'ಸಂಪದ' ನಗೆ ಬುಗ್ಗೆ - ಭಾಗ ೨೭

'ಸಂಪದ' ನಗೆ ಬುಗ್ಗೆ - ಭಾಗ ೨೭

ಗಡಿಯಾರ

ಗಾಂಪ ದಿನಾ ರಾತ್ರಿ ಕುಡ್ಕೊಂಡು ಮನೆಗೆ ಲೇಟ್ ಆಗಿ ಬರ್ತಾ ಇದ್ದ. ಶ್ರೀಮತಿ, ದಿನಾ ಬಯ್ತಾ ಇದ್ಳು. ಎಷ್ಟು ಹೇಳಿದರೂ ಗಾಂಪ ಕೇಳ್ತಾ ಇರಲಿಲ್ಲ. ಒಂದು ದಿನ ರೋಸಿ ಹೋದ ಶ್ರೀಮತಿ, ೧೨ ಗಂಟೆ ಒಳಗೆ ಮನೆಗೆ ಬನ್ನಿ ಅಂತ ಎಷ್ಟ್ ಸಲ ಹೇಳಿದೀನಿ, ಇನ್ನೊಂದ್ಸಲ ಲೇಟಾಗಿ ಬಂದ್ರೆ ನಾನು ನಿಮಗೆ ಡೈವೋರ್ಸ್ ಕೊಟ್ಟು ಗಂಡನ್ನ ಬದಲಾಯಿಸ್ತೀನಿ ಅಷ್ಟೇ ಅಂತ ಹೆದರಿಸಿದಳು. ಅದಕ್ಕೆ ಗಾಂಪ ಇನ್ಮೇಲೆ ಕುಡಿಯೋದನ್ನು ಬೇಗ ಮುಗಿಸಿ ಕರೆಕ್ಟ್ ಟೈಮಿಗೆ ಮನೆಗೆ ಬರ್ಬೇಕು ಅಂತ ಅಂದುಕೊಂಡ. ಅವತ್ತು ಸ್ನೇಹಿತರು ಸಿಗ್ತೀವಿ ಅಂದ್ರು. ಸರಿ ಪಾರ್ಟಿಗೆ ಹೋದ. ಮಾತಾಡ್ತಾ, ಮಾತಾಡ್ತಾ ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ. ಎಲ್ಲ ಪಾರ್ಟಿ ಮುಗಿಸಿ ಮನೆಗೆ ಬಂದ. ಮನೆಗೆ ಬರೋವಷ್ಟರಲ್ಲಿ ಬೆಳಗಿನ ಜಾವ ೩ ಗಂಟೆ ಆಗಿತ್ತು. ಶ್ರೀಮತಿ ಮಲಗಿದ್ಳು. ನಿದ್ದೆಗಣ್ಣಲ್ಲೇ, ಎಷ್ಟು ಗಂಟೆ ರೀ ಅಂತ ಕೇಳಿದ್ಳು. ಶ್ರೀಮತಿ ೧೨ ಗಂಟೆ ಕಣೇ ಅಂದ. ಅದೇ ಸಮಯಕ್ಕೆ ಸರಿಯಾಗಿ ಗಡಿಯಾರದ ಗಂಟೆ ಹೊಡೆದುಕೊಳ್ಳೋಕೆ ಶುರು ಆಯ್ತು. ಅದು ಹನ್ನೆರಡು ಸಲ ಹೊಡೆದುಕೊಂಡಿದ್ದನ್ನು ಕೇಳಿದ ಶ್ರೀಮತಿ ಹಾಗೇ ಮಲಗಿಕೊಂಡಳು. ಬೆಳಿಗ್ಗೆ ಬೇಗ ಎದ್ದು ತಿಂಡಿ ಬಡಿಸುವಾಗ ಶ್ರೀಮತಿ ಕೇಳಿದ್ಳು, ನಿಜ ಹೇಳ್ರೀ ನೀವು ನಿನ್ನೆ ರಾತ್ರಿ ಬಂದಾಗ ಟೈಮ್ ಎಷ್ಟಾಗಿತ್ತು? ಅದಕ್ಕೆ ಗಾಂಪ ಹೇಳಿದ, ನೀನೇ ಕೇಳಿದೆಯಲ್ಲಾ, ಗಡಿಯಾರ ಹನ್ನೆರಡು ಸಲ ಹೊಡಕೊಂತು ಅಲ್ವಾ, ಗಂಡನ್ನ ಬದಲಾಯಿಸ್ತೀನಿ ಅಂತೆಲ್ಲಾ ಹೇಳಬೇಡ ಈಗ ಅಂದ. ಅದಕ್ಕೆ ಶ್ರೀಮತಿ ಹೇಳಿದ್ದು, ಇಲ್ಲ ರೀ, ಗಂಡನ್ನ ಬದಲಾಯಿಸೋ ಅಗತ್ಯ ಇಲ್ಲ. ಆದ್ರೆ ನಮ್ಮನೆ ಗಡಿಯಾರನ ಬದಲಾಯಿಸ್ಬೇಕು ಅಂದ್ಳು. ಯಾಕೆ ಅಂತ ಗಾಂಪ ಕೇಳಿದ. ಅದಕ್ಕೆ ಶ್ರೀಮತಿ ಹೇಳಿದ್ಳು, ಪಾಪ ನಮ್ ಗಡಿಯಾರಕ್ಕೆ ವಯಸ್ಸಾಯ್ತು. ಹುಷಾರಿಲ್ಲ ಅನ್ಸುತ್ತೆ. ನಿನ್ನೆ ರಾತ್ರಿ ನೀವು ಬಂದಾಗ ನಮ್ಮ ಗಡಿಯಾರ ೩ ಸಲ ಬಡಕೊಂತು, ಆಮೇಲೆ ಓಹ್ ಶಿಟ್ ಅಂತು, ಮತ್ತೆ ೭ ಸಲ ಬಡಕೊಂತು, ಮಧ್ಯೆ ಒಂದ್ಸಲ ಕೆಮ್ಮಿತು. ಆಮೇಲೆ ಎರಡು ಸಲ ಸೀನಿತು, ಮತ್ತೆ ಗಂಟಲು ಸರಿ ಮಾಡ್ಕೊಂಡು ೨ ಸಲ ಬಡ್ಕೊಂಡು, ಹಾಲ್ ನ ಟೇಬಲ್ ಮೇಲಿದ್ದ ಫ್ಲವರ್ ವಾಸ್ ಗೆ ಡಿಕ್ಕಿ ಹೊಡೆದು ಅದನ್ನು ಕೆಳಗೆ ಬೀಳಿಸಿ ಅಲ್ಲೇ ಇದ್ದ ಬೆಡ್ ಮೇಲೆ ಬಿದ್ಕೊಂತು. !

(ವಿಶ್ವವಾಣಿಯಿಂದ)

***

ಸಹಾಯ

ಬೆಳಿಗ್ಗೆ ಬೇಗ ಎಚ್ಚರವಾಗಿತ್ತು. ಬೆಳ್ ಬೆಳಿಗ್ಗೆ ಏನ್ ಮಾಡೋದು ಎಂದುಕೊಳ್ಳುತ್ತಿದ್ದ ಗಾಂಪನಿಗೆ ಶ್ರೀಮತಿಗೆ ಸ್ವಲ್ಪ ಸಹಾಯ ಮಾಡೋಣ ಅನ್ನಿಸಿ, ಫ್ರಿಡ್ಜ್ ಒಳಗಿದ್ದ ಪಾತ್ರೆಯಲ್ಲಿದ್ದ ಹಾಲನ್ನು ತೆಗೆದು ಗ್ಯಾಸ್ ಮೇಲೆ ಕಾಯಿಸಲಿಕ್ಕೆ ಇಟ್ಟ. 

ಹತ್ತು ನಿಮಿಷವಾದರೂ ಅದ್ಯಾಕೆ ಉಕ್ಕುತ್ತಿಲ್ಲ ಎಂದು ನೋಡಿದರೆ ಅದು ಇಡ್ಲಿ ಹಿಟ್ಟು !

ಶ್ರೀಮತಿ ಹಾಸಿಗೆ ಬಿಟ್ಟು ಏಳೋದ್ರೋಳಗೆ ಮನೆ ಬಿಟ್ಟು ಬಂದವನು ಮಧ್ಯಾಹ್ನದ ಉರಿಬಿಸಿಲಾದ್ರೂ ಮೊಬೈಲ್ ಆಫ್ ಮಾಡಿಕೊಂಡು ಹೊರಗಡೆನೇ ಅಡ್ಡಾಡುತ್ತಿದ್ದಾನೆ ಗಾಂಪ.

***

ಅನ್ಯೋನ್ಯತೆ

ಅದೊಂದು ಮದುವೆ ಮನೆ. ಅಲ್ಲಿ ಇಬ್ಬರು ಹೆಂಗಸರು ಬಹಳ ಅನ್ಯೋನ್ಯವಾಗಿರುವುದನ್ನು ನೋಡಿದ ಅಲ್ಲಿದ್ದ ಎಲ್ಲರಿಗೂ ತುಂಬಾ ಆಶ್ಚರ್ಯವಾಯಿತು. ಮುಂದೆ ಅವಳು ಕೂರಬೇಕಾಗಿದ್ದ ಕುರ್ಚಿಯನ್ನು ಇವಳು ಒರೆಸಿದಳು. ಇವಳು ಕುಳಿತುಕೊಳ್ಳಬೇಕಾಗಿದ್ದ ಕುರ್ಚಿಯನ್ನು ಅವಳು ಒರೆಸಿದಳು. ನಂತರ ಇಬ್ಬರೂ ಗೆಳತಿಯರು ಎಂದು ತಿಳಿದಾಗ, ಅಷ್ಟೊಂದು ಅನ್ಯೋನ್ಯತೆಯನ್ನು ನಾವು ಈವರೆಗೆ ಎಲ್ಲಿಯೂ ಕಂಡೇ ಇಲ್ಲವಲ್ಲ ಎಂದುಕೊಂಡರು.

ನಂತರ ಕಾರಣ ತಿಳಿಯಿತು; ಅವಳ ರೇಷ್ಮೆ ಸೀರೆಯನ್ನು ಇವಳು, ಇವಳ ರೇಷ್ಮೆ ಸೀರೆಯನ್ನು ಅವಳು ಉಟ್ಟುಕೊಂಡು ಮದುವೆ ಮನೆಗೆ ಬಂದಿದ್ದರೆಂದು,

***

ವ್ಯಾಪಾರ

ಗಾಂಪ ಒಂದು ಮೃಗಾಲಯವನ್ನು ತೆರೆದ. ಮೊದಲು ೫೦ ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಿದ. ಆದರೆ ಜನರು ಅಧಿಕ ಸಂಖ್ಯೆಯಲ್ಲಿ ಬರಲಿಲ್ಲ. ಅವನ ಮೃಗಾಲಯವನ್ನು ನೋಡುವ ಆಸಕ್ತಿಯನ್ನೂ ತಾಳಲಿಲ್ಲ. ಅವನೂ ಬೇಸತ್ತು ೨೫ ರೂಪಾಯಿಗಳಿಗೆ ಪ್ರವೇಶ ಶುಲ್ಕವನ್ನು ಇಳಿಸಿದ. ಆದರೂ ಏನೂ ಪ್ರಯೋಜನವಾಗಲಿಲ್ಲ. ನಂತರ ೧೫ ರೂಪಾಯಿ ಎಂದು ಶುಲ್ಕ ನಿಗದಿ ಪಡಿಸಿದ. ಆಗಲೂ ಜನ ಮೃಗಾಲಯದ ಹತ್ತಿರ ಸುಳಿಯಲಿಲ್ಲ. ಕೊನೆಗೆ ಏನಾದರೂ ಆಗಲಿ ಎಂದು ಕೇವಲ ೧೦ ರೂಪಾಯಿ ಪ್ರವೇಶ ಶುಲ್ಕವನ್ನು ಕಡಿಮೆ ಮಾಡಿದ. ಏನೇ ಆದರೂ ಜನ ಬರಲಿಲ್ಲ.

ನಷ್ಟವಾದರೆ ನಷ್ಟ ಎಂದು 'ಪ್ರವೇಶ ಶುಲ್ಕ ಉಚಿತ' ಎಂದು ಬೋರ್ಡ್ ಹಾಕಿಬಿಟ್ಟ. ಕೆಲವೇ ಸಮಯದಲ್ಲಿ ಜನರಿಂದ ಮೃಗಾಲಯ ತುಂಬಿಹೋಯಿತು. ಕೂಡಲೇ ಆತ 'ಹೌಸ್ ಫುಲ್' ಬೋರ್ಡ್ ಹಾಕಿ ಬಿಟ್ಟು ಗೇಟ್ ಮುಚ್ಚಿ ಬಿಟ್ಟ. ನಂತರ ಹುಲಿಯ ಪಂಜರದ ಬಾಗಿಲು ತೆಗೆದು ಬಿಟ್ಟ. ಇದನ್ನು ನೋಡಿದ ಒಳಗಿದ್ದ ಜನರು ಹೆದರಿ ಗೇಟಿನ ಬಳಿ ಓಡಿಬರತೊಡಗಿದರು. ಗೇಟಿನಲ್ಲಿ ನೇತು ಹಾಕಿದ ಬೋರ್ಡ್ ನ್ನು ನೋಡಿ ಜನರು ಶಾಕ್ ಆದರು. ಅಲ್ಲಿ ಬರೆದಿತ್ತು 'ಹೊರಗೆ ಹೋಗಲು ಶುಲ್ಕ ರೂ ೪೯೯.೦೦ ರೂಪಾಯಿಗಳು.

***

ಆಟ

ವೈದ್ಯ: ಉತ್ತಮ ಆರೋಗ್ಯಕ್ಕಾಗಿ ಪ್ರತೀ ದಿನ ಒಂದಿಷ್ಟು ಆಟಗಳನ್ನು ಆಡಬೇಕು.

ಗಾಂಪ: ಡಾಕ್ಟ್ರೇ ಪ್ರತೀ ದಿನ ನಾನು ಫುಟ್ಬಾಲ್, ಕ್ರಿಕೆಟ್ ಆಡ್ತೀನಿ. ಸಮಯ ಸಿಕ್ಕರೆ ಕೇರಂ ಮತ್ತು ಚೆಸ್ ಕೂಡಾ ಆಡ್ತೀನಿ.

ವೈದ್ಯ: ದಿನವೊಂದಕ್ಕೆ ಸರಿಸುಮಾರು ಎಷ್ಟು ಹೊತ್ತು ಆಡ್ತೀರಿ?

ಗಾಂಪ: ಎಷ್ಟು ಹೊತ್ತೂಂದ್ರೆ... ಮೊಬೈಲಿನಲ್ಲಿ ಎಷ್ಟು ಹೊತ್ತು ಚಾರ್ಚ್ ಇರುತ್ತದೋ ಅಷ್ಟು ಹೊತ್ತು ಈ ಎಲ್ಲಾ ಆಟಗಳನ್ನೂ ಆಡ್ತೀನಿ ಡಾಕ್ಟ್ರೇ..!

***

ಮಾತು ಕೇಳಿ

ಗಾಂಪ: ನಿನ್ನ ಮಾತು ಕೇಳಿದ್ದಕ್ಕೆ ನನ್ನ ಕೈಕಾಲು ಮುರೀತು.

ಸೂರಿ: ಯಾಕೋ? ನಾನೇನು ಹೇಳಿದ್ದೆ ಅಂತಹದ್ದು...?

ಗಾಂಪ: ನೀನೇ ಹೇಳಿದ್ದೆ, ನೆರೆಹೊರೆಯವರನ್ನು ಪ್ರೀತಿಸಬೇಕು ಅಂತ. ಅದ್ಕೇ ಪಕ್ಕದ್ಮನೆ ಹುಡುಗೀನಾ ಪ್ರೀತಿಸಿದೆ. ಅವಳ ಅಣ್ಣಂದಿರು ನನ್ನ ಕೈಕಾಲು ಮುರಿದ್ರು ನೋಡು…

***

('ನಿಮ್ಮೆಲ್ಲರ ಮಾನಸ' ಪತ್ರಿಕೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ