ಸಂತಸದ ಸುದ್ದಿಯೊಂದು ನಿಮಗಾಗಿ...

ಸಂತಸದ ಸುದ್ದಿಯೊಂದು ನಿಮಗಾಗಿ...

ದೇವರ ಮಾರಾಟ ಮತ್ತು ಪ್ರದರ್ಶನದ ಆಕರ್ಷಕ ಅಂಗಡಿ ತೆರೆದಿದ್ದೇನೆ. ಹೌದು, ಗಣೇಶನ ಪ್ರದರ್ಶನ ಮತ್ತು ಮಾರಾಟ. ಯಾವ ರೀತಿಯ ಗಣೇಶ ಬೇಕು ನಿಮಗೆ?

ಮಣ್ಣಿನ ಗಣೇಶ, ಕಲ್ಲಿನ ಗಣೇಶ, ಮರದ ಗಣೇಶ, ತಾಮ್ರದ ಗಣೇಶ, ಕಂಚಿನ ಗಣೇಶ, ಬೆಳ್ಳಿಯ ಗಣೇಶ, ಚಿನ್ನದ ಗಣೇಶ ವಜ್ರದ ಗಣೇಶ… ಬಣ್ಣದ ಗಣೇಶ ನವರಸ ಗಣೇಶ, ಪರಿಸರ ಪ್ರೇಮಿ ಗಣೇಶ, ಕಾಗದದ ಗಣೇಶ, ಮೇಣದ ಗಣೇಶ, ಮೈಲುತುತ್ತದ ಗಣೇಶ, ತರಕಾರಿ ಗಣೇಶ, ಹಣ್ಣಿನ ಗಣೇಶ, ಧವಸ ಧಾನ್ಯಗಳ ಗಣೇಶ, ಬಲಮುರಿ ಗಣೇಶ, ಎಡಮುರಿ ಗಣೇಶ, ಕುಳಿತಿರುವ ಗಣೇಶ, ನಿಂತಿರುವ ಗಣೇಶ, ಆಯುಧಧಾರಿ ಗಣೇಶ, ವಿಶ್ವರೂಪಿ ಗಣೇಶ, ಪ್ರಸನ್ನವದನ ಗಣೇಶ, ಉಗ್ರರೂಪಿ ಗಣೇಶ, ನೃತ್ಯ ಮಾಡುತ್ತಿರುವ ಗಣೇಶ, ಯೋಧನಾಗಿರುವ ಗಣೇಶ, ಸಿಕ್ಸ್ ಪ್ಯಾಕ್ ಗಣೇಶ, ಡೊಳ್ಳು ಹೊಟ್ಟೆಯ ಗಣೇಶ, ಋಷಿ ರೂಪದ ಗಣೇಶ, ಖುಷಿ ಮೂಡಿನ ಗಣೇಶ, ಬಹುಮುಖಿ ಗಣೇಶ...

ಎಲ್ಲವೂ ಮಾರಾಟಕ್ಕಿದೆ. ನಿಮ್ಮೆಲ್ಲಾ ಸಂಕಷ್ಟಹರ ಗಣಪ ನಮ್ಮಲ್ಲಿದ್ದಾನೆ. ಮದುವೆ ಆಗದವರಿಗೊಂದು ಗಣೇಶ, ಮಕ್ಕಳಾಗದವರಿಗೊಂದು ಗಣೇಶ, ಅವಿದ್ಯಾವಂತರಿಗೊಂದು ಗಣೇಶ, ಬುದ್ದಿವಂತರಿಗೊಂದು ಗಣೇಶ, ಬಡವರಿಗೊಂದು ಗಣೇಶ, ಶ್ರೀಮಂತರಿಗೊಂದು ಗಣೇಶ, ನಿರುದ್ಯೋಗಿಗಳಿಗೊಂದು ಗಣೇಶ, ವ್ಯಾಪಾರಸ್ತರಿಗೊಂದು ಗಣೇಶ, ರೋಗಿಗಳಿಗೊಂದು ಗಣೇಶ, ಆರೋಗ್ಯವಂತರಿಗೊಂದು ಗಣೇಶ, ದಂಪತಿಗಳಿಗೊಂದು ಗಣೇಶ, ವಿಚ್ಚೇದಿತರಿಗೊಂದು ಗಣೇಶ, ಹಣ ಮಾಡಲೊಂದು ಗಣೇಶ, ಆಸ್ತಿ ಮಾಡಲೊಂದು ಗಣೇಶ, ಅಧಿಕಾರ ಹಿಡಿಯಲೊಂದು ಗಣೇಶ, ಪ್ರಚಾರಕ್ಕೊಂದು ಗಣೇಶ, ವಿರೋಧಿಗಳನ್ನು ಹಣಿಯಲೊಂದು ಗಣೇಶ, ಬ್ರಹ್ಮಚಾರಿಗಳಿಗೊಂದು ಗಣೇಶ, ಸಂಸಾರಸ್ತರಿಗೊಂದು ಗಣೇಶ, ಪ್ರೇಮಿಗಳಿಗೊಂದು ಗಣೇಶ, ವಿರಹಿಗಳಿಗೊಂದು ಗಣೇಶ ಇದಲ್ಲದೆ ಇನ್ನೂ ಸಾವಿರಾರು... ಯಾವುದು ಬೇಕು ನಿಮಗೆ?.

ಸರ್ವಶಕ್ತ ಸರ್ವಾಂತರ್ಯಾಮಿ ಗಣೇಶ ನಮ್ಮವನು. ನಿಮ್ಮೆಲ್ಲ ಸಂಕಷ್ಟಗಳ ನಿವಾರಕ ಇವನು. ಇಂದೇ ನಿಮ್ಮ ಆಯ್ಕೆಯ ಗಣೇಶನನ್ನು ಕಾಯ್ದಿರಿಸಿ.

ನಿಮ್ಮ ಮನೆ ಬಾಗಿಲಿಗೆ, ಮನಸ್ಸಿನ ಅಂತರಾಳಕ್ಕೆ, ಬದುಕಿನ ಜೊತೆಯಾಟಕ್ಕೆ, ಉಚಿತವಾಗಿ ತಲುಪಿಸಲಾಗುತ್ತದೆ. ಫಲಿತಾಂಶ ಮಾತ್ರ ಖಚಿತ.. ಯಾವ ಮೋಸ ವಂಚನೆ ಇಲ್ಲದೆ ಶತಶತಮಾನಗಳಿಂದ ಮಾರಾಟ ಮಾಡುತ್ತಿದ್ದೇವೆ. ವಿಶೇಷ ಕೊಡುಗೆ. ನಿಮ್ಮೆಲ್ಲಾ  ಕಷ್ಟಗಳು ಪರಿಹಾರ ಆಗುವವವರೆಗೂ ನಮ್ಮ ಗಣೇಶನ ಮಾರಾಟ ನಿರಂತರ....

ಬೇಗ ಬನ್ನಿ, ಇಂದೇ ಕಾಯ್ದಿರಿಸಿ..

( ಹೊಟ್ಟೆ ಪಾಡಿಗಾಗಿ ದೇವರನ್ನೂ ಮಾರಾಟ ಮಾಡಲಾಗುತ್ತಿದೆ. ಬದಲಾಗಿ ದೇವರ ಗುಣಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಿದ್ದರೆ....!)

ನಮ್ಮ ವಿಳಾಸ:

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.

-ವಿವೇಕಾನಂದ. ಹೆಚ್.ಕೆ.

  • 313 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ತುಮಕೂರು ಜಿಲ್ಲೆಯ ಆಲ್ಬೂರು ಗ್ರಾಮದಲ್ಲಿಯೇ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಿತು. ಇಂದು  10/9/2021 ಶುಕ್ರವಾರ 314 ನೆಯ ದಿನ  ನಮ್ಮ ಕಾಲ್ನಡಿಗೆ  ಆಲ್ಬೂರು ಗ್ರಾಮದಿಂದ ಸುಮಾರು 10 ಕಿಲೋಮೀಟರ್ ದೂರದ  ತುರುವೇಕೆರೆ ತಾಲ್ಲೂಕು ತಲುಪಲಿದೆ. ನಾಳೆ 11/9/2021 ಶನಿವಾರ 315 ನೆಯ ದಿನ ನಮ್ಮ ಪ್ರಯಾಣ ಮಾಯಸಂದ್ರ ಗ್ರಾಮದತ್ತಾ........

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ