'ಸಂಪದ' ನಗೆ ಬುಗ್ಗೆ - ಭಾಗ ೨೧
ಮನದಾಸೆ !
ಆಯಸ್ಸು ಮುಗಿದ ಗಾಂಪನನ್ನು ಕರೆದೊಯ್ಯಲು ಯಮರಾಜ ಬಂದು 'ಬಾ ಹೋಗೋಣ' ಎಂದ.
ಗಾಂಪ ಅಂಗಲಾಚಿದ, 'ದಯವಿಟ್ಟು ಎರಡು ನಿಮಿಷ ನಿಲ್ಲಿರಿ."
ಯಮರಾಜ ಪ್ರಶ್ನಿಸಿದ, 'ಎರಡು ನಿಮಿಷದಲ್ಲಿ ನಿನಗೇನು ಮಾಡಲಿಕ್ಕಿದೆ. ಕೊನೆಯ ಬಾರಿ ಒಮ್ಮೆ ಅಪ್ತೇಷ್ಟರನ್ನೆಲ್ಲಾ ನೋಡಲಿಕ್ಕಿದೆಯೇ?"
ಗಾಂಪನೆಂದ 'ಇಲ್ಲ ಯಮರಾಜರೇ"
"ಇನ್ನೇನು, ಮ್ಯಾಗಿ ನೂಡಲ್ಸ್ ಮಾಡುತ್ತೀಯಾ?" ಯಮರಾಜ ತಮಾಷೆಯ ಮೂಡಿನಲ್ಲಿದ್ದ.
"ಹಾಗಲ್ಲ ಮಹಾಸ್ವಾಮಿ, ನನ್ನ ವಾಟ್ಸಾಪ್ ಸ್ಟೇಟಸನ್ನು 'ಗೋಯಿಂಗ್ ಟು ಯಮಲೋಕ್' ಎಂಬುದಾಗಿ ಬದಲಾಯಿಸಲಿಕ್ಕಿದೆ" ಗಾಂಪ ಪ್ರಾಮಾಣಿಕವಾಗಿ ತನ್ನ ಮನದಾಸೆಯನ್ನು ತೋಡಿಕೊಂಡ.!
***
ಸಿ.ಬಿ.ಐ.
ದೊಡ್ಡ ಆಸ್ಪತ್ರೆಯೊಂದರಲ್ಲಿ ಗಾಂಪನನ್ನು ಪರೀಕ್ಷಿಸಿದ ಬಳಿಕ ಆತ ಕೋವಿಡ್ ಪಾಸಿಟಿವ್ ಎಂದು ಘೋಷಿಸಲಾಯಿತು. ತಕ್ಷಣ ಆತನಿಗೆ ವೆಂಟಿಲೇಟರ್ ತಗುಲಿಸಬೇಕಾಗುವುದೆಂದೂ ಒಟ್ಟು ವೆಚ್ಚ ೩ ಲಕ್ಷ ರೂಪಾಯಿ ಆಗಬಹುದೆಂದೂ ತಿಳಿಸಲಾಯಿತು.
ಜೀವ ಉಳಿದರೆ ಸಾಕೆಂದು ಗಾಂಪ ಒಪ್ಪಿಕೊಂಡ. ಫಾರಂ ಭರ್ತಿ ಮಾಡುವಾಗ ಸರ್ವೀಸ್ ಕಾಲಂ ನಲ್ಲಿ ಸಿ.ಬಿ.ಐ. ಎಂದು ಬರೆದ.
ತಕ್ಷಣ ಆಸ್ಪತ್ರೆಯ ವಾತಾವರಣದಲ್ಲಿ ಬದಲಾವಣೆ ಕಂಡು ಬಂತು. ಬೇರೆ ವೈದ್ಯರ ತಂಡ ಆಗಮಿಸಿ, ಪುನಃ ಪರೀಕ್ಷಿಸಿ ಗಾಂಪನಿಗೆ ಸಾಮಾನ್ಯ ನೆಗಡಿ, ಕಫ ಮಾತ್ರವಿದೆಯೆಂದೂ ಎರಡು ದಿನಗಳ ಚಿಕಿತ್ಸೆಯ ಬಳಿಕ ಬಿಡುಗಡೆ ಮಾಡಬಹುದೆಂದೂ ಘೋಷಿಸಲಾಯಿತು.!
ಸರ್ವೀಸ್ ಕಾಲಂನಲ್ಲಿ ಸಿ.ಬಿ.ಐ. (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್) ಎಂದು ಬರೆದದ್ದೇ ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಿದೆ.
ಆದರೆ ವಾಸ್ತವಾಂಶವೆಂದರೆ ಗುಂಡ 'ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ' ದಲ್ಲಿ ಕಾರ್ಯನಿರ್ವಹಿಸುತ್ತಿದ್ದ.
(ತುಷಾರ ಪತ್ರಿಕೆ)
***
ಮೊದಲ ಪ್ರತಿಕ್ರಿಯೆ
೧೯೭೯ರ ಅಕ್ಟೋಬರ್ ೧೫, ಬೆಳ್ಳಂಬೆಳಗ್ಗೆ ಭೌತಶಾಸ್ತ್ರಜ್ಞ ಶೆಲ್ಡನ್ ಗ್ಲಾಷೋ ಅವರ ಮನೆಯ ಟೆಲಿಫೋನ್ ರಿಂಗಣಿಸಿತು. ಗ್ಲಾಷೋ ಅವರ ಮನೆಯ ಟೆಲಿಫೋನ್ ರಿಂಗಣಿಸಿತು. ಗ್ಲಾಷೋ ರಿಸೀವರ್ ಎತ್ತಿ ಹಲೋ ಎಂದಾಗ ಅತ್ತಣಿನ ಧ್ವನಿ ಹೇಳಿತು "ನಮಸ್ಕಾರ ಪ್ರೊಫೆಸರ್ ಗ್ಲಾಷೋ ! ಅಭಿನಂದನೆಗಳು. ಈ ವರ್ಷದ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಪಡೆದಿರುವ ತಮ್ಮ ಪ್ರತಿಕ್ರಿಯೆ ತಿಳಿಯಲು ನಮ್ಮ ರೇಡಿಯೋ ಕೇಳುಗರು ಕಾತರರಾಗಿದ್ದಾರೆ. ಹೇಳಿ, ನಿಮ್ಮನ್ನು ಈಗಿಂದೀಗ ತುಂಬಿಕೊಂಡಿರುವ ಭಾವ ಯಾವುದು?"
"ನಿದ್ದೆ" ಎಂದು ಉತ್ತರಿಸಿ ರಿಸೀವರನ್ನು ಕುಕ್ಕಿ ಮತ್ತೆ ಬೆಡ್ ರೂಮಿನತ್ತ ನಡೆದರು ಗ್ಲಾಷೋ.
(ಸೂತ್ರ ಪತ್ರಿಕೆ)
***
ಬರ್ಮುಡಾ
ಒಂದು ಆನೆ ನದಿಯಲ್ಲಿ ಸ್ನಾನ ಮಾಡುತ್ತಿತ್ತು. ಆಗ ಇರುವೆಯೊಂದು ಓಡೋಡಿ ನದಿಯ ದಡಕ್ಕೆ ಬಂದು ಗಟ್ಟಿಯಾಗಿ ಹೇಳಿತು 'ಏಯ್ ಆನೆ, ಇತ್ತ ಬಾ' ಆನೆ ಇರುವೆಯನ್ನು ಸಿಟ್ಟಿನಿಂದ ನೋಡಿ, ನಂತರ ಏನೋ ಆಲೋಚನೆ ಮಾಡಿಕೊಂಡು ನೀರಿನಿಂದ ಹೊರಬಂತು. ಇರುವೆ ಆನೆಯನ್ನು ಅಪಾದಮಸ್ತಕ ನೋಡಿ ಹೇಳಿತು.'ಸರಿ, ನೀನೀಗ ನೀರಿಗೆ ಹೋಗಿ ಸ್ನಾನ ಮಾಡಬಹುದು'. ಇರುವೆಯೇ, ನಿನಗೆಷ್ಟು ಸೊಕ್ಕಿದೆ ! ಮೊದ್ಲು ಹೇಳು, ನೀನ್ಯಾಕೆ ನನ್ನನ್ನು ಕರೆದೆ? ಆನೆ ಫೀಳಿಟ್ಟಿತು. ಇರುವೆ ತನ್ನೆರಡೂ ಕೈಗಳನ್ನು ಜೋಡಿಸಿ ಹೇಳಿತು 'ಆನೆಯಣ್ಣಾ, ರೇಗಬೇಡ. ನಾನು ನನ್ನ ಬರ್ಮುಡಾ ಚಡ್ಡಿ ಕಳಚಿಟ್ಟು ಮರದ ಮೇಲೆ ಹತ್ತಿದ್ದೆ. ಕೆಳಗಿಳಿದು ಬಂದು ನೋಡುವಾಗ ಅದು ಇರಲಿಲ್ಲ. ನೀನೆಲ್ಲಾದರೂ ಮರೆತು ನನ್ನ ಬರ್ಮುಡಾ ಹಾಕ್ಕೊಂಡು ಬಿಟ್ಟಿದ್ದಿಯೇನೋ ಅಂತ ನೋಡಲು ನಿನ್ನನ್ನು ಕರೆದೆ, ಅಷ್ಟೇ !'
***
ಸೀನು
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ತುಂಬಾ ಹೊತ್ತಿನಿಂದ ತಮಗೆ ಬರುತ್ತಿದ್ದ ಸೀನನ್ನು ತಡೆದುಕೊಳ್ಳುತ್ತಿದ್ದರು. ಸೀನು ಬರುತ್ತಿದೆ ಎಂದು ಅನಿಸಿದಾಗ ಮುಖವನ್ನು ವಿಚಿತ್ರ ಆಕಾರದಲ್ಲಿ ತಿರುಗಿಸಿ ತಡೆದುಕೊಳ್ಳುತ್ತಿದ್ದರು. ಅವರ ಎದುರಿಗೆ ಕೂತಿದ್ದ ಪ್ರಯಾಣಿಕರು ಇದನ್ನೆಲ್ಲಾ ಗಮನಿಸುತ್ತಿದ್ದರು. ಕಡೆಗೆ ತಡೆದುಕೊಳ್ಳಲಾಗದೆ ಪ್ರಶ್ನಿಸಿದರು 'ಸಾರ್, ನೀವೇಕೆ ಸೀನನ್ನು ತಡೆದುಕೊಳ್ತಿದ್ದೀರಾ?'
'ನಿಮಗೆ ಸೀನು ಬಂದರೆ, ನಾನು ನಿಮ್ಮನ್ನು ಜ್ಞಾಪಿಸಿಕೊಳ್ತಿದ್ದೇನೆ ಅಂತ ತಿಳಿದುಕೊಂಡು ಕೂಡ್ಲೇ ನಾನಿದ್ದಲ್ಲಿಗೆ ನೀವು ಬರಬೇಕು ಎಂದು ನನ್ನ ಹೆಂಡತಿ ಹೇಳಿದ್ದಾಳೆ' ಅಂದ ಅವರು ಮತ್ತೆ ತಮ್ಮ ಸೀನನ್ನು ತಡೆದುಕೊಂಡರು.
'ರೈಲು ನಿಂತ ನಂತರ ಅವರ ಬಳಿಗೆ ಹೋಗಿ ಬಿಡಿ ಸರ್'
'ಅವಳು ಸತ್ತು ಐದು ದಿನಗಳಾಗಿವೆ'!
(ಸುಧಾ ಪತ್ರಿಕೆ)
***
ಚಿತ್ರ ಕೃಪೆ: ಅಂತರ್ಜಾಲ ತಾಣ