'ಸಂಪದ' ನಗೆ ಬುಗ್ಗೆ - ಭಾಗ ೧೯
ಯಾರ ಕುದುರೆ ?
ಮಹಾ ಬುದ್ದಿವಂತರಿಬ್ಬರ ಬಳಿ ಎರಡೂ ಕುದುರೆಗಳಿದ್ದವು. ಅವುಗಳಲ್ಲಿ ಯಾವುದು ಯಾರ ಕುದುರೆ ಎಂದು ಗುರುತಿಸುವುದಕ್ಕಾಗಿ ಇಬ್ಬರು ಒಂದು ತೀರ್ಮಾನ ಕೈಗೊಂಡರು. ಯಾವ ಕುದುರೆ ಬಾಲ ತುಂಡಾಗಿದೆಯೋ ಅದು ಮೊದಲನೆಯವನದ್ದು. ಯಾವ ಕುದುರೆಯ ಬಾಲ ತುಂಡಾಗದೇ ಉಳಿದಿದೆಯೋ ಅದು ಎರಡನೆಯವನದ್ದು.
ಆದರೆ, ಕೆಲವು ಪುಂಡು ಪೋಕರಿ ಹುಡುಗರು ಇನ್ನೊಂದು ಕುದುರೆಯ ಬಾಲವನ್ನೂ ಕತ್ತರಿಸಿ ಬಿಟ್ಟರು. ಮರುದಿನ ಮಹಾ ಬುದ್ಧಿವಂತರಿಬ್ಬರು ಮತ್ತೆ ಸಮಾಲೋಚಿಸುತ್ತಾ, ಯಾವ ಕುದುರೆಯ ಕೊರಳಲ್ಲಿ ಗಂಟೆ ಇದೆಯೋ ಅದು ಮೊದಲನೆಯವನದ್ದು, ಯಾವುದರ ಕೊರಳಲ್ಲಿ ಗಂಟೆ ಇಲ್ಲವೋ ಅದು ಎರಡನೆಯವನದ್ದು ಎಂದು ನಿರ್ಧಾರ ಮಾಡಿಕೊಂಡರು. ಆದರೇನು, ಪೋಕರಿ ಹುಡುಗರು, ಕುದುರೆಯೊಂದರ ಕೊರಳಿನ ಗಂಟೆಯನ್ನು ಕದ್ದುಕೊಂಡು ಹೋದರು.
ಮಹಾಬುದ್ಧಿವಂತರಿಬ್ಬರಿಗೂ ಫಜೀತಿಗಿಟ್ಟಿತು. ಕೊನೆಗೂ ಅವರು ಒಂದು ತೀರ್ಮಾನಕ್ಕೆ ಬಂದು, ಬಿಳಿಯ ಕುದುರೆ ಮೊದಲನೆಯವನಿಗೆ ಸೇರಿದ ಕುದುರೆಯೆಂದೂ, ಕಪ್ಪು ಕುದುರೆ ಎರಡನೆಯವನಿಗೆ ಸೇರಿದ ಕುದುರೆಯೆಂದೂ ತಿಳಿಯುವ ನಿರ್ಧಾರವನ್ನು ತೆಗೆದುಕೊಂಡರು.
***
ಬುದ್ಧಿವಂತಿಕೆ
ಒಬ್ಬ ಅತಿ ಜಿಪುಣ ತನ್ನ ಕೆಲಸದಾಳಿಗೆ ಒಂದು ಬಾಟ್ಲಿ ಕೊಟ್ಟು ವೈನ್ ತರಲು ಹೇಳಿದ. ಕೆಲಸದವ ದುಡ್ಡು ಕೇಳಿದಾಗ, 'ದುಡ್ಡಿದ್ದರೆ ಯಾರು ಬೇಕಾದರೂ ವೈನ್ ತರುವುದಿಲ್ಲವೇ? ದುಡ್ಡಿಲ್ಲದೆಯೂ ವೈನ್ ತರಲು ಮಾತ್ರ ಬುದ್ದಿವಂತಿಕೆ ಬೇಕು' ಎಂದು ಹೇಳಿ ಬಿಟ್ಟ.
ಸ್ವಲ್ಪ ಹೊತ್ತಿನ ನಂತರ ಕೆಲಸದವ ಬಾಟ್ಲಿ ತಂದು ಜಿಪುಣನ ಎದುರಿಗಿಟ್ಟ ಖಾಲಿ ಬಾಟ್ಲಿ ನೋಡಿ ಜಿಪುಣ ಸಿಟ್ಟಿನಿಂದ ಕೆಂಪಾಗಿ 'ಏನಿದು? ವೈನೆಲ್ಲಿದೆ?' ಎಂದು ಗದರಿದ.
ಕೆಲಸದವ ಹೇಳಿದ 'ಬಾಟ್ಲಿಯಲ್ಲಿ ವೈನಿದ್ದರೆ ಯಾರು ಬೇಕಾದರೂ ಕುಡಿಯಬಹುದು. ಖಾಲಿ ಬಾಟ್ಲಿಯ ವೈನ್ ಕುಡಿಯಬೇಕಾದರೆ ಮಾತ್ರ ಬುದ್ಧಿವಂತಿಕೆ ಬೇಕು.'
(ತುಷಾರ ಪತ್ರಿಕೆಯಿಂದ)
***
ಸ್ಮಾರ್ಟ್ ವಾಚ್
ಗಾಂಪನ ಹೆಂಡತಿ ಶ್ರೀಮತಿ ಬರ್ತಾ ಬರ್ತಾ ತುಂಬಾ ದಪ್ಪ ಆಗ್ತಾ ಇದ್ದಳು. ಆದ್ರೂ ಅವಳಿಗೆ ತೂಕ ಜಾಸ್ತಿ ಆಗ್ತಾ ಇರೋದರ ಬಗ್ಗೆ ಕೇರ್ ಇರಲಿಲ್ಲ. ಅವಳು ಅದಕ್ಕೆ ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಆದ್ರೆ ಗಾಂಪನಿಗೆ ಮಾತ್ರ ಹೆಂಡತಿ ಅಷ್ಟು ದಪ್ಪ ಆಗುತ್ತಾ ಇರೋದು ನೋಡೋಕೆ ಆಗುತ್ತಲೇ ಇರಲಿಲ್ಲ. ಅಲ್ಲದೆ ಅವನ ಗೆಳೆಯರ ಹೆಂಡತಿಯರೆಲ್ಲಾ ತುಂಬಾ ಸ್ಲಿಮ್ ಆಗಿದ್ರು. ಸೋ, ಗಾಂಪನಿಗೆ ನನ್ನ ಹೆಂಡತಿಯೂ ಹಾಗೇ ಇರಬೇಕು ಅಂತ ಆಸೆ. ಶ್ರೀಮತಿಗೆ ಡೈಲಿ ವಾಕಿಂಗ್ ಮಾಡು ಅಂತ ಹೇಳಿ ಹೇಳಿ ಸಾಕಾಗಿತ್ತು. ಅವಳು ಮಾಡ್ತಾನೇ ಇರಲಿಲ್ಲ. ಒಂದು ದಿನ ಗಾಂಪ ಖಡಕ್ಕಾಗಿ ಹೇಳಿ ಬಿಟ್ಟ, ನೀನು ಇವತ್ತಿಂದ ಡೈಲಿ ೧೦ ಸಾವಿರ ಸ್ಟೆಪ್ಸ್ ವಾಕ್ ಮಾಡಬೇಕು. ನೀನು ಸೋಮಾರಿ ಅಂತ ಗೊತ್ತು. ಅದಕ್ಕೇ ಈ ಸ್ಮಾರ್ಟ್ ವಾಚ್ ತಂದಿದ್ದೇನೆ. ಇನ್ಮೇಲೆ ನೀನು ತಪ್ಪಿಸಿಕೊಳ್ಳೋಕಾಗಲ್ಲ ಅಂದ. ಸರಿ ಅಂದಿನಿಂದ ಪ್ರತಿದಿನ ಆಫೀಸಿನಿಂದ ಬಂದ ಮೇಲೆ ಗಾಂಪ ಹೆಂಡತಿಯ ಸ್ಮಾರ್ಟ್ ವಾಚ್ ಚೆಕ್ ಮಾಡ್ತಾ ಇದ್ದ. ಅದು ಹತ್ತು ಸಾವಿರಕ್ಕಿಂತ ಜಾಸ್ತಿನೇ ತೋರಿಸ್ತಾ ಇತ್ತು. ಗಾಂಪ ಖುಷಿಯಾಗ್ತಾ ಇದ್ದ. ಆದ್ರೆ ಎಷ್ಟೇ ದಿನ ಆದ್ರೂ ಶ್ರೀಮತಿ ಮಾತ್ರ ಸಣ್ಣ ಆಗ್ಲಿಲ್ಲ. ಗಾಂಪ ಕೇಳಿದ್ರೆ, ನಾನೇನ್ ಮಾಡ್ಲಿ, ದಿನಾ ನೀವು ಆಫೀಸಿಗೆ ಹೋದಾಗ ವಾಕಿಂಗ್ ಮಾಡ್ತೀನಿ. ಹತ್ತು ಸಾವಿರ ಸ್ಟೆಪ್ಸ್ ಗಿಂತ ಜಾಸ್ತಿ. ಆದ್ರೂ ಸಣ್ಣ ಆಗಲಿಲ್ಲ ಅಂದ್ಳು. ಗಾಂಪನಿಗೆ ಅನುಮಾನ ಬಂದು ಒಂದು ದಿನ ಆಫೀಸಿನಿಂದ ಸ್ವಲ್ಪ ಮುಂಚೆನೇ ಮನೆಗೆ ಹೊರಟ. ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ. ಯಾರು ಬಂದಿರಬಹುದೆಂದು ಶ್ರೀಮತಿ ಅನುಮಾನದಲ್ಲೇ ಬಾಗಿಲು ತೆಗೆದಳು. ಅಷ್ಟೊತ್ತಿಗೆ, ಅದೆಲ್ಲಿತ್ತೋ ಅವರ ಮನೆಯ ನಾಯಿ ರಾಬರ್ಟ್, ಓಡಿ ಬಂದು ಗಾಂಪನ ಮುಂದೆ ಬಾಲ ಅಲ್ಲಾಡಿಸ್ತಾ ನಿಂತುಕೊಂಡಿತು. ಅದರ ಕುತ್ತಿಗೆಯಲ್ಲಿದ್ದ ಸ್ಮಾರ್ಟ್ ವಾಚ್ ನಲ್ಲಿ ೧೧ ಸಾವಿರ ಸ್ಟೆಪ್ಸ್ ರೀಡಿಂಗ್ ತೋರಿಸ್ತಾ ಇತ್ತು.
(ವಿಶ್ವವಾಣಿಯಿಂದ)
***
ಡೈವೋರ್ಸ್
ನ್ಯಾಯಾಧೀಶರು: ಅಲ್ರೀ, ಮದುವೆ ಆಗಿ ಇನ್ನೂ ವರ್ಷಾನೂ ಆಗಿಲ್ಲ, ಡೈವೋರ್ಸ್ ಯಾಕ್ರೀ ಬೇಕು?
ಅರ್ಜಿದಾರ: ನನ್ನ ಹೆಂಡತಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು, ಈರುಳ್ಳಿ ಕತ್ತರಿಸಲು, ಪಾತ್ರೆಗಳನ್ನು ತೊಳೆಯಲು, ಸಾಲದೂ ಅಂತ ಬಟ್ಟೆ ಒಗೆಯಲೂ, ಎಲ್ಲಾ ಕೆಲಸಗಳನ್ನು ನನಗೇ ಹೇಳ್ತಾಳೆ ಮಹಾಸ್ವಾಮಿ.
ನ್ಯಾಯಾಧೀಶರು: ಇದರಲ್ಲಿ ಏನು ಸಮಸ್ಯೆ? ಬೆಳ್ಳುಳ್ಳಿಯನ್ನು ಮೊದಲು ಬೆಚ್ಚಗಾಗಿಸಿ ಆಗ ಸಿಪ್ಪೆ ಸುಲಿಯುವುದು ಸುಲಭವಾಗುತ್ತದೆ. ಈರುಳ್ಳಿ ಕತ್ತರಿಸುವ ಮೊದಲು ಅವುಗಳನ್ನು ರೆಫ್ರಿಜರೇಟರ್ ನಲ್ಲಿಟ್ಟು ತಣ್ಣಗಾಗಿಸಿ, ನಂತರ ಅವುಗಳನ್ನು ಕತ್ತರಿಸುವಾಗ ಕಣ್ಣುಗಳಲ್ಲಿ ನೀರು ಬರೋದಿಲ್ಲ, ಕಣ್ಣು ಉರಿಯೋದಿಲ್ಲ. ಪಾತ್ರೆಗಳನ್ನು ತೊಳೆಯುವ ಮೊದಲು ಅವುಗಳನ್ನು ೧೦ ನಿಮಿಷಗಳ ಕಾಲ ನೀರಿನ ತೊಟ್ಟಿಯಲ್ಲಿ ಮುಳುಗಿಸಿ, ಅವುಗಳನ್ನು ಸುಲಭವಾಗಿ ತೊಳೆಯಬಹುದು. ಸರ್ಫ್ ನಲ್ಲಿ ಬಟ್ಟೆ ಒಗೆಯುವ ಮೊದಲು, ಅವುಗಳನ್ನು ಅರ್ಧ ಗಂಟೆಯವರೆಗೆ ನೀರಿನಲ್ಲಿ ನೆನೆಸಿ, ಎಲ್ಲಾ ಕಲೆಗಳು ಹೋಗುತ್ತವೆ ಮತ್ತು ಕೈಗಳು ಸಹಾ ದಣಿಯುವುದಿಲ್ಲ. ಅರ್ಥ ಆಯ್ತೇನ್ರೀ..?
ಅರ್ಜಿದಾರ: ಅರ್ಥ ಆಯ್ತು ಮಹಾಸ್ವಾಮಿ. ದಯವಿಟ್ಟು ನನ್ನ ಅರ್ಜಿಯನ್ನು ಹಿಂತಿರುಗಿಸಿ.
ನ್ಯಾಯಾಧೀಶರು: ಏನ್ ಅರ್ಥ ಮಾಡ್ಕೊಂಡ್ರೀ?
ಅರ್ಜಿದಾರ: ಅದೇ ಮಹಾಸ್ವಾಮಿ, ನಿಮ್ಮ ಪರಿಸ್ಥಿತಿ ನನ್ನ ಪರಿಸ್ಥಿತಿಗಿಂತ ಘೋರವಾಗಿದೆ ಅಂತ ಅರ್ಥ ಆಯ್ತು.
***
ಚಿತ್ರ ಕೃಪೆ: ಅಂತರ್ಜಾಲ ತಾಣ