ಸಂಘರ್ಷಕ್ಕೆ ಅಂತ್ಯ ಹಾಡುವ ಒಪ್ಪಂದ
ಭಾರತ ಯಾವ ಸಂದರ್ಭದಲ್ಲಾದರೂ ಏಕಕಾಲಕ್ಕೆ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳೊಂದಿಗೆ ಸೆಣಸುವ ಸಂದರ್ಭ ಬರಬಹುದು ಎಂಬ ಆತಂಕ ಇಂದಿಲ್ಲ. ಪಾಕಿಸ್ತಾನವಂತೂ ಭಾರತದೊಂದಿಗೆ ಸಂಘರ್ಷಕ್ಕಿಳಿಯುವ ಸ್ಥಿತಿಯಲ್ಲಿಲ್ಲ. ಅದಕ್ಕೀಗ ಕನಿಷ್ಟ ಮುಸುಕಿನ ಯುದ್ಧ ನಡೆಸುವ ತಾಕತ್ತು ಕೂಡಾ ಇಲ್ಲ. ಆದ್ದರಿಂದ ಭಾರತ, ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆಗಳನ್ನು ನಡೆಸಬೇಕಾದ ಅನಿವಾರ್ಯತೆ ಇಲ್ಲ. ಹೀಗಾಗಿ ಭಾರತ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸದ ಕ್ರಮವನ್ನು ಹಳೆಯ ರಾಜತಾಂತ್ರಿಕರು ಮೋದಿಯ ತಲೆಗೆ ಕಟ್ಟಲು ಕೂಡ ಪ್ರಯತ್ನಿಸುತ್ತಿದ್ದರು. ಶ್ರೀಲಂಕಾ, ಮಾಲ್ಡೀವ್ಸ್, ಭೂತಾನ್ ನಂತಹ ಪುಟ್ಟ ದೇಶಗಳಲ್ಲಿ ಮಾತ್ರ ಮೋದಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದರು. ಮುಖ್ಯವಾಗಿ ಕಾಂಗ್ರೆಸ್ ಮತ್ತು ಅದರ ಚಿಂತಕರಿಗೆ ಮೋದಿ ಚೀನಾ ವಿಷಯದಲ್ಲಿ ಯಶಸ್ವಿಯಾಗಲಿಲ್ಲ ಎಂದು ಹೇಳುತ್ತಿದ್ದರು.
ಆದರೆ ಇದೀಗ ಕೇಂದ್ರ ಸರ್ಕಾರ ಚೀನಾದೊಂದಿಗೆ ಮಹತ್ವದ ಒಪ್ಪಂದವೊಂದಕ್ಕೆ ಬಂದಿದೆ. ಇದು ಎಷ್ಟು ಮಹತ್ವದೆಂದರೆ ಹಲವು ದಶಕಗಳಿಂದ ಎರಡೂ ದೇಶಗಳಲ್ಲಿ ಮನೆಮಾಡಿದ್ದ ಪರಸ್ಪರ ಸಂಶಯ ಮತ್ತು ಆತಂಕ ದೂರವಾಗಲಿದೆ. ಭಾರತ ಮತ್ತು ಚೀನಾ ಗಡಿಯ ಎಲ್ ಎ ಸಿ ವಾಸ್ತವಿಕ ಗಡಿ ರೇಖೆಯಲ್ಲಿ ಆಗಾಗ್ಗೆ ನಡೆಯುತ್ತಿದ್ದ ಸೈನಿಕ ಮುಖಾಮುಖಿಯನ್ನು ತಪ್ಪಿಸಲು ಭಾರತ ಮತ್ತು ಚೀನಾ ಸಹಮತಕ್ಕೆ ಬಂದಿದೆ. ಗಡಿ ಭಾಗಗಳಲ್ಲಿ ಪೆಟ್ರೋಲಿಂಗ್ ನಡೆಸುವಲ್ಲಿ ಯಾವುದೇ ಗೊಂದಲ ಬಾರದಂತೆ ಎರಡೂ ದೇಶಗಳು ಕೈಜೋಡಿಸಿವೆ. ಹೆಸರಿಗೆ ಇದು ಗಡಿ ವ್ಯಾಜ್ಯಕ್ಕೆ ಸಂಬಂಧಿಸಿದ್ದು. ಅಂದರೆ ಚೀನಾದ ಕಾಲು ಕೆರೆಯುವ ಬುದ್ಧಿ ಮತ್ತು ವಿಸ್ತರಣಾವಾದಕ್ಕೆ ಭಾರತ ಅಂಕುಶ ಹಾಕಿದೆ. ಪಾಂಗ್ವಾಂಗ್ ತ್ಸು ಉತ್ತರ ಮತ್ತು ದಕ್ಷಿಣ ದಡ, ಪಾಯಿಂಟ್ ೧೫ ಮತ್ತು ಪಾಯಿಂಟ್ ೧೭ ಎ, ಗೋಗ್ರಾ ಬಿಸಿನೀರಿನ ಬುಗ್ಗೆ ಪ್ರದೇಶ ಮತ್ತು ಗಲ್ವಾನ್ ಕಣಿವೆ ಭಾಗಗಳಲ್ಲಿ ಪೆಟ್ರೋಲಿಂಗ್ ಬಗ್ಗೆ ಅನಗತ್ಯ ವಿವಾದಗಳು ಮತ್ತು ಸಂಘರ್ಷಗಳು ನಡೆಯುತ್ತಲೇ ಇದ್ದವು. ಆ ಪ್ರದೇಶಗಳಲ್ಲಿ ವಾಸ್ತವಿಕ ಗಡಿ ರೇಖೆಗಳನ್ನು ಚೀನಾ ಉಲ್ಲಂಘಿಸುತ್ತಲೇ ಬರುತ್ತಿತ್ತು. ಇನ್ನು ಆ ಉಲ್ಲಂಘನೆ ಆಗದು ಎಂದು ಭಾರತ ಮತ್ತು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ೨೦೨೦ರಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು. ಈ ಒಪ್ಪಂದದ ಪ್ರಕಾರ ಭಾರತ ೨೦೨೦ರ ಮುಂಚಿನ ಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಚೀನಾದಂಥ ವಿಸ್ತರಣಾವಾದಿ ಮತ್ತು ನೆರೆಯವರ ಮೇಲೆ ಕಾಕದೃಷ್ಟಿ ಇಡುವ ದೇಶ ಇದಕ್ಕೆ ಹೇಗೆ ಒಪ್ಪಿತು ಎನ್ನುವುದರಲ್ಲೇನೂ ಆಶ್ಚರ್ಯ ಪಡುವಂಥದ್ದಿಲ್ಲ. ಏಕೆಂದರೆ ೨೦೨೦ರ ಘಟನೆಯ ನಂತರ ಭಾರ-ಚೀನಾ ವ್ಯಾಪಾರದ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು. ಅದರಿಂದ ಭಾರತಕ್ಕಿಂತಲೂ ಚೀನಾಕ್ಕೆ ತೀವ್ರ ನಷ್ಟವಾಗಿತ್ತು. ಭಾರತದ ಹೊಸ ವಿದೇಶಾಂಗ ನೀತಿಯಿಂದ ತನ್ನ ಆರ್ಥಿಕ ಮತ್ತು ವ್ಯಾಪಾರದ ಸವಾಲನ್ನು ಅದು ನಿಭಾಯಿಸಿಕೊಂಡಿತ್ತು. ಆದರೆ ಚೀನಾಕ್ಕದು ಅಷ್ಟು ಸುಲಭವಿರಲಿಲ್ಲ. ಭಾರತವು ಚೀನಾಕ್ಕೆ ಪ್ರಮುಖ ರಫ್ತುದಾರ ದೇಶವಾಗಿತ್ತು. ಕೇಂದ್ರ ಸರ್ಕಾರ ಕೊಟ್ಟ ಪೆಟ್ಟು ಚೀನಾಕ್ಕೆ ಸರಿಯಾಗಿಯೇ ನಾಟಿತು. ಅದು ಈ ಪರಿಸ್ಥಿತಿಗೆ ಬಂದು ಮುಟ್ಟಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೩-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ