಾಗಿರುತ್ತಿತ್ತು. ಮನಸಾರೆ ಅವುಗಳನ್ನೂ ಶೃಂಗರಿಸಿ ಪೂಜಿಸಿದರೆ ಹುಡಗರ ಸಂಕ್ರಾತಿ ಮುಗಿಯುತ್ತಿತ್ತು. ಒಮ್ಮೊಮ್ಮೆ ಶೃಂಗಾರ ಹೆಚ್ಚಾಗಿ ಬಿಳಿ ಕುರಿಗಳ ಬಣ್ಣವಂತೂ ಪೂರ್ತಿ ಹರಿಶಿನಮಯ.ಮತ್ತೆ ಅವು ಬಿಳಿ ಯಾಗುತ್ತಿದ್ದು ಜೋರು ಮಳೆಯಲ್ಲಿ ತೂಯ್ದಾಗಲೋ ಅಥವಾ ಉಗಾದಿಯಲ್ಲೋ.

ಊರೊಳಗೆ ಎಲ್ಲ ಮನೆಗಳ ಮುಂದೆ ಭರ್ಜರಿ ರಂಗೊಲೆಗಳು ಹೆಣ್ಣುಮಕ್ಕಳ ಗಡಿಬಿಯಾಗಲೇ ಶುರುವಾಗಿರುತ್ತಿತ್ತು. ದೇವರ ಪೂಜೆ ಮತ್ತು ಉಪಹಾರ ಮುಗಿಯುವುದರೊಳಗೆ ಎಳ್ಳು-ಬೆಲ್ಲ ಪೊಟ್ಟಣ ಕಟ್ಟುವ ಕೆಲಸ ನೇಮಕ ವಾಗುತ್ತಿತ್ತು. ಪ್ರತಿ ಸಂಕ್ರಾತಿಗೂ ತಪ್ಪದೆ ಬರುವ ‘ಹಳ್ಳಿ ಮೇಷ್ಟ್ರು’ ಚಿತ್ರದ ‘ಸಂಕ್ರಾಂತಿ ಬಂತು ರತ್ತೋ ರತ್ತೋ ...’ ಗೀತೆಗೆ ಕೋರಸ್ ಕೊಡುತ್ತ ಪೊಟ್ಟಣ ಕಾರ್ಯ ಮುಗಿಯುತ್ತಿತ್ತು.

ಸಂಜೆ ಹೊತ್ತಿಗೆ ತಂಗಿಯರಿಂದ ಎಳ್ಳುಬೀರಲು ಸಹಾಯಕ್ಕಾಗಿ ಬೇಡಿಕೆ. ಎಳ್ಳು-ಬೆಲ್ಲ ಪೊಟ್ಟಣ ತುಂಬಿದ ಪಾತ್ರೆ ಹಿಡಿದು ಸಹಾಯಕನಾಗಿ ಹೊರಟರೆ..... ಇದು ನಮ್ಮ ಊರೇನಾ ಎಂದು ವಿಸ್ಮಯಗೊಳ್ಳುವಷ್ಟು ಸಂಭ್ರಮ ಸಡಗರ ತುಂಬಿದ ಬೀದಿಗಳು, ಬಣ್ಣ ಬಣ್ಣದ ಬಟ್ಟೆ ತೊಟ್ಟು ನಳನಳಿಸುತ್ತಿದ್ದ ಹೆಣ್ಣುಮಕ್ಕಳು. ಶಾಲೆಯಲ್ಲಿ ನೋಡುತ್ತಿದ್ದ ಅದೇ ಮುಖಗಳು ಸಂಕ್ರಾಂತಿಯಂದು ಮಾತ್ರ ವಿಭಿನ್ನ ಮತ್ತು ಚೇತೋಹಾರಿ. ಎಷ್ಟೋ ಮನೆಗಳ ಒಳದರ್ಶನವಾಗುತ್ತಿದ್ದು ಸಂಕ್ರಾಂತಿಯಂದೇ. ಪ್ರತಿ ಮನೆಯಲ್ಲೂ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಹಂಚಿ ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ ‘ ಎಂದು ಹಾರೈಸುವುದರ ಜೊತೆಗೆ ಹೊಸಬಟ್ಟೆಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಎಲ್ಲ ಮುಗಿಸಿ ಮನೆ ಮರಳುವುದರೊಳಗೆ ವಸ್ತ್ರವಿನ್ಯಾಸದಲ್ಲಿ ಅಘಾದ ಜ್ಞಾನ ಪ್ರಾಪ್ತಿಯಾಗುತ್ತಿತ್ತು. ಅಷ್ಟರೊಳಗೆ ಅಮ್ಮನ ಕೈಯಲ್ಲಿ ಹದವಾಗಿ ಬೆಂದ ಅವರೆಕಾಯಿ ಗೆಣಸು ನಮಗಾಗಿ ಕಾದಿರುತ್ತಿತ್ತು. ಎಲ್ಲಾ ಒಟ್ಟಾಗಿ ಕುಳಿತು ಬಿಸಿ ಬಿಸಿ ಕಾಫಿ ಕುಡಿಯುತ್ತ ಅಮ್ಮ ಬಿಡಿಸಿ ಕೊಡುತ್ತಿದ್ದ ಅವರೆಕಾಯಿ ಗೆಣಸು ತಿನ್ನುತ್ತ ಗಂಟೆಗಟ್ಟಲೆ ಹರಟುತ್ತ ನಿಧಾನಾವಾಗಿ ನಿದ್ರೆಯ ಮಡಿಲಿಗೆ ಜಾರಿಸುತ್ತಿದ್ದ ಆ ಆಪ್ತ ಸಂಕ್ರಾತಿಯ ನೆನಪು ಸಪ್ತ ಸಾಗರದಾಚೆ ರಿಂಗಿಣಿಸುತ್ತಿದೆ


 


ಚಂದ್ರು ಮಲ್ಲೀಗೆರೆ


http://moonmagnet.blogspot.com/