ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್

ಬರಹ

ಭಾರತೀಯ ಕ್ರಿಶ್ಚಿಯನ್ನರ ಪಾಲಿಗೆ ಇಂದು ಸಾಮಾನ್ಯ ಭಾನುವಾರವಲ್ಲ. ಶುಭ ದಿನ ಎಂದರೆ ತಪ್ಪಲ್ಲ. ವ್ಯಾಟಿಕನ್‌ ಸಿಟಿಯಲ್ಲಿ ಎರಡನೇ ಭಾರತೀಯರೊಬ್ಬರಿಗೆ ಸಂತ ಪದವಿ ಪ್ರಾಪ್ತವಾಗಿದೆ. ಈ ಸಂತಸ ಕ್ರಿಶ್ಚಿಯನ್ನರದ್ದು. ಈ ಸಂತಸಕ್ಕೆ ಇನ್ನೊಂದು ಕಾರಣವೂ ಇದೆ. ಇದೇ ಮೊದಲ ಬಾರಿಗೆ ಸಿಸ್ಟರ್ ಒಬ್ಬರಿಗೆ ಸಂತಪದವಿ ಪ್ರಾಪ್ತವಾಗಿರುವುದು.

ಸಿಸ್ಟರ್ ಅಲ್ಫೋನ್ಸಾ ಈ ಮೇರು ಪದವಿಯನ್ನು ಮುಡಿಗೇರಿಸಿಕೊಂಡವರು. ಕೇರಳದ ಕೊಟ್ಟಾಯಂನವರಾದ ಸಿಸ್ಟರ್ ಅಲ್ಫೋನ್ಸಾ ಪವಾಡಗಳ ಬಗ್ಗೆ ಭರನಂಗನಮ್ ಸಾಕಷ್ಟು ಐತಿಹ್ಯಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭರನಂಗನಮ್‌ನ ಚರ್ಚ್ನನಲ್ಲಿ ಪ್ರಾರ್ಥನೆ ನಡೆಸಿ ರೋಗ ವಾಸಿ ಮಾಡಿಕೊಂಡವರಂತೂ ಸಿಸ್ಟರ್ ಅಲ್ಫೋನ್ಸಾ ಪವಾಡವನ್ನು ಕೊಂಡಾಡುವವರೇ...!

ಅನ್ನಕುಟ್ಟಿ ಸಿಸ್ಟರ್ ಆದುದು ಹೀಗೆ

ವ್ಯಾಟಿಕನ್ ಕ್ಯಾಥೋಲಿಕ್ ಚರ್ಚ್‌‌ನಿಂದ ಸಂತ ಪದವಿ ಪಡೆಯೋದು ಸುಲಭದ ಮಾತಲ್ಲ. ಭಾರತದ ಕ್ರಿಶ್ಚಿಯನ್ನರ ಪಾಲಿಗೆ ಇದು ಎರಡನೇ ಸಂತ ಪದವಿ. ಇಂದು ಸಂತಪದವಿಗೇರಿದ ಸಿಸ್ಟರ್‍ ಅಲ್ಫೋನ್ಸಾ ಹುಟ್ಟಿದ್ದು ೧೯೧೦ರ ಆಗಸ್ಟ್ ೧೯ರಂದು. ಸ್ವಂತ ಊರು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಡುಮಲೂರು. ತಂದೆ ಜೋಸೆಫ್. ತಾಯಿ ಮೇರಿ ಮುಟ್ಟತ್‌ಪಾಡತ್. ಬಾಲ್ಯದ ಹೆಸರು ಅನ್ನಾ. ಮನೆಮಂದಿಗೆಲ್ಲ ಪ್ರೀತಿಯ ಅನ್ನಕುಟ್ಟಿ. ಈ ಅನ್ನಕುಟ್ಟಿ ಹುಟ್ಟಿದ ೩ ತಿಂಗಳ ಅಂತರದಲ್ಲೇ ತಾಯಿ ಮೇರಿ ಮುಟ್ಟತ್‌ಪಾಡತ್ ಕೊನೆಯುಸಿರೆಳೆದರು.

ಅನ್ನಮ್ಮ ಮೆರಿಕೆನ್ ಅನ್ನಾಕುಟ್ಟಿಯ ಸಾಕುತಾಯಿ ಆದರು. ಅವರಿಗೋ ಅನ್ನಾಕುಟ್ಟಿಯನ್ನು ಉತ್ತಮ ಗೃಹಣಿಯನ್ನಾಗಿ ಮಾಡಬೇಕೆಂಬ ಹಂಬಲ. ಹೀಗೆ ಅನ್ನಾಕುಟ್ಟಿಯ ಬಾಲ್ಯದ ಶಿಕ್ಷಣ ಅಪೂರ್ಕರ ಮತ್ತು ಮುತ್ತುಚೀರಾದಲ್ಲಿ ನಡೆಯಿತು. ಶಿಕ್ಷಣ ಮುಗಿಯತ್ತಿದ್ದಂತೆ ಅನ್ನಾಕುಟ್ಟಿಯ ಮದುವೆಗೆ ಸಿದ್ಧತೆ ನಡೆದಿತ್ತು.
ಆದರೆ ಅನ್ನಾಕುಟ್ಟಿ ಮದುವೆ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಮದರ್ ತೇರೆಸಾರನ್ನು ಆದರ್ಶವಾಗಿ ತೆಗೆದುಕೊಂಡ ಅನ್ನಾಕುಟ್ಟಿ ೧೯೨೬ರಲ್ಲಿ ಭರನಂಗನಮ್‌ ಕ್ಲಾರಿಸ್ಟ್‌ ಕಾನ್ವೆಂಟ್‌ಗೆ ಸೇರಿದರು. ಅಲ್ಲಿ ಸಿಸ್ಟರ್‌ ಪದವಿ ಸ್ವೀಕರಿಸುವ ಮೊದಲು ಅಲ್ಫೋನ್ಸಾ ಆದರು. ೧೯೩೦ರ ಮೇ ೧೯ರಂದು ಅಲ್ಫೋನ್ಸಾ ಸಿಸ್ಟರ್‍ ಪದವಿಗೀರಿದರು

ಸಿಸ್ಟರ್ ಸಂತರಾದ ಬಗೆ

ಸಿಸ್ಟರ್‍ ಪದವಿ ಸ್ವೀಕರಿಸಿದ ಬಳಿಕ ಸಂತ ತೆರೆಸಾ ಶಾಲೆಯಲ್ಲಿ ಧಾರ್ಮಿಕ ಬೋಧನೆ ಬಗ್ಗೆ ಒಂದು ವರ್ಷದ ತರಬೇತಿ ಪಡೆದರು. ಈ ಅವಧಿಯಲ್ಲಿ ತೀವ್ರ ರಕ್ತಸ್ರಾವದ ಕಾಯಿಲೆಯಿಂದ ಬಳಲಿದರು. ಆದರೆ ಪವಾಡ ಸದೃಶ ರೀತಿಯಲ್ಲಿ ರಕ್ತಸ್ರಾವದಿಂದ ಗುಣಮುಖರಾದ ಅವರು, ಭರನಂಗನಮ್ ಚರ್ಚ್‌‌ನಲ್ಲಿದ್ದುಕೊಂಡು ಸಮಾಜ ಸೇವೆ ಮತ್ತು ಧರ್ಮ ಬೋಧನೆ ಕಾರ್ಯ ಮುಂದುವರಿಸಿದರು.
೧೯೪೬ರ ವೇಳೆ ಮತ್ತೆ ಸಿಸ್ಟರ್‍ ಅಲ್ಫೋನ್ಸಾಗೆ ಕಾಯಿಲೆ ಕಾಡಿತು. ಆಗ ನ್ಯುಮೋನಿಯಾ ಕಾಡಿದ್ದರಿಂದ ೧೯೪೬ರ ಜುಲೈ ೨೮ರಂದು ಕೊನೆಯುಸಿರೆಳೆದರು.
ಸಿಸ್ಟರ್‍ ನಿಧನ ಬಳಿಕ ಅವರ ಸಮಾಧಿಯನ್ನು ನಿರ್ಮಿಸಲಾಗಿತ್ತು. ಕ್ರಿಶ್ಚಿಯನ್ನರು ಕಷ್ಟ ಎದುರಾದಾಗ ಈ ಸಮಾಧಿ ಬಳಿ ಮನನೊಂದು ಪ್ರಾರ್ಥಿಸಿದರೆ ಕಷ್ಟ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಬೆಳೆದು ಬಂತು. ಇದಕ್ಕೆ ಪೂರಕ ಎಂಬಂತೆ ೧೯೮೬ರ ಫೆಬ್ರವರಿ ೮ರಂದು ಎರಡನೇ ಪೋಪ್ ಜಾನ್‌ಪಾಲ್ ಕೊಟ್ಟಾಯಂಗೆ ಭೇಟಿ ನೀಡಿ ಸಿಸ್ಟರ್‌ ಅಲ್ಫೋನ್ಸಾರ ಧಾರ್ಮಿಕ ಸೇವೆಯನ್ನು ಗೌರವಿಸಿದ್ದರು. ಇದಾದ ಬಳಿಕ ೨೦೦೭ರಲ್ಲಿ ೧೬ನೇ ಪೋಪ್‌ ಬೆನಡಿಕ್ಟ್‌ ೨೦೦೮ರ ಅಂತ್ಯದೊಳಗೆ ಸಿಸ್ಟರ್‌ಗೆ ಸಂತ ಪದವಿ ನೀಡಲಾಗುವುದು ಎಂದು ಘೋಷಿಸಿದ್ದರು. ಅದು ಇಂದು ನನಸಾಗಿದೆ.
---